
ಪ್ರತಿಯೊಬ್ಬರ ಜೀವನದಲ್ಲಿಯೂ ಸುಖ, ದುಃಖ, ಲಾಭ ಮತ್ತು ನಷ್ಟಗಳು ಸಹಜ. ಯಾವುದೇ ಘಟನೆ ಸಂಭವಿಸುವ ಮೊದಲು, ನಮ್ಮ ಶಾಸ್ತ್ರಗಳು, ಧರ್ಮ ಮತ್ತು ಪರಂಪರೆಗಳು ಕೆಲವು ಸೂಚನೆಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಇವುಗಳನ್ನು ಶಕುನಗಳು ಎಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ.
ಗುರೂಜಿಯವರು ಹೇಳಯವಂತೆ, ಕೆಟ್ಟದ್ದು ಸಂಭವಿಸುವ ಮುನ್ನ ಕಂಡುಬರುವ ಸೂಚನೆಗಳು ಸೂಕ್ಷ್ಮವಾಗಿರುತ್ತವೆ. ಉದಾಹರಣೆಗೆ, ಪರೀಕ್ಷೆ ಬರೆಯುವ ಮೊದಲು ವಿದ್ಯಾರ್ಥಿಗೆ ತನ್ನ ಮನಸ್ಸಿನಲ್ಲಿಯೇ ಕೆಲವು ಸಂಕೇತಗಳು ಸಿಗುತ್ತವೆ. ಅದೇ ರೀತಿ, ಸಾವು ಬರುವ ಮುನ್ನವೂ ದೇಹದಲ್ಲಿ ಕೆಲವು ಸೂಚನೆಗಳು ಗೋಚರಿಸುತ್ತವೆ ಎನ್ನಲಾಗುತ್ತದೆ. ಪ್ರಕೃತಿಯು ಸಹ ಮುಂಬರುವ ಕೆಡುಕುಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ. ರಸ್ತೆಯಲ್ಲಿ ಸಂಚರಿಸುವಾಗ ಮುಂದೆ ಅಪಾಯವಿದ್ದರೆ ರಸ್ತೆಯಲ್ಲೇ ಕೆಲವು ಚಿಹ್ನೆಗಳು ಕಾಣಿಸುತ್ತವೆ. ಕೆಲವೊಮ್ಮೆ ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗಿದಾಗ ಅನಾಹುತಗಳು ಸಂಭವಿಸುತ್ತವೆ.
ಮನೆಯಿಂದ ಹೊರಗೆ ಹೋಗುವಾಗ ಅಥವಾ ಮನೆಯೊಳಗೆ ಕೆಲವು ಅಶುಭ ಶಕುನಗಳು ಕಾಣಿಸಿಕೊಳ್ಳಬಹುದು. ನಾಯಿಗಳು ಅರಚುವುದು, ಹಾವುಗಳು ಅಡ್ಡ ಬರುವುದು, ಅಥವಾ ಮನೆಯಲ್ಲಿನ ಹಸುಗಳು ವಿಚಿತ್ರವಾಗಿ ಕೂಗಿಕೊಳ್ಳುವುದು ಇಂತಹ ಕೆಲವು ಸೂಚನೆಗಳು. ಇನ್ನು ಕೆಲವು ದುಷ್ಟ ಶಕುನಗಳಲ್ಲಿ ಮನೆಯಲ್ಲಿ ಗಾಜು ಒಡೆಯುವುದು, ಹಾಲು ಚೆಲ್ಲುವುದು, ಅರಿಶಿಣ ಅಥವಾ ಕುಂಕುಮ ಚೆಲ್ಲುವುದು, ಆರತಿ ಮಾಡುವಾಗ ದೀಪ ಆರಿಹೋಗುವುದು ಅಥವಾ ನಾವು ಆಕಸ್ಮಿಕವಾಗಿ ಎಡವಿ ಬೀಳುವುದು ಸೇರಿವೆ. ಮನೆಮಂದಿಗೆ ಸಾಮಾನ್ಯವಾಗಿ ಕೇಳುವ “ಎಲ್ಲಿಗೆ ಹೋಗುತ್ತಿದ್ದೀರಾ?” ಎಂಬ ಪ್ರಶ್ನೆಯನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ.
ಕೆಂಪು ಇರುವೆಗಳ ಸಾಲು ಸಾಲು ಮನೆಯಲ್ಲಿ ಕಾಣಿಸಿಕೊಂಡರೆ, ಅದು ಕೆಟ್ಟ ಸೂಚನೆಯ ಸಂಕೇತ ಎಂದು ಭಾವಿಸಲಾಗುತ್ತದೆ. ಇಂತಹ ಸಮಯದಲ್ಲಿ ದೇವತಾ ಪ್ರಾರ್ಥನೆ ಮಾಡುವುದು, ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚನೆ ಮಾಡಿಸುವುದು, ಅಥವಾ ಗುರುಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು ಸೂಕ್ತ.
ಇತ್ತೀಚೆಗೆ ಗುಬ್ಬಚ್ಚಿಗಳು ಕಡಿಮೆಯಾಗಿದ್ದರೂ, ಹಳ್ಳಿಗಳಲ್ಲಿ ಗುಬ್ಬಚ್ಚಿಗಳು ಪದೇ ಪದೇ ಮನೆಗೆ ಬಂದು ಹೋಗುವುದು ಅಥವಾ ಕಿಟಕಿಯ ಮೇಲೆ ಕುಳಿತು ಅತಿಯಾಗಿ ಸದ್ದು ಮಾಡುವುದು, ಹಾಗೂ ಸಾಮಾನ್ಯವಾಗಿ ಕಾಣಿಸದ ಇಲಿಗಳು ಪದೇ ಪದೇ ಕಾಣಿಸಿಕೊಳ್ಳುವುದು ಕೂಡ ಕೆಟ್ಟ ಸೂಚನೆಗಳಾಗಿವೆ. ಕನ್ನಡಿ ಒಡೆಯುವುದು, ಕಾಗೆ ಮನೆ ಮುಂದೆ ಅತಿಯಾಗಿ ಸದ್ದು ಮಾಡುವುದು, ಮತ್ತು ನಾಯಿ ಮನೆ ಮುಂದೆ ಬಂದು ಅರಚುವುದು ಕೂಡ ಇದೇ ಸಾಲಿಗೆ ಸೇರುತ್ತವೆ.
ಗಂಡಸರಿಗೆ ಎಡಗಣ್ಣು ಅದುರಿದರೆ ಅದು ಅಶುಭ ಎಂದು ಹೇಳಿದರೆ, ಮಹಿಳೆಯರಿಗೆ ಬಲಗಣ್ಣು ಅದುರಿದರೆ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ದೊಡ್ಡ ಅನಾಹುತ ಸಂಭವಿಸುವ ಮುನ್ನ, ಮನೆಯಲ್ಲಿನ ಗಿಡಗಳು ಒಣಗಿ ಹೋಗುವುದು ಅಥವಾ ಮರಗಳು ಒಣಗಿ ಹೋಗುವುದು ಸಾಮಾನ್ಯ. ಸುಮ್ಮನೆ ನಡೆದುಕೊಂಡು ಹೋಗುತ್ತಿರುವಾಗ ಪದೇ ಪದೇ ಎಡವಿ ಬೀಳುವುದು ಅಥವಾ ಸಣ್ಣಪುಟ್ಟ ಗಾಯಗಳಾಗುವುದು ಕೂಡ ಮುನ್ಸೂಚನೆಗಳಾಗಿವೆ.
ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ
ಇನ್ನು ಆಶ್ಚರ್ಯಕರ ಸಂಗತಿಯೆಂದರೆ, ಆಹಾರ ಬೇಗ ಕೆಟ್ಟುಹೋಗುವುದು ಅಥವಾ ಅಡುಗೆ ಮಾಡಿದ ಸಾಂಬಾರು ವಿಚಿತ್ರವಾಗಿ ರುಚಿ ಕೆಡುವುದು ಸಹ ಒಂದು ಸೂಚನೆ. ಸಾಕು ಪ್ರಾಣಿಗಳು ಸಾಯುವುದು ಕೂಡ ಕೆಟ್ಟ ಸೂಚನೆಯ ಸಂಕೇತ. ದೀಪ ಹಚ್ಚುವಾಗ, ಎಣ್ಣೆ ಮತ್ತು ಬತ್ತಿ ಚೆನ್ನಾಗಿದ್ದರೂ ಪದೇ ಪದೇ ದೀಪ ಆರಿಹೋಗುವುದು ಕೆಲವು ಸೂಚನೆಗಳನ್ನು ನೀಡುತ್ತದೆ.
ಇಂತಹ ಅಶುಭ ಸೂಚನೆಗಳು ಕಂಡುಬಂದಾಗ, ಮನೆಯಲ್ಲಿ ಪೂಜೆ, ಜಪ ಮಾಡುವುದು ಅಥವಾ ಗುರುಗಳನ್ನು ಅಥವಾ ವಿಪ್ರರನ್ನು ಆಹ್ವಾನಿಸಿ ಪಾದಪೂಜೆ ಮಾಡಿಸಿ, ಅವರಿಗೆ ಆಹಾರ ಅರ್ಪಿಸುವುದು ಉತ್ತಮ. ಗೋಮೂತ್ರ, ಅರಿಶಿಣ ನೀರು, ಶುದ್ಧ ನದಿಯ ನೀರು, ತುಳಸಿ ನೀರು, ಬಿಲ್ವಪತ್ರೆ ನೀರು, ವಿಭೂತಿ ನೀರು ಅಥವಾ ಉಪ್ಪು ನೀರನ್ನು ಮನೆ ಪೂರ್ತಿಯಾಗಿ ಸಿಂಪಡಿಸಿ ಸ್ವಲ್ಪ ಸಮಯ ಜಪ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ. ನಾವು ಯಾವಾಗಲೂ ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ತತ್ವವನ್ನು ಅನುಸರಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ