Muharram 2023: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬದ ಹಿಂದಿದೆ ದುಃಖದ ಕಥೆ

|

Updated on: Jul 29, 2023 | 8:44 AM

ಮೊಹರಂ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ಮಾಡಲಾಗುತ್ತದೆ.

Muharram 2023: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬದ ಹಿಂದಿದೆ ದುಃಖದ ಕಥೆ
ಮೊಹರಂ ಮೆರವಣಿಗೆ (ಸಾಂದರ್ಭಿಕ ಚಿತ್ರ)
Follow us on

ಹಬ್ಬ ಅಂದರೆ ಅಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿರುತ್ತೆ. ಮನೆಯಲ್ಲಿ ಮಾಂಸದೋಟ ರೆಡಿಯಾಗುತ್ತಿರುತ್ತೆ. ಅತಿಥಿಗಳಿಂದ ಮನೆ ತುಂಬಿ ತುಳುಕುತ್ತಿರುತ್ತೆ. ಆದ್ರೆ ಮೊಹರಂ(Muharram) ಹಬ್ಬ ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್‌ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ ಹಬ್ಬವನ್ನು ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ. ಮೊಹರಂ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ಮಾಡಲಾಗುತ್ತದೆ.

ಮೊಹರಂ ತಿಂಗಳ 10ನೇ ದಿನದಂದು ಹುಸೇನರ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ. ಈ ದಿನ ಇಸ್ಲಾಂ ಧರ್ಮ ಸ್ಥಾಪಕ ಪ್ರವಾದಿ ಮೊಹಮ್ಮದರ ಮೊಮ್ಮಗ ಇಮಾಮ್ ಹುಸೇನ್ ಹಾಗೂ 72 ಹಿಂಬಾಲಕರು ಧರ್ಮದ ಉಳಿವಿಗಾಗಿ ಯುದ್ಧ ಮಾಡಿ ಹುತಾತ್ಮರಾದ ದಿನ. ಈ ದಿನದಂದು ಶಿಯಾ ಮುಸ್ಲಿಮರು ಇಮಾಮ್ ಹುಸೇನ್ ಅವರ ಮರಣಕ್ಕೆ ಶೋಕಿಸುತ್ತಾರೆ. ಕರ್ಬಲಾ ಯುದ್ಧವು ಇಮಾಮ್ ಹುಸೇನ್ ಮತ್ತು ಉಮಯ್ಯದ್ ಖಲೀಫ್ ಯಾಜಿದ್ I ನಡುವೆ ನಡೆಯಿತು. ಯುದ್ಧದ ಸಮಯದಲ್ಲಿ, ಇಮಾಮ್ ಹುಸೇನ್ ರನ್ನು ಮೋಸದಿಂದ ಕೊಲ್ಲಲಾಯಿತು. ಅವರ ಹುತಾತ್ಮತೆಯನ್ನು ಅಶುರಾ ಎಂದು ಕರೆಯಲಾಗುವ ಈ ತಿಂಗಳ ಹತ್ತನೇ ದಿನದಂದು ಶೋಕ ಮೆರವಣಿಗೆಗಳೊಂದಿಗೆ ಆಚರಿಸಲಾಗುತ್ತದೆ.

ಮೊಹರಂ ಆಚರಣೆ ಹೇಗೆ?

ಕ್ರಿ. ಶ 680ರಲ್ಲಿ ಇರಾಕಿನ ಕರ್ಬಲಾ ಮರುಭೂಮಿಯಲ್ಲಿ ಅರಬ್ ದೊರೆ ಯಜೀದ್ ವಿರುದ್ಧ 10 ದಿನಗಳ ಕಾಲ ಯುದ್ಧದಲ್ಲಿ ಇಮಾಮ್ ಹುಸೇನ್ ಹೋರಾಡಿ ಹುತಾತ್ಮರಾಗುತ್ತಾರೆ. ಇಮಾಮ್ ಹುಸೇನರನ್ನು ಮೋಸದಿಂದ ಕೊಲ್ಲಲಾಗುತ್ತೆ. ಹೀಗಾಗಿ ಈ ಮೊಹರಂ ಮಾಸದಲ್ಲಿ ಯಾವುದೇ ಪ್ರಮುಖ ಸಂಭ್ರಮಾಚರಣೆ ಕೈಗೊಳ್ಳುವುದಿಲ್ಲ. ಮೊಹರಂ ಹಬ್ಬದಲ್ಲಿ ನಡೆಯುವ ಮೆರವಣಿಗೆಯಲ್ಲಿ ಕರ್ಬಲಾದ ಯುದ್ಧವನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಶಿಯಾ ಪಂಗಡದ ಮುಸ್ಲಿಮರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ‘ಯಾ ಅಲಿ’ ಮತ್ತು ‘ಯಾ ಹುಸೇನ್’ ಎಂದು ಜಪಿಸುತ್ತ ದೇಹ ದಂಡಿಸುತ್ತಾರೆ.

ಇದನ್ನೂ ಓದಿ: ಮೊಹರಂ ಹಬ್ಬ: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗ ಹೀಗಿದೆ

ಮೊಹರಂ ಆಚರಣೆ ಸಂದರ್ಭದಲ್ಲಿ ಮುಸ್ಲಿಮರು ಉರೂರುಗಳಲ್ಲಿ ಮೆರವಣಿಗೆ ಮಾಡಿ ಇಮಾಮ್ ಅವರು ತೋರಿಸಿದ ಮಾನವೀಯತೆ ಸಂದೇಶ ಸಾರುತ್ತಾರೆ. ಕೆಲವರು ಈ ತಿಂಗಳ 9, 10 ಹಾಗೂ 11ನೇ ದಿನಗಳಲ್ಲಿ ರೋಜ್ ಎ ಆಷುರಾ(10ನೇ ದಿನ) ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಎಲ್ಲೆಡೆ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕರ್ಬಲಾದ ಕದನದ ನೆನಪು ಮಾಡಿಕೊಳ್ಳಲಾಗುತ್ತದೆ. ಹಾಗೂ ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತೆ. ಬೆಂಕಿಯಲ್ಲಿ ನಡೆದಾಡುವ ವೇಳೆ ದೇವರನ್ನು ಹೊತ್ತು ತಿರುಗುವವರು ನಾಡಿಗೆ ಒಳ್ಳೆಯದಾಗಲಿ ಎಂದು ಹಿತನುಡಿಗಳನ್ನಾಡುತ್ತಾರೆ. ಕರ್ಬಲಾದಲ್ಲಿ ಹುಸೇನರ ಪರಿವಾರಕ್ಕೆ ಯಜೀದಿಗಳು ನೀರು ಸಿಗದಂತೆ ಮಾಡಿದ್ದರ ಜನರಿಗೆ ಪಾನಕ ಹಂಚುವ ಪದ್ಧತಿಯೂ ಹಲವೆಡೆ ರೂಢಿಯಲ್ಲಿದೆ.

ಏನಿದು ಕರ್ಬಲಾ ಯುದ್ಧ?

ಪ್ರವಾದಿ ಮೊಹಮ್ಮದರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ(ನಾಲ್ಕನೇ ಖಲೀಫ) ಅವರ ಪುತ್ರ ಇಮಾನ್ ಹುಸೇನ್ ಇಬ್ನ್ ಅಲಿ ಕ್ರಿ.ಶ 620ರಲ್ಲಿ ಜನಿಸಿದರು. ಇವರು ಪ್ರವಾದಿ ಮೊಹಮ್ಮದರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಸಾಗಿದರು. ಹಜರತ್ ಅಲಿ ನಂತರ ಖಲೀಫರಾಗುವ ಎಲ್ಲಾ ಅರ್ಹತೆ ಹಾಗೂ ಅಧಿಕಾರ ಇವರಿಗಿತ್ತು. ಆದರೆ, ಪ್ರವಾದಿ ಅವರ ಕಾಲದ ನಂತರ ಯಜೀದ್ ಎಂಬಾತ ತಾನೇ ಖಲೀಫ ಎಂದು ಘೋಷಿಸಿಕೊಳ್ಳುತ್ತಾನೆ. ಇಸ್ಲಾಂ ರಾಜ್ಯದಲ್ಲಿ ಹಿಂಸಾಚಾರ, ದೌರ್ಜನ್ಯದ ಭೀತಿ ಹುಟ್ಟುವಂತೆ ಆಳ್ವಿಕೆ ಮಾಡಲು ಶುರು ಮಾಡುತ್ತಾನೆ. ತನ್ನ ಅಗತ್ಯಕ್ಕೆ ತಕ್ಕಂತೆ ಇಸ್ಲಾಂ ಧರ್ಮ ಗ್ರಂಥಗಳನ್ನೇ ಬದಲಾಯಿಸಲು ಯತ್ನಿಸುತ್ತಾನೆ. ಅಷ್ಟೇ ಅಲ್ಲದೆ ಖಲೀಫ ಪಟ್ಟಕ್ಕೂ ಆಸೆಪಟ್ಟು ಹುಸೇನ್ ಹತ್ಯೆಗೆ ಸಂಚು ರೂಪಿಸುತ್ತಾನೆ. ಹೀಗಾಗಿ ಇಮಾಮ್ ಹುಸೇನ್ ಮತ್ತು ಅವರ ಸಹೋದರ ಇಮಾಮ್ ಹಸನ್ ಇಬ್ಬರು ಯಜೀದ್ ಆಡಳಿತವನ್ನು ವಿರೋಧಿಸಿದರು.

ತನ್ನನ್ನು ವಿರೋಧಿಸಿದ ಇಮಾಮ್ ಹಸನ್ ಅವರ ಆಹಾರದಲ್ಲಿ ಯಜೀದ್ ವಿಷ ಬೆರೆಸುತ್ತಾನೆ. ವಿಷಾಹಾರ ಸೇವಿಸಿದ ಇಮಾಮ್ ಹಸನ್ ಮೃತಪಡುತ್ತಾರೆ. ಸೋದರನ ಸಾವಿನ ಬಳಿಕ ಇಮಾಮ್ ಹುಸೇನ್ ಕೋಪಗೊಳ್ಳುತ್ತಾರೆ. ಬಳಿಕ ಇಮಾಮ್ ಹುಸೇನ್ ರನ್ನು ಸಂಧಾನಕ್ಕಾಗಿ ಯಜೀದ್ ಆಹ್ವಾನಿಸುತ್ತಾನೆ. ಯಜೀದ್ ಜೊತೆ ಸೇರದ ಇಮಾಮ್ ಹುಸೇನ್ ಇಸ್ಲಾಂ ಉಳಿಯುವಿಕೆಗಾಗಿ ಹೋರಾಟ ನಡೆಸುತ್ತಾರೆ. ಇದರಿಂದ ಕುಪಿತಗೊಂಡ ಯಜೀದ್ ಯುದ್ಧ ಸಾರುತ್ತಾನೆ. ಕೊನೆಗೆ ಇಮಾಮ್ ಹುಸೇನ್ ರಾಜ್ಯವನ್ನು ತೊರೆದು ತಮ್ಮ 72 ಅನುಯಾಯಿಗಳೊಂದಿಗೆ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಒಂದು ವೇಳೆ ತಾವು ಮೆಕ್ಕಾಗೆ ತೆರಳಿದಾಗ ಯಜೀದ್ ನನ್ನನ್ನು ಕೊಲ್ಲಬಹುದು. ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ ಎಂದು ಅರಿತ ಇಮಾಮ್ ಹುಸೇನ್ ಅವರು ಕರಬಲಾದತ್ತ ಮಾರ್ಗ ಬದಲಿಸುತ್ತಾರೆ. ಕರ್ಬಲಾ ಮರುಭೂಮಿಯಲ್ಲಿ ಎದುರಾಗುವ ಯಜೀದ್ ಸೈನಿಕರು ಹುಸೇನ್ ಹಾಗೂ ಪರಿವಾರವನ್ನು ಅಡ್ಡಗಟ್ಟಿ ನಮ್ಮ ರಾಜ ಹೇಳಿದಂತೆ ಕೇಳಿದ್ರೆ ನಿನ್ನನ್ನು ಜೀವಂತವಾಗಿ ಬಿಡುತ್ತೇನೆ ಅಂತಾ ಹೇಳ್ತಾರೆ.

ಇದನ್ನೂ ಓದಿ: ಮೊಹರಂ ಆಚರಣೆಯಲ್ಲಿ ತಲ್ವಾರ್ ಹಿಡಿದು ಕುಣಿದರು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್

ಯಾವುದೇ ಬೇಡಿಗೆಗಳನ್ನು ಒಪ್ಪದ ಇಮಾಮ್ ಹುಸೇನ್ ಹಾಗೂ ಅವರ ಅನುಯಾಯಿಗಳಿಗೆ ಕುಡಿಯಲು ನೀರು, ಆಹಾರ ಸಿಗದಂತೆ ಮಾಡುತ್ತಾರೆ. ದಾಹದಿಂದ ಬಳಲಿ ಇಮಾಮ್ ಹುಸೇನ್ ಅವರ 6 ತಿಂಗಳ ಮಗ ಸಾವನ್ನಪ್ಪುತ್ತಾನೆ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಇಮಾಮ್ ಹುಸೇನ್ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬರುತ್ತಾರೆ. ಶತ್ರುಗಳು ಕುಡಿಯಲು ನೀರು ಕೊಡದೇ ಇದ್ದರೂ ಇಮಾಮ್ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಪ್ರವಾದಿ ಮೊಹಮ್ಮದರ ಮಾರ್ಗದಲ್ಲಿ ನಡೆಯುತ್ತಿದ್ದ ಇಮಾಮರು ಶಾಂತಿ ಮಾರ್ಗದಲ್ಲೇ ಯುದ್ಧ ಮಾಡುತ್ತಾರೆ. ಇದರಿಂದ ಕುಪಿತಗೊಂಡ ಯಜೀದ್ ಸೈನಿಕರು ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಮೋಸದಿಂದ ಶಿರಚ್ಛೇಧ ಮಾಡುತ್ತಾರೆ. ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಹೀಗಾಗಿ ಮೊಹರಂ ಆಚರಣೆ ಕಣ್ಣೀರಿನ ಹಬ್ಬವಾಗುತ್ತದೆ.

ಹುಸೇನರ ಬಲಿದಾನಕ್ಕೆ ಯಜೀದ್ ಪಶ್ಚಾತ್ತಾಪ

ಮೊಹರಂನ್ನು ಶಿಯಾಗಳು ಹುತಾತ್ಮರಾದ ಹಜರತ ಅಲಿ ಹುಸೇನರ ಬಲಿದಾನ ದಿನವಾಗಿ ಆಚರಿಸುತ್ತಾರೆ, ಇದನ್ನು ಸುನ್ನೀಗಳು ಪ್ರಬಲವಾಗಿ ವಿರೋಧಿಸುತ್ತಾರೆ. ಕರ್ಬಲಾದಲ್ಲಿ ಹುಸೇನರ ಬಲಿದಾನದ ಬಗ್ಗೆ ತಿಳಿದ ನಂತರ ಯಜೀದ್ ಪಶ್ಚಾತ್ತಾಪ ಪಟ್ಟು, ತನ್ನ ತಪ್ಪಿಗೆ ಶಿಕ್ಷೆ ನೀಡುವಂತೆ ಅಲ್ಲಾಹ್ ನಲ್ಲಿ ಪ್ರಾರ್ಥಿಸಿ, ಕೌರ್ಯವನ್ನು ಇಂದಿಗೆ ಕೊನೆಗೊಳಿಸುತ್ತೇನೆ, ಮೊಹಮ್ಮದರ ಮಾರ್ಗದಲ್ಲಿ ನಡೆಯುತ್ತೇನೆ ಎಂದು ಘೋಷಿಸುತ್ತಾನೆ.

ಅಧಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ