ಹಿಂದೂ ಧರ್ಮೀಯರು ದೀಪಾವಳಿ ಹಬ್ಬದ ಅಂಗವಾಗಿ ನರಕ ಚತುರ್ದಶಿ (Naraka Chaturdashi) ಯನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ನರಕ ಚತುರ್ದಶಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಕೆಲವರು ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಇನ್ನು ಕೆಲವು ಭಾಗದಲ್ಲಿ ಈ ದಿನವನ್ನು ರೂಪ್ ಚೌದಾಸ್, ಭೂತ್ ಚತುರ್ದಶಿ, ನರಕ್ ನಿವರನ್ ಚತುರ್ದಶಿ ಮುಂತಾದ ಕೆಲವು ಹೆಸರುಗಳಿಂದ ಕರೆಯಲಾಗುತ್ತದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಹಬ್ಬಗಳೊಂದಿಗೆ ಸಂಬಂಧ ಹೊಂದಿದ್ದು, ಈ ದಿನ ಎಣ್ಣೆ ಸ್ನಾನ ಅಂದರೆ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುವುದು ಬಹಳ ಮುಖ್ಯವಾಗಿದೆ. ಈ ವರ್ಷದ ನರಕ ಚತುದರ್ಶಿಯ ಹಬ್ಬದ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ.
ಈ ವರ್ಷ ನರಕ ಚತುರ್ದಶಿಯನ್ನು ಅಕ್ಟೋಬರ್ 31 ರಂದು ಗುರುವಾರ ಆಚರಣೆ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಇದನ್ನು ಆಶ್ವಯುಜ ಮಾಸದ ಚತುರ್ದಶಿ ತಿಥಿ ಅಥವಾ ಕೃಷ್ಣ ಪಕ್ಷದ ಹದಿನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿ ಅಕ್ಟೋಬರ್ 30 ರಂದು ಮಧ್ಯಾಹ್ನ 01:15ಕ್ಕೆ ಆರಂಭವಾಗಿ ಅಕ್ಟೋಬರ್ 31 ರಂದು ಮಧ್ಯಾಹ್ನ 03:52ಕ್ಕೆ ಮುಕ್ತಾಯವಾಗುತ್ತದೆ. ಈ ದಿನ ಅಂದರೆ ಅಕ್ಟೋಬರ್ 31 ರಂದು ಅಭ್ಯಂಗ ಸ್ನಾನವನ್ನು ಮುಂಜಾನೆ 5 ಗಂಟೆಯಿಂದ 6:16ರವರೆಗೆ ಮಾಡಬಹುದಾಗಿದೆ.
ಈ ಹಬ್ಬವನ್ನು ದೇಶಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಉತ್ತರ ಭಾರತದ ಜನರು ನರಕ ಚತುರ್ದಶಿಯನ್ನು ಹೊಸ ಉಡುಪು ಧರಿಸಿ ಕಾಳಿ ದೇವಿಯನ್ನು ಪೂಜಿಸುವ ಮೂಲಕ ಮತ್ತು ರಾತ್ರಿ ಸಮಯದಲ್ಲಿ ಪಟಾಕಿ ಹಚ್ಚುವ ಮೂಲಕ ಆಚರಣೆ ಮಾಡುತ್ತಾರೆ. ದೇಶದ ಪೂರ್ವ ಭಾಗದಲ್ಲಿ, ಈ ದಿನವನ್ನು ‘ಭೂತ್ ಚತುರ್ದಶಿ’ ಎಂದು ಕರೆಯಲಾಗುತ್ತದೆ. ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಜನರು ನರಕ ಚತುರ್ದಶಿಯನ್ನು ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಈ ದಿನದಂದು, ಜನರು ಸಾಮಾನ್ಯವಾಗಿ ಕೆಂಪು ಬಟ್ಟೆಯಿಂದ ಮುಚ್ಚಿದ ಮಡಕೆಯನ್ನು ಅಡ್ಡರಸ್ತೆಯಲ್ಲಿ ಇಡುತ್ತಾರೆ.
ಇದನ್ನೂ ಓದಿ: ದೀಪಾವಳಿಯಂದು ಇವುಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ
ಇನ್ನು ನಮ್ಮಲ್ಲಿ, ನರಕ ಚತುರ್ದಶಿಯ ಹಿಂದಿನ ದಿನ ರಾತ್ರಿ ಮನೆಯಲ್ಲಿರುವ ಬಾವಿಗೆ ಮತ್ತು ನೀರಿನ ಹಂಡೆಗಳಿಗೆ ಪೂಜೆ ಮಾಡಿ, ಬಳಿಕ ಹಂಡೆಗೆ ನೀರು ತುಂಬಿಸಿ ಪೂಜೆ ಮಾಡುತ್ತಾರೆ. ನರಕ ಚತುರ್ದಶಿಯಂದು ಮುಂಜಾನೆಯ ಸ್ನಾನವು ಪ್ರಮುಖ ಆಚರಣೆಯಾಗಿದ್ದು, ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ಸ್ನಾನ ಮಾಡುವ ಮೊದಲು ಎಣ್ಣೆ ಹಚ್ಚಿಕೊಂಡು ಬಳಿಕ ಸ್ನಾನ ಮಾಡುತ್ತಾರೆ. ಈ ಆಚರಣೆಯನ್ನು ಅಭ್ಯಂಗ ಸ್ನಾನ ಎಂದು ಕರೆಯಲಾಗುತ್ತದೆ. ಸ್ನಾನ ಮಾಡಿದ ನಂತರ ಹೊಸ ಬಟ್ಟೆ ಧರಿಸಿ ಬಳಿಕ, ಬಲಿ ಚಕ್ರವರ್ತಿಯನ್ನು ಸ್ವಾಗತಿಸಲು ದೇವರ ಮುಂದೆ ಒಂದು ಕಲಶವಿಟ್ಟು ಅದರಲ್ಲಿ ಹಣ ಹಾಕಿ, ನೀರು ತುಂಬಿಸಿ ಅದಕ್ಕೆ ಮಾವಿನ ಎಲೆಯಿಟ್ಟು ಪೂಜೆ ಮಾಡಲಾಗುತ್ತದೆ. ಬಳಿಕ ಇದನ್ನು ಬಲಿ ಪಾಡ್ಯದಂದು ವಿಸರ್ಜನೆ ಮಾಡಿ ರಾಜನನ್ನು ಕಳುಹಿಸಿಕೊಡುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ನಮ್ಮ ಮನೆ, ಭೂಮಿ ಸುಭಿಕ್ಷವಾಗಿರುತ್ತದೆ ಎಂಬ ನಂಬಿಕೆ ಇದೆ. ಇನ್ನು ಕೆಲವು ಕಡೆಗಳಲ್ಲಿ ಈ ಶುಭ ದಿನದಂದು ಕಾಳಿ ದೇವಿಯನ್ನು ಪೂಜಿಸುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ