Ganesh Jayanti: ಇಂದು ಗಣೇಶ ಜಯಂತಿ! ಉತ್ತರ ಕರ್ನಾಟಕದಲ್ಲಿ ಶ್ರದ್ಧಾ ಭಕ್ತಿ ಸಡಗರದ ಮಾಘ ಶುಕ್ಲ ಗಣೇಶ ಚತುರ್ಥಿ

| Updated By: ಸಾಧು ಶ್ರೀನಾಥ್​

Updated on: Jan 31, 2022 | 6:06 AM

magha shukla ganesh chaturthi in north karnataka: ಗಜಮುಖ ಗಣಗಳಿಗೆ ಒಡೆಯನಾಗಿ, ಗಣಪತಿ, ಗಣೇಶ ಎನ್ನುವ ಹೆಸರು ಪಡೆದದ್ದೂ ಇದೇ ದಿನವೇ. ಹೀಗಾಗಿ ಮಾಘ ಶುಕ್ಲ ಚತುರ್ಥಿಯಂದು ಭಕ್ತರು ಶ್ರದ್ಧಾಭಕ್ತಿಗಳಿಂದ ಗಣೇಶ ಜಯಂತಿಯನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ಗಣೇಶ ಜಯಂತಿಯನ್ನು ಸಡಗರದಿಂದ ಆಚರಿಸುವ ರೂಢಿಯಿದೆ.

Ganesh Jayanti: ಇಂದು ಗಣೇಶ ಜಯಂತಿ! ಉತ್ತರ ಕರ್ನಾಟಕದಲ್ಲಿ ಶ್ರದ್ಧಾ ಭಕ್ತಿ ಸಡಗರದ ಮಾಘ ಶುಕ್ಲ ಗಣೇಶ ಚತುರ್ಥಿ
ಇಂದು ಗಣೇಶ ಜಯಂತಿ! ಉತ್ತರ ಕರ್ನಾಟಕದಲ್ಲಿ ಶ್ರದ್ಧಾ ಭಕ್ತಿಯ ಸಡಗರದ ಮಾಘ ಶುಕ್ಲ ಗಣೇಶ ಚತುರ್ಥಿ
Follow us on

ಮಾಘ ಮಾಸದ ಶುದ್ಧ ಚತುರ್ಥಿಯಂದು ಗಣೇಶ ಜಯಂತಿ (ganesh jayanti 2022) ಆಚರಿಸುವ ಪರಿಪಾಠ ಉತ್ತರ ಕರ್ನಾಟಕದ ಭಾಗಗಳಲ್ಲಿ (north karnataka) ಕಂಡು ಬರುತ್ತದೆ. ಪ್ರಥಮಪೂಜಿತ, ವಿಘ್ನ ನಿವಾರಕ ಗಣಪತಿಯನ್ನು ಪೂಜಿಸದೆ ಯಾವ ಕಾರ್ಯವನ್ನೂ ಪ್ರಾರಂಭಿಸಲಾಗದು. ಗಣನಾಯಕನನ್ನು ಪೂಜಿಸಿದರೆ ಸಕಲ ವಿಘ್ನಗಳೂ ನಿವಾರಣೆಯಾಗುತ್ತವೆ ಎನ್ನುವುದು ಭಕ್ತರ ದೃಢವಾದ ನಂಬಿಕೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಚತುರ್ಥಿಯನ್ನು ‘ವಿನಾಯಕೀ’ ಎಂದೂ ಕೃಷ್ಣಪಕ್ಷದ ಚತುರ್ಥಿಯನ್ನು ‘ಸಂಕಷ್ಟಹರ ಚತುರ್ಥಿ’ ಎಂದೂ ಆಚರಿಸುವ ಪರಿಪಾಠವಿದೆ. ಸಂವತ್ಸರದ ಈ 24 ಚತುರ್ಥಿಗಳಲ್ಲಿ ಭಾದ್ರಪದ ಮತ್ತು ಮಾಘ ಶುಕ್ಲ ಚತುರ್ಥಿಗಳು (magha shukla ganesha chaturthi) ವಿಶೇಷವಾದವು.

ಹಾಗೆಯೇ ಮಂಗಳವಾರದಂದು ಬರುವ ಸಂಕಷ್ಟಹರ ಚತುರ್ಥಿಯನ್ನು ವಿಶೇಷ ರೀತಿಯಿಂದ ಆಚರಿಸಲಾಗುವುದು. ಭಾದ್ರಪದ ಶುಕ್ಲ ಚತುರ್ಥಿಯಂದು ಭಾರತದಾದ್ಯಂತ ಅತ್ಯಂತ ಸಂಭ್ರಮದಿಂದ ಗಣೇಶನ ಹಬ್ಬ ಆಚರಿಸುವರು. ಅಂದು ಭೂಲೋಕಕ್ಕೆ ಬರುವ ಗಣಪತಿಯು ಭಕ್ತರು ಸಮರ್ಪಿಸುವ ಭಕ್ಷ್ಯಗಳನ್ನು ಸವಿದು ಅನುಗ್ರಹಿಸುತ್ತಾನೆ. ನಾವು ರಾಮನವಮಿ, ಕೃಷ್ಣಾಷ್ಟಮಿಯನ್ನು ಆಚರಿಸಿದಂತೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವೆಡೆ ಗಣೇಶನ ಜಯಂತಿಯನ್ನೂ ಸಡಗರದಿಂದ ಆಚರಿಸುವ ರೂಢಿಯಿದೆ.

ಮಾಘ ಶುಕ್ಲ ಚತುರ್ಥಿಯನ್ನು ‘ಗಣೇಶ ಜಯಂತಿ’ ಎಂದು ಆಚರಿಸುತ್ತಾರೆ. ಪಾರ್ವತಿ ಸ್ನಾನಕ್ಕೆ ಹೊರಡುವ ಮುನ್ನ ಗಣಪನ ಮೂರ್ತಿಯನ್ನು ತಯಾರಿಸಿದ್ದು, ಆತ ಶಿವನಿಂದ ಶಿರಚ್ಛೇದನಕ್ಕೊಳಗಾಗಿ ಆನೆಯ ಮುಖವನ್ನು ಪಡೆದದ್ದು ಇದೇ ದಿನ ಎಂಬ ನಂಬಿಕೆಯಿದೆ. ಗಜಮುಖ ಗಣಗಳಿಗೆ ಒಡೆಯನಾಗಿ, ಗಣಪತಿ, ಗಣೇಶ ಎನ್ನುವ ಹೆಸರು ಪಡೆದದ್ದೂ ಇದೇ ದಿನವೇ.

ಹೀಗಾಗಿ ಮಾಘ ಶುಕ್ಲ ಚತುರ್ಥಿಯಂದು ಭಕ್ತರು ಶ್ರದ್ಧಾಭಕ್ತಿಗಳಿಂದ ಗಣೇಶ ಜಯಂತಿಯನ್ನು ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ‘ಮಾ ಗಣೇಶ ಚತುರ್ಥಿ’ ಎನ್ನುವ ಹೆಸರಿನಲ್ಲಿ ಕರೆಯುತ್ತಾರೆ. ಇಪ್ಪತ್ನಾಲ್ಕು ಚತುರ್ಥಿಗಳನ್ನು ಆಚರಿಸಲು ಸಾಧ್ಯವಿಲ್ಲದಿದ್ದರೆ ಈ ಗಣೇಶ ಜಯಂತಿ ವ್ರತವನ್ನು ಆಚರಿಸಿದರೆ ಪೂರ್ತಿ ವರ್ಷದ ಆಚರಣೆಯ ಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಗಣಪ ಕಲಿಯುಗದಲ್ಲಿ ದ್ವಿಭುಜ ಅಶ್ವಾರೂಢ!
ಚತುರ್ಥಿಯಂದು ಆರಂಭವಾಗುವ ಹಬ್ಬದ ಆಚರಣೆ ಪಂಚಮಿಯ ಬೆಳಗ್ಗೆ ಕೊನೆಗೊಳ್ಳುತ್ತದೆ. ಅಂದು ಗಣೇಶನನ್ನು ವಿಶೇಷವಾದ ರೀತಿಯಿಂದ ಪೂಜಿಸುವರು. ಭಾದ್ರಪದ ಚೌತಿಯಂದು ಮಣ್ಣಿನ ಗಣಪನನ್ನು ತಂದು ಪೂಜಿಸಿದರೆ, ಗಣೇಶ ಜಯಂತಿಯಂದು ಮನೆಯಲ್ಲೇ ಇರುವ ಮೂರ್ತಿಯನ್ನು ಕೆಂಪು ಬಟ್ಟೆಯ ಮೇಲೆ ಪ್ರತಿಷ್ಠಾಪಿಸಿ, ಕೆಂಪು ಹೂವು, ರಕ್ತಚಂದನದಲ್ಲಿ ಅದ್ದಿದ 108 ದೂರ್ವೆ ಸಮರ್ಪಿಸುತ್ತಾರೆ. ಮೋದಕವನ್ನು ನೈವೇದ್ಯ ಮಾಡಿ ಜನರಿಗೆ ಹಂಚುತ್ತಾರೆ. ಕೆಲವರು ಉಪವಾಸ ವ್ರತವನ್ನು ಆಚರಿಸುವರು. ಸಂಜೆಗೆ ಗಣಪತಿಯ ಕಥಾ ಶ್ರವಣ ಮತ್ತು ಗಣಪತಿ ಅಥರ್ವ ಶೀರ್ಷ ಪಠಣ ಮಾಡುವುದರಿಂದ ಎಲ್ಲಾ ಸಂಕಷ್ಟಗಳೂ ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ.

ಗಣಪತಿಯ ದೇಗುಲಗಳಲ್ಲಿಯೂ ಸಹ ವಿಶೇಷ ಹವನ, ಹೋಮಗಳನ್ನು ನಡೆಸುತ್ತಾರೆ. ತೊಟ್ಟಿಲನ್ನು ಸಿಂಗರಿಸಿ, ಗಣಪನ ಮೂರ್ತಿಯನ್ನಿಟ್ಟು ತೂಗುತ್ತಾರೆ. ಮಹಾ ಮಂಗಳಾರತಿ, ಹಾಡು ಭಜನೆಗಳೊಂದಿಗೆ ಭಕ್ತರು ಗಣಪತಿಯ ಭಕ್ತಿಯಲ್ಲಿ ಮಿಂದೇಳುತ್ತಾರೆ. ಜ್ಞಾನ ಮತ್ತು ಬುದ್ಧಿಯ ಅಧಿದೇವತೆಯಾದ ಗಣೇಶನ ಜಯಂತಿಯ ಆಚರಣೆಯಿಂದ ಸುಖ, ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಹಿಂದೆ ಈ ವ್ರತವನ್ನು ಆಚರಿಸಿ ಯುಧಿಷ್ಠಿರನು ಯುದ್ಧದಲ್ಲಿ ಜಯಗಳಿಸಿ ರಾಜ್ಯವನ್ನು ಪಡೆದುಕೊಂಡ ಎಂದು ಫಲಶ್ರುತಿಯಲ್ಲಿ ಹೇಳಲಾಗಿದೆ. ಈ ವ್ರತವನ್ನು ಆಚರಿಸುವವರು ಚಂದ್ರದರ್ಶನ ಮಾಡುವಂತಿಲ್ಲ.

ಚಂದ್ರದರ್ಶನದಿಂದ ಸಂಕಷ್ಟದಲ್ಲಿ ಸಿಲುಕಬೇಕಾಗುತ್ತದೆ ಎನ್ನುವ ಪ್ರತೀತಿ ಇದೆ. ಪುರಾತನ ಪದ್ಧತಿಗಳ ಪ್ರಕಾರ, ಗಣೇಶ ಜಯಂತಿಯಂದು ಮತ್ತು ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದನ್ನು ನಿಷೇಧಿಸಲಾಗಿದೆ, ಇದರಲ್ಲಿ ಪ್ರಾಚೀನ ಪಂಚಾಂಗಗಳಿಂದ ನಿಷೇಧಿತ ಸಮಯವನ್ನು ನಿಗದಿಪಡಿಸಲಾಗಿದೆ. ಈ ದಿನ ಚಂದ್ರನನ್ನು ನೋಡುವ ವ್ಯಕ್ತಿಯು ಮಿಥ್ಯ ದೋಷ ಎಂಬ ತಪ್ಪು ಆರೋಪಗಳಿಂದ ಮಾನಸಿಕ ನೋವನ್ನು ಅನುಭವಿಸುತ್ತಾನೆ . ಒಬ್ಬ ವ್ಯಕ್ತಿಯು ತಪ್ಪಾಗಿ ಚಂದ್ರನನ್ನು ನೋಡಿದಾಗ, ಈ ಮಂತ್ರ ಪಠಿಸಲಾಗುತ್ತದೆ:

ಸಿಂಹಃ ಪ್ರಸೇನಮಾವಧಿತ್ಸಿಂಹೋ ಜಾಮ್ಬವತಾ ಹತಃ ।
ಸುಕುಮಾರಕ ಮರೋದಿಸ್ತವ ಹ್ಯೇಷಾ ಸ್ಯಮಂತಕಃ॥

ಉತ್ತರ ಕರ್ನಾಟಕದಲ್ಲಿ ಶ್ರದ್ಧಾ ಭಕ್ತಿಯ ವಿಶೇಷ ಗಣೇಶ ಜಯಂತಿ! (Image: Shutterstock)

ನಂದಿಯು ಸನತ್ಕುಮಾರ ಋಷಿಗಳಿಗೆ ವಿವರಿಸಿದ ದಂತಕಥೆಯ ಪ್ರಕಾರ ಭಾದ್ರಪದ ಶುಕ್ಲ ಚತುರ್ಥಿಯಂದು ಚಂದ್ರನನ್ನು ನೋಡಿದ ಕಾರಣ ಶ್ಯಮಂತಕ ಎಂಬ ಅಮೂಲ್ಯವಾದ ರತ್ನವನ್ನು ಕದ್ದೊಯ್ದ ಆರೋಪವನ್ನು ಶ್ರೀ ಕೃಷ್ಣ ಹೊರಬೇಕಾಯಿತು. ದೇವಋಷಿ ನಾರದರ ಸಲಹೆಯಂತೆ ಮಾಘ ಶುಕ್ಲ ಚತುರ್ಥಿ ಅಥವಾ ಗಣೇಶ ಜಯಂತಿಯಂದು ಉಪವಾಸ ಆಚರಿಸಿ ಶ್ರೀಕೃಷ್ಣನು ಕಳ್ಳತನದ ಆರೋಪದಿಂದ ಮುಕ್ತಿ ಪಡೆದನು.

ಮುದ್ಗಲ ಪುರಾಣದಲ್ಲಿ 32 ರೀತಿಯ ಗಣಪತಿಯ ವರ್ಣನೆ ಇದೆ. ಇಲ್ಲಿ ನಾಲ್ಕು, ಆರು, ಎಂಟು, ಹತ್ತು ಭುಜಗಳ ಗಣಪತಿಯ ವರ್ಣನೆಯಿದೆ. ಹಾಗೆಯೇ ಗಣಪತಿಯನ್ನು ನೀಲ, ಶ್ವೇತ, ಕನಕ ವರ್ಣದವನೆಂದು ಬಣ್ಣಿಸಲಾಗಿದೆ. ಗಣಪತಿಯು ಕೃತಯುಗದಲ್ಲಿ ದಶಭುಜನಾಗಿ ಸಿಂಹವಾಹನವುಳ್ಳವನಾದರೆ, ತ್ರೇತಾಯುಗದಲ್ಲಿ ಷಡ್ಭುಜನಾಗಿ ನವಿಲು ವಾಹನನಾಗಿದ್ದಾನೆ. ದ್ವಾಪರದಲ್ಲಿ ಚತುರ್ಭುಜನಾಗಿ ಮೂಷಿಕ ವಾಹನನಾದರೆ, ಕಲಿಯುಗದಲ್ಲಿ ದ್ವಿಭುಜನಾಗಿ ಅಶ್ವಾರೂಢನಾಗಿದ್ದಾನೆ ಎಂದು ಗಣೇಶ ಪುರಾಣದಲ್ಲಿ ವರ್ಣಿಸಲಾಗಿದೆ. (ನಿತ್ಯಸತ್ಯ ಸಂಗ್ರಹ)