AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಇಬ್ಬರು ಪೊಲೀಸರ ತಲೆದಂಡ

ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹೆಸರು ಡೆತ್​ನೋಟ್​ನಲ್ಲಿ ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಗೆ ಆರೋಪ ಮಾಡಲಾಗಿದೆ. ಹೀಗಾಗಿ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಇದರ ಮಧ್ಯ ಅತ್ತ ಇಬ್ಬರು ಪೊಲೀಸರ ತಲೆದಂಡವಾಗಿದೆ.

ಬೀದರ್​ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಇಬ್ಬರು ಪೊಲೀಸರ ತಲೆದಂಡ
ಗುತ್ತಿಗೆದಾರ ಸಚಿನ್
ಸುರೇಶ ನಾಯಕ
| Updated By: ರಮೇಶ್ ಬಿ. ಜವಳಗೇರಾ|

Updated on:Dec 27, 2024 | 2:59 PM

Share

ಬೀದರ್, (ಡಿಸೆಂಬರ್ 27): ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಗಾಂಧಿಗಂಜ್‌ನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಓರ್ವ‌ ಮಹಿಳಾ ಹೆಡ್​ ಕಾನ್ಸ್​ಟೇಬಲ್​ ಹಾಗೂ ಮತ್ತೋರ್ವ ಪುರುಷ ಹೆಡ್‌ ಕಾನ್‌ಸ್ಟೇಬಲ್‌ನ ಸಸ್ಪೆಂಡ್ ಮಾಡಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ. ರಾಜೇಶ್ ಹಾಗೂ ಶಾಮಲಾ ಎಂಬ ಇಬ್ಬರು ಹೆಡ್​ ಕಾನ್‌ಸ್ಟೇಬಲ್‌ಗಳೇ ಅಮಾನತುಗೊಂಡವರು.

ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು ಕೂಡಲೇ ಬೀದರ್‌ನ ಗಾಂಧಿಗಂಜ್ ಠಾಣೆಗೆ ತೆರಳಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಹೀಗೆ ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಕೂಡಲೇ ಹುಡುಕಿ‌ ಕೊಡುವಂತೆ ಸಚಿನ್ ಸಹೋದರ ಹಾಗೂ ಸಹೋದರಿ ಮನವಿ ಮಾಡಿದ್ದರು. ಆದ್ರೆ, ದೂರು ದಾಖಲಿಸಲು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ಗುತ್ತಿಗೆದಾರ ಆತ್ಮಹತ್ಯೆ!

ಒಂದು ವೇಳೆ ಕುಟುಂಬಸ್ಥರ ದೂರು ಸ್ವೀಕರಿಸಿ ಕಾರ್ಯಪ್ರವೃತ್ತರಾಗಿದ್ದರೆ ಸಚಿನ್​ನ ರಕ್ಷಣೆ ಮಾಡಬಹುದಿತ್ತೆನೋ. ಆತನ ಮೊಬೈಲ್​ ಲೋಕೇಷನ್ ಟ್ರ್ಯಾಕ್ ಮಾಡಿ ಆತನನ್ನು ಪತ್ತೆ ಮಾಡಬಹುದಿತ್ತು. ಆದ್ರೆ, ಪೊಲೀಸರು ಯಾವುದೇ ತಲೆ ಕಡೆಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ.

ಬೀದರ್‌ನಲ್ಲಿ ಯುವ ಗುತ್ತಿಗೆದಾರ ಸಚಿನ್ (26 ವರ್ಷ) ಬಾಲ್ಕಿಯಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಅತ್ಮಹತ್ಯೆಗೆ ಶರಣಾಗಿದ್ದ. ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ತಳಕು ಹಾಕಿಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬುವವರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್‌ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ 1 ಕೋಟಿ ಹಣ ನೀಡುವಂತೆ ಒತ್ತಡ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ.

ಈ ಹಿನ್ನೆಲೆಯಲ್ಲಿ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬಿದ್ದಿದ್ದಾರೆ. ಇನ್ನು ಈ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿದ್ದಕ್ಕೆ ರಾಜು ಕಪನೂರು ಸಹ ಸ್ಪಷ್ಟನೆ ನೀಡಿದ್ದಾರೆ.

ಸಚಿವ ಖರ್ಗೆ ಆಪ್ತ ಹೇಳಿದ್ದೇನು?

ಕಳೆದ 1 ವರ್ಷದ ಹಿಂದೆ ಮೃತ ಸಚಿನ್ ನನಗೆ ಪರಿಚಯವಾಗಿದ್ದ. ಬಿಇ ಸಿವಿಲ್‌ ಮುಗಿದಿದೆ, ಕಾಂಟ್ರಾಕ್ಟರ್ ಲೈಸೆನ್ಸ್ ಇದೆ ಎಂದಿದ್ದ. ನಮ್ಮ ಲೈಸೆನ್ಸ್ ಮೇಲೆ ಕಾಮಗಾರಿ ಮಾಡೋಣ ಅಂತ ಹೇಳಿದ್ದ. ಹೀಗಾಗಿ ಆತನ ಜೊತೆ ಕೆಲಸ ಮಾಡೋದಕ್ಕೆ ನಿರ್ಧರಿಸಿದ್ದೆವು. ಸಚಿನ್ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 65 ಲಕ್ಷ ಹಣ ಹಾಕಿದ್ದೆ. ಮೊದಲು ವಿಮಾನ ನಿಲ್ದಾಣದ ಕಾಮಗಾರಿ ಟೆಂಡರ್ ಹಾಕಿದ್ದೆವು. ಅದು ಆಗಿರಲಿಲ್ಲ, ಬಳಿಕ ಕೆಐಡಿಎಲ್ ಹಾಕಿದ್ದೆವು ಅದೂ ಆಗಿರಲ್ಲ. ಬಳಿಕ ವಿಚಾರಣೆ ಮಾಡಿದಾಗ ಅದು ಫೇಕ್ ಎಂದು ಗೊತ್ತಾಯ್ತು ಹೀಗಾಗಿ ನಮ್ಮ ಹಣ ನನಗೆ ವಾಪಸ್​​ ಕೊಡು ಎಂದು ಕೇಳಿದ್ದೆವು. ಆದರೆ ಮೊಬೈಲ್ ಸ್ವಿಚ್​ಆಫ್​ ಮಾಡಿಕೊಂಡು ಸಚಿನ್ ಓಡಾಡ್ತಿದ್ದ. ಒಂದೂವರೆ ತಿಂಗಳ ಹಿಂದೆ ಸಚಿನ್​ ಮನೆಯಲ್ಲಿ ವಿಚಾರ ತಿಳಿಸಿದ್ದೆವು. ಸಚಿನ್​​ ಸಹೋದರಿಯರು ಸಲ್ಪ ಸಮಯಾವಕಾಶ ಕೇಳಿದ್ದರು. ಆದರೂ ಜಾಲತಾಣದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಶುರು ಮಾಡಿದ್ದ. ನಮ್ಮಿಂದ ಕಿರುಕುಳ ಆಗ್ತಿದೆ ಅಂತಾ ಫೇಸ್​​ಬುಕ್​ನಲ್ಲಿ ಪೋಸ್ಟ್​ ಹಾಕಿದ್ದ. ಈ ಬಗ್ಗೆ ಕಲಬುರಗಿ ಗ್ರಾಮೀಣ ಠಾಣೆಗೆ ನಾನು ದೂರು ನೀಡಿದ್ದೆ. ಆದರೆ ಈಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆಯಾಗಲಿ ಎಲ್ಲಾ ಸತ್ಯಾಂಶ ಹೊರಬರುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:57 pm, Fri, 27 December 24