ಕರಾವಳಿ (Karavali) ಐತಿಹಾಸಿಕ ದೇವಾಲಯಗಳ ತಾಣ ಎಂದರೆ ತಪ್ಪಾಗಲಾರದು. ಏಕೆಂದರೆ ಇಂದಿಗೂ ಹಲವಾರು ದೇವಾಲಯಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡಿದ್ದು, ಪ್ರವಾಸಿಗರ ಅಚ್ಚುಮೆಚ್ಚಾಗಿವೆ. ಇನ್ನು ಈ ಸಾಲಿಗೆ ಹೊಸಂಗಡಿಯ ಮೆಟ್ಕಲ್ ಗುಡ್ಡೆ ದೇವಸ್ಥಾನವು ಸೇರಿಕೊಂಡಿದೆ. ಈ ದೇವಾಲಯವು ಬಹಳಷ್ಟು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದುಕೊಂಡಿದೆ. ಭೂಮಟ್ಟದಿಂದ ಸುಮಾರು 2000 ಅಡಿ ಎತ್ತರವಿರುವ ಮೆಟ್ಕಲ್ ಗುಡ್ಡೆಯ ಮೇಲಿರುವ ಈ ಪುರಾತನ ದೇಗುಲದಲ್ಲಿ ಗಣಪನು ಉದ್ಭವ ರೂಪಿಯಾಗಿದ್ದಾನೆ. ಪ್ರಕೃತಿ ನಿರ್ಮಿತ ಕಲ್ಲುಗಳೇ ಇಲ್ಲಿ ಮೆಟ್ಟಿಲಾಗಿರುವುದರಿಂದ ಈ ಸ್ಥಳಕ್ಕೆ ಮೆಟ್ಕಲ್ಗುಡ್ಡ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಭಗವಾನ್ ಗಣಪತಿಯ ಜೊತೆಗೆ ನಾಗ ದೇವರ ಸಾನಿಧ್ಯವೂ ಇದ್ದು ಇಲ್ಲಿಗೆ ಬಂದು ಭಕ್ತಿಯಿಂದ ಬೇಡಿಕೊಂಡಲ್ಲಿ ಮನದ ಕೋರಿಕೆಗಳು ಈಡೇರುತ್ತವೆ ಎನ್ನಲಾಗುತ್ತದೆ. ಹಾಗಾದರೆ ಇಲ್ಲಿನ ವಿಶೇಷತೆ ಏನು? ಈ ಸ್ಥಳಕ್ಕೆ ಹೋಗುವುದು ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಲ್ಲಿ ಪುಟ್ಟದಾದ ನೀರಿನ ಹೊಂಡವಿದ್ದು ಇದು ಯಾವ ಸಮಯದಲ್ಲಿಯೂ ಬತ್ತುವುದಿಲ್ಲ. ಹಾಗೆಯೇ, ಇಲ್ಲಿ ದೇವಳದ ಘಂಟೆಗಳು ಗಾಳಿಯ ಅಬ್ಬರಕ್ಕೆ ತನ್ನಷ್ಟಕ್ಕೆ ಅಲುಗಾಡಿ ಶಬ್ದವಾಗುವುದು ಈ ದೇವಾಲಯದ ವಿಶೇಷತೆಯಾಗಿದೆ. ಬೆಟ್ಟದ ಮೇಲೆ ನಿಂತರೆ ನಿಮಗೆ ಒಂದು ಬದಿಯಲ್ಲಿ ಹಾಲಾಡಿ ನದಿ, ಇನ್ನೊಂದು ಬದಿಯಲ್ಲಿ ಹೊಸಂಗಡಿ ಪಟ್ಟಣ ಮತ್ತು ಪಶ್ಚಿಮ ಘಟ್ಟಗಳ ವ್ಯಾಪ್ತಿಯನ್ನು ಎಲ್ಲೆಡೆ ನೋಡಬಹುದಾಗಿದೆ.
ಹೊನ್ನಯ್ಯ ಗಂಬಳಿ ಅರಸರು ಆಳಿದ ನಾಡು ಇದಾಗಿದ್ದು, ಹಿಂದೆ ಕೆಳದಿ ಶಿವಪ್ಪ ನಾಯಕನ ಆಳ್ವಿಕೆಯಲ್ಲಿ ಚಿನ್ನದ ಮೆಟ್ಟಿಲುಗಳನ್ನು ಸ್ಥಾಪಿಸಿ ಮೆಟ್ಕಲ್ ಗುಡ್ಡೆ ಪ್ರದೇಶವನ್ನು ತಲುಪಿ ದೇವಸ್ಥಾನ ಸ್ಥಾಪಿತವಾದ ಬಗ್ಗೆ ಪ್ರತೀತಿ ಇದೆ. ಅಲ್ಲದೆ ಈ ಸ್ಥಳವನ್ನು ಶಿವಪ್ಪ ನಾಯಕನ ಸಂಸ್ಥಾನದ ಪಶ್ಚಿಮ ದಿಕ್ಕಿನ ಕಾವಲು ಕೋಟೆ ಎನ್ನಲಾಗುತ್ತದೆ. ಹಿಂದೆ ಈ ಸ್ಥಳಗಳಲ್ಲಿ ನಿಂತು ಅರಬ್ಬೀ ಸಮುದ್ರವನ್ನು ವೀಕ್ಷಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಸಂತಾನ ಭಾಗ್ಯಕ್ಕಾಗಿ 48 ದಿನ ಬಿಲ್ವಪತ್ರೆಯ ಮರಕ್ಕೆ ಪೂಜೆ ಮಾಡಿ
ಸಿದ್ಧಾಪುರ ಪೇಟೆಯಿಂದ ಹೊಸಂಗಡಿ ಮೂಲಕ ಸಾಗಿ ವರಾಹಿ ಜಲವಿದ್ಯುತ್ ಕೇಂದ್ರಕ್ಕೆ ತೆರಳುವ ದಾರಿಯಲ್ಲಿ ಸಾಗಿ ಬಂದರೆ ಎತ್ತರ ಗುಡ್ಡೆಯ ಮೇಲೆ ಈ ಮೆಟ್ಕಲ್ ಗುಡ್ಡೆ ಗಣಪತಿ ದೇವಸ್ಥಾನ ಕಾಣಸಿಗುತ್ತದೆ. ಅಥವಾ ಕುಂದಾಪುರ ಶಿವಮೊಗ್ಗ ನಡುವೆ ಸಂಚರಿಸುವ ಬಸ್ ಮೂಲಕ ಹೊಸಂಗಡಿಗೆ ತಲುಪಿ, ಅಲ್ಲಿಂದ 4 ಕಿ. ಮೀ ಸಾಗಿದರೆ ಮೆಟ್ಕಲ್ಗುಡ್ಡ ತಲುಪಬಹುದಾಗಿದ್ದು ಚಾರಣ ಮಾಡಲು ಇಚ್ಛಿಸುವವರು ಕುಂದಾಪುರದ ಗೆರ್ಸಿಕಲ್ಲು ಎಂಬ ಗ್ರಾಮದಿಂದ ಗುಡ್ಡವನ್ನು ಏರಿಕೊಂಡು ಕೂಡ ಈ ಸ್ಥಳಕ್ಕೆ ಹೋಗಬಹುದಾಗಿದೆ. ಹೊಸಂಗಡಿಗೆ ತಲುಪಲು ಹಲವು ಬಸ್ ವ್ಯವಸ್ಥೆಗಳು ಇದೆ. ಹೊಸಂಗಡಿಯೂ ಉಡುಪಿಯಿಂದ 63 ಕಿ. ಮೀ, ಕುಂದಾಪುರದಿಂದ 38 ಕಿ. ಮೀ ದೂರದಲ್ಲಿದೆ.
ಇಲ್ಲಿಗೆ ನೀವು ಪ್ರತಿ ಮಂಗಳವಾರ ಮತ್ತು ಸಂಕಷ್ಟ ಚತುರ್ಥಿಯ ದಿನಗಳಲ್ಲಿ ತೆರಳಬಹುದು ಏಕೆಂದರೆ ಆ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಸುತ್ತಮುತ್ತ ಅರಣ್ಯ ಪ್ರದೇಶವಾದ್ದರಿಂದ ಇಲ್ಲಿನ ಸೊಬಗು ಮತ್ತು ತಂಪಾದ ಗಾಳಿ 2 ಕಿ.ಮೀ ಎತ್ತರದ ಪಾದಯಾತ್ರೆಯ ಎಲ್ಲಾ ದಣಿವನ್ನು ನೀಗಿಸುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:18 pm, Mon, 4 March 24