
ನಟಿ ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ನಿಡಿಮೋರು ಜೊತೆ ನಿನ್ನೆ (ಡಿಸೆಂಬರ್ 1) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೇ ಕೆಲವು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದ್ದು, ಒಂದಷ್ಟು ಫೋಟೋಗಳನ್ನು ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ನ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ಸಮಂತಾ, ರಾಜ್ ವಿವಾಹ ಬಹಳ ಸರಳವಾಗಿ ನಡೆದಿದೆ. ಸದ್ಯ ಇದೀಗ ಈ ವಿವಾಹದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಲಿಂಗ ಭೈರವಿ ದೇವಿ ದೇವಸ್ಥಾನವು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿದೆ. ಈ ದೇವಸ್ಥಾನವು ಸದ್ಗುರುಗಳ ಮಾರ್ಗದರ್ಶನದಲ್ಲಿ ಸ್ಥಾಪಿಸಲ್ಪಟ್ಟಿದ್ದು, ಇಲ್ಲಿ ದೇವಿಯ ಶಕ್ತಿಯ ರೂಪವನ್ನು ಆರಾಧಿಸಲಾಗುತ್ತದೆ. ಈ ದೇವಾಲಯದಲ್ಲಿ ಮಹಿಳಾ ಅರ್ಚಕರಿರುವುದು ಮತ್ತೊಂದು ವಿಶೇಷ. ಸಾಮಾನ್ಯವಾಗಿ ಲಿಂಗ ಎಂಬುದು ಪುರುಷ ದೇವರನ್ನು ಸೂಚಿಸುತ್ತದೆ, ಆದರೆ ಇಲ್ಲಿ ದೇವಿಯನ್ನು “ಲಿಂಗ” ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯವು ಪ್ರತಿದಿನ ಬೆಳಗ್ಗೆ 6:30 – 1:20 ಮತ್ತು ಸಂಜೆ 4:20 ರಿಂದ ರಾತ್ರಿ 8:20 ರ ವರೆಗೆ ತೆರೆದಿರುತ್ತದೆ. ಪ್ರತಿದಿನ ಮೂರು ಬಾರಿ ದೇವಿಗೆ ಅಭಿಷೇಕ, ಆರತಿ ಇಲ್ಲಿ ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಲಿಂಗ ಭೈರವಿ ದೈವಿಕ ಸ್ತ್ರೀತ್ವದ ಉಗ್ರ ಮತ್ತು ಕರುಣಾಳು ರೂಪ. ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳುವಂತೆ , ಈ ಎಂಟು ಅಡಿ ಶಕ್ತಿ ರೂಪವು ಬ್ರಹ್ಮಾಂಡದ ಸೃಜನಶೀಲ ಶಕ್ತಿಯನ್ನು ಸಾಕಾರಗೊಳಿಸುತ್ತದೆ, ದೇಹ, ಮನಸ್ಸು ಮತ್ತು ಶಕ್ತಿಯನ್ನು ಸ್ಥಿರಗೊಳಿಸುವ ಮೂಲಕ ಹುಟ್ಟಿನಿಂದ ಪರಮಾರ್ಥದವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ದೇವಿ ಭಕ್ತರನ್ನು ರಕ್ಷಿಸುತ್ತಾಳೆ.
ಇದನ್ನೂ ಓದಿ: ತುಂಬಾ ಸರಳವಾಗಿ ನಡೆಯಿತು ಸಮಂತಾ ಮದುವೆ: ಫೋಟೋ ಗ್ಯಾಲರಿ ನೋಡಿ..
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Tue, 2 December 25