Mouni Amavasya: ಇಂದು ಮೌನಿ ಅಮಾವಾಸ್ಯೆ; ಈ ದಿನದ ಮಹತ್ವ, ಪೂಜಾ ವಿಧಾನ ಹಾಗೂ ಶುಭ ಫಲಗಳ ಬಗ್ಗೆ ತಿಳಿಯಿರಿ
ಮೌನಿ ಅಮಾವಾಸ್ಯೆ ಅಥವಾ ಮಾಘ ಅಮಾವಾಸ್ಯೆಯು ಪೂರ್ವಿಕರ ಸ್ಮರಣೆಗೆ ಅತ್ಯಂತ ವಿಶೇಷ ದಿನವಾಗಿದೆ. ಈ ದಿನ, ಪೂರ್ವಿಕರು ಮಾರ್ಗದರ್ಶನ ನೀಡಲು ನಮ್ಮ ಸುತ್ತ ಇರುತ್ತಾರೆಂದು ನಂಬಲಾಗುತ್ತದೆ. ದಾನ, ತರ್ಪಣ ಮತ್ತು ಸಪ್ತ ನದಿ ಸ್ನಾನದಂತಹ ಆಚರಣೆಗಳಿಂದ ಪೂರ್ವಿಕರನ್ನು ತೃಪ್ತಿಪಡಿಸಿ, ದುಷ್ಟ ಶಕ್ತಿಗಳಿಂದ ಮುಕ್ತಿ, ಪಾಪ ವಿಮೋಚನೆ ಹಾಗೂ ಮೋಕ್ಷ ಪಡೆಯಬಹುದು.

ವರ್ಷದಲ್ಲಿ ಬರುವ ಅಮಾವಾಸ್ಯೆಗಳಲ್ಲಿ ಕೆಲವು ವಿಶೇಷ ಪ್ರಾಮುಖ್ಯತೆ ಪಡೆದಿರುತ್ತವೆ. ಅಂತಹ ಒಂದು ಅಮಾವಾಸ್ಯೆಯೇ ಮೌನಿ ಅಮಾವಾಸ್ಯೆ. ಇದನ್ನು ಮಾಘ ಮಾಸದಲ್ಲಿ ಬರುವುದರಿಂದ ಮಾಘ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಅಮಾವಾಸ್ಯೆಯು ಭಾನುವಾರ ಬಂದರೆ ಅದರ ಪ್ರಾಶಸ್ತ್ಯ ಮತ್ತಷ್ಟು ಹೆಚ್ಚುತ್ತದೆ. ಇಂದು(ಜ.18) ರ ಭಾನುವಾರದಂದು ಬಂದಿರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಮೌನಿ ಅಮಾವಾಸ್ಯೆಯನ್ನು ಪೂರ್ವಿಕರಿಗೆ ಸಮರ್ಪಿತವಾದ ದಿನವೆಂದು ಪರಿಗಣಿಸಲಾಗುತ್ತದೆ. ಮಹಾಲಯ ಅಮಾವಾಸ್ಯೆಯಂದು ನಾವು ಪೂರ್ವಿಕರಿಗೆ ಶ್ರಾದ್ಧ, ತರ್ಪಣಗಳನ್ನು ಅರ್ಪಿಸಿದರೆ, ಮೌನಿ ಅಮಾವಾಸ್ಯೆಯಂದು ಪೂರ್ವಿಕರು ಸಾಕ್ಷಾತ್ ನಮ್ಮನ್ನು ನೋಡಲು, ಕನಸುಗಳಲ್ಲಿ ಬರಲು ಮತ್ತು ನಮಗೆ ಮಾರ್ಗದರ್ಶನ ನೀಡಲು ಬರುತ್ತಾರೆ ಎಂದು ನಂಬಲಾಗಿದೆ. ನಮ್ಮ ಹಿರಿಯರು, ಅಥವಾ ಅಗಲಿದ ಆತ್ಮಗಳು ಈ ದಿನ ನಮ್ಮ ಸುತ್ತಲೂ ಇರಬಹುದು. ಅವರು ನಮ್ಮ ಜೀವನದಲ್ಲಿನ ಲೋಪದೋಷಗಳನ್ನು ಸರಿಪಡಿಸಲು, ಆಯುರಾರೋಗ್ಯ ನೀಡಲು ಮತ್ತು ದುಷ್ಟ ಶಕ್ತಿಗಳನ್ನು ಹೋಗಲಾಡಿಸಲು ಸಹಕರಿಸುತ್ತಾರೆ.
ಪೂರ್ವಿಕರನ್ನು ತೃಪ್ತಿಪಡಿಸಲು ಹಲವಾರು ಮಾರ್ಗಗಳಿವೆ. ಈ ದಿನ ನಾವು ದಾನ ಮಾಡುವ ಮೂಲಕ ಬೇರೆಯವರ ಮನಸ್ಸನ್ನು ಸಂತೃಪ್ತಿಪಡಿಸಿದರೆ, ನಮ್ಮ ಪೂರ್ವಿಕರು ಕೂಡ ಸಂತೃಪ್ತರಾಗುತ್ತಾರೆ. ಅನಾಥರು, ಅಶಕ್ತರು, ಪುಟ್ಟ ಮಕ್ಕಳು, ದೀನದಲಿತರು, ರೋಗಿಗಳು, ವೃದ್ಧರಿಗೆ ಕೈಲಾದ ಸಹಾಯ ಅಥವಾ ಮಾರ್ಗದರ್ಶನ ಮಾಡುವುದು ಅತ್ಯಂತ ಪುಣ್ಯದ ಕಾರ್ಯ. ಇಂತಹ ದಾನ ಕಾರ್ಯಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.
ಈ ಮಾಘ ಅಮಾವಾಸ್ಯೆಯಂದು ಸ್ನಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. “ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ. ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು” ಎಂಬ ಮಂತ್ರವನ್ನು ಪಠಿಸುತ್ತಾ ಸಪ್ತ ನದಿಗಳನ್ನು ಸ್ಮರಿಸಿ ಸ್ನಾನ ಮಾಡಬೇಕು. ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಅರಿಶಿಣ ಮತ್ತು ಉಪ್ಪನ್ನು ಸೇರಿಸಿದರೆ ಬಹಳಷ್ಟು ಶುಭ ಫಲಗಳು ಲಭಿಸುತ್ತವೆ. ಈ ಸ್ನಾನವು ಹಲವು ಕಂಟಕಗಳಿಂದ ಮುಕ್ತಿ ನೀಡಿ, ಪಾಪಗಳ ಭಾರವನ್ನು ಕಡಿಮೆ ಮಾಡುತ್ತದೆ. ಮರಣಾನಂತರ ಮೋಕ್ಷ ಪಡೆಯಲು ಮೌನಿ ಅಮಾವಾಸ್ಯೆಯನ್ನು ಸಕ್ರಮವಾಗಿ ಆಚರಿಸುವುದು ಅಗತ್ಯ.
ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?
ಇದೇ ದಿನ ಭಗವದಾರಾಧನೆ, ದೇವರ ಪ್ರಾರ್ಥನೆ ಮತ್ತು ದೇವರ ಸ್ಮರಣೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಲಕ್ಷ್ಮೀ ಅಷ್ಟೋತ್ತರವನ್ನು ಕೇಳುವುದರಿಂದ ಸಾಕಷ್ಟು ಶುಭ ಫಲಗಳು ಮತ್ತು ಪೂರ್ವಿಕರ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ. ಯಥಾವಿಧಿಯಾಗಿ ತರ್ಪಣ, ಶ್ರಾದ್ಧಗಳನ್ನು ಮಾಡುವುದರ ಜೊತೆಗೆ, ಪೂರ್ವಿಕರ ಆತ್ಮಗಳನ್ನು ತೃಪ್ತಿಪಡಿಸಲು ಹಣ್ಣುಗಳು, ತರಕಾರಿಗಳು, ಆಹಾರ ಪದಾರ್ಥಗಳು, ದವಸ ಧಾನ್ಯಗಳು, ಔಷಧಿಗಳು, ಹಾಲು, ಮೊಸರನ್ನು ವಿಪ್ರರು, ಬ್ರಾಹ್ಮಣರು ಅಥವಾ ಅರ್ಚಕರಿಗೆ ದಾನ ಮಾಡಬಹುದು. ಬೆಲ್ಲದ ಅನ್ನವನ್ನು ದಾನ ಮಾಡುವುದರಿಂದಲೂ ಒಳ್ಳೆಯದಾಗುತ್ತದೆ.
ಸಂಜೆ ಸಮಯದಲ್ಲಿ, ನಿಮ್ಮ ಪ್ರದೇಶದ ಮನೆಯ ಸಿಂಹದ್ವಾರದ ಎರಡು ಕಡೆಗಳಲ್ಲಿ ಪ್ಲಾಸ್ಟಿಕ್ ಬೌಲ್‌ನಲ್ಲಿ ಉಪ್ಪು ಹಾಕಿ, ಅದರ ಮೇಲೆ ಮೆಣಸನ್ನು ಇಡುವುದರಿಂದ ಮನೆಯಲ್ಲಿ ಶುಭ ವಾತಾವರಣ ಉಂಟಾಗುತ್ತದೆ. ಈ ಮೌನಿ ಅಮಾವಾಸ್ಯೆ ಪ್ರಾರ್ಥನೆ ಮತ್ತು ಪೂಜೆಗೆ ಅತ್ಯಂತ ಪ್ರಾಶಸ್ತ್ಯವಾದ ದಿನವಾಗಿದೆ. ಈ ದಿನ “ಓಂ ಶ್ರೀ ಲಕ್ಷ್ಮೀ ಗಣಪತಯೇ ನಮಃ” ಎಂಬ ಮಂತ್ರವನ್ನು ಜಪಿಸುವುದರಿಂದ ಎಲ್ಲವೂ ಉತ್ತಮವಾಗಿ ಆಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
