Magha Masa: ‘ಸ್ನಾತ್ಯನೇನ ಸ್ನಾನಂ’ ಮಾಘ ಮಾಸದ ವಿಶೇಷ ಸ್ನಾನದಿಂದ ಏನೆಲ್ಲಾ ಲಾಭಗಳಿವೆ ಗೊತ್ತೇ?

ಕಾರ್ತಿಕ ಮಾಸದ ದೀಪಕ್ಕೆ ಇರುವಷ್ಟು ಪ್ರಾಶಸ್ತ್ಯ ಮಾಘ ಮಾಸದ ಸ್ನಾನ ಮತ್ತು ದಾನಕ್ಕೂ ಇದೆ. ನದಿ, ಸರೋವರ ಹಾಗೂ ಸಮುದ್ರಗಳಲ್ಲಿ ಸ್ನಾನ ಮಾಡಿ ಅಲ್ಲಿರುವ ದೈವೀಶಕ್ತಿಯನ್ನು ಪಡೆದು ಪಾಪಕ್ಷಯ ಮಾಡಿಕೊಳ್ಳುವುದೇ ಮಾಘ ಸ್ನಾನದ ಮಹಿಮೆ.

Magha Masa: ‘ಸ್ನಾತ್ಯನೇನ ಸ್ನಾನಂ’ ಮಾಘ ಮಾಸದ ವಿಶೇಷ ಸ್ನಾನದಿಂದ ಏನೆಲ್ಲಾ ಲಾಭಗಳಿವೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Feb 02, 2022 | 6:40 AM

ಆಧ್ಯಾತ್ಮಿಕತೆ, ಪವಿತ್ರತೆ ಹಾಗೂ ದೈವ ಶಕ್ತಿ ಇರುವ ಮಾಸವೇ ಮಾಘಮಾಸ (ಫೆಬ್ರವರಿ 02 ರಿಂದ ಮಾರ್ಚ್ 02, 2022 ರವರೆಗೆ). ಚಾಂದ್ರಮಾನದ ಪ್ರಕಾರ ಚೈತ್ರ ಮಾಸದಿಂದ ಫಾಲ್ಗುಣದವರೆಗೂ ಇರುವ 12 ತಿಂಗಳುಗಳಲ್ಲಿ ಈ ಒಂದೊಂದು ಮಾಸಕ್ಕೂ ಒಂದೊಂದು ವೈಶಿಷ್ಟತೆಯಿದೆ. ಅದರಲ್ಲಿ ಮಾಘಮಾಸದ ವೈಶಿಷ್ಟತೆ ಎಲ್ಲಕ್ಕಿಂತ ಮಿಗಿಲಾದುದು. ಕಾರ್ತಿಕ ಮಾಸದ ದೀಪಕ್ಕೆ ಇರುವಷ್ಟು ಪ್ರಾಶಸ್ತ್ಯ ಮಾಘ ಮಾಸದ ಸ್ನಾನ ಮತ್ತು ದಾನಕ್ಕೂ ಇದೆ. ನದಿ, ಸರೋವರ ಹಾಗೂ ಸಮುದ್ರಗಳಲ್ಲಿ ಸ್ನಾನ ಮಾಡಿ ಅಲ್ಲಿರುವ ದೈವೀಶಕ್ತಿಯನ್ನು ಪಡೆದು ಪಾಪಕ್ಷಯ ಮಾಡಿಕೊಳ್ಳುವುದೇ ಮಾಘ ಸ್ನಾನದ ಮಹಿಮೆ. ಧರ್ಮಶಾಸ್ತ್ರದಲ್ಲಿ ಸ್ನಾನಕ್ಕೆ ಮಹತ್ತರವಾದ ಫಲವನ್ನು ಹೇಳಿದೆ. ಸ್ನಾತ್ಯನೇನ ಸ್ನಾನಂ ಎಂದರೆ ಶುಚಿಯಾಗುವುದು ಎಂದು ಮಂತ್ರ ಸಹಿತವಾಗಿ ಭಕ್ತಿಯುತವಾಗಿ ಮಾಡದ ಸ್ನಾನವು ಅದೃಷ್ಟ ಸ್ನಾನ. ಶರೀರದ ಶುದ್ದಿಗಾಗಿ ಮತ್ತು ಸಂತೋಷಕ್ಕಾಗಿ ಮಾಡುವ ಸ್ನಾನ ದೃಷ್ಟಸ್ನಾನ ಎನ್ನುವರು.

ಸ್ನಾನಗಳಲ್ಲಿ 6 ವಿಧಗಳು: -ಪ್ರತಿ ನಿತ್ಯವೂ ಕರ್ಮಾನುಷ್ಠಾನಕ್ಕೆ ಮಾಡುವುದು ನಿತ್ಯ ಸ್ನಾನ. -ತುಲಾ ಮಾಸದಲ್ಲಿ, ಮಾಘ ಮಾಸದಲ್ಲಿ, ಸಂಕ್ರಮಣ ಮತ್ತು ವಿಶೇಷ ತಿಥಿ, ನಕ್ಷತ್ರ ಮತ್ತು ವಾರಗಳಲ್ಲಿ ಮಾಡುವುದು ಕಾಮ್ಯ ಸ್ನಾನ. -ಮಲಾಪ ಕರ್ಷಣ ಸ್ನಾನ ಬರೀ ಶರೀರದ ಕೊಳೆಯನ್ನು ತೆಗೆಯುವುದು. -ನೈಮಿತ್ತಿಕ ಸ್ನಾನ: ಶವ ಸ್ಪರ್ಶವಾದಾಗ ಮತ್ತು ರಜಸ್ವಲೆಯಲ್ಲಿ ಸ್ತ್ರೀ ಸ್ಪರ್ಶಿಸಿದಾಗ ಮಾಡುವ ಸ್ನಾನ. -ಕ್ರಿಯಾಂಗ ಸ್ನಾನ: ಜಪ, ತಪಸ್ಸಿಗಾಗಿ, ದೇವತಾರ್ಚನೆಗಾಗಿ ಮತ್ತು ಪಿತೃ ಕಾರ್ಯ ಮಾಡುವ ಸಲುವಾಗಿ ಮಾಡುವ ಸ್ನಾನ. -ಕುಂಭಮೇಳದ ಸ್ನಾನ: ಪುಣ್ಯತೀರ್ಥ, ಪುಣ್ಯನದಿಯಲ್ಲಿ, ಪುಷ್ಕರಣಿಗಳಲ್ಲಿ ಮತ್ತು ಕುಂಭ ಮೇಳದಲ್ಲಿ ಮಾಡುವ ಸ್ನಾನಕ್ಕೆ ಕ್ರಿಯಾ ಸ್ನಾನ ಎನ್ನುವರು.

ಮಾಘ ಮಾಸದಲ್ಲಿ ಇಡೀ ಭೂ ಮಂಡಲ ಪವಿತ್ರವಾಗಿರುತ್ತದೆ. ಆದರೂ ಪ್ರಯಾಗ ಕ್ಷೇತ್ರವು ಮಾಘ ಮಾಸ ಸ್ನಾನದ ಆಚರಣೆಗೆ ಶ್ರೇಷ್ಠವೆಂದು ಪ್ರಸಿದ್ಧಿ ಪಡೆದಿದೆ. ಈ ಮಾಸದಲ್ಲಿ ಬರುವ ಅಮಾವಾಸ್ಯೆಯಂದು ಪ್ರಯಾಗ ತೀರ್ಥ ಕ್ಷೇತ್ರದಲ್ಲಿ ಸಮಸ್ತ ತೀರ್ಥಗಳು ಸಂಗಮವಾಗುತ್ತದೆ ಎನ್ನುವ ಸತ್ಯ ಮಹಾಭಾರತದ ಅನುಶಾಸನ ಪರ್ವದಲ್ಲಿದೆ. ಈ ದಿನದಂದು ಮೌನ ಆಚರಿಸುತ್ತಾ ಸ್ನಾನ ಮಾಡುವುದು ಪ್ರಧಾನವಾಗಿದ್ದರಿಂದ ಇದು ಮೌನಿ ಅಮಾವಾಸ್ಯೆ ಎಂದು ಹೆಸರು ಪಡೆದುಕೊಂಡಿದೆ.

ಮಾಘ ಮಾಸದಲ್ಲಿ ಪ್ರಯಾಗ ಕ್ಷೇತ್ರ ವಾಸ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಇಡೀ ಒಂದು ಕಲ್ಪ ತಪಸ್ಸು ಮಾಡಿದ ಫಲ ದೊರೆಯುತ್ತದೆ. ಇಡೀ ತಿಂಗಳು ಮಾಘ ಸ್ನಾನವನ್ನು ಆಚರಿಸಲು ಸಾಧ್ಯವಿಲ್ಲದವರು, ಮಾಘ ಶುಕ್ಲ ತ್ರಯೋದಶಿ, ಚತುರ್ದಶಿ, ಹುಣ್ಣಿಮೆ ದಿನಗಳಲ್ಲಿ ಸುರ್ಯೋದಯದ ಸಮಯಕ್ಕೂ ಮೊದಲೇ ಸ್ನಾನವನ್ನು ಆಚರಿಸಿ ದಾನಗಳನ್ನು ಮಾಡಬೇಕು. ಮಾಘ ಮಾಸ ಸೂರ್ಯನಿಗೆ ಅತ್ಯಂತ ಪ್ರೀತಿ ಪಾತ್ರವಾದ ಮಾಸ. ಈ ತಿಂಗಳಲ್ಲಿ ಪ್ರತಿದಿನವೂ ಸೂರ್ಯಾಷ್ಟಕ, ಆದಿತ್ಯ ಹೃದಯವನ್ನು ಪಠಿಸಬೇಕು. ಮಾಘ ಮಾಸದ ಭಾನುವಾರದಂದು ಸೂರ್ಯದೇವನನ್ನು ಪೂಜಿಸುತ್ತಾ ಸ್ನಾನ ಮಾಡುವುದು ಹಾಗೂ ಸೂರ್ಯನಿಗೆ ಅರ್ಘ್ಯ ನೀಡಬೇಕು. ಬೆಳಗಿನ ಜಾವ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ (ನಕ್ಷತ್ರಗಳು ಇರುವಾಗ) ಸ್ನಾನ ಮಾಡುವುದು ಉತ್ತಮ, ನಕ್ಷತ್ರಗಳಿಲ್ಲದಿರುವ ಸಮಯದಲ್ಲಿ ಮಾಡುವುದು ಮಧ್ಯಮ, ಸೂರ್ಯೋದಯದ ನಂತರ ಸ್ನಾನ ಮಾಡುವುದು ನಿಷ್ಫಲವೆಂದು ಹೇಳಿದೆ.

ಗಂಗಾ, ಕಾವೇರಿ, ಗೋದಾವರಿ ನದಿಗಳಲ್ಲಿ ಸ್ನಾನ ಮಾಡಲು ಆಗದೇ ಇದ್ದರೆ ಆ ನದಿಗಳನ್ನು ಸ್ಮರಿಸುತ್ತಾ ಕೆರೆ, ಕಾಲುವೆ ಹಾಗೂ ಬಾವಿ ನೀರಿನಿಂದಾಗಲೇ ಸ್ನಾನ ಮಾಡಬಹುದು. ಮಾಘ ಮಾಸದಲ್ಲಿ ಪರಶಿವನು ಲಿಂಗೋದ್ಭವ ಮೂರ್ತಿಯಾಗಿ ಆವಿರ್ಭವಿಸಿದನು. ಆದುದರಿಂದ ಈ ಮಾಸವು ಶಿವ ಪೂಜೆಗೆ ಅತೀ ಶ್ರೇಷ್ಠ. ಈ ತಿಂಗಳಲ್ಲಿ ಶಿವನಿಗೆ ಅಭಿಷೇಕ ಹಾಗೂ ಬಿಲ್ವಪತ್ರೆಯಿಂದ ಪೂಜೆಯಾಗುವುದರಿಂದ ಅನಂತ ಪುಣ್ಯ ಪ್ರಾಪ್ತಿಯಾಗುವುದು. ಈ ಮಾಸದಲ್ಲಿ ಶಿವಾಲಯದಲ್ಲಿ ಪ್ರದೋಷದ ಸಮಯದಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ ಶುಭ ಪ್ರಾಪ್ತಿಯಾಗುತ್ತದೆ.

ಮಾಘ ಸ್ನಾನದ ವಿಶೇಷತೆ ಎಲ್ಲೆಲ್ಲಿ? ಮೂರು ನದಿಗಳು ಸೇರುವ ಸಂಗಮ ಸ್ಥಾನದಲ್ಲಿ ಸಾಕ್ಷಾತ್ ತ್ರಿಮೂರ್ತಿಗಳೇ ನೆಲೆಸಿರುತ್ತಾರೆ ಎಂದು ಹೇಳಲಾಗಿದೆ. ಆ ಕಾರಣದಿಂದ ನದಿಗಳ ಸಂಗಮ ಸ್ಥಳದಲ್ಲಿ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಇಲ್ಲಿ ಸ್ನಾನ ಮಾಡಿದರೆ 10 ಸಾವಿರ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ಬರುತ್ತದೆ ಎಂದು ಉಲ್ಲೇಖವನ್ನು ಶಾಸ್ತ್ರಗಳಲ್ಲಿ ನೋಡಬಹುದು.

ಕಲ್ಪವಾಸ: ಮಾಘ ಮಾಸದ ಸಂದರ್ಭದಲ್ಲಿ ಸಂಗಮ ಸ್ನಾನದ ಬದಿಯಲ್ಲಿ ವಾಸ ಮಾಡುವುದಕ್ಕೆ ಕಲ್ಪವಾಸ ಎಂದು ಹೆಸರು. ಈ ಕಲ್ಪ ವಾಸವು ಪುಷ್ಯ ಶುಕ್ಲ ಏಕಾದಶಿಯಂದು ಪ್ರಾರಂಭವಾಗಿ ಮಾಘ ಶುಕ್ಲ ದ್ವಾದಶಿಯಂದು ಪೂರ್ಣಗೊಳ್ಳುತ್ತದೆ. ಈ ಕಲ್ಪ ವಾಸದ ಅವಧಿಯಲ್ಲಿ ಸಹನೆ, ಶಾಂತಿ ಮತ್ತು ಭಕ್ತಿಯನ್ನು ಕಾಪಾಡಿಕೊಳ್ಳಬೇಕು.

ಮಾಘ ಸ್ನಾನದ ವಿಶೇಷ ಕ್ಷೇತ್ರಗಳು: -ಕಾವೇರಿ, ಕಬಿನಿ ಮತ್ತು ಸ್ಫಟಿಕ ಸರೋವರದ ಸಂಗಮ ಕ್ಷೇತ್ರ ಟಿ. ನರಸೀಪುರ. – ಮದ್ದೂರಿನ ಶಿಂಷಾ ನದಿ ದಂಡೆಗೆ ಮಾಘ ಸ್ನಾನಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಬರುತ್ತಾರೆ. -ನಂಜನಗೂಡಿನಲ್ಲಿ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯವಿದೆ. ಇಲ್ಲಿನ ಕಪಿಲಾ ಮತ್ತು ಕಾಂಟಿನ್ಯ ನದಿ ಸಂಗಮವಿದೆ. -ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಮಾಘ ಸ್ನಾನಕ್ಕೆ ಬರುವವರು ಯಾತ್ರಿಕರು ಹೆಚ್ಚು.

ಇದರಂತೆ ತಲಕಾವೇರಿಗೆ ಎರಡು ಉಪ ನದಿಗಳು ಸೇರುವ ಭಾಗಮಂಡಲ ಸಂಗಮವಾಗುತ್ತದೆ. ಮಾಘ ಸ್ನಾನದಲ್ಲಿ ಇಲ್ಲಿ ವಿಶೇಷ. ಶ್ರೀಸಂಗಮದಲ್ಲಿ ಕೃಷ್ಣ ಮತ್ತು ಭೀಮಾ ನದಿ ಸಂಗಮ. ತುಂಗಾ ಮತ್ತು ಭದ್ರಾ ನದಿಗಳ ಸಂಗಮವಾದ ಕೂಡಲಿ. ಗಾಣಗಾಪುರ – ಭೀಮಾ ಅಮರಜಾ ನದಿಯ ಸಂಗಮವಿದೆ. ಪ್ರಯಾಗ್‍ರಾಜ್‍ನಲ್ಲಿ ವರ್ಷ ಮಿನಿ ಕುಂಭ ಮೇಳ ಮಾಘ ಮಾಸದಲ್ಲಿ ನಡೆಯುವುದು.

ಮಾಘ ಸ್ನಾನದ ವೈಜ್ಞಾನಿಕ ಕಾರಣವೇನು ? ಮಾಘ ಮಾಸದಲ್ಲಿ ವಿಪರೀತ ಚಳಿ, ಶೀತ ವಾತಾವರಣ ಮತ್ತು ಮಂಜಿನ ಮಳೆ ಇರುತ್ತದೆ. ಈ ಕಾರಣಕ್ಕೆ ಸೂರ್ಯನ ಶಾಖವು ಇರುವುದಿಲ್ಲ. ಇದರಿಂದ ನಮ್ಮ ದೇಹ ದುರ್ಬಲಗೊಳ್ಳುತ್ತದೆ. ನದಿಗಳಲ್ಲಿ ಸ್ನಾನ ಮಾಡಿದಾಗ ಸೂರ್ಯನಕಿರಣಗಳು ಹೆಚ್ಚು ಶಾಖವನ್ನು ನೀಡುವುದು ಮತ್ತು ನಮ್ಮ ದೇಹದ ಚರ್ಮವನ್ನು ಶುದ್ದಿಕರಿಸುತ್ತದೆ.

ಮಾಘ ಸ್ನಾನ ಸಂಕಲ್ಪ || ಶ್ರೀಶಂ ವಂದೇ ||

ಪುಷ್ಯ ಮಾಸದ ದಶಮಿ ಅಥವಾ ಪೂರ್ಣಿಮೆಯಂದು ಮಾಘಸ್ನಾನವು ಪ್ರಾರಂಭವಾಗುತ್ತದೆ. ಮಾಘ ಮಾಸದ ದಶಮಿ ಅಥವಾ ಪೂರ್ಣಿಮಾದವರೆಗೆ. ಒಂದು ತಿಂಗಳ ಪರ್ಯಂತವಾಗಿ ಅರುಣೋದಯ ಕಾಲದಲ್ಲಿಯಾಗಲೀ, ಪ್ರಾತಃಕ್ಕಾಲದಲ್ಲಾಗಲೀ, ನದ್ಯಾದಿಗಳಲ್ಲಿ ಸ್ನಾನ ಮಾಡಬೇಕು. ಸೂರ್ಯನು ಸ್ವಲ್ಪ ಉದಯಿಸಿದಾಗ ಸ್ನಾನ ಮಾಡುವ ಯಾವ ಬ್ರಹ್ಮಘ್ನನನ್ನು, ಸುರಾಪಾನೀಯನನ್ನು ಪವಿತ್ರ ಮಾಡೋಣವೆಂದು ಜಲಾಭಿಮಾನಿ ದೇವತೆಗಳು ಕೂಗುತ್ತಿರುತ್ತಾರೆ.

ಸ್ನಾನ ಕಾಲ – ನಕ್ಷತ್ರ ಇರುವಾಗಲೇ ಮಾಡುವ ಸ್ನಾನ ಉತ್ತಮ, ನಕ್ಷತ್ರ ಕಾಣದಿರುವಾಗ ಮಾಡುವ ಸ್ನಾನ ಮಧ್ಯಮ, ಸೂರ್ಯೋದಯದ ನಂತರ ಮಾಡುವ ಸ್ನಾನ ಕನಿಷ್ಟವಾದುದು. ಸ್ನಾನಾಧಿಕಾರಿಗಳು – ಬ್ರಹ್ಮಚಾರಿಗಳು, ಗೃಹಸ್ಥರು, ವಾನಪ್ರಸ್ಥರು, ಭಿಕ್ಷುಕರು, ಬಾಲ ವೃದ್ಧ ಯುವಕರು. ನಾರಿ – ನಪುಂಸಕರೂ ಮಾಘಸ್ನಾನವನ್ನು ಮಾಡಬೇಕು. ಫಲ – ಮಾಘ ಮಾಸದಲ್ಲಿ ಮನೆಯ ಹೊರಗೆ ಎಲ್ಲಿ ನೀರಿದೆಯೋ ಅದೆಲ್ಲವೂ ಗಂಗಾಜಲಕ್ಕೆ ಸಮಾನವಾಗಿರುತ್ತದೆ. ಪ್ರಯಾಗ, ನೈಮಿಷಾರಣ್ಯ ಮುಂತಾದ ಕ್ಷೇತ್ರಗಳಲ್ಲಿ ಮಾಡಿದ ಸ್ನಾನ ಹೆಚ್ಚಿನ ವಿಶೇಷ ಫಲವನ್ನು ಕೊಡುತ್ತದೆ. ಮಾಘಸ್ನಾನವೇ ಅತ್ಯಂತ ಪುಣ್ಯ ಸಂಪಾದಕವಾಗಿದೆ. ಅದರಲ್ಲೂ ಮಕರದಲ್ಲಿ ರವಿಯು ಪ್ರವೇಶ ಮಾಡಿದ್ದರೆ ಸಾವಿರಪಟ್ಟು ಫಲವು ಗಂಗಾಸ್ನಾನ ಮಾತ್ರದಿಂದ ಪ್ರಾಪ್ತವಾಗುವುದು.

ಮಾಘಮಾಸಮಿಮಂ ಪೂರ್ಣಂ ಸ್ನಾಸ್ಯೇಹಂ ದೇವ ಮಾಧವ | ತೀರ್ಥಸ್ಯಾಸ್ಯ ಜಲೇ ನಿತ್ಯಮಿತಿ ಸಂಕಲ್ಪ್ಯ ಚೇತಸಿ ||

ಈ ರೀತಿಯಾಗಿ ಆರಂಭದಲ್ಲಿ ದಶಮಿ ದಿನದಂದು ವಿಧಿಪೂರ್ವಕವಾಗಿ, ಮಾನಸಿಕವಾಗಿ, ”ಮಾಧವನೇ, ಮಾಘ ಮಾಸ ಪೂರ್ತಿ ಈ ತೀರ್ಥಜಲದಲ್ಲಿ ಸ್ನಾನಮಾಡುವೆನು” ಎಂದು ಸಂಕಲ್ಪಿಸಬೇಕು.

ಮಾಘ ಸ್ನಾನ ಸಂಕಲ್ಪ ಆಚಮ್ಯ, ಪ್ರಾಣಾಯಾಮ್ಯ, ಏವಂಗುಣ ವಿಶಿಷ್ಠಾಯಾಂ, ಶುಭತಿಥೌ ಶ್ರೀ ಭಾರತಿರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಮಾಸ ನಿಯಾಮಕ ಮಾಧವ ಪ್ರೇರಣಯಾ ಶ್ರೀ ಮಾಧವ ಪ್ರೀತ್ಯರ್ಥಂ, ಹರೌ ಜ್ಞಾನ ಭಕ್ತ್ಯಾದಿ ಸಿದ್ಧ್ಯರ್ಥಂ ಮಾಘಸ್ನಾನಮಹಂ ಕರಿಷ್ಯೇ.

ಪ್ರಾರ್ಥನಾ ಮಕರಸ್ತೇ ರವೌ ಮಾಘೇ ಗೋವಿಂದಾಚ್ಯುತಮಾಧವ | ಸ್ನಾನೇನಾನೇನ ಮೇ ದೇವ ಯಥೋಕ್ತಫಲದೋ ಭವ || ಕೃಷ್ಣಾಚ್ಯುತ ನಿಮಜ್ಯಾಮಿ ಪ್ರಭಾತೇಸ್ಮಿನ್ ಶುಭೋದಕೇ | ಅನೇನ ಮಾಘ ಸ್ನಾನೇನ ಸುಪ್ರೀತೋ ಮಾಂ ಸಮುದ್ಧರ ||

ಜಲದಲ್ಲಿ ಮುಳುಗಿ ಸ್ನಾನ ಮಾಡಿ ಮೃತ್ತಿಕೆಯನ್ನು ಧರಿಸಿ ಫುನ ಮುಳುಗಿ ನಂತರ ಅರ್ಘ್ಯವನ್ನು ಕೊಡಬೇಕು.

ಮಾಧವನಿಗೆ ಅರ್ಘ್ಯ ತಪಸ್ಯರ್ಕೋದಯೇ ನದ್ಯಾಂ ಸ್ನಾತೋಹಂ ವಿಧಿಪೊರ್ವಕಂ| ಮಾಧವಾಯ ದದಾಮೀದಮರ್ಘ್ಯಂ ಸಮ್ಯಕ್ ಪ್ರಸೀದತು || ಮಾಧವಾಯ ನಮ: ಇದಮರ್ಘ್ಯಂ |

ಸೂರ್ಯನಿಗೆ ಅರ್ಘ್ಯ ಸವಿತ್ರೇ ಪ್ರಸವಿತ್ರೇ ಚ ಪರಂ ಧಾಮ್ನೇ ನಮೋಸ್ತುತೇ | ತ್ವತ್ತೇಜಸಾ ಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ ||

ಸವಿತ್ರೇ ನಮ: ಇದಮರ್ಘ್ಯಂ ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ | ಪರಿಪೂರ್ಣಂ ಕುರುಷ್ವೇದಂ ಮಾಘಸ್ನಾನಂ ಮಯಾ ಕೃತಂ ||

ಇದನ್ನೂ ಓದಿ: February 2022 Festival Calendar: ಮಾಘ ನವರಾತ್ರಿಯಿಂದ ಹಿಡಿದು ವಸಂತ ಪಂಚಮಿಯಂತಹ ಫೆಬ್ರವರಿ ತಿಂಗಳಲ್ಲಿ ಬರುವ ಪ್ರಮುಖ ದಿನಗಳು

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?