ಅತ್ಯಂತ ಮಹತ್ವದ ಧಾರ್ಮಿಕ ಹಬ್ಬಗಳಲ್ಲಿ ರಥಸಪ್ತಮಿ ಕೂಡ ಬಂದು. ಸಪ್ತಮಿ ತಿಥಿಯಂದು ರಥ ಸಪ್ತಮಿ ಬರುತ್ತದೆ. ಮೊದಲು ವಸಂತ ಪಂಚಮಿ ಬರುತ್ತದೆ. ನಂತರ ಬರುವ ಅಚಲ ಸಪ್ತಮಿ ತಿಥಿಯನ್ನು ಧಾರ್ಮಿಕ ದೃಷ್ಟಿಯಿಂದ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅಚಲಾ ಸಪ್ತಮಿಯನ್ನು ಕೆಲವು ಕಡೆ ರಥ ಸಪ್ತಮಿ, ಮಾಘ ಸಪ್ತಮಿ ಎಂದು ಆಚರಿಸುತ್ತಾರೆ. ಮಾಘ ತಿಂಗಳ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ರಥ ಸಪ್ತಮಿ ಆಚರಿಸಲಾಗುತ್ತೆ. ಪುರಾಣಗಳ ಪ್ರಕಾರ ಈ ದಿನ ಸೂರ್ಯ ಭಗವಾನ್ ಜನಿಸಿದನೆಂದು ನಂಬಲಾಗಿದೆ. ಈ ದಿನದಂದು ಸೂರ್ಯ ದೇವನು ತನ್ನ ದೈವಿಕ ಬೆಳಕಿನಿಂದ ಇಡೀ ವಿಶ್ವವನ್ನು ಬೆಳಕಿಸಿದ್ದರು. ಈ ಬಾರಿಯ ರಥಸಪ್ತಮಿಯನ್ನು ಫೆಬ್ರವರಿ 7 ರಂದು ಆಚರಿಸಲಾಗುವುದು.
ಶ್ರೀಕೃಷ್ಣನೇ ಸೂರ್ಯದೇವನ ಮಹಿಮೆಯನ್ನು ವಿವರಿಸಿದ್ದರು
ಪುರಾಣದ ಪ್ರಕಾರ, ಶ್ರೀಕೃಷ್ಣನು ಸೂರ್ಯದೇವನ ಮಹಿಮೆಯನ್ನು ಹೇಳುತ್ತಾ, ಜಗತ್ತಿನಲ್ಲಿ ಸೂರ್ಯನಿಗಿಂತ ಬೇರೆ ದೇವರು ಇಲ್ಲ ಎಂದು ಹೇಳಿದ್ದರು ಎಂದು ಹೇಳಲಾಗುತ್ತೆ. ಇಡೀ ಜಗತ್ತನ್ನೇ ಬೆಳಕಾಗಿಸಿದ ಭೂಮಿಯ ಪ್ರತ್ಯಕ್ಷ ದೇವತೆ. ಬೆಳಕು ಸ್ವತಃ ಸಕಾರಾತ್ಮಕತೆ ಮತ್ತು ಶಕ್ತಿಯ ಸಂಕೇತವಾಗಿದೆ. ಮಾನವನ ದೇಹದಲ್ಲಿ ಬೆಳಕಿನ ರೂಪದಲ್ಲಿರುವ ಆತ್ಮವು ವಾಸ್ತವವಾಗಿ ಸೂರ್ಯನ ಪ್ರತಿಬಿಂಬವಾಗಿದೆ. ಪುರಾಣದ ಪ್ರಕಾರ, ಇಡೀ ಪ್ರಪಂಚವು ಬೆಳಕಿನಿಂದ ಹುಟ್ಟಿಕೊಂಡಿದೆ ಮತ್ತು ಬೆಳಕಿನಲ್ಲಿಯೇ ವಿಲೀನಗೊಳ್ಳುತ್ತದೆ ಎನ್ನಲಾಗುತ್ತೆ.
ರಾವಣನನ್ನು ಕೊಲ್ಲುವ ಮೊದಲು ಶ್ರೀರಾಮನು ಪೂಜಿಸಿದ್ದು ಸೂರ್ಯ ದೇವನನ್ನೇ
ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನು ರಾವಣನೊಂದಿಗೆ ಯುದ್ಧ ಮಾಡುವಾಗ ರಾವಣನು ತುಂಬಾ ಶಕ್ತಿಶಾಲಿಯಾಗಿದ್ದ ಕಾರಣ ರಾಮ ತುಂಬಾ ದಣಿಯುತ್ತಾರೆ. ಆಗ ಮಹರ್ಷಿ ಅಗಸ್ತ್ಯರು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವ ಮೂಲಕ ಸೂರ್ಯನನ್ನು ಆರಾಧಿಸಲು ಸಲಹೆ ನೀಡಿದರು. ಅದರಂತೆಯೇ ಶ್ರೀರಾಮನು ಸೂರ್ಯನನ್ನು ಆರಾಧಿಸಿದನು. ನಂತರ ಶ್ರೀ ರಾಮನ ದೇಹದಲ್ಲಿ ಹೊಸ ಶಕ್ತಿ ತುಂಬಿದ ಅನುಭವವಾಗಿ ರಾಮನು ರಾವಣನನ್ನು ಕೊಂದು ಯುದ್ಧದಲ್ಲಿ ವಿಜಯಶಾಲಿಯಾದನು.
ಶ್ರೀ ಕೃಷ್ಣನ ಮಗ ರೋಗಮುಕ್ತನಾದ
ಶ್ರೀಕೃಷ್ಣನ ಮಗನಾದ ಸಾಂಬನು ಬಹಳ ದುರಹಂಕಾರಿಯಾಗಿದ್ದನು. ಅವನು ಒಮ್ಮೆ ಋಷಿ ದೂರ್ವಾಸನನ್ನು ಅವಮಾನಿಸಿದನು. ಅದರ ನಂತರ ದೂರ್ವಾಸ ಋಷಿಯು ಅವನನ್ನು ಕುಷ್ಠರೋಗಿಯಾಗುವಂತೆ ಶಪಿಸಿದನು. ಆಗ ಶ್ರೀಕೃಷ್ಣನು ಸೂರ್ಯನನ್ನು ಪೂಜಿಸುವಂತೆ ಹೇಳಿದನು. ರಥಸಪ್ತಮಿಯ ದಿನದಂದು ಸೂರ್ಯನನ್ನು ಆರಾಧಿಸುವ ಮೂಲಕ ಸಾಂಬನು ಕುಷ್ಠರೋಗದಿಂದ ಮುಕ್ತನಾದನು. ಈ ಕಾರಣದಿಂದಾಗಿ ರಥ ಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ.
ಗೌರವಾನ್ವಿತ ಗ್ರಹ
ಜ್ಯೋತಿಷ್ಯದ ದೃಷ್ಟಿಕೋನದಿಂದ ಸೂರ್ಯನನ್ನು ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ. ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ ಮತ್ತು ಗೌರವವನ್ನು ನೀಡುವ ಗ್ರಹ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಸೂರ್ಯನು ಬಲಶಾಲಿಯಾಗಿದ್ದರೆ, ವ್ಯಕ್ತಿಯು ಸಾಕಷ್ಟು ಪ್ರಗತಿ ಹೊಂದುತ್ತಾನೆ, ಆರೋಗ್ಯವಂತನಾಗಿರುತ್ತಾನೆ ಮತ್ತು ಖ್ಯಾತಿಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
ಆಯುರ್ವೇದದಲ್ಲಿ ಸೂರ್ಯನ ಬೆಳಕು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ
ಆಯುರ್ವೇದದಲ್ಲೂ ಸೂರ್ಯನ ಮಹಿಮೆಯನ್ನು ಹೇಳಲಾಗಿದೆ. ಸೂರ್ಯನ ಬೆಳಕು ದೇಹಕ್ಕೆ ತುಂಬಾ ಪ್ರಯೋಜನಕಾರಿ. ನಮ್ಮ ದೇಹವು ಸೂರ್ಯನಿಂದ ವಿಟಮಿನ್ ಡಿ ಅನ್ನು ಪಡೆಯುತ್ತದೆ. ದೈಹಿಕ ದೌರ್ಬಲ್ಯ, ಮೂಳೆ ದೌರ್ಬಲ್ಯ ಮತ್ತು ಕೀಲು ನೋವಿನಂತಹ ಸಮಸ್ಯೆಗಳನ್ನು ವಿಟಮಿನ್ ಡಿ ಮೂಲಕ ದೂರ ಮಾಡಬಹುದು.
ಇದನ್ನೂ ಓದಿ: ಮಕ್ಕಳ ಅತಿಯಾದ ಮೊಬೈಲ್ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ