ದೇವಿಗೆ ಮೀನಿನ ಖಾದ್ಯವೇ ನೈವೇದ್ಯ? ಬಂಗಾಳದ ಈ ದುರ್ಗಾ ಪೂಜೆಯ ಕಥೆ ಇಲ್ಲಿದೆ

ಪಶ್ಚಿಮ ಬಂಗಾಳ ಮಿಡ್ನಾಪುರದ ಚಕ್ರವರ್ತಿ ಕುಟುಂಬದ ದುರ್ಗಾ ಪೂಜೆ 200 ವರ್ಷಗಳ ವಿಶಿಷ್ಟ ಪರಂಪರೆ. ಮಣ್ಣಿನ ವಿಗ್ರಹದ ಬದಲು ಪಟಚಿತ್ರಕ್ಕೆ ಪೂಜೆ, ಪ್ರಾಣಿ ಬಲಿಯ ಬದಲಿಗೆ ಬೂದು ಕುಂಬಳಕಾಯಿ, ದೇವಿಗೆ ಮೀನಿನ ಖಾದ್ಯ ನೈವೇದ್ಯ, 108 ನೀಲಿ ಕಮಲಗಳ ಅರ್ಚನೆ ಇಲ್ಲಿನ ಅಪರೂಪದ ಸಂಪ್ರದಾಯಗಳು. ಇದು ಕೇವಲ ಆಚರಣೆಯಲ್ಲದೆ, ಕುಟುಂಬದ ಸದಸ್ಯರನ್ನು ಒಂದುಗೂಡಿಸುವ ಮಹತ್ವದ ಹಬ್ಬವಾಗಿದೆ.

ದೇವಿಗೆ ಮೀನಿನ ಖಾದ್ಯವೇ ನೈವೇದ್ಯ? ಬಂಗಾಳದ ಈ ದುರ್ಗಾ ಪೂಜೆಯ ಕಥೆ ಇಲ್ಲಿದೆ
ದುರ್ಗಾ ಪೂಜೆ
Image Credit source: Getty Images

Updated on: Oct 07, 2026 | 9:17 AM

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ವಿಶೇಷ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ರಾಜ್ಯದಾದ್ಯಂತ ಪ್ರತಿಯೊಂದು ಪ್ರದೇಶದಲ್ಲೂ ದೇವಿಯನ್ನು ಸ್ಥಳೀಯ ಆಚರಣೆಗಳಿಗೆ ಅನುಗುಣವಾಗಿ ಪೂಜಿಸಲಾಗುತ್ತದೆ. ಆದರೆ, ಮಿಡ್ನಾಪುರದ ಮಿಯಾ ಬಜಾರ್‌ನ ಚಕ್ರವರ್ತಿ ಕುಟುಂಬವು ನಡೆಸಿಕೊಂಡು ಬರುತ್ತಿರುವ ದುರ್ಗಾ ಪೂಜೆಯು ಇತರ ಪ್ರದೇಶಗಳಿಗಿಂತ ತೀರಾ ವಿಶಿಷ್ಟವಾದದ್ದು. ಸುಮಾರು ಎರಡು ಶತಮಾನಗಳಿಂದ ಅಡೆತಡೆಯಿಲ್ಲದೆ ನಡೆಯುತ್ತಿರುವ ಈ ಪೂಜೆಯಲ್ಲಿ ಇಂದಿಗೂ ಹಲವು ರೋಚಕ ಹಾಗೂ ಅಪರೂಪದ ಸಂಪ್ರದಾಯಗಳು ಜೀವಂತವಾಗಿವೆ.

ಮಣ್ಣಿನ ವಿಗ್ರಹದ ಬದಲು ಪಟಚಿತ್ರ ಪೂಜೆ:

ಸಾಮಾನ್ಯವಾಗಿ ದುರ್ಗಾ ಪೂಜೆಯ ಸಮಯದಲ್ಲಿ ದೇವಿಯ ಬೃಹತ್ ಮಣ್ಣಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ನಡವಳಿ. ಆದರೆ, ಚಕ್ರವರ್ತಿ ಕುಟುಂಬದಲ್ಲಿ ಮಣ್ಣಿನ ವಿಗ್ರಹವನ್ನು ಬಳಸುವುದಿಲ್ಲ. ಪವಿತ್ರ ಸುರುಳಿ ಚಿತ್ರಕಲೆಯಲ್ಲಿ (ಪಟಚಿತ್ರ) ಬಿಡಿಸಲಾದ ದುರ್ಗಾ ದೇವಿಯ ಚಿತ್ರವನ್ನೇ ದೇವಿಯ ಸಾಕ್ಷಾತ್ ರೂಪವೆಂದು ಪರಿಗಣಿಸಿ ಪೂಜಿಸಲಾಗುತ್ತದೆ. ತಲೆಮಾರುಗಳಿಂದ ಸಿಂಹ ರಥದ ಮೇಲೆ ವಿರಾಜಳಾಗಿರುವ ಆರು ಅಡಿ ಎತ್ತರದ ಈ ಪಟಚಿತ್ರಕ್ಕೇ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.

ಷಷ್ಠಿಯಿಂದ ದಶಮಿಯವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು:

ಚಕ್ರವರ್ತಿ ಕುಟುಂಬದಲ್ಲಿ ಐದು ದಿನಗಳ ಕಾಲ ದುರ್ಗಾ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಷಷ್ಠಿಯ ದಿನದಂದು ದೇವಿಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಜಾಗೃತಗೊಳಿಸಲು ಬೋಧನ್ ಆಚರಣೆ ಮಾಡಲಾಗುತ್ತದೆ. ಸಪ್ತಮಿಯ ಮುಂಜಾನೆ ಏಳು ವಿಭಿನ್ನ ಬಾವಿಗಳಿಂದ ಪವಿತ್ರ ನೀರನ್ನು ತಂದು ಕಲಶ ಸ್ಥಾಪನೆ ಮಾಡಲಾಗುತ್ತದೆ. ಹಿಂದೆ ಈ ಕಲಶವನ್ನು ಆನೆ ಮತ್ತು ಕುದುರೆಗಳ ಭವ್ಯ ಮೆರವಣಿಗೆಯಲ್ಲಿ ತರಲಾಗುತ್ತಿತ್ತು. ಈಗ ಮೆರವಣಿಗೆಯ ವೈಭವ ಕಡಿಮೆಯಾಗಿದ್ದರೂ, ಸಾಂಪ್ರದಾಯಿಕ ವಾದ್ಯಗಳ ನಾದದ ನಡುವೆ ಕಲಶ ತರುವ ಪದ್ಧತಿಯನ್ನು ಇಂದಿಗೂ ಕಾಯ್ದುಕೊಳ್ಳಲಾಗಿದೆ.

ಪ್ರಾಣಿ ಬಲಿಯಿಂದ ಬೂದು ಕುಂಬಳಕಾಯಿ ಬಲಿಗೆ ಬದಲಾವಣೆ:

ಈ ಕುಟುಂಬದ ದುರ್ಗಾ ಪೂಜೆಯಲ್ಲಿ ಹಿಂದೆ ಪ್ರಾಣಿ ಬಲಿ ನೀಡುವ ಆಚರಣೆಯಿತ್ತು. ಆದರೆ ಕಾಲಕ್ರಮೇಣ ಹಿಂಸಾತ್ಮಕ ಪದ್ಧತಿಯನ್ನು ನಿಲ್ಲಿಸಿ, ಅದರ ಜಾಗದಲ್ಲಿ ಸಾಂಕೇತಿಕವಾಗಿ ಬೂದು ಕುಂಬಳಕಾಯಿಯನ್ನು ಬಲಿ ನೀಡುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಸಪ್ತಮಿಯಿಂದ ನವಮಿಯವರೆಗೆ ಮಹಾಯಜ್ಞ ಎಂಬ ಪವಿತ್ರ ಅಗ್ನಿಹೋತ್ರ ಕಾರ್ಯಕ್ರಮ ನೆರವೇರುತ್ತದೆ. ಈ ಯಜ್ಞ ಮತ್ತು ಪೂಜಾ ವಿಧಿಗಳನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.

ದೇವಿಗೆ ಮೀನಿನ ಖಾದ್ಯ ನೈವೇದ್ಯ; ಒಂದು ಅಪರೂಪದ ಆಚರಣೆ:

ಈ ಪೂಜೆಯ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ದೇವಿಗೆ ಮೀನಿನ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸುವುದು. ಪೂಜೆಯ ಮೊದಲ ದಿನ ಹಣ್ಣುಗಳು ಮತ್ತು ಸಸ್ಯಾಹಾರಿ ವಸ್ತುಗಳನ್ನು ನೈವೇದ್ಯ ಮಾಡಿದರೆ, ನಂತರದ ದಿನಗಳಲ್ಲಿ ಮೀನಿನ ಖಾದ್ಯಗಳು ಹಾಗೂ ಚಡ್ಡನ್ನಂ (ತಣ್ಣಗಿನ ಅನ್ನ) ಅರ್ಪಿಸಲಾಗುತ್ತದೆ. ದುರ್ಗಾ ದೇವಿಯು ಕೈಲಾಸಕ್ಕೆ ಹಿಂದಿರುಗಿದ ನಂತರ ಪತಿ ಶಿವನು “ತವರ ಮನೆಯಲ್ಲಿ ಏನು ತಿಂದೆ?” ಎಂದು ಕೇಳುತ್ತಾನಂತೆ. ದೇವಿಯು ತವರು ಮನೆಯಲ್ಲಿ ಸ್ವೀಕರಿಸಿದ ಪ್ರೀತಿಯ ಆಹಾರದ ಸಂಕೇತವಾಗಿ ಈ ಮೀನಿನ ನೈವೇದ್ಯ ನೀಡಲಾಗುತ್ತದೆ ಎಂಬುದು ಕುಟುಂಬದ ಆಳವಾದ ನಂಬಿಕೆ.

ಇದನ್ನೂ ಓದಿ: ಹನುಮಾನ್ ಚಾಲೀಸಾ ಉಗಮದ ರೋಚಕ ಕಥೆ: ಬಂದೀಖಾನೆಯಲ್ಲಿ ತುಳಸಿದಾಸರು ರಚಿಸಿದ ದಿವ್ಯ ಸ್ತೋತ್ರದ ಇತಿಹಾಸ

108 ನೀಲಿ ಕಮಲಗಳಿಂದ ವಿಶೇಷ ಅರ್ಚನೆ:

ಅಷ್ಟಮಿಯ ದಿನದಂದು ದುರ್ಗಾ ದೇವಿಗೆ 108 ನೀಲಿ ಕಮಲದ ಹೂವುಗಳಿಂದ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪವಿತ್ರ ಹಾಗೂ ಅಪರೂಪದ ನೀಲಿ ಹೂವುಗಳಿಂದ ಪೂಜಿಸುವುದರಿಂದ ದೇವಿಯು ಶೀಘ್ರ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಅಪರೂಪದ ಪೂಜಾ ವಿಧಾನವು ಚಕ್ರವರ್ತಿ ಕುಟುಂಬದ ದುರ್ಗಾ ಪೂಜೆಗೆ ಇಡೀ ಬಂಗಾಳದಲ್ಲೇ ವಿಶೇಷ ಮನ್ನಣೆ ತಂದುಕೊಟ್ಟಿದೆ.

ಕುಟುಂಬದ ಒಕ್ಕೂಟ ಮತ್ತು ದಶಮಿಯ ವಿಸರ್ಜನೆ:

ವಿಜಯದಶಮಿಯಂದು ಸಾಂಪ್ರದಾಯಿಕ ವಿಧಿ-ವಿಧಾನಗಳ ನಂತರ ದೇವಿಯ ಬಿಳ್ಕೊಡುಗೆಯೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ. ಉದ್ಯೋಗ ಅಥವಾ ಜೀವನೋಪಾಯಕ್ಕಾಗಿ ಜಗತ್ತಿನ ವಿವಿಧ ಮೂಲೆಗಳಲ್ಲಿ ನೆಲೆಸಿರುವ ಚಕ್ರವರ್ತಿ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಈ ಐದು ದಿನಗಳ ಪೂಜೆಗಾಗಿ ತಮ್ಮ ಮೂಲ ಮನೆಗೆ ಆಗಮಿಸುತ್ತಾರೆ. ಹೀಗಾಗಿ ಇದು ಕೇವಲ ಧಾರ್ಮಿಕ ಪೂಜೆಯಷ್ಟೇ ಅಲ್ಲದೆ, ಕುಟುಂಬದವರೆಲ್ಲರೂ ಒಂದೆಡೆ ಸೇರುವ ಪ್ರಮುಖ ಉತ್ಸವವಾಗಿಯೂ ರೂಪುಗೊಂಡಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us