ನವರಾತ್ರಿಯ ಒಂಬತ್ತನೇ ದಿನದಂದು ಆ ದೇವಿಯ ಸ್ವರೂಪದ ಹೆಸರು ಸಿದ್ಧಿದಾತ್ರೀ. ಹೆಸರೇ ಸೂಚಿಸುವಂತೆ ಸಿದ್ಧಿಯನ್ನು ಅನುಗ್ರಹಿಸುವವಳು ಅಥವಾ ನೀಡುವವಳು ಆ ಮಹಾ ತಾಯಿ. ಮಾರ್ಕಂಡೇಯ ಪುರಾಣದ ಪ್ರಕಾರವಾಗಿ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಎಂಟು ಸಿದ್ಧಿಗಳನ್ನು ಹೇಳಲಾಗಿದೆ. ಆದರೆ ಬ್ರಹ್ಮವೈವರ್ತ ಪುರಾಣದ ಶ್ರೀಕೃಷ್ಜನ್ಮಖಂಡದಲ್ಲಿ ಈ ಸಂಖ್ಯೆಯನ್ನು ಹದಿನೆಂಟು ಎಂದು ಹೇಳಲಾಗಿದೆ. ಆ ಜಗಜ್ಜನನಿಯನ್ನು ಆರಾಧನೆ ಮಾಡುವುದರಿಂದ, ಅದರಲ್ಲೂ ಶರನ್ನವರಾತ್ರಿಯ ಒಂಬತ್ತನೇ ದಿನದಂದು ಸಿದ್ಧಿದಾತ್ರೀ ಸ್ವರೂಪದಲ್ಲಿ ಆರಾಧಿಸುವುದರಿಂದ ಈ ಎಲ್ಲ ಸಿದ್ಧಿಗಳು ದೊರೆಯುತ್ತವೆ. ದೇವಿಪುರಾಣದಲ್ಲಿನ ಉಲ್ಲೇಖದ ಪ್ರಕಾರ, ಆ ಮಹಾಶಿವನಿಗೆ ಇವಳ ಕೃಪೆಯಿಂದಲೇ ಈ ಎಲ್ಲ ಸಿದ್ಧಿಗಳು ದೊರೆತಿತ್ತು. ಅಷ್ಟೇ ಅಲ್ಲ, ಇವಳ ಅನುಗ್ರಹದಿಂದಲೇ ಶಿವನ ಅರ್ಧ ಶರೀರವು ದೇವಿಯದಾಗಿತ್ತು. ಆದ್ದರಿಂದಲೇ ಶಿವನು ಜಗತ್ತಿನಲ್ಲಿ ‘ಅರ್ಧನಾರೀಶ್ವರ’ ಎಂಬ ಹೆಸರಿನಿಂದ ಪ್ರಖ್ಯಾತನಾದ, ಆದರ್ಶನಾದ.
ಆ ದೇವಿಗೆ ನಾಲ್ಕು ಭುಜಗಳು. ಆಕೆಯ ವಾಹನ ಸಿಂಹ. ಈಕೆ ಕಮಲದ ಹೂವಿನ ಮೇಲೆ ಕುಳಿತಿದ್ದಾಳೆ. ತಾಯಿಯ ಕೆಳಗಿನ ಬಲಗೈಯಲ್ಲಿ ಚಕ್ರವಿದೆ, ಮೇಲಿನದರಲ್ಲಿ ಗದೆ ಇದೆ. ಎಡಗಡೆಯ ಕೆಳಗಿನ ಕೈಯಲ್ಲಿ ಶಂಖ ಹಿಡಿದಿದ್ದರೆ, ಮೇಲಿನ ಕೈಯಲ್ಲಿ ಕಮಲದ ಹೂವಿದೆ. ಯಾವ ವ್ಯಕ್ತಿಯು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಈ ಸಿದ್ಧಿ ದಾತ್ರೀ ದೇವಿಯ ಆರಾಧನೆ ಮಾಡುತ್ತಾರೋ ಅಂಥವರಿಗೆ ಎಲ್ಲ ಸಿದ್ಧಿಗಳನ್ನು ಆ ತಾಯಿಯು ಅನುಗ್ರಹಿಸುತ್ತಾಳೆ. ಈ ಸೃಷ್ಟಿಯಲ್ಲಿ ಆ ವ್ಯಕ್ತಿಗೆ ನಿಲುಕಲಾರದ್ದು ಎಂಬುದು ಯಾವುದೂ ಇರುವುದಿಲ್ಲ.
ನವರಾತ್ರಿಯಲ್ಲಿ ದೇವಿಯ ಒಂಬತ್ತು ಸ್ವರೂಪಗಳನ್ನು ವಿವರಿಸುತ್ತಾ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಉಳಿದ ಎಂಟು ದಿನಗಳಂತೆ ಒಂಬತ್ತನೇ ದಿನದಂದು ಸಹ ಈ ದೇವಿಯ ಆರಾಧನೆ ಮಾಡುವುದರಿಂದ ಆರಾಧಕರ ಲೌಕಿಕ- ಪಾರಮಾರ್ಥಿಕ ಎಲ್ಲ ಬಗೆಯ ಕೋರಿಕೆಗಳು ನೆರವೇರುತ್ತವೆ. ಆ ಭಗವತಿ ಸಿದ್ಧಿದಾತ್ರೀ ದೇವಿ ಅನುಗ್ರಹಿಸಿದ ಮೇಲೆ ಬೇರೆ ಯಾವ ಕೃಪೆ, ಅನುಗ್ರಹ, ರಕ್ಷಣೆಯ ಅಗತ್ಯವು ಸಹ ಆ ಆರಾಧಕರಿಗೆ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: ನವರಾತ್ರಿಯ 8ನೇ ದಿನದ ಸ್ವರೂಪ ಮಹಾಗೌರಿಯ ಕಥೆ ಹಾಗೂ ಪೂಜಾ ವಿಧಾನ
ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಮಹಿಮಾ, ಈಶಿತ್ವ ಹಾಗೂ ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Thu, 3 October 24