Maha Shivratri
ಮಹಾಶಿವರಾತ್ರಿ ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಒಂದು. ಇದು ಬಹಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ದೇಶದಾದ್ಯಂತ ಶಿವನನ್ನು ಆರಾಧಿಸುವವರು ಮಹಾ ಶಿವರಾತ್ರಿಯನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಆಚರಿಸುತ್ತಾರೆ. ಶಿವರಾತ್ರಿಯ ಹಿಂದಿನ ದಿನ ರಾತ್ರಿಯಿಂದಲೇ ಭಜನೆ, ಜಾಗರಣೆ, ಉಪವಾಸಗಳನ್ನು ಮಾಡಲಾಗುತ್ತದೆ. ಶಿವರಾತ್ರಿಯಂದು ಶಿವ ಪೂಜೆಯನ್ನು ಮಾಡುವ ಮೂಲಕ, ಶಿವನಿಗೆ ಪ್ರಿಯವಾದ ತುಳಸಿ, ಬಿಲ್ವಪತ್ರೆಯನ್ನು ಅರ್ಪಿಸುವ ಮೂಲಕ, ತಂಬಿಟ್ಟಿನ ನೈವೇದ್ಯ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೇರೆಲ್ಲ ಹಬ್ಬಗಳಲ್ಲಿ ಹಗಲಿನ ವೇಳೆ ದೇವರಿಗೆ ಪೂಜೆ ಮಾಡಿದರೆ ಶಿವರಾತ್ರಿಯಲ್ಲಿ ಶಿವನಿಗೆ ರಾತ್ರಿ ಪೂಜೆ ಮಾಡುವುದೇ ದೊಡ್ಡ ವಿಶೇಷ. ಶಿವರಾತ್ರಿಯ ಮಹತ್ವದ ಬಗ್ಗೆ ಹಲವು ದಂತಕತೆಗಳಿವೆ. ಶಿವನು ಪಾರ್ವತಿಯನ್ನು ಮದುವೆಯಾದ ದಿನ ಶಿವರಾತ್ರಿಯೆಂದು ಕೆಲವು ಕತೆಗಳು ಹೇಳುತ್ತವೆ. ದೇವತೆಗಳು ಮತ್ತು ಅಸುರರ ನಡುವೆ ಸಮುದ್ರ ಮಂಥನ ನಡೆದಾಗ ಉದ್ಭವವಾದ ವಿಷವನ್ನು ಶಿವ ಕುಡಿದು ನೀಲಕಂಠನಾದ ದಿನ ಶಿವರಾತ್ರಿಯೆಂದು ಇನ್ನು ಕೆಲವು ಕತೆಗಳು ಹೇಳುತ್ತವೆ. ಶಿವನ ಜಟೆಯಿಂದ ಗಂಗೆ ಭೂಮಿಗೆ ಬಂದಿದ್ದು ಇದೇ ದಿನ ಎಂಬುದು ಇನ್ನೊಂದು ಕತೆ. ಶಿವನು ಲಿಂಗ ರೂಪ ತಾಳಿ ನಿಶ್ಚಲನಾದ ದಿನವೇ ಶಿವರಾತ್ರಿ ಎಂಬುದು ಬಹುತೇಕರ ನಂಬಿಕೆ.