AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುಂಗಲಿ ಮಾಲೆ ಎಂದರೆ ಏನು? ಧರಿಸುವಾಗ ಪಾಲಿಸಬೇಕಾದ ಕಠಿಣ ನಿಯಮಗಳು ಇಲ್ಲಿವೆ!

ಕರುಂಗಲಿ ಮಾಲೆಯು ಕಪ್ಪು ಎಬೊನಿ ಮರದ ಮಣಿಗಳಿಂದ ತಯಾರಿಸಿದ ಶಕ್ತಿಶಾಲಿ ಜಪಮಾಲೆ. ಇದು ಆಧ್ಯಾತ್ಮಿಕ ಶಕ್ತಿ, ದೃಷ್ಟಿದೋಷ ನಿವಾರಣೆ ಹಾಗೂ ಮನಃಶಾಂತಿಗಾಗಿ ಧರಿಸಲ್ಪಡುತ್ತದೆ. ಸಕಾರಾತ್ಮಕ ಶಕ್ತಿಯನ್ನು ಸೆಳೆದು ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ ಎಂಬ ನಂಬಿಕೆಯಿದೆ. ಮಾಲೆ ಧರಿಸುವಾಗ ಪಾಲಿಸಬೇಕಾದ ಕಠಿಣ ನಿಯಮಗಳು, ಸಂಗ್ರಹಣೆ ವಿಧಾನ, ಹಾಗೂ ಯಾರು ಧರಿಸಬಹುದು ಮತ್ತು ಧರಿಸಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರುಂಗಲಿ ಮಾಲೆ ಎಂದರೆ ಏನು? ಧರಿಸುವಾಗ ಪಾಲಿಸಬೇಕಾದ ಕಠಿಣ ನಿಯಮಗಳು ಇಲ್ಲಿವೆ!
ಕರುಂಗಲಿ ಮಾಲೆImage Credit source: Getty Images
ಅಕ್ಷತಾ ವರ್ಕಾಡಿ
|

Updated on: Oct 07, 2026 | 7:50 AM

Share

ನಮ್ಮಲ್ಲಿ ಹೆಚ್ಚಿನವರು ಆಧ್ಯಾತ್ಮಿಕ ನಂಬಿಕೆ, ದೃಷ್ಟಿದೋಷ ನಿವಾರಣೆ ಅಥವಾ ಮನಸ್ಸಿನ ಶಾಂತಿಗಾಗಿ ವಿವಿಧ ರೀತಿಯ ರತ್ನ ಹಾಗೂ ರುದ್ರಾಕ್ಷಿ ಹಾರಗಳನ್ನು ಧರಿಸುತ್ತಾರೆ. ಆದರಂತೆ ಇತ್ತೀಚಿನ ಕೆಲ ವರ್ಷಗಳಲ್ಲಿ ವ್ಯಾಪಕವಾಗಿ ಧರಿಸಲಾಗುವ ಅತ್ಯಂತ ಶಕ್ತಿಶಾಲಿ ಮಾಲೆ ಎಂದರೆ ಅದು ‘ಕರುಂಗಲಿ ಮಾಲೆ’ (Karungali Mala). ಕಪ್ಪು ಎಬೊನಿ (Ebony) ಮರದ ಮಣಿಗಳಿಂದ ತಯಾರಿಸಲಾಗುವ ಈ ಪವಿತ್ರ ಜಪಮಾಲೆಯು ಆಳವಾದ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

ಕರುಂಗಲಿ ಮಾಲೆ ಎಂದರೇನು?

ಕರುಂಗಲಿ ಮಾಲೆ ಎಂಬುದು ಕಪ್ಪು ಎಬೊನಿ ಮರದ ಮಧ್ಯಭಾಗದಿಂದ ತೆಗೆದ ಬಲವಾದ ಮಣಿಗಳಿಂದ ಮಾಡಿದ ದಾರವಾಗಿದೆ. ಈ ಮರವು ಅತ್ಯಂತ ನಿಧಾನವಾಗಿ ಬೆಳೆಯುವ, ಗಟ್ಟಿಮುಟ್ಟಾದ ಹಾಗೂ ಪವಿತ್ರವಾದ ಮರವಾಗಿದ್ದು, ಹಿಂದೂ ಮತ್ತು ಬೌದ್ಧ ಧರ್ಮದ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಪೂಜಿಸಲ್ಪಡುತ್ತದೆ. ಶತಮಾನಗಳಿಂದಲೂ ಋಷಿಮುನಿಗಳು, ಯೋಗಿಗಳು ಮತ್ತು ದೇವಾಲಯದ ಅರ್ಚಕರು ಪ್ರಾರ್ಥನೆ, ಜಪ ಹಾಗೂ ಧ್ಯಾನಕ್ಕಾಗಿ ಕರುಂಗಲಿ ಮಣಿಗಳನ್ನು ಬಳಸುತ್ತಿದ್ದಾರೆ. ಈ ಮರವು ಸಕಾರಾತ್ಮಕ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂಬ ಬಲವಾದ ನಂಬಿಕೆಯಿದೆ. ತಮಿಳುನಾಡಿನಲ್ಲಿ ಈ ಮಾಲೆಯನ್ನು ಮುರುಗನ್ (ಸುಬ್ರಹ್ಮಣ್ಯ) ದೇವರಿಗೆ ಅತ್ಯಂತ ಪ್ರಿಯವಾದುದು ಎಂದು ಪರಿಗಣಿಸಲಾಗುತ್ತದೆ.

ಕರುಂಗಲಿ ಮಾಲೆ ಧರಿಸುವಾಗ ಪಾಲಿಸಬೇಕಾದ ಪ್ರಮುಖ ನಿಯಮಗಳು:

ಕರುಂಗಲಿ ಮಾಲೆಯನ್ನು ಧರಿಸುವಾಗ ಅದರ ಪವಿತ್ರತೆ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ:

  • ಸ್ನಾನ ಮಾಡುವಾಗ, ರಾತ್ರಿ ಮಲಗುವಾಗ ಹಾಗೂ ದಂಪತಿಗಳು ಆತ್ಮೀಯತೆಯ ಕ್ಷಣಗಳಲ್ಲಿದ್ದಾಗ ಈ ಮಾಲೆಯನ್ನು ಧರಿಸಬಾರದು.
  • ಮಾಂಸಾಹಾರ ಸೇವಿಸುವಾಗ, ಮದ್ಯಪಾನ ಮಾಡುವಾಗ ಅಥವಾ ತಾಮಸಿಕ ಆಹಾರ ಸೇವಿಸುವಾಗ ಕರುಂಗಲಿ ಮಾಲೆಯನ್ನು ಧರಿಸುವುದು ನಿಷೇಧ.
  • ಅಂತ್ಯಕ್ರಿಯೆ ಅಥವಾ ಶವಸಂಸ್ಕಾರದಲ್ಲಿ ಭಾಗವಹಿಸುವಾಗ ಇದನ್ನು ಧರಿಸಬಾರದು. ಅಲ್ಲದೆ, ಮಹಿಳೆಯರು ಮುಟ್ಟಿನ (ಋತುಸ್ರಾವದ) ಸಮಯದಲ್ಲಿ ಈ ಮಾಲೆಯನ್ನು ತೆಗೆದಿಡಬೇಕು.

ಸುರಕ್ಷಿತವಾಗಿಡುವುದು ಹೇಗೆ?

ಮಾಲೆಯನ್ನು ಧರಿಸದೇ ಇರುವಾಗ ಅದನ್ನು ಶುಭ್ರವಾದ ಬಟ್ಟೆಯಲ್ಲಿ ಸುತ್ತಿ, ಮನೆಯ ಪೂಜಾ ಕೊಠಡಿಯಲ್ಲಿ ಅಥವಾ ದೇವರ ವಿಗ್ರಹದ ಬಳಿ ಗೌರವಪೂರ್ವಕವಾಗಿ ಇಡಬೇಕು. ನಿಮ್ಮ ಕರುಂಗಲಿ ಮಾಲೆಯನ್ನು ಎಂದಿಗೂ ಇತರರಿಗೆ ಧರಿಸಲು ನೀಡಬಾರದು ಅಥವಾ ಹಂಚಿಕೊಳ್ಳಬಾರದು. ಹಾಗೆ ಮಾಡುವುದರಿಂದ ನಿಮ್ಮ ಧನಾತ್ಮಕ ಶಕ್ತಿ ಹಾಗೂ ಚೈತನ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಹನುಮಾನ್ ಚಾಲೀಸಾ ಉಗಮದ ರೋಚಕ ಕಥೆ: ಬಂದೀಖಾನೆಯಲ್ಲಿ ತುಳಸಿದಾಸರು ರಚಿಸಿದ ದಿವ್ಯ ಸ್ತೋತ್ರದ ಇತಿಹಾಸ

ಕರುಂಗಲಿ ಮಾಲೆಯನ್ನು ಯಾರು ಧರಿಸಬಹುದು?

ವಯಸ್ಸು, ಜಾತಿ ಅಥವಾ ಲಿಂಗದ ಭೇದವಿಲ್ಲದೆ ಧಾರ್ಮಿಕ ನಿಯಮ ಪಾಲಿಸುವ ಪ್ರತಿಯೊಬ್ಬರೂ ಇದನ್ನು ಧರಿಸಬಹುದು. ಪುರುಷರು ಮತ್ತು ಮಹಿಳೆಯರು ಇಬ್ಬರೂ ಆಧ್ಯಾತ್ಮಿಕ ಜ್ಞಾನೋದಯ ಹಾಗೂ ಮನಸ್ಸಿನ ನೆಮ್ಮದಿಗಾಗಿ ಧರಿಸಬಹುದು. 6 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಕೂಡ ಇದನ್ನು ಧರಿಸಬಹುದು. ಇದರಿಂದ ಮಕ್ಕಳಿಗೆ ಅಧ್ಯಯನದ ಸಮಯದಲ್ಲಿ ಉತ್ತಮ ಏಕಾಗ್ರತೆ ಮತ್ತು ನೆನಪಿನ ಶಕ್ತಿ ದೊರೆಯುತ್ತದೆ.

ಕರುಂಗಲಿ ಮಾಲೆಯನ್ನು ಯಾರು ಧರಿಸಬಾರದು?

ಗರ್ಭಿಣಿ ಮಹಿಳೆಯರು ಕರುಂಗಲಿ ಮಾಲೆಯನ್ನು ಧರಿಸಬಾರದು. ಏಕೆಂದರೆ ಎಬೊನಿ ಮರದ ಮಣಿಗಳು ಸ್ವಾಭಾವಿಕವಾಗಿ ಭಾರವಾದ ಶಕ್ತಿಯನ್ನು ಹೊಂದಿರುತ್ತವೆ. ಗರ್ಭಾವಸ್ಥೆಯಲ್ಲಿ ತಾಯಿಯ ದೇಹವು ಹಗುರ ಮತ್ತು ಮುಕ್ತವಾಗಿರುವುದು ಅಗತ್ಯ ಎಂಬುದು ಸಾಂಪ್ರದಾಯಿಕ ನಂಬಿಕೆ. ನಿಯಮಗಳನ್ನು (ಮಾಂಸಾಹಾರ ತ್ಯಜಿಸುವುದು, ಸೂತಕದ ನಿಯಮ ಇತ್ಯಾದಿ) ಸರಿಯಾಗಿ ಪಾಲಿಸಲು ಸಾಧ್ಯವಾಗದವರು ಇದನ್ನು ಧರಿಸದಿರುವುದು ಒಳಿತು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More