Sade sati: ಏಳರಾಟ ಶನಿ ಅಂದರೇನು, ಏನಿದರ ಪ್ರಭಾವ, ಜನರು ಯಾಕಿಷ್ಟು ಹೆದರುತ್ತಾರೆ?

Saturn sade sati: ಸಾಡೇ ಸಾತ್ ಅಥವಾ ಏಳರಾಟ ಶನಿ ಅಂದರೇನು, ಅದರ ಪ್ರಭಾವ ಏನು ಹಾಗೂ ಅದಕ್ಕೆ ಪರಿಹಾರ ಏನು ಇತ್ಯಾದಿ ವಿವರಗಳು ಇಲ್ಲಿವೆ.

Sade sati: ಏಳರಾಟ ಶನಿ ಅಂದರೇನು, ಏನಿದರ ಪ್ರಭಾವ, ಜನರು ಯಾಕಿಷ್ಟು ಹೆದರುತ್ತಾರೆ?
ಶನಿ ಗ್ರಹ (ಸಾಂದರ್ಭಿಕ ಚಿತ್ರ)
Follow us
Srinivas Mata
| Updated By: ಆಯೇಷಾ ಬಾನು

Updated on: May 27, 2021 | 6:50 AM

“ಅಯ್ಯೋ, ನನಗೀಗ ಏಳರಾಟ ಶನಿ ನಡೆಯುತ್ತಿದೆ. ಅದಕ್ಕೆ ಈ ಮಾತೆಲ್ಲ ಕೇಳಬೇಕಿದೆ. ಅದಕ್ಕೇ ಇಷ್ಟೆಲ್ಲ ಕಷ್ಟ.” -ಇಂಥ ಬೇಸರದ ಧ್ವನಿಯ ಮಾತುಗಳನ್ನು ನೀವು ಕೇಳಿಸಿಕೊಂಡಿರಬಹುದು, ಆಡಿರಲೂ ಬಹುದು. ಜನಸಾಮಾನ್ಯರಲ್ಲಿ ಇರುವ ಸಾಮಾನ್ಯ ತಿಳಿವಳಿಕೆ ಏನೆಂದರೆ, ಏಳರಾಟ ಶನಿ ಅಂದರೆ ಬಹಳ ಕ್ರೂರ ಅಂತೆ. ತೊಂದರೆಗಳ ಮೇಲೆ ತೊಂದರೆ ಬರುತ್ತದೆ. ಅದರಿಂದ ತಪ್ಪಿಸಿಕೊಳ್ಳೋದು ಕಷ್ಟ. ಯಾವ ಮನುಷ್ಯನ ಬದುಕಲ್ಲಿ ಏರಿಳಿತ ಇರುವುದಿಲ್ಲ ಹೇಳಿ? ಹಾಗೆಯೇ ಶನಿ ಕೂಡ ಎಲ್ಲರ ಜೀವನದಲ್ಲೂ ತನ್ನ ಸಾಡೇ ಸಾತ್ (ಹೀಗಂದರೆ ಏಳೂವರೆ ವರ್ಷಗಳು) ಬಂದು, ಒಂದಿಷ್ಟು ಏರಿಳಿತಗಳನ್ನು ತೋರಿಸಿ, ಹೋಗುತ್ತದೆ. ಈ ಏಳರಾಟ ಶನಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆಯೇ ಪ್ರಶ್ನೋತ್ತರ ಮಾದರಿಯಲ್ಲಿ ನಿಮಗೆ ಉಪಯುಕ್ತ ಆಗುವಂತಹ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತಿದೆ.

1) ಏನಿದು ಸಾಡೇ ಸಾತ್ ಅಥವಾ ಏಳರಾಟ ಶನಿ? ಏಕಾಗಿ ಹಾಗೆ ಕರೆಯುತ್ತಾರ? ಶನಿ ಗ್ರಹವು ಒಂದು ರಾಶಿಯಲ್ಲಿ ಸಂಚಾರ ಸಂಪೂರ್ಣ ಮಾಡುವುದಕ್ಕೆ ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಗೋಚಾರದಲ್ಲಿ ಒಬ್ಬ ವ್ಯಕ್ತಿಯ ಜನ್ಮ ರಾಶಿಯ ಹಿಂದಿನ ಮನೆ, ಅಂದರೆ ಹನ್ನೆರಡು, ಜನ್ಮರಾಶಿ (ಒಂದನೇ ಮನೆ) ಹಾಗೂ ಎರಡನೇ ಮನೆಯಲ್ಲಿ ಸಂಚರಿಸುವುದನ್ನು ಏಳರಾಟ ಎನ್ನಲಾಗುತ್ತದೆ. ಈಗಿನ ಉದಾಹರಣೆ ಹೇಳುವುದಾದರೆ, ಶನಿ ಗ್ರಹ ಮಕರ ರಾಶಿಯಲ್ಲಿದೆ. ಧನು ರಾಶಿ (ಎರಡನೇ ಮನೆ ಶನಿ), ಮಕರ (ಜನ್ಮ ಶನಿ), ಕುಂಭ (ಹನ್ನೆರಡನೇ ಮನೆ ಶನಿ) ಈ ಮೂರೂ ರಾಶಿಗೂ ಏಳರಾಟ ಶನಿ ಇದೆ. ಈ ಪೈಕಿ ಧನುಸ್ಸು ರಾಶಿಯವರಿಗೆ 5 ವರ್ಷಕ್ಕಿಂತ ಹೆಚ್ಚು ಸಮಯ, ಮಕರ ಎರಡೂವರೆ ವರ್ಷಕ್ಕಿಂತ ಹೆಚ್ಚು, ಇನ್ನು ಕುಂಭಕ್ಕೆ ಆರಂಭದ ಹಂತದ ಸಾಡೇ ಸಾತ್ ಇದಾಗಿದೆ. ಅಂದ ಹಾಗೆ 12, 1 ಮತ್ತು 2ನೇ ಮನೆ ಹೀಗೆ ಈ ಮೂರು ರಾಶಿಯಲ್ಲಿ ಸಂಚರಿಸುವುದಕ್ಕೆ ಶನಿ ಗ್ರಹ ತೆಗೆದುಕೊಳ್ಳುವ ಅವಧಿ ಏಳೂವರೆ ವರ್ಷ. ಇದನ್ನೇ ಸಾಡೇ ಸಾತ್ ಎನ್ನಲಾಗುತ್ತದೆ. ಹೀಗಂದರೆ ಏಳೂವರೆ ವರ್ಷ. ಇದು ಹಿಂದಿ ಪದ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇವತ್ತಿನ ದಿನಮಾನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಸಾಡೇ ಸಾತ್ ಬರುವುದಿಲ್ಲ. ಏಕೆಂದರೆ ಮೂವತ್ತು ವರ್ಷಕ್ಕೆ ಒಮ್ಮೆ ಮಾತ್ರ ಹೀಗೆ ಬರುತ್ತದೆ.

2) ಏಳರಾಟ ಶನಿಯಿಂದ ಏನಾಗುತ್ತದೆ? ಹನ್ನೆರಡನೇ ಮನೆಯಲ್ಲಿ ವಿಪರೀತ ನಷ್ಟ, ಹಣಕಾಸು ಸಮಸ್ಯೆ, ವ್ಯಾಪಾರ ನಷ್ಟ ಇತ್ಯಾದಿಗಳನ್ನು ಕಾಣುವಂತಾಗುತ್ತದೆ. ಜನ್ಮರಾಶಿಗೆ ಬಂದಾಗ ಆರೋಗ್ಯ ಬಾಧೆ, ಅವಮಾನ, ದೈಹಿಕ ಸಮಸ್ಯೆಗಳು ಆಗುತ್ತವೆ. ಎರಡನೇ ಮನೆಯಲ್ಲಿ ದುಃಖ, ಮಾನಸಿಕ ತೊಳಲಾಟ ಇಂಥದ್ದು ತೀವ್ರ ಸ್ವರೂಪದಲ್ಲಿ ಏರ್ಪಡುತ್ತದೆ.

3) ಈ ಸಾಡೇಸಾತ್ ಸಂದರ್ಭದಲ್ಲಿ ಏನು ಮಾಡಬಾರದು? ಈ ಏಳೂವರೆ ವರ್ಷದಲ್ಲಿ ಇರುವ ಕೆಲಸವನ್ನು ನೀವಾಗಿಯೇ ಬಿಡಬಾರದು. ದೊಡ್ಡ ವ್ಯಾಪಾರಕ್ಕೆ ಸಾಲ ತಂದು ಹಣ ಹೂಡಬಾರದು. ಪುರುಷರಾದಲ್ಲಿ ಸ್ತ್ರೀಯರ ವಿಚಾರದಲ್ಲಿ ಹಾಗೂ ಸ್ತ್ರೀಯರಾದಲ್ಲಿ ಪುರುಷರ ವಿಚಾರಕ್ಕೆ ಅನಗತ್ಯವಾದ ಅನುಮಾನ ಬರುವಂತೆ ಮಾಡಿಕೊಳ್ಳಬಾರದು. ಸಾಧ್ಯವಾದಷ್ಟು ವಾಹನ ಚಾಲನೆ ಮಾಡದಿದ್ದಲ್ಲಿ ಉತ್ತಮ. ಅನಿವಾರ್ಯ ಹೌದಾದಲ್ಲಿ ಸಿಕ್ಕಾಪಟ್ಟೆ ಎಚ್ಚರಿಕೆಯಿಂದ ಇರಬೇಕು. ಯಾರಿಗೂ ಸಾಲ ನೀಡಬಾರದು, ಜಾಮೀನಾಗಿ ನಿಲ್ಲಬಾರದು, ಅನಿವಾರ್ಯ ಅಂತಲ್ಲದಿದ್ದರೆ ಸಾಲ ಪಡೆಯಬಾರದು. ಡೈವೋರ್ಸ್​ನಂಥ ಆಲೋಚನೆಗಳು ಬಾರದಿರುವಂತೆ ನೋಡಿಕೊಳ್ಳಬೇಕು. ಪಾಪ ಕರ್ಮಾಸಕ್ತಿಗಳು ಹೆಚ್ಚಾಗುತ್ತದೆ; ಆ ಕಡೆಗೆ ಲಕ್ಷ್ಯ ನೀಡಬಾರದು.

4) ಏಳರಾಟ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳೋದು ಹೇಗೆ? ಮೊದಲೇ ಹೇಳಿದಂತೆ ಪ್ರಭಾವದಿಂದ ತಪ್ಪಿಸಿಕೊಳ್ಳೋದು ಸಾಧ್ಯವಿಲ್ಲ. ಆದರೆ ತಡೆದುಕೊಳ್ಳುವ ಶಕ್ತಿ ನೀಡುವಂತೆ ಪ್ರಾರ್ಥಿಸಬಹುದು. ಮುಂಜಾಗ್ರತೆ ವಹಿಸಬಹುದು. ಮುಖ್ಯವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಶನಿಯು ಧರ್ಮವನ್ನು ಗಮನಿಸುವಂತೆ ಶಿಕ್ಷಕ ಇದ್ದಂತೆ. ಈ ಸಂದರ್ಭದಲ್ಲಿ ಎಷ್ಟು ಧರ್ಮದಲ್ಲಿ ನಡೆದುಕೊಳ್ತೀರೋ ಹಾಗೂ ಪ್ರಾಮಾಣಿಕರಾಗಿ ಇರುತ್ತೀರೋ ಅಷ್ಟರ ಮಟ್ಟಿಗೆ ಶನಿಯ ಪ್ರಭಾವ ತಡೆದುಕೊಳ್ಳುವ ಸಾಮರ್ಥ್ಯ ಬರುತ್ತದೆ.

5) ಸಾಡೇ ಸಾತ್ ಅವಧಿಯ ಉದ್ದಕ್ಕೂ ಸಮಸ್ಯೆಗಳನ್ನು ಎದುರಿಸುತ್ತಲೇ ಇರಬೇಕಾ? ಖಂಡಿತಾ ಇಲ್ಲ. ಜನ್ಮ ಜಾತಕದಲ್ಲಿ ರಾಜ ಯೋಗ ಇದ್ದಾಗ, ಶನಿಯ ಸ್ಥಿತಿ- ಅನುಗ್ರಹ ಉತ್ತಮವಾಗಿದ್ದಾಗ, ಜಪ-ತಪಾದಿ ಅನುಷ್ಠಾನಗಳನ್ನು ಮಾಡುತ್ತಿದ್ದಾಗ, ಉತ್ತಮ ದಶಾ- ಭುಕ್ತಿಗಳ ಸಮಯದಲ್ಲಿ, ಗೋಚಾರದಲ್ಲಿ ಇತರ ಶುಭ ಗ್ರಹಗಳು ಅತ್ಯುತ್ತಮ ಸ್ಥಾನಗಳಲ್ಲಿ ನಿಂತು ಫಲ ನೀಡುವಾಗ ಶನಿಯ ಪ್ರಭಾವ ಕಡಿಮೆ ಆಗುತ್ತದೆ.

6) ಸಾಡೇ ಸಾತ್ ಶನಿಯ ಸಂಚಾರ ಸಮಯದಲ್ಲಿ ಯಾವುದಾದರೂ ರಾಶಿಯವರಿಗೆ ವಿನಾಯಿತಿ, ಅಂದರೆ ಸಮಸ್ಯೆಗಳ ತೀಕ್ಷ್ಣತೆ ಕಡಿಮೆ ಇರುತ್ತಾ? ತುಲಾ- ಈ ರಾಶಿಯಲ್ಲಿ ಶನಿ ಉಚ್ಚ, ಮಕರ- ಕುಂಭಕ್ಕೆ ಶನಿ ಅಧಿಪತಿ ಈ ಮೂರು ರಾಶಿಯವರಿಗೆ ಪ್ರಭಾವ ಕಡಿಮೆ ಎಂಬ ಅಭಿಪ್ರಾಯ ಇದೆ. ಇನ್ನು ಜಾತಕದಲ್ಲಿ ಶನಿಯ ಸ್ಥಿತಿ ಉತ್ತಮವಾಗಿದ್ದಲ್ಲಿ, ಅತ್ಯುತ್ತಮ ದಶಾ- ಭುಕ್ತಿ ಕಾಲದಲ್ಲಿ ತೀಕ್ಷ್ಣತೆ ಕಡಿಮೆ ಆಗುತ್ತದೆ.

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

ಇದನ್ನೂ ಓದಿ: Astrology Tips: ಮೇಷ ರಾಶಿಯಿಂದ ಮೀನದ ತನಕ ತಿದ್ದುಕೊಳ್ಳಬೇಕಾದ ಗುಣಗಳಿವು

(Sade Sati Saturn effects on natives and astrological solutions to follow)