ಭಾರತದ ಅತ್ಯಂತ ಪ್ರಾಚೀನ ಇತಿಹಾಸ ಗ್ರಂಥ ರಾಮಾಯಣ. ಇದೊಂದು ಕರುಣ ರಸ ಪ್ರಧಾನವಾದ ಗ್ರಂಥ. ಇಲ್ಲಿ ಅತೀ ಹೆಚ್ಚು ತ್ಯಾಗಗಳೇ ಕಂಡುಬರುತ್ತದೆ. ಇಡಿಯ ರಘುವಂಶವನ್ನು ಪರಿಲೋಕಿಸಿದರೆ ಅಲ್ಲಿಯೂ ನಮಗೆ ಕಾಣಸಿಗುವುದು ಸೇವೆ ತ್ಯಾಗಗಳೇ ಆಗಿವೆ. ಆದರೆ ಅದರಲ್ಲಿ ಹಲವು ಪಾತ್ರಗಳನ್ನು ಅವರುಗಳ ಸೇವೆ ತ್ಯಾಗಗಳನ್ನು ಕೇಳಿದ್ದೇವೆ ತಿಳಿದಿದ್ದೇವೆ.ಆದರೆ ಈ ಎರಡು ಪಾತ್ರಗಳೇನಿವೆ ಅವುಗಳು ಕಂಡು ಕಾಣದಂತಾದ ಪಾತ್ರಗಳಾಗಿವೆ. ಇವರುಗಳ ತ್ಯಾಗವು ತಿಳಿದೂ ತಿಳಿಯದಂತಾಗಿದೆ. ಅವುಗಳು ಯಾವುದೆಂದು ನಾವು ಅರಿಯಲೇಬೇಕು. ರಾಮ ಲಕ್ಷಣ ಭರತ ಶತ್ರುಘ್ನರು ದಶರಥನ ಮಕ್ಕಳು. ಸೀತೆ ಮತ್ತು ಅವಳ ತಂಗಿಯರಾದ ಊರ್ಮಿಳೆ, ಮಾಂಡವಿ, ಶ್ರುತಕೀರ್ತಿ ಕ್ರಮವಾಗಿ ಇವರ ಮಡದಿಯರು. ರಾಮನ ವನವಾಸದ ನಿರ್ಣಯವಾದಾಗ ತಾಯಿ ಸೀತೆಯು ಪತಿಧರ್ಮ ಪರಾಯಣಳಾಗಿ ತಾನೂ ತೆರಳುವೆನೆಂದು ಸಿದ್ಧಳಾಗುವಳು.
ಅದೇ ಸಮಯದಲ್ಲಿ ರಾಣೀ ಸುಮಿತ್ರೆಯು ತನ್ನ ಮಗನಾದ ಲಕ್ಷ್ಮಣನಿಗೆ ಅಣ್ಣನಾದ ರಾಮನ ಸೇವೆಗೆ ತೆರಳುವಂತೆ ಆಜ್ಞಾಪಿಸುತ್ತಾಳೆ. ಅವನಾದರೋ ಮರು ಮಾತಾಡದೆ ಸಿದ್ಧನಾಗುತ್ತಾನೆ. ಅವರೆಲ್ಲರೂ ವನವಾಸಕ್ಕೆ ತೆರಳುತ್ತಾರೆ. ಈ ಎಲ್ಲಾ ವಿಷಯವನ್ನು ತಿಳಿದ ಭರತನು ಅಣ್ಣನು ಮರಳಿ ತರಲಾಗದೆ ಅಯೋಧ್ಯೆಯಲ್ಲಿ ರಾಮನ ಪಾದುಕೆಯನ್ನಿರಿಸಿ ರಾಜಧಾನಿಯ ಪಕ್ಕದ ನಂದೀ ಎಂಬ ವನದಲ್ಲಿ ಅಣ್ಣನಾದ ರಾಮನಂತೆ ರಾಜ್ಯದ ಸೇವಕನಾಗಿ ಕಾಯುತ್ತಾನೆ. ಇತ್ತ ಲಕ್ಷ್ಮಣ ಆಹಾರ ನಿದ್ರೆ ಬಿಟ್ಟು ರಾಮನನ್ನು ಕಾಯುತ್ತಾನೆ. ಅತ್ತ ಭರತನು ರಾಮನ ಬರುವಿಕೆಕಾಗಿ ತಪಸ್ವಿಯಂತೆ ಕಾಯುತ್ತಾನೆ.
ಇದನ್ನು ಓದಿ;ವ್ರತ ಪೂಜೆ, ಅನುಷ್ಠಾನಗಳಲ್ಲಿ ಬೇರೆಯವರು ಮಾಡಿದ ಅಡುಗೆಯನ್ನು ಯಾಕೆ ಊಟ ಮಾಡಬಾರದು ಅಂತಾರೆ?
ಆದರೆ ಈ ಮಧ್ಯೆ ಇವರನೇ ನಂಬಿ ಬಂದ ಊರ್ಮಿಳೆ ಮತ್ತು ಮಾಂಡೋವಿಯ ಕಥೆಯೇನು? ಎಲ್ಲಿ ಯಾರ ಮೇಲೂ ಮುನಿಸಾಗದೆ ವಿವಾಹದ ನಂತರದ ದಿನಗಳನ್ನು ಒಂಟಿಯಾಗಿ ಕಳೆಯುತ್ತಾರೆ. ಊರ್ಮಿಳೆಗೆ ಮತ್ತು ಮಾಂಡೋವಿಗೆ ತಮ್ಮ ಪತಿಯರಾದ ಲಕ್ಷ್ಮಣ ಭರತರು ಏನು ಮಾಡುತ್ತಿರುವರು? ಅವರ ಮನೋಭೂಮಿಕೆ ಹೇಗಿದೆ ? ವ್ಯಕ್ತಿತ್ವ ಎಂತಹದು ? ಎಂಬ ಅರಿವು ಬರುವುದಕ್ಕೂ ಮುನ್ನ ಅವರಿಬ್ಬರಿಂದ ದೂರವಾಗಿ ಬಾಳುತ್ತಾರೆ. ಆದರೂ ಎಲ್ಲೂ ಅವರು ತಮ್ಮ ಪತಿಯ ಬಗ್ಗೆ ಮುನಿಸಿಕೊಂಡ ಉಲ್ಲೇಖವಿಲ್ಲ. ಇಂತಹ ಮಹೋನ್ನತವಾದ ತ್ಯಾಗ ಮಾಡಿದ ಅವರು ಕಂಡು ಕಾಣದಂತಿದ್ದಾರೆ ರಾಮಾಯಣದಲ್ಲಿ. ಒಂದು ವೇಳೆ ಊರ್ಮಿಳೆ ತನ್ನ ಪತಿಯ ವನ ಗಮನವನ್ನು ವಿರೋಧಿಸಿದ್ದರೆ ಇಂದ್ರಜಿತ್ ನ ಸೋಲಿಸುವಿಕೆ ಕಷ್ಟವಾಗುತ್ತಿತ್ತು. ಮಾಂಡೋವಿ ಮನೋವಿಕಾರ ಮಾಡಿದ್ದರೆ ಭರತ ತೋರಿಸಿದ ಭ್ರಾತ್ರಪ್ರೇಮ ಇಂದು ನಮಗೆ ಆದರ್ಶ ಕಥೆಯಾಗಿ ಸಿಗುತ್ತಿರಲಿಲ್ಲ ಅಲ್ಲವೇ ?
ಊರ್ಮಿಳೆ ಮತ್ತು ಮಾಂಡೋವಿಯ ತ್ಯಾಗ ಎಂಬುದು ಎಷ್ಟು ಮಹತ್ವದ್ದು. ತಮ್ಮ ತ್ಯಾಗದಿಂದ ತಮ್ಮ ಪತಿಯ ಯಶಸ್ಸು ಅದರಿಂದ ಇಡೀ ಜಗತ್ತಿಗೆ ಪಾಠ ಮಾಡಿದ ನಾರಿಯರಿವರು. ಇಂತಹ ಎಲೆಮರೆಯ ಕಾಯಿಗಳಿಂತಿರುವ ಪಾತ್ರಗಳ ತ್ಯಾಗಗಳು ನಮ್ಮ ಜೀವನಕ್ಕೆ ಅದ್ಭುತ ಸಂದೇಶವನ್ನು ನೀಡುತ್ತದೆ. ತ್ಯಾಗ ಮಾಡುವ ವೇಳೆ ಅವರು ಸ್ವಾರ್ಥದ ಯೋಚನೆ ಮಾಡಲಿಲ್ಲ. ಅದರಿಂದ ಇಡಿಯ ಮನೆತನಕ್ಕೆ ಜೀವತುಂಬಿತು. ಇಂತಹ ಸಂದರ್ಭವು ನಮಗೂ ನಮ್ಮ ಜೀವನದಲ್ಲಿ ಬಂದೇ ಬರುತ್ತದೆ. ಆಗ ಒಂದು ಕ್ಷಣ ಸಾವಾಧಾನವಾಗಿ ಯೋಚಿಸಿದಾಗ ನಮ್ಮ ತ್ಯಾಗವೂ ಸಾರ್ಥವಾಗುವುದು.
ಡಾ.ಕೇಶವಕಿರಣ ಬಿ, ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
kkmanasvi@gamail.com
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ