ದೇವರ ನಾಡು ಕೇರಳದ ರಾಷ್ಟೀಯ ಹಬ್ಬ ಓಣಂ ಅತ್ಯಂತ ಮಹತ್ವ ಪಡೆದಿರುವ ಹಬ್ಬಗಳಲ್ಲಿ ಒಂದು. ಈ ಹಬ್ಬದ ಆಚರಣೆ ನೋಡುವುದೇ ಚಂದಾ. ಕೇರಳದಲ್ಲಿ ಇಡೀ ನಾಡೇ ಹಲವು ದಿನಗಳಿಂದ ಹಬ್ಬಕ್ಕೆ ತಯಾರಿ ನಡೆಸಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಪೊಕಳಂ, ಬೋರ್ಟ್ ಸ್ಪರ್ಧೆ, ಸದ್ಯಂ, ಓಣಂ ನೃತ್ಯ ಹೀಗೆ ಹತ್ತು ದಿನ ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲರೂ ಒಟ್ಟಾಗಿ ಓಣಂ ಹಬ್ಬ ಆಚರಿಸುತ್ತಾರೆ. ಆದ್ರೆ ಸದ್ಯ ಮಹಾಮಾರಿ ಕೊರೊನಾ ಆತಂಕದಿಂದಾಗಿ ಈ ಸಂಭ್ರಮ, ಸಡಗರಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಕೇರಳ ಸರ್ಕಾರ ಹೊರಡಿಸಿದೆ. ಸದ್ಯ ಆಗಸ್ಟ್ 12ರಿಂದ ಓಣಂ ಆರಂಭವಾಗಿದ್ದು ಆಗಸ್ಟ್ 23ಕ್ಕೆ ಓಣಂ ಕೊನೆಗೊಳ್ಳುತ್ತೆ.
ಓಣಂ ಕೇರಳದ ನಾಡಹಬ್ಬ. ಓಣಂ ಆಚರಣೆ ಕೇರಳಿಗರಿಗೆ ಅತಿ ಹೆಚ್ಚು ಸಂಭ್ರಮದ ಹಬ್ಬ. ಮನೆಯ ಮುಂದೆ ದೊಡ್ಡ ರಂಗೋಲಿ ಹಾಕಿ. ಮಧ್ಯೆ ಹಣತೆ ಬೆಳಗಿ ಮನೆ, ಮನದಲ್ಲಿ ಸಂಭ್ರಮ ಮೇಳೈಸುತ್ತಿರುತ್ತೆ. ಹೊಸ ಬಟ್ಟೆ ತೊಟ್ಟ ಪುಟ್ಟ ಮಕ್ಕಳು ಮನೆ ತುಂಬ ಓಡಾಡುತ್ತಿರುತ್ತಾರೆ. ವಿವಿಧ ಭಕ್ಷ್ಯ ಭೋಜನದ ಸುಹಾಸನೆ ಬೀದಿಯಲ್ಲಿ ಓಡಾಡುವವರನೆಲ್ಲ ಕೈ ಬೀಸಿ ಕರೆಯುತ್ತಿರುತ್ತದೆ. ಓಣಂ ಆಚರಣೆಯ ಹಿಂದೆ ದೊಡ್ಡ ಕಥೆಯೇ ಇದೆ. ಕೇರಳಿಗರು ಓಣಂ ಅನ್ನು ಬಲಿ ಚಕ್ರವರ್ತಿಯ ಆಗಮನದ ಸಂಕೇತವಾಗಿ ಆಚರಿಸುತ್ತಾರೆ.
ಇತಿಹಾಸ
ದಂತಕಥೆಗಳ ಪ್ರಕಾರ ಅಸುರ ರಾಜ ಬಲಿ ಚಕ್ರವರ್ತಿ ಕೇರಳ ರಾಜ್ಯವನ್ನು ಆಳುತ್ತಿದ್ದ. ಈತ ದಯಾಳು ಹಾಗೂ ಕರುಣಾಮಯಿಯಾಗಿದ್ದ. ಆತನ ಆಳ್ವಿಕೆಯ ಸಮಯದಲ್ಲಿ ಜನರು ಕಷ್ಟದಿಂದ ಬಳಲಿದ್ದೇ ಇಲ್ಲವಂತೆ. ಪ್ರತಿಯೊಬ್ಬ ಪ್ರಜೆ ಬಲಿ ಚಕ್ರವರ್ತಿ ಆಡಳಿತದಿಂದ ಖುಷಿಯಾಗಿದ್ದರು. ರಾಜ್ಯದಲ್ಲಿ ಶಾಂತಿ ಸಮಾಧಾನ ನೆಲೆಸಿತ್ತಂತೆ. ಆದರೆ ಇವನ ಈ ಒಳ್ಳೆತನವೇ ಇವನನ್ನು ಪರೀಕ್ಷೆಗೆ ಒಳಪಡುವಂತೆ ಮಾಡುತ್ತದೆ.
ರಾಜ ಬಲಿ ಚಕ್ರವರ್ತಿಯ ಉದಾರ ಮನಸ್ಸಿನಿಂದ ಖುಷಿಯಾಗಿದ್ದ ಜನ ಆತನನ್ನೇ ದೇವರೆಂದು ಪೂಜಿಸುತ್ತಿದ್ದರು. ಇದರಿಂದ ದೇವತೆಗಳಿಗೆ ಮತ್ಸರ ಉಂಟಾಗುತ್ತೆ. ಬಲಿ ಚಕ್ರವರ್ತಿಯಿಂದ ತಮ್ಮ ಅಧಿಕಾರಕ್ಕೆ ಕುತ್ತು ಬರಬಹುದೆಂಬ ಭಯ ಶುರುವಾಗುತ್ತೆ. ಹೀಗಾಗಿ ಬಲಿ ಚಕ್ರವರ್ತಿಯ ಖ್ಯಾತಿಯನ್ನು ಕುಗ್ಗಿಸಬೇಕೆಂದು ಉಪಾಯವನ್ನು ಮಾಡುತ್ತಾರೆ. ಬಳಿಕ ವಿಷ್ಣುವನ್ನು ಸಂಧಿಸಿ ತಮ್ಮ ಕಷ್ಟಗಳನ್ನು ಹೇಳುತ್ತಾರೆ. ಬಲಿ ಚಕ್ರವರ್ತಿಯ ದಯೆ, ಕರುಣೆ ಬಗ್ಗೆ ತಿಳಿದಿದ್ದ ವಿಷ್ಣು ಸ್ವತಃ ತಾವೇ ಬಲಿ ಚಕ್ರವರ್ತಿಯನ್ನು ಪರೀಕ್ಷಿಸಲು ವಾಮನ ರೂಪವನ್ನು ತಾಳುತ್ತಾರೆ.
ವಾಮನ ಅವತಾರದಲ್ಲಿ ವಿಷ್ಣು
ಪರೀಕ್ಷೆಗೆ ಮುಂದಾದ ವಿಷ್ಣು ಬಡ ಬ್ರಾಹ್ಮಣನಾಗಿ ಕುಬ್ಜ ರೂಪದಲ್ಲಿ ಬಲಿ ಚಕ್ರವರ್ತಿ ಬಳಿ ಹೋಗುತ್ತಾರೆ. ತನಗೆ ಭೂಮಿ ದಾನ ಮಾಡುವಂತೆ ಕೇಳಿಕೊಳ್ಳುತ್ತಾರೆ. ತನ್ನ ಮೂರು ಪಾದಗಳು ಆಕ್ರಮಿಸುವ ಸ್ಥಳವನ್ನು ದಾನ ನೀಡುವಂತೆ ಬಲಿ ಚಕ್ರವರ್ತಿಯಲ್ಲಿ ಕೇಳುತ್ತಾರೆ. ಅದರಂತೆಯೇ ಬಲಿ ಚಕ್ರವರ್ತಿ ಇದಕ್ಕೆ ಸಮ್ಮತಿಯನ್ನು ಸೂಚಿಸುತ್ತಾನೆ. ಆಗ ವಾಮನ ಬೃಹತಾಕಾರದಲ್ಲಿ ಬೆಳೆದು ತನ್ನ ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಡುತ್ತಾರೆ. ಎರಡನೇ ಹೆಜ್ಜೆಯನ್ನು ಆಕಾಶದ ಮೇಲೆ ಇಡುತ್ತಾರೆ. ಅದು ಸಂಪೂರ್ಣ ಆಕಾಶವನ್ನು ಆವರಿಸಿಕೊಳ್ಳುತ್ತದೆ. ಮತ್ತು ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕು. ಸ್ಥಳವೇ ಇಲ್ಲವೆಂದು ವಿಷ್ಣು ಹೇಳಿದಾಗ ಕೊಟ್ಟ ಮಾತನ್ನು ತಪ್ಪಲಾರೆ ಎಂದು ಬಲಿ ಚಕ್ರವರ್ತಿಯ ತನ್ನ ತಲೆಯ ಮೇಲೆಗೆ ಮೂರನೆ ಹೆಜ್ಜೆ ಇಡಲು ಹೇಳುತ್ತಾರೆ. ಆಗ ವಿಷ್ಣು ತಮ್ಮ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ಇರಿಸುತ್ತಾರೆ. ಪಾತಾಳ ಲೋಕಕ್ಕೆ ತಳ್ಳುತ್ತಾರೆ. ವಿಷ್ಣು ಭಕ್ತನಾಗಿದ್ದ ಬಲಿ ಚಕ್ರವರ್ತಿ ವಿಷ್ಣುನನ್ನು ನೋಡಬೇಕೆಂದು ಬಯಸುತ್ತಾರೆ. ರಾಜ ಬಲಿಯ ಉದಾರ ಮನಸ್ಸಿನಿಂದ ಸಂಪ್ರೀತನಾದ ವಿಷ್ಣು ಆತನಿಗೆ ವರವನ್ನು ನೀಡುತ್ತಾರೆ. ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೊಮ್ಮೆ ಬಲಿ ಚಕ್ರವರ್ತಿ ಭೂ ಲೋಕಕ್ಕೆ ಬರಬಹುದು ಎಂಬವುದೇ ಆ ವರ. ಹೀಗಾಗಿ ಬಲಿ ಚಕ್ರವರ್ತಿ ಭೂಮಿಗೆ ಆಗಮಿಸುವ ದಿನವನ್ನು ಕೇರಳದಲ್ಲಿ ಓಣಂ ಆಗಿ ಆಚರಿಸುತ್ತಾರೆ. ತಮಿಳು ನಾಡಿನ ಸಚ್ಚಿಂದ್ರಮ್ದೇ ದೇವಸ್ಥಾನದಲ್ಲಿ ಬಲಿ ಚಕ್ರವತ್ರಿ ಕಥೆಯ ಕುರಿತು ಕೆತ್ತನೆಗಳನ್ನು ನೋಡಬಹುದು.
ಇದನ್ನೂ ಓದಿ: ಕೊರೊನಾ ನಿಯಂತ್ರಣದಲ್ಲಿ ನಂ. 1 ಆಗಿದ್ದ ಕೇರಳಗೆ ಓಣಂ ಹಬ್ಬವೇ ಕಂಟಕವಾಯ್ತಾ?