Spirituality: ವ್ರತ ಪೂಜೆ, ಅನುಷ್ಠಾನಗಳಲ್ಲಿ ಬೇರೆಯವರು ಮಾಡಿದ ಅಡುಗೆಯನ್ನು ಯಾಕೆ ಊಟ ಮಾಡಬಾರದು ಅಂತಾರೆ?

ಕೆಲವರು ಎಲ್ಲರ ಮನೆಯಲ್ಲೂ ಎಲ್ಲರ ಕೈಯಲ್ಲೂ ಅಡುಗೆ ಮಾಡಿಸಿಕೊಂಡು ಸ್ವೀಕರಿಸಿಲ್ಲ. ಯಾವ ಕಾರಣಕ್ಕೆ ಹಾಗೆ ಮಾಡುತ್ತಾರೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Spirituality: ವ್ರತ ಪೂಜೆ, ಅನುಷ್ಠಾನಗಳಲ್ಲಿ ಬೇರೆಯವರು ಮಾಡಿದ ಅಡುಗೆಯನ್ನು ಯಾಕೆ ಊಟ ಮಾಡಬಾರದು ಅಂತಾರೆ?
ಸಾಂದರ್ಭಿಕ ಚಿತ್ರ


ಕೆಲವು ವ್ರತಾಚರಣೆ ಸಂದರ್ಭದಲ್ಲಿ ಇನ್ನೊಬ್ಬರು ಮಾಡಿದ ಅಡುಗೆಯನ್ನು ಊಟ ಮಾಡದೆ ತಾವೇ ಅಡುಗೆ ಮಾಡಿಕೊಳ್ಳುವಂಥವರನ್ನು ನೀವು ನೋಡಿರಬಹುದು ಅಥವಾ ಇಂಥದ್ದೊಂದು ಮಾತು ಕೇಳಿರಬಹುದು. ಮಹಿಳೆಯರಾಗಲೀ ಪುರುಷರಾಗಲೀ ಅಂಥ ಸಂದರ್ಭದಲ್ಲಿ ಇತರರ ಮಾಡಿದ ಅಡುಗೆ ಉಣ್ಣುವುದಿಲ್ಲ. ಪುರುಷರಾಗಿದ್ದಲ್ಲಿ ಪತ್ನಿ, ತಾಯಿ, ಅಕ್ಕ- ತಂಗಿಯರು ಮಾಡಿದ್ದರೂ ತಾವೇ ಅಡುಗೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಹಿಳೆಯರೂ ತಾವೇ ಅಡುಗೆ ಮಾಡುತ್ತಾರೆ. ಅದಕ್ಕೆ ಕಾರಣ ಏನೆಂದರೆ, ಯಾರು ಅಡುಗೆ ಮಾಡಿರುತ್ತಾರೋ ಅವರ ಮನಸಿನ ಭಾವನೆ ಆ ಅಡುಗೆಯ ಮೂಲಕ ವ್ರತಧಾರಿಗಳ ಮನಸ್ಸಿನ ಮೇಲೆ ಬೀರುತ್ತದೆ ಎಂಬುದು ಈ ಆಚರಣೆಯ ಹಿಂದಿನ ನಂಬಿಕೆ. ಇನ್ನು ಹಲವು ವ್ರತದಲ್ಲಿ ಬ್ರಹ್ಮಚರ್ಯ ಅನುಸರಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಧ್ಯಾನ, ಭಜನೆ, ಜಪ- ತಪಾದಿ ಅನುಷ್ಠಾನಗಳನ್ನು ಮಾಡುತ್ತಿರುತ್ತಾರೆ. ಒಂದು ವೇಳೆ ಆ ಸಂಕಲ್ಪಕ್ಕೆ ಅಡ್ಡಿಯಾದರೂ ವ್ರತ ಪೂರ್ತಿಯಾದಂತೆ ಆಗುವುದಿಲ್ಲ.

ಈಗಲೂ ಕೆಲವು ದೇವತೆಗಳ ಅನುಷ್ಠಾನ ಮಾಡುವಂಥವರು ಸದಾ ತಾವೇ ಅಡುಗೆ ಮಾಡಿಕೊಳ್ಳುತ್ತಾರೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂಥ ಪದ್ಧತಿ. ಇದಕ್ಕೆ ನಮಗೆ ಮಹಾಭಾರತದಲ್ಲೂ ಉದಾಹರಣೆ ಸಿಗುತ್ತದೆ. ದುರ್ಯೋಧನನ ಮನೆಯಲ್ಲಿ ಊಟ ಮಾಡಿದ ಕಾರಣಕ್ಕೆ ಅವನು ಕೇಳಿಕೊಂಡ ಕೋರಿಕೆಯನ್ನು ಪೂರ್ಣ ಮಾಡುವಂಥ ಪೇಚಿಗೆ ಸಿಲುಕುತ್ತಾರೆ ದೂರ್ವಾಸ ಮುನಿಗಳು. ಅವನು ಕೇಳಿಕೊಂಡಂತೆಯೇ, ವನವಾಸದಲ್ಲಿದ್ದ ಪಾಂಡವರ ಬಳಿಗೆ ತಮ್ಮ ಶಿಷ್ಯ ವೃಂದದವರ ಜತೆಗೆ ಹೋಗಿ ಊಟಕ್ಕೆ ಸಿದ್ಧಗೊಳಿಸುವಂತೆ ಕೇಳುತ್ತಾರೆ. ತಾವು ಸ್ನಾನಕ್ಕೆ ಹೋಗಿಬರುವುದಾಗಿ ಹೇಳುತ್ತಾರೆ. ಕಾಡಿನಲ್ಲಿ ದಿಢೀರನೇ ಆಹಾರ ಸಿದ್ಧಪಡಿಸುವುದಾದರೂ ಹೇಗೆ? ದುರ್ಯೋಧನನ ಉದ್ದೇಶ, ದೂರ್ವಾಸರ ಕೋಪಕ್ಕೆ ಪಾಂಡವರು ತುತ್ತಾಗಬೇಕು ಎಂದಿತ್ತು. ತನ್ನ ಅರಮನೆಯಲ್ಲಿ ಅವರಿಗೆ ಅದ್ಭುತ ಆತಿಥ್ಯ ನೀಡಿದ. ಆ ನಂತರ ಮುನಿಗಳು, ನಿನ್ನ ಕೋರಿಕೆ ಕೇಳು ಎಂದಿದ್ದರು. ಆಗ ದುರ್ಯೋಧನ ಹೀಗೊಂದು ಜಾಲ ಹೆಣೆದಿದ್ದ.

ಆದರೆ, ಪಾಂಡವರಿಗೆ ಕೃಷ್ಣನ ಅನುಗ್ರಹ ಇದ್ದುದರಿಂದ ದೂರ್ವಾಸರಿಗೆ ಹಸಿವೇ ಇಂಗಿಹೋಗುತ್ತದೆ. ದುರ್ಜನರ ಮನೆಯಲ್ಲಿ ಆಹಾರ ಸೇವಿಸಬಾರದು. ಆ ತಪ್ಪಿಗೆ ಇಂಥ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ದೂರ್ವಾಸರು ಬೇಸರಿಸಿಕೊಳ್ಳುತ್ತಾರೆ. ಇನ್ನು ಕೃಷ್ಣನು ಹಸ್ತಿನಾಪುರಕ್ಕೆ ಸಂಧಾನಕ್ಕೆ ಬಂದಾಗ ಯಾರೆಲ್ಲ ಆಹ್ವಾನ ನೀಡಿದರೂ ವಿದುರನ ಮನೆಗೆ ತೆರಳುತ್ತಾನೆ. ಏಕೆಂದರೆ, ದ್ರೌಪತಿಗೆ ತುಂಬಿದ ಸಭೆಯಲ್ಲಿ ದುರ್ಯೋಧನ ಅವಮಾನ ಮಾಡುವಾಗ ಅದರ ವಿರುದ್ಧ ಧ್ವನಿ ಎತ್ತಿದ್ದು ವಿದುರ ಮಾತ್ರ. ಆದ್ದರಿಂದ ತಾನು ಆತನ ಮನೆಗೆ ಊಟಕ್ಕೆ ತೆರಳುತ್ತಾನೆ ಕೃಷ್ಣ. ಯಾರು ಅಡುಗೆ ಸಿದ್ಧಪಡಿಸುತ್ತಾರೋ ಅವರ ಮನಸ್ಸಿನ ಭಾವನೆಯು ಆ ಆಹಾರ ಸೇವಿಸುವವರ ಮೇಲೆ ಆಗುತ್ತದೆ ಎಂಬುದು ಕೂಡ ನಂಬಿಕೆ.

ಈ ಎಲ್ಲ ಕಾರಣಗಳಿಗಾಗಿ ಅಡುಗೆ ಮಾಡುವಾಗ ದೇವರ ಸ್ಮರಣೆಯನ್ನು ಮಾಡಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಸಿಟ್ಟು ಮಾಡಿಕೊಳ್ಳುವುದೋ ಯಾರನ್ನೋ ಬೈದುಕೊಳ್ಳುವುದೋ ಮಾಡಬಾರದು. ಇದರಿಂದ ಊಟ ಮಾಡುವವರಿಗಂತೂ ಖಂಡಿತಾ ಶ್ರೇಯಸ್ಸಲ್ಲ. ಜತೆಗೆ ಊಟ ಮಾಡುವಾಗ ಕೂಡ ಭಗವಂತನ ಸ್ಮರಣೆ ಮಾಡುತ್ತಾ ಆಹಾರ ಸೇವಿಸಬೇಕು. ಸಿಟ್ಟು ಅಥವಾ ಕೋಪದಿಂದ ಊಟ ಮಾಡಬಾರದು. ಅಷ್ಟೇ ಅಲ್ಲ, ಇನ್ನೊಬ್ಬರಿಗೆ ಮನಸ್ಸಿನಲ್ಲಿ ಕೆಡಕು ಬಯಸುತ್ತಾ ಸಹ ಆಹಾರ ಸೇವಿಸಬಾರದು. ಇದರಿಂದ ನಾನಾ ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚೆಗಂತೂ ಮೊಬೈಲ್ ಫೋನ್ ಬಳಸುತ್ತಾ, ಟೀವಿ ನೋಡುತ್ತಾ, ಕೈಯಲ್ಲಿ ತಟ್ಟೆ ಹಿಡಿದು, ಅತ್ತಿಂದಿತ್ತ ಓಡಾಡುತ್ತಾ ಆಹಾರ ಸೇವಿಸುವುದನ್ನು ನೋಡಬಹುದು. ಅಥವಾ ಇದನ್ನು ಓದುತ್ತಿರುವವರ ಪೈಕಿಯೇ ಹಲವರು ಹಾಗೆ ಮಾಡುತ್ತಿರಬಹುದು. ಇಂಥ ಅಭ್ಯಾಸ ಇದ್ದಲ್ಲಿ ತಕ್ಷಣದಿಂದಲೇ ಬಿಟ್ಟುಬಿಡಿ.

ಇದನ್ನೂ ಓದಿ: Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

(Spiritual importance of food habits of an individual and know the significance of self cooking)