Magha Purnima 2022: ಮಾಘ ಪೂರ್ಣಿಮೆಯಂದು ಗಂಗಾ ಸ್ನಾನ ಮಾಡುವುದೇಕೆ? ಮಾಘ ಪೂರ್ಣಿಮಾ ಸಮಯ, ತಿಥಿ ಇಲ್ಲಿದೆ

| Updated By: ಆಯೇಷಾ ಬಾನು

Updated on: Feb 15, 2022 | 4:36 PM

ಮಾಘ ಮಾಸವು ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಧಾರ್ಮಿಕ ತಿಂಗಳುಗಳಲ್ಲಿ ಒಂದಾಗಿದೆ ಏಕೆಂದರೆ ಇದು ಭಗವಾನ್ ವಿಷ್ಣು ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಪೂರ್ಣಿಮಾ ತಿಥಿಯಂದು ಪವಿತ್ರ ನದಿ ನೀರಿನಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ.

Magha Purnima 2022: ಮಾಘ ಪೂರ್ಣಿಮೆಯಂದು ಗಂಗಾ ಸ್ನಾನ ಮಾಡುವುದೇಕೆ? ಮಾಘ ಪೂರ್ಣಿಮಾ ಸಮಯ, ತಿಥಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಫೆಬ್ರವರಿ 16 ಅಂದ್ರೆ ನಾಳೆ ಬುಧವಾರ ಮಾಘ ಪೂರ್ಣಿಮಾ(Magha Purnima) ದಿನವನ್ನು ಆಚರಿಸಲಾಗುತ್ತೆ. ಮಾಘ ಮಾಸದ(Magha Masam) ಪೂರ್ಣಿಮಾ ತಿಥಿಯನ್ನು ಮಾಘ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಹುಣ್ಣಿಮೆಯ ದಿನವು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಸತ್ಯನಾರಾಯಣ ಪೂಜೆ ಅಥವಾ ಇಷ್ಟ ದೇವತಾ/ಕುಲ್ ದೇವತಾ ಪೂಜೆಯನ್ನು ಆಯೋಜಿಸಲು ಪರಿಪೂರ್ಣ ದಿನವೆಂದು ನಂಬಲಾಗಿದೆ. ಹಾಗೂ ಈ ದಿನ ಸಂತ ರವಿದಾಸ ಜಯಂತಿ, ಶ್ರೀ ಲಲಿತ ಮತ್ತು ಶ್ರೀ ಭೈರವ ಜಯಂತಿಯನ್ನು ಆಚರಿಸಲಾಗುತ್ತೆ. ಇದಲ್ಲದೆ, ಈ ದಿನ, ಜನರು ವ್ರತವನ್ನು ಮಾಡುತ್ತಾರೆ. ಚಂದ್ರನನ್ನು ನೋಡಿದ ನಂತರವೇ ವ್ರತವನ್ನು ಮುರಿಯುತ್ತಾರೆ. ಇದರ ಜೊತೆಗೆ, ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಜನರು ಗಂಗಾ ಮತ್ತು ಯಮುನೆಯಂತಹ ಪವಿತ್ರ ನದಿಗಳ ದಡದಲ್ಲಿ ಸೇರುತ್ತಾರೆ.

ಮಾಘ ಪೂರ್ಣಿಮಾ 2022 ತಿಥಿ ಸಮಯ
ಈ ವರ್ಷ ಮಾಘ ಪೂರ್ಣಿಮಾ ವ್ರತವನ್ನು ಫೆಬ್ರವರಿ 16 ರಂದು ಆಚರಿಸಲಾಗುತ್ತದೆ. ಪೂರ್ಣಿಮಾ ತಿಥಿ ಫೆಬ್ರವರಿ 15 ರಂದು ರಾತ್ರಿ 9:42 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 16 ರಂದು ರಾತ್ರಿ 10:25 ಕ್ಕೆ ಕೊನೆಗೊಳ್ಳುತ್ತದೆ.

ಮಾಘ ಪೂರ್ಣಿಮಾ ಮಹತ್ವ
ಮಾಘ ಮಾಸವು ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಧಾರ್ಮಿಕ ತಿಂಗಳುಗಳಲ್ಲಿ ಒಂದಾಗಿದೆ ಏಕೆಂದರೆ ಇದು ಭಗವಾನ್ ವಿಷ್ಣು ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಪೂರ್ಣಿಮಾ ತಿಥಿಯಂದು ಪವಿತ್ರ ನದಿ ನೀರಿನಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಹುಣ್ಣಿಮೆಯ ದಿನದಂದು ಜನರು ಗಂಗಾ, ಯಮುನಾ, ಗೋದಾವರಿ, ನರ್ಮದಾ ಮುಂತಾದ ನದಿಗಳ ದಡಕ್ಕೆ ಸೇರುತ್ತಾರೆ. ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಪಡೆಯಬಹುದು ಎಂಬುವುದು ಜನರ ನಂಬಿಕೆ. ಆದ್ರೆ ನದಿ ಸ್ನಾನ ಮಾಡಲಾಗದವರು ನೀರಿನಲ್ಲಿ ಸ್ವಲ್ಪ ಗಂಗಾ ಜಲ ಸೇರಿಸಿ ಸ್ನಾನ ಮಾಡುತ್ತಾರೆ.

ಇನ್ನು ಕೆಲ ನಂಬಿಕೆಗಳ ಪ್ರಕಾರ ಮಾಘ ಪೂರ್ಣಿಮೆಯ ದಿನದಂದು ಎಲ್ಲಾ ದೇವರುಗಳು ಸ್ವರ್ಗದಿಂದ ಇಳಿದು ಬಂದು ಪ್ರಯಾಗದಲ್ಲಿ ಗಂಗಾಸ್ನಾನ ಮಾಡುತ್ತಾರೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಪೂರ್ಣಿಮೆಯಂದು ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಮಹತ್ವದ್ದಾಗಿದೆ.

ಮಾಘ ಸ್ನಾನದ ವಿಶೇಷತೆ ಎಲ್ಲೆಲ್ಲಿ?
ಮೂರು ನದಿಗಳು ಸೇರುವ ಸಂಗಮ ಸ್ಥಾನದಲ್ಲಿ ಸಾಕ್ಷಾತ್ ತ್ರಿಮೂರ್ತಿಗಳೇ ನೆಲೆಸಿರುತ್ತಾರೆ ಎಂದು ಹೇಳಲಾಗಿದೆ. ಆ ಕಾರಣದಿಂದ ನದಿಗಳ ಸಂಗಮ ಸ್ಥಳದಲ್ಲಿ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಇಲ್ಲಿ ಸ್ನಾನ ಮಾಡಿದರೆ 10 ಸಾವಿರ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ಬರುತ್ತದೆ ಎಂದು ಉಲ್ಲೇಖವನ್ನು ಶಾಸ್ತ್ರಗಳಲ್ಲಿ ನೋಡಬಹುದು.

ಕಲ್ಪವಾಸ: ಮಾಘ ಮಾಸದ ಸಂದರ್ಭದಲ್ಲಿ ಸಂಗಮ ಸ್ನಾನದ ಬದಿಯಲ್ಲಿ ವಾಸ ಮಾಡುವುದಕ್ಕೆ ಕಲ್ಪವಾಸ ಎಂದು ಹೆಸರು. ಈ ಕಲ್ಪ ವಾಸವು ಪುಷ್ಯ ಶುಕ್ಲ ಏಕಾದಶಿಯಂದು ಪ್ರಾರಂಭವಾಗಿ ಮಾಘ ಶುಕ್ಲ ದ್ವಾದಶಿಯಂದು ಪೂರ್ಣಗೊಳ್ಳುತ್ತದೆ. ಈ ಕಲ್ಪ ವಾಸದ ಅವಧಿಯಲ್ಲಿ ಸಹನೆ, ಶಾಂತಿ ಮತ್ತು ಭಕ್ತಿಯನ್ನು ಕಾಪಾಡಿಕೊಳ್ಳಬೇಕು.

ಇದನ್ನೂ ಓದಿ: Magha Masa: ‘ಸ್ನಾತ್ಯನೇನ ಸ್ನಾನಂ’ ಮಾಘ ಮಾಸದ ವಿಶೇಷ ಸ್ನಾನದಿಂದ ಏನೆಲ್ಲಾ ಲಾಭಗಳಿವೆ ಗೊತ್ತೇ?

Published On - 6:30 am, Tue, 15 February 22