ಕೊರೊನಾ ನಿಯಂತ್ರಣದಲ್ಲಿ ನಂ. 1 ಆಗಿದ್ದ ಕೇರಳಗೆ ಓಣಂ ಹಬ್ಬವೇ ಕಂಟಕವಾಯ್ತಾ?

ಮೂರು ತಿಂಗಳ ಹಿಂದಿನ ಮಾತು. ಕೊರೊನಾ ತಡೆಯೋದು ಹೇಗೆ ಎಂಬ ವಿಷಯ ಬಂದರೆ ಸಾಕು, ಜನ ಕೇರಳದ ಉದಾಹರಣೆ ಕೊಟ್ಟು ಅಲ್ಲಿಯ ಆರೋಗ್ಯ ಸಚಿವರಾದ ಕೆ.ಕೆ. ಶೈಲಜಾ ಅವರನ್ನ ನೋಡಿ ಕಲಿಯಬೇಕು ಎಂದು ಹೇಳುತ್ತಿದ್ದರು. ಕೊರೊನಾ ತಡೆಯಲು ಕೇರಳ ಮಾದರಿಯೇ ಸರಿ ಎಂಬುದು ಆರೋಗ್ಯ ಕ್ಷೇತ್ರದಲ್ಲಿನ ತಜ್ಞರ ಮಾತಾಗಿತ್ತು. ಅಷ್ಟೇ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಕೇರಳದ ಬೆನ್ನು ತಟ್ಟಿತ್ತು. ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕೇರಳದ ಕೊರೊನಾ ಹೋರಾಟದ ಬಗ್ಗೆ […]

ಕೊರೊನಾ ನಿಯಂತ್ರಣದಲ್ಲಿ ನಂ. 1 ಆಗಿದ್ದ ಕೇರಳಗೆ ಓಣಂ ಹಬ್ಬವೇ ಕಂಟಕವಾಯ್ತಾ?
Follow us
ಸಾಧು ಶ್ರೀನಾಥ್​
|

Updated on: Nov 02, 2020 | 5:09 PM

ಮೂರು ತಿಂಗಳ ಹಿಂದಿನ ಮಾತು. ಕೊರೊನಾ ತಡೆಯೋದು ಹೇಗೆ ಎಂಬ ವಿಷಯ ಬಂದರೆ ಸಾಕು, ಜನ ಕೇರಳದ ಉದಾಹರಣೆ ಕೊಟ್ಟು ಅಲ್ಲಿಯ ಆರೋಗ್ಯ ಸಚಿವರಾದ ಕೆ.ಕೆ. ಶೈಲಜಾ ಅವರನ್ನ ನೋಡಿ ಕಲಿಯಬೇಕು ಎಂದು ಹೇಳುತ್ತಿದ್ದರು. ಕೊರೊನಾ ತಡೆಯಲು ಕೇರಳ ಮಾದರಿಯೇ ಸರಿ ಎಂಬುದು ಆರೋಗ್ಯ ಕ್ಷೇತ್ರದಲ್ಲಿನ ತಜ್ಞರ ಮಾತಾಗಿತ್ತು. ಅಷ್ಟೇ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಕೇರಳದ ಬೆನ್ನು ತಟ್ಟಿತ್ತು. ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕೇರಳದ ಕೊರೊನಾ ಹೋರಾಟದ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಿ, ಅಲ್ಲಿಯ ಆರೋಗ್ಯ ಸಚಿವರನ್ನು ತುಂಬಾ ಹೊಗಳಿದ್ದರು.

ಒಂದು ತ್ರೈಮಾಸಿಕ ಅವಧಿಯಲ್ಲಿ ಎಲ್ಲವೂ ಬುಡಮೇಲಾಯ್ತು. ಉದಾಹರಣೆಗೆ ರವಿವಾರ ವರದಿಯಾದ ಸೋಂಕಿತರ ಸಂಖ್ಯೆಯನ್ನೇ ನೊಡೋಣ: ನಿನ್ನೆ ಕೇರಳದಲ್ಲಿ 7,000 ಕ್ಕೂ ಹೆಚ್ಚಿನ ಕೊರೊನಾ ಸಂಖ್ಯೆ ವರದಿಯಾದರೆ ಪಕ್ಕದ ಕರ್ನಾಟಕದಲ್ಲಿ ವರದಿಯಾದ ಸಂಖ್ಯೆ 3,000ಕ್ಕಿಂತ ಸ್ವಲ್ಪ ಹೆಚ್ಚು.

ಕೇರಳದ ಜನಸಂಖ್ಯೆ ಸುಮಾರು 3.4 ಕೋಟಿ ಮತ್ತು ಕರ್ನಾಟಕದ ಜನಸಂಖ್ಯೆ 6.25 ಕೋಟಿ. ಕೇರಳದ ಜನಸಂಖ್ಯೆಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಇರಬೇಕಿತ್ತು. ಇಲ್ಲಿ ಒಂದು ಸಂಶಯವನ್ನು ಜನ ವ್ಯಕ್ತಪಡಿಸಬಹುದು: ಕರ್ನಾಟಕ ತಾನು ಮಾಡುತ್ತಿರುವ ದಿನ ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿರಬಹುದು ಅಥವಾ ನಿಜದಲ್ಲಿ, ಸೋಂಕಿತರ ಸಂಖ್ಯೆ ಜಾಸ್ತಿ ಇದ್ದಾಗಲೂ ತನ್ನ ವರದಿಯಲ್ಲಿ ತಪ್ಪು ಮಾಹಿತಿ ನೀಡುತ್ತಿರಬಹುದು. ಆದರೆ ವಾಸ್ತವದಲ್ಲಿ ಆಗಿದ್ದೆ ಬೇರೆ?

ಏನು ಆ ಮ್ಯಾಜಿಕ್? ಯಾವಾಗ ಜೂನ್, ಜುಲೈ ಮತ್ತು ಆಗಸ್ಟ್​ ತಿಂಗಳಿನಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಆಗಿ ಕರ್ನಾಟಕದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದರೋ, ಆಗ ಕರ್ನಾಟಕ ಎಚ್ಚೆತ್ತುಕೊಂಡಿತ್ತು. ಕೊರೊನಾ ಸೋಂಕಿನ ಲಕ್ಷಣ ಇದ್ದವರ ಪರೀಕ್ಷೆಯ ಪ್ರಮಾಣವನ್ನು ತೀವ್ರಗತಿಯಲ್ಲಿ ಹೆಚ್ಚಿಸದ್ದೇ ಮುಖ್ಯ ಕಾರಣವಾಯ್ತು.

ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಆಖ್ತರ್ ಅವರು ಹೇಳುವ ಪ್ರಕಾರ ಕರ್ನಾಟಕ ಮೇ ತಿಂಗಳಿನಲ್ಲಿ ಲಾಕ್ ಡೌನ್ ತೆರೆದು ಕೆಲಸ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿತ್ತು. ಆಗ ನಮ್ಮ ಯೋಜನೆಯಲ್ಲಿ ಏರುಪೇರಾಗಿದ್ದು ನಿಜ. ಆದರೆ, ಸೆಪ್ಟೆಂಬರ್ ನಿಂದ ನಾವು ತುಂಬಾ ಜೋರಾಗಿ ಪರೀಕ್ಷೆ ಪ್ರಮಾಣವನ್ನು ಜಾಸ್ತಿ ಮಾಡಲು ಶುರು ಮಾಡಿದೆವು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಬರುವವರನ್ನು ಕ್ವಾರಂಟೈನ್ ಇಟ್ಟು ನಾವು ಕಾರ್ಯಕ್ರಮ ರೂಪಿಸಿದ್ದರಿಂದ ನಮಗೆ ಈಗ ಯಶಸ್ಸು ಸಿಗುವ ಲಕ್ಷಣ ಕಾಣುತ್ತಿದೆ.

ರಾಜ್ಯ ಕೊರೋನಾ ವಾರ್ ರೂಮ್ ನಿರ್ವಹಣಾಧಿಕಾರಿ ಹಾಗೂ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಹೇಳುವ ಪ್ರಕಾರ ಪರೀಕ್ಷೆಯಲ್ಲಿ ಮೂರು ರೀತಿ. ಸಾಮಾನ್ಯ ಪ್ರಮಾಣದ ಪರೀಕ್ಷೆ (inadequate testing) ಸೋಂಕಿತರ ಪ್ರಮಾಣಕ್ಕೆ ಸರಿಯಾದ ಪರೀಕ್ಷಾ ಪ್ರಮಾಣ (break even testing) ಮತ್ತು ಹೆಚ್ಚಿನ ಪರೀಕ್ಷಾ ವಿಧಾನ (high testing). ಅವರು ಹೇಳುವು ಪ್ರಕಾರ ಕರ್ನಾಟಕ ಹೆಚ್ಚಿನ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಂಡಿದ್ದರಿಂದ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿದೆ.

ಹಾಗಾದರೆ ಕೇರಳ ಎಡವಿದ್ದೆಲ್ಲಿ? ಸುಮಾರು 10 ಲಕ್ಷ ಜನ ಹೊರಗೆ ಕೆಲಸ ಮಾಡುತ್ತಿರುವವರು ತಮ್ಮ ತವರಾದ ಕೇರಳಕ್ಕೆ ಹಿಂತಿರುಗಿದ್ದಾರೆ. ಕೇಂದ್ರ ಆರೋಗ್ಯ ಮಂತ್ರಿ ಡಾ. ಹರ್ಷ ವರ್ಧನ್ ಅವರ ಪ್ರಕಾರ ಓಣಂ ಹಬ್ಬದಲ್ಲಿ ಕೊರೊನಾ ಮಂತ್ರವನ್ನ (ಮಾಸ್ಕ್​ ಹಾಕುವುದು, ಆರು ಅಡಿ ಅಂತರ ಪಾಲಿಸುವುದು ಇತ್ಯಾದಿ) ಪಾಲಿಸಲು ವಿಫಲವಾಗಿದ್ದೇ ಮುಖ್ಯ ಕಾರಣ ಎಂದಿದ್ದಾರೆ.

ಜನವರಿ 30 ಮತ್ತು ಮೇ 3 ರ ಮಧ್ಯೆ ಕೇರಳ ಎರಡು ಸಾವು ವರದಿಯಾಗಿತ್ತು ಮತ್ತು ಸೋಂಕಿತರ ಸಂಖ್ಯೆ 499 ಇತ್ತು. ಆದರೆ ಈಗ ಇಡೀ ದೇಶದಲ್ಲಿ, ಸೋಂಕಿತರ ಸಂಖ್ಯೆ ಹೆಚ್ಚು ಇರುವ 10 ರಾಜ್ಯಗಳಲ್ಲಿ ಕೇರಳ ಕೂಡ ಒಂದಾಗಿದೆ. ಇದಕ್ಕೆ ಹಬ್ಬದ ಸಮಯದಲ್ಲಿ ತೀವ್ರ ನಿರ್ಲಕ್ಷ್ಯ ಮಾಡಿದ್ದೇ ಇದಕ್ಕೆ ಕಾರಣ ಎಂದು ಡಾ. ಹರ್ಷವರ್ಧನ್ ಕಳೆದ ವಾರ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.