ಪ್ರತಿಯೊಂದು ಜೀವಿಗೂ ಗುರುತಿಸಿಕೊಳ್ಳಲು ಒಂದು ಹೆಸರು ಬೇಕೇಬೇಕು. ಸನಾತನ ಧಾರ್ಮಿಕ ಪರಂಪರೆಯಲ್ಲಿ ಅದನ್ನು ನಾಮಕರಣ ಎನ್ನುತ್ತಾರೆ. ನಾಮಕರಣ ಎನ್ನುವುದು ಒಂದು ಸಂಸ್ಕಾರ. ಈ ಸಂಸ್ಕಾರ ಶಾಸ್ತ್ರೀಯವಾಗಿ ಮನುಷ್ಯರಿಗೆ ಮಾತ್ರ ಹೇಳಲ್ಪಟ್ಟಿದೆ. ಉಳಿದೆ ಜೀವಿಗಳಿಗೆ ಮತ್ತು ವಸ್ತುಗಳಿಗೆ ಮಾನವನಿಗೆ ನೀಡುವ ರೀತಿಯ ಸಂಸ್ಕಾರವಿರುವುದಿಲ್ಲ. ನಾಮಕರಣ ಅಥವಾ ಹೆಸರು ಎನ್ನುವುದು ಮನುಷ್ಯನ ಜನನೋತ್ತರದಲ್ಲಿ ಮಾಡುವ ಸಂಸ್ಕಾರ. ಈ ನಾಮಕರಣವನ್ನು ಅವರ ಗುರೂಪದೇಶವಿದ್ದಂತೆ ಸಂಸ್ಕಾರವನ್ನು ಮಾಡುವುದು ರೂಢಿ. ಕೆಲವು ಕಡೆಯ ಪದ್ಧತಿಯ ಪ್ರಕಾರ ಜಾತಕರ್ಮವಾದ ಕೂಡಲೇ ನಾಮಕರಣ ಮಾಡುವುದಿದೆ. ಆದರೆ ಪ್ರಸ್ತುತ ವರ್ತಮಾನದಲ್ಲಿ ಇದು ರೂಢಿಯಲ್ಲಿ ಇಲ್ಲ.
ಸ್ವಾಭಾವಿಕವಾಗಿ ಜನನವಾದ ಹನ್ನೊಂದನೇಯ ದಿನ ಅಥವಾ ಹನ್ನೆರಡನೇಯ ದಿನ ನಾಮಕರಣ ಮಾಡುತ್ತಾರೆ. ಈ ದಿನ ಹೆಸರಿಡುವ ಸಂಸ್ಕಾರ ಮಾಡುವುದಾದರೆ ಯಾವುದೇ ಮುಹೂರ್ತ ನೋಡಬೇಕಾಗಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಈ ದಿನಗಳಲ್ಲಿ ಅಸಾಧ್ಯವಾಗಿದ್ದಲ್ಲಿ ಮಾಸದ ಕೊನೆಗೆ, ಅಥವಾ ನೂರನೇಯ ದಿನ ಮಾಡಬಹುದು. ಈ ದಿನಗಳನ್ನು ಹೊರತು ಪಡಿಸಿ ನಾಮಕರಣ ಮಾಡುವುದಾದರೆ ಶುಭ ನಕ್ಷತ್ರಾದಿ ಮುಹೂರ್ತವನ್ನು ಅವಶ್ಯವಾಗಿ ನೋಡಿ ಮಾಡಬೇಕು. ನಾಮಕರಣಕ್ಕೆ ಬಿದಿಗೆ, ತದಿಗೆ, ಪಂಚಮಿ, ದಶಮಿ ತ್ರಯೋದಶಿಗಳು ಪ್ರಶಸ್ತ ತಿಥಿಗಳು. ಸೋಮ, ಬುಧ, ಶುಕ್ರವಾರ ವಿಶೇಷ. ಹಾಗೇ ಸಾತ್ವಿಕ ನಕ್ಷತ್ರಗಳು. ವೃಷಭ, ಸಿಂಹ, ವೃಶ್ಚಿಕ ಲಗ್ನಗಳು ಅತ್ಯಂತ ಪ್ರಶಸ್ತವಾದ ಲಗ್ನಗಳು ನಾಮಕರಣಕ್ಕೆ.
ಇನ್ನು ಎಷ್ಟು ವಿಧವಾದ ಹೆಸರನ್ನು ಇಡಬೇಕು ಮಗುವಿಗೆ ಎಂಬ ಪ್ರಶ್ನೆ ಉತ್ತರ ನಾಲ್ಕು ವಿಧವಾದ ಹೆಸರಿಡಬೇಕು. 1. ದೇವತಾನಾಮ 2. ಮಾಸನಾಮ 3. ನಕ್ಷತ್ರನಾಮ 4. ವ್ಯಾವಹಾರಿಕ ನಾಮ ಎಂಬುದಾಗಿ ಮುಖ್ಯ ನಾಲ್ಕು ಹೆಸರುಗಳು ಮನುಷ್ಯನಿಗೆ. ದೇವತಾ ನಾಮವೆಂದರೆ ನಮ್ಮ ಕುಲದೇವರ ಹೆಸರು ಇಡಬೇಕು. ಇದರಿಂದ ನಮ್ಮ ವಂಶ ಯಾವುದೆಂದು ತಿಳಿಯುತ್ತದೆ. ಮಾಸನಾಮವೆಂದರೆ ನಾವು ಜನಿಸಿದ ತಿಂಗಳಿನ ಅಧಿಪತಿಯ ಹೆಸರು. ಇದರಿಂದ ನಾವು ಜನಿಸಿದ ಮಾಸ/ ತಿಂಗಳು ತಿಳಿಯುತ್ತದೆ. ನಕ್ಷತ್ರ ನಾಮವೆಂದರೆ ನಾವು ಜನಿಸಿದಾಗ ಯಾವ ನಕ್ಷತ್ರವಿದೆಯೋ ಅದರ ಕುರಿತಾದ ಅಕ್ಷರದಿಂದ ಇಡುವ ಹೆಸರು. ಇದರಿಂದ ನಮ್ಮ ನಕ್ಷತ್ರ ತಿಳಿಯುತ್ತದೆ. ಕೆಲವರು ಗೊಂದಲದಿಂದ ಈ ಹೆಸರನ್ನೇ ವ್ಯವಹಾರ ನಾಮ ಎನ್ನುವವರೂ ಇದ್ದಾರೆ.
ಕೊನೆಯದ್ದು ವ್ಯವಹಾರನಾಮ ಇದನ್ನು ವ್ಯಕ್ತಿಯನ್ನಾಧರಿಸಿ ಅಥವಾ ಅವನ ಗುಣಕ್ಕನುಗುಣವಾಗಿ ಇಡಬೇಕು ಎಂಬುದು ಪದ್ಧತಿ. ಪುಟ್ಟ ಶಿಶುವಿನ ಗುಣ ಹೇಗೆ ತಿಳಿಯುವುದು ಎಂದು ಪ್ರಶ್ನೆ ಸಂಭವಿಸಬಹುದು. ಮಗುವಿನ ಜನನವಾದ ಹತ್ತು ದಿನಗಳ ಮೇಲೆ ಆ ಮಗುವಿನ ಜಾತಕ ಕುಂಡಲಿಯನ್ನು ನೋಡಿದಾಗ ಆ ಶಿಶುವಿನ ಸ್ವರೂಪ ಜ್ಞಾನವಾಗುತ್ತದೆ. ಇದರ ಆಧಾರದ ಮೇಲೆ ವ್ಯವಹಾರ ನಾಮವನ್ನಿಡಬಹುದು ಅಥವಾ ಇಡಬೇಕು.
ಕೆಲವು ಕಡೆ ಅಜ್ಜ/ ತಾತನ (ತಂದೆಯ ತಂದೆ) ಇವರ ಹೆಸರಿನ್ನಿಡುವ ರೂಢಿಯೂ ಇದೆ. ಇದೂ ತಪ್ಪಲ್ಲ. ಗಂಡು ಮಕ್ಕಳಿಗೆ ಸಮ ಅಕ್ಷರಗಳಿಂದ ಅಂದರೆ 2, 4 ಈ ರೀತಿಯಾಗಿ ಮತ್ತು ಕೊನೆಗೆ ಅರ್ಧಾಕ್ಷರ ಬಾರದಂತೆ ಹೆಸರಿಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಅರ್ಧಾಕ್ಷರವೆಂಬುದು ಅಮಂಗಲಕರವಾದ್ದರಿಂದ ಯಾವತ್ತಿಗೂ ಹೆಸರಿನ ಕೊನೆಯನ್ನು ಅರ್ಧಾಕ್ಷರದಿಂದ ನಿಲ್ಲಸಬೇಡಿ. ಉದಾಹರಣೆಗೆ ಪರಮೇಶ್ವರ್ ಈ ರೀತಿಯಾಗಿಡಬೇಡಿ. ಪರಮೇಶ್ವರ ಎಂದೇ ಹೆಸರಿಡಿ. ಹೆಣ್ಣು ಮಕ್ಕಳಿಗೆ ಬೆಸ ಅಕ್ಷರಗಳಿಂದ ಅಂದರೆ 3, 5 ಈ ರೀತಿಯಾಗಿ ಹೆಸರಿಡಬೇಕು. ಇದು ಅತ್ಯಂತ ಮಂಗಲಕರವೆಂದು ಶಾಸ್ತ್ರಹೇಳುತ್ತದೆ. ಹೆಣ್ಣು ಮಕ್ಕಳಿಗೆ ಮನೆಯ ಅಜ್ಜಿ (ತಂದೆಯ ತಾಯಿ) ಯ ಹೆಸರಿಡುವ ಕ್ರಮವೂ ಇದೆ.
ಈ ಹೆಸರು ಎನ್ನುವುದು ಸ್ವರೂಪ ಜ್ಞಾನವನ್ನು ಅರ್ಥಾತ್ ನಮ್ಮ ವ್ಯಕ್ತಿತ್ವವನ್ನು ಹೇಳುವಂತಿದ್ದರೆ ಅರ್ಥಾತ್ ಅದಕ್ಕನುಗುಣವಾಗಿದ್ದರೆ ಉತ್ತಮ. ಸಂಸ್ಕೃತದಲ್ಲಿ ಮರಕ್ಕೆ ಪಾದಪ ಎಂಬ ಹೆಸರಿದೆ. ಪಾದಪ ಎಂದರೆ ಪಾದೇ ಪಿಬತಿ ಎಂದು ರೂಪ. ಅಂದರೆ ಪಾದದಿಂದ ಕುಡಿಯುತ್ತದೆ ಎಂದರ್ಥ. ಕಾಲಿನಿಂದ ಆಹಾರ ಇತ್ಯಾದಿಗಳನ್ನು ಸ್ವೀಕರಿಸುವುದರಿಂದ ಅದಕ್ಕೆ ಪಾದಪ ಎಂದು ಹೆಸರು. ಮರದ ಕಾಲು ಎಂದರೆ ಬೇರು ಅದು ಕೆಳಭಾಗದಲ್ಲಿರುವುದರಿಂದ ಅದರ ಸ್ವರೂಪಕ್ಕನುಗುಣವಾಗಿ ಹೆಸರು ಬಂತು. ಅದೇ ರೀತಿ ಜಾತಕ/ ಕುಂಡಲಿ ನೋಡಿದಾಗ ನಮ್ಮ ಸ್ಥೂಲ ಸ್ವರೂಪ ತಿಳಿಯುತ್ತದೆ ಅದಕ್ಕುನುಗುಣವಾದ ದೇವತಾನಾಮವನ್ನೋ ಅಥವಾ ನಮ್ಮ ಹಿರಿಯರ ನೆನಪಿಗಾಗಿ ಅವರ ಹೆಸರನ್ನು ಇಡುವುದು ನಮ್ಮ ಅತ್ಯಂತ ಒಳ್ಳೆಯದು ಅಲ್ಲವೇ ?
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು