ಮಹಾಶಿವರಾತ್ರಿ (Festival) ಹಬ್ಬವು ಬಹಳ ವಿಶೇಷವಾಗಿದ್ದು ಭಕ್ತರು ಶಿವನನ್ನು ಪೂಜಿಸುವುದರ ಜೊತೆಗೆ, ಉಪವಾಸ ಮಾಡಿ ಜಾಗರಣೆ ಮಾಡುತ್ತಾರೆ. ಈ ಹಬ್ಬದ ದಿನ ಶಿವನನ್ನ ಮಾತ್ರವಲ್ಲದೆ ತಾಯಿ ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಹಾಗಾಗಿ ಮಹಾಶಿವರಾತ್ರಿಯ ದಿನವು ಶಿವನ ಭಕ್ತರಿಗೆ ಬಹಳ ವಿಶೇಷವಾಗಿದೆ. ಪ್ರತಿ ವರ್ಷ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಉಪವಾಸವನ್ನು ಆಚರಣೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಅದರಲ್ಲಿಯೂ ಮಾಸಿಕ ಶಿವರಾತ್ರಿಗಿಂತ ಮಹಾಶಿವರಾತ್ರಿಯನ್ನು ದೇಶಾದ್ಯಂತ ಹೆಚ್ಚು ವಿಜೃಂಭಣೆಯಿಂದ ಮತ್ತು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ವರ್ಷ ಮಹಾಶಿವರಾತ್ರಿಯನ್ನು ಮಾರ್ಚ್ 8 ರಂದು ಆಚರಣೆ ಮಾಡಲಾಗುತ್ತದೆ. ಹಾಗಾದರೆ ಮಹಾಶಿವರಾತ್ರಿಯನ್ನು ಏಕೆ ಆಚರಿಸಲಾಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ಶಿವ ಪಾರ್ವತಿಯರ ವಿವಾಹವು ಈ ದಿನ ನಡೆದಿತ್ತು ಎನ್ನಲಾಗುತ್ತದೆ. ಅದರಲ್ಲಿಯೂ ಈ ಬಾರಿ ಅಂದರೆ 2024ರಲ್ಲಿ ಸರ್ವಾರ್ಥ ಸಿದ್ಧಿ ಯೋಗ ಇರುವುದರಿಂದ ಹೆಚ್ಚು ವಿಶೇಷ ಎನಿಸಿಕೊಂಡಿದೆ. ಹಾಗಾಗಿ ಈ ದಿನ ಆರ್ಥಿಕ ಲಾಭ ಮತ್ತು ಕಾರ್ಯ ಸಾಧನೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅದಲ್ಲದೆ ವಿವಾಹಿತರಿಗೂ ಕೂಡ ಮಹಾಶಿವರಾತ್ರಿ ಬಹಳ ಮುಖ್ಯವೆಂದು ಹೇಳಲಾಗುತ್ತದೆ. ಕೆಲವರು ಮಹಾಶಿವರಾತ್ರಿಯನ್ನು ಶಿವನ ವಿವಾಹವದ ದಿನ ಎಂದು ಆಚರಿಸಿದರೆ, ಈ ದಿನದಂದು ಶಿವನು ತನ್ನ ಎಲ್ಲಾ ಶತ್ರುಗಳನ್ನು ಗೆದ್ದು ವಿಜಯ ಸಾಧಿಸಿದನು ಎಂದು ಕೆಲವರು ನಂಬುತ್ತಾರೆ. ಫಾಲ್ಗುಣ ಮಾಸದ ಚತುರ್ದಶಿಯಂದು ಶಿವನು ದೈವಿಕ ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡನೆಂದು ಕೆಲವು ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಮಹಾಶಿವರಾತ್ರಿಗೆ ಸಂಬಂಧಿಸಿದ ಕೆಲವು ಪೌರಾಣಿಕ ಕಥೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಶಿವ ಪುರಾಣ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ?
ಶಿವ ಪುರಾಣದ ಪ್ರಕಾರ, ಒಮ್ಮೆ ಸೃಷ್ಟಿಯ ಆರಂಭದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಶ್ರೇಷ್ಠತೆಯ ಬಗ್ಗೆ ಕಲಹ ಆರಂಭವಾಯಿತು. ಈ ವಿವಾದದ ಸಮಯದಲ್ಲಿ, ಬೆಂಕಿಯ ಜ್ವಾಲೆ ಕಾಣಿಸಿಕೊಂಡು, ಆದಿ ಮತ್ತು ಅಂತ್ಯವನ್ನು ತಿಳಿದಿರುವವರನ್ನು ಅತ್ಯುತ್ತಮ ಎಂದು ಕರೆಯಲಾಗುತ್ತದೆ ಎಂದು ಹೇಳಿತು. ಆಗ ವಿಷ್ಣು ಮತ್ತು ಬ್ರಹ್ಮ ತಮ್ಮ ಸೋಲನ್ನು ಒಪ್ಪಿಕೊಂಡರು. ಆಗ ಶಿವನು ನೀವಿಬ್ಬರೂ ಅತ್ಯುತ್ತಮರು, ಆದರೆ ನಾನು ಆದಿ ಮತ್ತು ಅಂತ್ಯವನ್ನು ಮೀರಿದ್ದೇನೆ ಎಂದು ಹೇಳಿದನು. ಇದರ ನಂತರ, ವಿಷ್ಣು ಮತ್ತು ಬ್ರಹ್ಮ ಆ ಬೆಂಕಿಯ ಜ್ವಾಲೆಯನ್ನು ಪೂಜಿಸಿದರು ಬಳಿಕ ಇದು ಜ್ಯೋತಿರ್ಲಿಂಗವಾಗಿ ಮಾರ್ಪಟ್ಟಿತು. ಈ ಘಟನೆ ನಡೆದ ದಿನ ಫಾಲ್ಗುಣ ತಿಂಗಳ ಚತುರ್ದಶಿ ತಿಥಿ. ಆಗ ಶಿವನು ಈ ದಿನ ಯಾರು ಉಪವಾಸ ಮಾಡಿ ನನ್ನನ್ನು ಪೂಜಿಸುತ್ತಾರೋ, ಅವರ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ. ಜೊತೆಗೆ ಅವರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಹೇಳಿದನು. ಅಂದಿನಿಂದ ಈ ದಿನವನ್ನು ಮಹಾಶಿವರಾತ್ರಿ ಎಂದು ಆಚರಿಸಲು ಪ್ರಾರಂಭಿಸಲಾಯಿತು.
ಮತ್ತೊಂದು ದಂತಕಥೆಯ ಪ್ರಕಾರ, ಮಹಾಶಿವರಾತ್ರಿಯ ದಿನದಂದು, ಶಿವನು ಹನ್ನೆರಡು ಜ್ಯೋತಿರ್ಲಿಂಗಗಳ ರೂಪದಲ್ಲಿ ಜಗತ್ತಿನಲ್ಲಿ ಕಾಣಿಸಿಕೊಂಡನು ಎಂದು ಹೇಳಲಾಗುತ್ತದೆ. ಈ 12 ಜ್ಯೋತಿರ್ಲಿಂಗಗಳೆಂದರೆ, ಸೋಮನಾಥ ದೇವಸ್ಥಾನ ಗುಜರಾತ್, ಆಂಧ್ರಪ್ರದೇಶದಲ್ಲಿರುವ ಮಲ್ಲಿಕಾರ್ಜುನ, ಉಜ್ಜಯಿನಿ ಮಹಾಕಾಲೇಶ್ವರ, ಮಧ್ಯಪ್ರದೇಶ ಓಂಕಾರೇಶ್ವರ, ಉತ್ತರಾಖಂಡ್ ಕೇದಾರನಾಥ, ಮಹಾರಾಷ್ಟ್ರದ ಭೀಮಾಶಂಕರ್, ಉತ್ತರ ಪ್ರದೇಶದ ವಿಶ್ವನಾಥ, ಮಹಾರಾಷ್ಟ್ರದ ತ್ರಯಂಬಕೇಶ್ವರ, ಜಾರ್ಖಂಡ್ ವೈದ್ಯನಾಥ, ಗುಜರಾತ್ ನಲ್ಲಿರುವ ನಾಗೇಶ್ವರ, ತಮಿಳುನಾಡಿನ ರಾಮೇಶ್ವರ ಮತ್ತು ಔರಂಗಾಬಾದ್ ನಲ್ಲಿ ಘೃಶ್ನೇಶ್ವರ ಜ್ಯೋತಿರ್ಲಿಂಗಗಳಿವೆ. ಮಹಾಶಿವರಾತ್ರಿಯಂದು ಈ 12 ಜ್ಯೋತಿರ್ಲಿಂಗಳನ್ನು ನೋಡುವುದೇ ಒಂದು ಹಬ್ಬ. ಅದರಲ್ಲಿಯೂ ಇಲ್ಲಿ ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮೂರನೆಯ ಕಥೆಯ ಪ್ರಕಾರ, ತಾಯಿ ಪಾರ್ವತಿ ಮತ್ತು ಶಿವನ ವಿವಾಹವು ಫಾಲ್ಗುಣ ಮಾಸದ ಚತುರ್ದಶಿಯಂದು ನಡೆಯಿತು. ಈ ದಿನ, ಶಿವನು ಗೃಹಸ್ಥ ಜೀವನಕ್ಕೆ ಪ್ರವೇಶಿಸಿದನು. ಶಿವ ಮತ್ತು ಪಾರ್ವತಿ ದೇವಿಯ ಶಕ್ತಿಯ ಐಕ್ಯತೆಯ ಆಚರಣೆಯಾಗಿ, ಭಕ್ತರು ಮಹಾಶಿವರಾತ್ರಿಯ ದಿನದಂದು ಪೂಜೆ, ಉಪವಾಸ ಮತ್ತು ಜಾಗರಣೆ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ ಎಂಬ ನಂಬಿಕೆಯಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:35 am, Fri, 1 March 24