ಸಾತ್ವಿಕ, ರಾಜಸ ಮತ್ತು ತಾಮಸ ಆಹಾರಗಳ ಲಕ್ಷಣ ಮತ್ತು ನಮ್ಮ ಶರೀರ ಹಾಗೂ ಸ್ವಭಾವಗಳ ಮೇಲೆ ಅವು ಉಂಟು ಮಾಡುವ ಪರಿಣಾಮಗಳ ವಿವರ ಇಲ್ಲಿ ತಿಳಿಸಲಾಗಿದೆ. ಘರಂಡ ಮುನಿಯ ಘರಂಡ ಸಂಹಿತಾ ಗ್ರಂಥದಲ್ಲಿ ಯೋಗಿಯು ಹೊಟ್ಟೆಯ ಅರ್ಧ ಭಾಗದಷ್ಟು ಘನ ಆಹಾರ, ಕಾಲು ಭಾಗ ನೀರು, ಉಳಿದ ಕಾಲುಭಾಗ ಖಾಲಿ (ಗಾಳಿಯ ಸಂಚಾರಕ್ಕೆ )ಬಿಡಬೇಕೆಂದು, ಭೋಜನ ಸಂದರ್ಭ ಪ್ರತಿ ಕ್ಷಣವನ್ನು ಇಷ್ಟ ದೇವರ ಧ್ಯಾನ ಮಾಡಿಯೇ ಆಹಾರ ಸ್ವೀಕರಿಸಬೇಕೆಂದು ಹೇಳಿದ್ದಾರೆ. ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯಗಳನ್ನು ಆಚರಿಸುವುದು ಸೂಕ್ತ. ಆದರೂ ನೀವು ಏನಾಗಬೇಕು, ಏನು ಸ್ವೀಕರಿಸಬೇಕೆಂಬ ಆಯ್ಕೆ ನಿಮ್ಮದೇ (Healthy eating).
ಸಾತ್ವಿಕ ಆಹಾರ:
ರಸದಿಂದಲೂ ಸ್ನಿಗ್ಧತೆ, ಸ್ಥಿರತೆ, ಅಪ್ಯಾಯತೆಯಿಂದ ಕೂಡಿರುವ ಆಹಾರವೇ ಸಾತ್ವಿಕ ಆಹಾರ. ಇದರ ಸೇವನೆಯಿಂದ ಆಯಸ್ಸು, ಬಲ, ಆರೋಗ್ಯ, ಸುಖ ಪ್ರೀತಿ ಹೆಚ್ಚುತ್ತದೆ. ಶೌಚ, ಬ್ರಹ್ಮಚರ್ಯ, ಅಹಿಂಸೆ, ಸತ್ಯಪ್ರಿಯತೆ, ಮಾನಸಿಕ ಪ್ರಸನ್ನತೆ, ಮೌನ ಹಾಗೂ ಭಾವಶುದ್ಧಿ- ಇವು ಸಾತ್ವಿಕತೆಯ ಲಕ್ಷಣಗಳು. ಸಾತ್ವಿಕ ಆಹಾರ ಆಹಾರ ಪದಾರ್ಥಗಳು ಯಾವುವು ಅಂದರೆ… ಹಸುವಿನ ಹಾಲು, ಕೆನೆ, ಬೆಣ್ಣೆ, ತುಪ್ಪ, ಸೇಬು, ಬಾಳೆಹಣ್ಣು, ದ್ರಾಕ್ಷಿ, ಮಾವು, ಕಿತ್ತಳೆ, ಬಟಾಣಿ, ತೆಂಗಿನಕಾಯಿ, ಆಲೂಗಡ್ಡೆ, ಕೋಸು, ಸೌತೆ, ಕುಂಬಳ, ಪೇರಲ, ಗೋಧಿ, ಅಕ್ಕಿ, ಜೇನು, ಕಲ್ಲುಸಕ್ಕರೆ, ಶುಂಠಿ, ಕಾಳುಮೆಣಸು, ದ್ವಿದಳ ಧಾನ್ಯ, ಅರಿಶಿನ ಇತ್ಯಾದಿ.
ರಾಜಸ ಆಹಾರ:
ಕಹಿ, ಹುಳಿ, ಉಪ್ಪು, ಖಾರ ಇವು ಅತಿಯಾಗಿರುವ, ಒಣಗಿದ ದಾಹ ಉಂಟುಮಾಡುವ ಆಹಾರವೇ ರಾಜಸ ಆಹಾರ. ಇದರ ಸೇವನೆಯಿಂದ ದುಃಖ, ಶೋಕ ಮತ್ತು ರೋಗ ಉಂಟಾಗುತ್ತದೆ. ರಾಜಸ ಆಹಾರ ಪದಾರ್ಥಗಳು ಯಾವುವು ಅಂದರೆ… ಮೀನು, ಮೊಟ್ಟೆ, ಮೆಣಸಿನ ಕಾಯಿ, ಚಟ್ನಿ, ಹಿಂಗು, ಉಪ್ಪಿನಕಾಯಿ, ಸಾಸಿವೆ, ಹುಣಸೇಹಣ್ಣು, ಎಲ್ಲ ಹುಳಿ ಪದಾರ್ಥ, ಚಹ, ಕಾಫಿ, ಕೋಕೋ, ಮಸಾಲೆ ಪದಾರ್ಥ, ಅನಾನಸ್, ಎಳ್ಳು, ಮೊಸರು, ಈರುಳ್ಳಿ ಇತ್ಯಾದಿ.
ತಾಮಸ ಆಹಾರ:
ಹಿಂದಿನ ದಿನ ತಯಾರಾದ, ಒಣಗಿದ, ದುರ್ಗಂಧದಿಂದ ಕೂಡಿದ, ಹಳಸಿದ, ತಂಗಳಾದ, ದೇಹ ಮತ್ತು ಮನಸ್ಸಿಗೆ ಜಡತ್ವ ಭಾವ ನೀಡುವ ಆಹಾರವೇ ತಾಮಸ ಆಹಾರ. ಇದರ ಸೇವನೆಯಿಂದ ಅಜ್ಞಾನ, ಅಶಿಸ್ತು, ದುಶ್ಚಟ ಮೊದಲಾದ ವಿನಾಶಕಾರಿ ನಡತೆ ಮೊಳಕೆಯೊಡೆಯುತ್ತದೆ. ತಾಮಸ ಆಹಾರ ಪದಾರ್ಥಗಳು ಯಾವುವು ಅಂದರೆ… ಮಾಂಸ, ಮದ್ಯ, ಬೆಳ್ಳುಳ್ಳಿ, ತಂಬಾಕು, ಕೊಳೆತ ಪದಾರ್ಥ, ಎರಡು ಬಾರಿ ಬೇಯಿಸಿದ ಪದಾರ್ಥ, ಅಮಲು ಪದಾರ್ಥ, ಹುರುಳಿಕಾಳು, ಹಿಂಡಿ, ಬೇಕರಿ ಉತ್ಪನ್ನ, ಉದ್ದು, ಬದನೇಕಾಯಿ, ಹಲಸಿನಹಣ್ಣು ಇತ್ಯಾದಿ.
ಘರಂಡ ಮುನಿಯ ಘರಂಡ ಸಂಹಿತಾ ಗ್ರಂಥದಲ್ಲಿ ಯೋಗಿಯು ಹೊಟ್ಟೆಯ ಅರ್ಧ ಭಾಗದಷ್ಟು ಘನ ಆಹಾರ, ಕಾಲು ಭಾಗ ನೀರು, ಉಳಿದ ಕಾಲುಭಾಗ ಖಾಲಿ (ಗಾಳಿಯ ಸಂಚಾರಕ್ಕೆ) ಬಿಡಬೇಕೆಂದು, ಭೋಜನ ಸಂದರ್ಭ ಪ್ರತಿ ಕ್ಷಣವನ್ನು ಇಷ್ಟ ದೇವರ ಧ್ಯಾನ ಮಾಡಿಯೇ ಆಹಾರ ಸ್ವೀಕರಿಸಬೇಕೆಂದು ಹೇಳಿದ್ದಾರೆ. ಅಂದರೆ ನೀವು ಏನಾಗಬೇಕು, ಏನು ಸ್ವೀಕರಿಸಬೇಕೆಂಬ ಆಯ್ಕೆ ನಿಮ್ಮದೇ. (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)
Published On - 6:58 am, Sat, 22 January 22