ಪೂರ್ವಜರ ಮರಣ ತಿಥಿ ತಿಳಿದಿಲ್ಲವೇ? ಸರ್ವ ಪಿತೃ ಅಮಾವಾಸ್ಯೆಯಂದು ಶ್ರಾದ್ಧ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!
ಸನಾತನ ಧರ್ಮದಲ್ಲಿ ಪಿತೃ ಪಕ್ಷ ಅತ್ಯಂತ ಪವಿತ್ರ. ಈ ವರ್ಷ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ಪಿತೃ ಪಕ್ಷ. ಮರಣ ತಿಥಿ ತಿಳಿಯದ ಪೂರ್ವಜರಿಗೆ ಸರ್ವ ಪಿತೃ ಅಮಾವಾಸ್ಯೆಯಂದು (ಮಹಾಲಯ ಅಮಾವಾಸ್ಯೆ) ಶ್ರಾದ್ಧ, ತರ್ಪಣಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಅನ್ನದಾನ, ದ್ರವ್ಯದಾನ ಮತ್ತು ಅಶ್ವತ್ಥ ಮರಕ್ಕೆ ಪೂಜೆ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ನಂಬಿಕೆ. ಇದು ಕುಟುಂಬಕ್ಕೆ ಶಾಂತಿ, ಸಮೃದ್ಧಿ ತರುತ್ತದೆ.

ಸನಾತನ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಅತ್ಯಂತ ಪವಿತ್ರ ಹಾಗೂ ವಿಶೇಷವಾದ ಸ್ಥಾನವಿದೆ. ಈ ಸಮಯದಲ್ಲಿ ಶ್ರಾದ್ಧ, ತರ್ಪಣ ಮತ್ತು ಪಿಂಡಪ್ರದಾನಗಳಂತಹ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಪೂರ್ವಜರನ್ನು ಭಕ್ತಿಯಿಂದ ಸ್ಮರಿಸಲಾಗುತ್ತದೆ. 2026 ರಲ್ಲಿ, ಪಿತೃ ಪಕ್ಷವು ಸೆಪ್ಟೆಂಬರ್ 26 ರ ಶನಿವಾರದಂದು (ಭಾದ್ರಪದ ಪೌರ್ಣಮಿ) ಪ್ರಾರಂಭವಾಗಿ, ಅಕ್ಟೋಬರ್ 10 ರಂದು ಸರ್ವ ಪಿತೃ ಅಮಾವಾಸ್ಯೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
ಸಾಮಾನ್ಯವಾಗಿ ಪೂರ್ವಜರು ಮರಣಹೊಂದಿದ ತಿಥಿಯ ಆಧಾರದ ಮೇಲೆ ಆಯಾ ದಿನದಂದು ಶ್ರಾದ್ಧ ಕಾರ್ಯಗಳನ್ನು ಮಾಡಲಾಗುತ್ತದೆ. ಆದರೆ ಅನೇಕರಿಗೆ ತಮ್ಮ ಪೂರ್ವಜರು ಯಾವ ತಿಥಿಯಂದು ನಿಧನರಾದರು ಎಂಬ ನಿಖರ ವಿವರ ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಶ್ರಾದ್ಧವನ್ನು ಎಂದು ಮಾಡಬೇಕು ಎಂಬ ಅನುಮಾನ ಉಂಟಾಗುವುದು ಸಹಜ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಮರಣ ತಿಥಿ ತಿಳಿಯದವರಿಗೆ ಶ್ರಾದ್ಧ ನೆರವೇರಿಸಲು ಒಂದು ವಿಶೇಷ ದಿನವಿದೆ.
ಮರಣ ತಿಥಿ ತಿಳಿದಿಲ್ಲದಿದ್ದರೆ ಶ್ರಾದ್ಧವನ್ನು ಯಾವಾಗ ಮಾಡಬೇಕು?
ಪೂರ್ವಜರ ಮರಣದ ದಿನಾಂಕ ಅಥವಾ ತಿಥಿ ತಿಳಿದಿಲ್ಲದಿದ್ದರೆ, ಪಿತೃ ಪಕ್ಷದ ಕೊನೆಯ ದಿನವಾದ ಸರ್ವ ಪಿತೃ ಅಮಾವಾಸ್ಯೆ (ಮಹಾಲಯ ಅಮಾವಾಸ್ಯೆ) ಯಂದು ಅವರ ಹೆಸರಿನಲ್ಲಿ ಶ್ರಾದ್ಧ ಮತ್ತು ತರ್ಪಣ ಮಾಡುವುದು ಶಾಸ್ತ್ರೋಕ್ತ ಸಂಪ್ರದಾಯವಾಗಿದೆ.
ಅಷ್ಟೇ ಅಲ್ಲದೆ, ಪಿತೃ ಪಕ್ಷದ ನಿರ್ದಿಷ್ಟ ತಿಥಿಯಂದು ಕಾರಣಾಂತರಗಳಿಂದ ಶ್ರಾದ್ಧ ಮಾಡಲು ಸಾಧ್ಯವಾಗದಿದ್ದರೂ ಸಹ, ಈ ಮಹಾಲಯ ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ಸ್ಮರಿಸಿ ತರ್ಪಣ ಅರ್ಪಿಸಬಹುದು. ಕುಟುಂಬದಲ್ಲಿ ಮರೆತುಹೋದ ಅಥವಾ ಯಾರ ತಿಥಿ ತಿಳಿದಿಲ್ಲವೋ ಅಂತಹ ಎಲ್ಲಾ ಪೂರ್ವಜ ದೇವತೆಗಳನ್ನು ಸ್ಮರಿಸಿಕೊಳ್ಳಲು ಈ ದಿನವನ್ನು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?
ಸರ್ವ ಪಿತೃ ಅಮಾವಾಸ್ಯೆಯಂದು ಅನ್ನದಾನ ಮತ್ತು ದಾನದ ಮಹತ್ವ:
ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಸಾಧ್ಯವಾದಷ್ಟು ಅನ್ನದಾನ ಮತ್ತು ದ್ರವ್ಯದಾನ ಮಾಡುವುದು ಪುಣ್ಯದಾಯಕ ಎಂಬ ನಂಬಿಕೆಯಿದೆ:
- ಬ್ರಾಹ್ಮಣ ಭೋಜನ ಮತ್ತು ದಕ್ಷಿಣೆ: ಪುರೋಹಿತರು ಹಾಗೂ ಅಗತ್ಯವಿರುವವರನ್ನು ಗೌರವಪೂರ್ವಕವಾಗಿ ಆಹ್ವಾನಿಸಿ ಭೋಜನ ಕಲ್ಪಿಸಿ, ವಸ್ತ್ರ, ಹಣ್ಣು-ಹಂಪಲು ಮತ್ತು ದಕ್ಷಿಣೆಯನ್ನು ಅರ್ಪಿಸಲಾಗುತ್ತದೆ.
- ಪಂಚಬಲಿ ಸೇವೆ: ಸಾಂಪ್ರದಾಯಿಕವಾಗಿ ಆಹಾರದ ಒಂದು ಭಾಗವನ್ನು ಸೃಷ್ಟಿಯ ಕ್ರಿಮಿಕೀಟ ಹಾಗೂ ಪ್ರಾಣಿಗಳಿಗೆ ಅರ್ಪಿಸಲಾಗುತ್ತದೆ. ಹಸು, ನಾಯಿ, ಕಾಗೆ ಮತ್ತು ಇರುವೆಗಳಿಗೆ ಆಹಾರ ನೀಡುವುದು ಈ ಪಂಚಬಲಿಯ ಮುಖ್ಯ ಭಾಗವಾಗಿದೆ.
- ಪೂರ್ವಜರ ನೆನಪಿನಲ್ಲಿ ಮಾಡುವ ಈ ದಾನ-ಧರ್ಮಗಳಿಂದ ಪಿತೃ ದೇವತೆಗಳು ಪ್ರಸನ್ನರಾಗಿ, ಕುಟುಂಬಕ್ಕೆ ಶಾಂತಿ, ನೆಮ್ಮದಿ ಮತ್ತು ಸಂಪತ್ತನ್ನು ಕರುಣಿಸುತ್ತಾರೆ ಎಂಬುದು ನಂಬಿಕೆ.
ಅಶ್ವತ್ಥ (ರವಿ) ಮರಕ್ಕೆ ಪೂಜೆ ಮತ್ತು ಜಲ ತರ್ಪಣ:
ಸರ್ವ ಪಿತೃ ಅಮಾವಾಸ್ಯೆಯಂದು ಅಶ್ವತ್ಥ (ರವಿ) ಮರಕ್ಕೆ ನೀರು ಅರ್ಪಿಸುವುದು ಅತ್ಯಂತ ಪವಿತ್ರವಾದ ಆಚಾರ. ಒಂದು ಪಾತ್ರೆಯಲ್ಲಿ ನೀರು ಅಥವಾ ಹಸಿ ಹಾಲನ್ನು ತೆಗೆದುಕೊಂಡು, ಅದಕ್ಕೆ ಕಪ್ಪು ಎಳ್ಳು, ಅಕ್ಕಿ ಮತ್ತು ಸಲ್ಪ ಸಕ್ಕರೆಯನ್ನು ಬೆರೆಸಿ ಅಶ್ವತ್ಥ ಮರದ ಬೇರಿಗೆ ಅರ್ಪಿಸಲಾಗುತ್ತದೆ. ನಂತರ ಮನಸ್ಸಿನಲ್ಲಿಯೇ ಪೂರ್ವಜರನ್ನು ಸ್ಮರಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ.
ಗಮನಿಸಿ: ಪೂರ್ವಜರ ಮರಣದ ದಿನಾಂಕ ತಿಳಿದಿಲ್ಲವೆಂದು ಚಿಂತಿಸುವ ಅಗತ್ಯವಿಲ್ಲ. ಸರ್ವ ಪಿತೃ ಅಮಾವಾಸ್ಯೆಯಂದು ಭಕ್ತಿಪೂರ್ವಕವಾಗಿ ಅವರನ್ನು ಸ್ಮರಿಸಿ, ತರ್ಪಣ, ದಾನ ಮತ್ತು ಅನ್ನದಾನಗಳನ್ನು ಮಾಡುವ ಮೂಲಕ ಅವರಿಗೆ ನಿಮ್ಮ ಕೃತಜ್ಞತೆ ಹಾಗೂ ಗೌರವವನ್ನು ಸಲ್ಲಿಸಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




