ಬೆಂಗಳೂರು: ನವೆಂಬರ್ 8ರ ಮಂಗಳವಾರದಂದು ಅಂದ್ರೆ ಇಂದು ಬಾನಲ್ಲಿ ರಾಹುಗ್ರಸ್ತ ಚಂದ್ರಗ್ರಹಣ(Chandra Grahan) ಸಂಭವಿಸಲಿದೆ. ಇದು 2022 ರಲ್ಲಿ ಸಂಭವಿಸುತ್ತಿರುವ ಕಟ್ಟಕಡೆಯ ಗ್ರಹಣವಾಗಿದೆ. ಈ ರಾಹು ಗ್ರಸ್ತ ಚಂದ್ರ ಗ್ರಹಣವನ್ನ(Lunar Eclipse) ರಕ್ತ ಚಂದ್ರ ಗ್ರಹಣ ಅಂತಲೂ ಕರೆಯಲಾಗುತ್ತೆ. ಗ್ರಹಣ ಹಿನ್ನೆಲೆ ಇಂದು ರಾಜ್ಯದ ವಿವಿಧೆಡೆ ಅನೇಕ ದೇಗುಲಗಳ(Karnataka Temples) ಬಾಗಿಲು ಮುಚ್ಚಿರಲಿದ್ದು ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಎರಡು ವಾರದ ಹಿಂದಷ್ಟೇ ಸೂರ್ಯಗ್ರಹಣ ಗೋಚರವಾಗಿತ್ತು. ಚಂದ್ರನ ಅಡಚಣೆಯಿಂದ ಸೂರ್ಯ ಮುಕ್ಕಾಗಿ, ಮರೆಯಾಗಿ ದರ್ಶನ ನೀಡಿದ್ದ. ಇದೀಗ, ಇಂದು ಬಾನಂಗಳದಲ್ಲಿ ಚಂದ್ರನಿಗೆ ಗ್ರಹಣ ತಟ್ಟಲಿದೆ. ಶಕ್ತಿಶಾಲಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಅಡ್ಡ ಬರಲಿದ್ದು, ಈ ಹೊತ್ತಲ್ಲಿ ಚಂದ್ರ ಮರೆಯಾಗಲಿದ್ದಾನೆ. ಭೂಮಿಯ ನೆರಳು ಚಂದಿರನ ಮೇಳೆ ಬೀಳಲಿದ್ದು, ಇದರ ಪ್ರಭಾವದಿಂದ ಶಶಿಯ ಬಣ್ಣ ಕೆಂಪಾಗಲಿದೆ. ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. ಸಂಜೆ 4 ಗಂಟೆ 28 ನಿಮಿಷಕ್ಕೆ ಗ್ರಹಣ ಮಧ್ಯಕಾಲ ತಲುಪಲಿದ್ದು, ಸಂಜೆ 6 ಗಂಟೆ 17 ನಿಮಿಷ ಚಂದ್ರಗ್ರಹಣ ಅಂತ್ಯವಾಗಲಿದೆ. ಕರ್ನಾಟಕದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ ಆಗಲಿದ್ದು, ಇದೇ ಹೊತ್ತಲ್ಲಿ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.
ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ದೇವಾಲಯಗಳು ಬಂದ್
ಚಂದ್ರಗ್ರಹಣ ಇರೋದ್ರಿಂದ ಇದು ಬೆಂಗಳೂರಿನ ಹಲವು ದೇವಾಲಯಗಳು ಬಂದ್ ಆಗಿರಲಿವೆ. ನಗರದ ಬಂಡೆ ಮಹಾಕಾಳಿ ದೇವಸ್ಥಾನ ಇಡೀ ದಿನ ತೆರೆದಿರುತ್ತದೆ. ಆದರೆ ಬಸವನಗುಡಿಯ ದೊಡ್ಡ ಗಣಪತಿ, ಗವೀಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನ, ಮಲ್ಲೇಶ್ವರಂನ ಕಾಡು ಮಲ್ಲೇಶ್ವರ, ಗಂಗಮ್ಮ ದೇವಸ್ಥಾನ, ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಗಳು ಬೆಳಗ್ಗೆ 11 ಗಂಟೆಯ ಬಳಿಕ ಕ್ಲೋಸ್ ಆಗಲಿವೆ. ದೇವರಿಗೆ ದರ್ಬೆ ಬಂಧನದ ಮೂಲಕ ಗರ್ಭಗುಡಿಯನ್ನ ಬಂದ್ ಮಾಡಲಾಗುತ್ತದೆ. ಬಹುತೇಕ ದೇವಾಲಯಗಳು ಸಂಜೆ 6:30ರ ಬಳಿಕ ಶುಚಿಕಾರ್ಯ ನಡೆಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಇಂದು ಮೈಸೂರಿನ ಚಾಮುಂಡಿದೇವಿ ದೇಗುಲ, ತುಮಕೂರು ಜಿಲ್ಲೆ ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಇಂದು ಮಧ್ಯಾಹ್ನ 1 ಗಂಟೆ ಬಳಿಕ ಭಕ್ತರ ನಿಷೇಧ ಹೇರಲಾಗಿದ್ದು ಇಂದು ಸಂಜೆ 5ರಿಂದ ನಾಳೆ ಬೆಳಗ್ಗೆ 6.30ರವರೆಗೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿರುವ ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲ ಬಂದ್ ಆಗಿರಲಿದೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮುರುಡೇಶ್ವರದಲ್ಲಿ ಪೂಜಾ ವಿಧಾನ ಬದಲಾಗಿದೆ. ಬೆಳಗ್ಗೆ 9 ಗಂಟೆ ಒಳಗೆ ಪೂಜಾ ಕಾರ್ಯ ಅಂತ್ಯವಾಗಲಿದೆ. ನಂತರ ಭಕ್ತರಿಗೆ ಎಂದಿನಂತೆ ದರ್ಶನಕ್ಕೆ ಅವಕಾಶ ಸಿಗಲಿದೆ. ಇನ್ನು, ಗ್ರಹಣದ ಹೊತ್ತಲ್ಲಿ ಮೃತ್ಯಂಜಯ ಹೋಮ, ರುದ್ರ ಹೋಮ, ಗ್ರಹಣ ಪರಿಹಾರ ಪೂಜೆ ನಡೆಯಲಿದೆ.
ಇದನ್ನೂ ಓದಿ: Lunar Eclipse: ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹಣದ ಪ್ರಭಾವ ಹೇಗಿರುತ್ತದೆ?
ಇಂದು ಐತಿಹಾಸಿಕ ಪ್ರಸಿದ್ಧ ಶ್ರೀ ಶಿರಸಿ ಮಾರಿಕಾಂಬಾ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 8ಘಂಟೆಗೆ ಮಹಾಪೂಜೆ ನೆರವೇರಿಸಿ 11 ಘಂಟೆ ನಂತರ ಬಾಗಿಲು ಬಂದ್ ಮಾಡಲಾಗುತ್ತೆ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ದರ್ಶನದ ವೇಳೆ ಬದಲಾವಣೆ ಮಾಡಲಾಗಿದೆ. ಮುಂಜಾನೆ 6 ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶವಿದ್ದು ಬಳಿಕ ಮಧ್ಯಾಹ್ನ 2:30 ರಿಂದ ಸಂಜೆ 6:30ರ ವರೆಗೆ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ನೀಡಲಾಗಿದೆ.
ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಅಂಜನಾದ್ರಿ ಬೆಟ್ಟದ ದೇವಸ್ಥಾನದ ದರ್ಶನ ಪಡೆಯಲು ಅವಕಾಶವಿದ್ದು ಮಧ್ಯಾಹ್ನ 1 ಗಂಟೆ ನಂತರ ದೇವಸ್ಥಾನ ಬಂದ್ ಮಾಡಲು ಆಡಳಿತಾಧಿಕಾರಿ ಆದೇಶ ನೀಡಿದ್ದಾರೆ.
ಕೋಲಾರದ ಪ್ರಮುಖ ದೇವಾಲಯಗಳು ಇಂದು ಬಂದ್ ಆಗಿರಲಿವೆ. ಚಂದ್ರಗ್ರಹಣದ ಬಳಿಕ ಕೋಲಾರಮ್ಮ, ಚಿಕ್ಕ ತಿರುಪತಿ, ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಭಕ್ತರಿಗೆ ಅವಕಾಶ ಇರಲಿದೆ.
ಬಾಗಲಕೋಟೆಯ ಬನಶಂಕರಿ ಸನ್ನಿಧಿ, ಮಧ್ಯಾಹ್ನ 2 ಗಂಟೆ ನಂತರ ಬಂದ್ ಆಗಲಿದೆ. ಗ್ರಹಣದ ವೇಳೆ ದೇವಿಗೆ ಜಲಾಭಿಷೇಕ ನಡೆಯಲಿದೆ. ಇನ್ನು, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕುಕ್ಕೆ, ಕಟೀಲು ದೇಗುಲಗಳು ಕೂಡ ಗ್ರಹಣದ ವೇಳೆಯಲ್ಲಿ ಸ್ತಬ್ಧವಾಗಲಿವೆ.
ಇಂದು ರಾಹುಗ್ರಸ್ಥ ಚಂದ್ರಗ್ರಹಣ ಇದ್ದರೂ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಎಂದಿನಂತೆ ತೆರೆದಿರುತ್ತೆ. ಎಂದಿನಂತೆ ದೇಗುಲ ಪ್ರವೇಶಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ.
Published On - 7:20 am, Tue, 8 November 22