Shani Transit 2022; ಶನಿ (Saturm) ಗ್ರಹವು ಏಪ್ರಿಲ್ 28ರಂದು ಮಕರದಿಂದ ಕುಂಭ ರಾಶಿಗೆ ಸಂಚರಿಸಿದೆ. 2022ರ ಜುಲೈ 11ನೇ ತಾರೀಕಿನ ವರೆಗೆ ಕುಂಭದಲ್ಲಿ ಇರುತ್ತದೆ. ಆ ನಂತರ ಮತ್ತೆ ಮಕರ ರಾಶಿಗೆ ವಕ್ರೀ ಪ್ರವೇಶ ಆಗಲಿದ್ದು, ಜನವರಿ 18, 2023ರಿಂದ ಮಾರ್ಚ್ 29, 2025ರ ವರೆಗೆ ಮತ್ತೆ ಕುಂಭ ರಾಶಿಯಲ್ಲಿ ಸಂಚರಿಸುತ್ತದೆ. ಕುಂಭ ರಾಶಿಯಲ್ಲಿ ಸಂಚರಿಸುವುದರಿಂದ ಎಲ್ಲ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ. ಹೆತ್ತವರು, ಒಡಹುಟ್ಟಿದವರು, ಹಣ, ಕುಟುಂಬ, ಶಿಕ್ಷಣ, ವೈವಾಹಿಕ ಜೀವನ, ಅದೃಷ್ಟ, ವ್ಯಾಪಾರ, ಕರ್ಮ, ಲಾಭ ಮತ್ತು ಖರ್ಚು ಇವೇ ಮುಂತಾದ ಕ್ಷೇತ್ರಗಳಲ್ಲಿ ಶನಿಯು ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ. ಅಂದ ಹಾಗೆ, ಶನಿಯು ಪಾಪ ಗ್ರಹ. ಆದರೆ ಇದು ನ್ಯಾಯದ ಕಾರಕ ಗ್ರಹವಾಗಿದ್ದು, ಹಿಂದಿನ ಕರ್ಮಗಳ ಫಲಿತಾಂಶವನ್ನು ನೀಡುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ ಅಥವಾ ಮಾಡುತ್ತಿದ್ದರೆ ಖಂಡಿತವಾಗಿಯೂ ಶುಭ ಫಲಿತಾಂಶಗಳು ಸಿಗುತ್ತವೆ. ಆದರೆ ಪಾಪಗಳನ್ನು ಮಾಡಿದಲ್ಲಿ ಅದಕ್ಕೆ ತಕ್ಕ ಫಲ. ಕುಂಭ ರಾಶಿಯಲ್ಲಿ ಶನಿ ಸಂಚರಿಸುವಾಗ ದ್ವಾದಶ ರಾಶಿಗಳ ಮೇಲಿನ ಪರಿಣಾಮವನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.
ಮೇಷ; ಮೇಷ ರಾಶಿಗೆ ಶನಿಯು ಹನ್ನೊಂದನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದು, ಅದು ಎರಡೂವರೆ ವರ್ಷಗಳ ಕಾಲ ನಿಮ್ಮ ಲಾಭ ಸ್ಥಾನದಲ್ಲಿ ಸಂಚರಿಸುತ್ತದೆ. ಆದ್ದರಿಂದ ನಿಮ್ಮ ಭವಿಷ್ಯಕ್ಕಾಗಿ ಮಾಡಿದ ಯೋಜನೆಗಳಲ್ಲಿ ಯಶಸ್ವಿಯಾಗಲು ಮತ್ತು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ನೀವು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಧನಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡರೆ ಅದು ನಿಮ್ಮಲ್ಲಿನ ಬೆಳವಣಿಗೆಯನ್ನು ವಿಸ್ತರಿಸುತ್ತದೆ. ಆದರೆ ಈಗ ನೀವು ಎಷ್ಟು ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟಂಥ ವಿಚಾರ. ಶನಿಯ ಸಂಚಾರದಿಂದಾಗಿ ಆದಾಯ ಮತ್ತು ಲಾಭದ ಹೊಸ ಬಾಗಿಲು ತೆರೆಯುವ ಎಲ್ಲ ಸಾಧ್ಯತೆಗಳಿವೆ. ಈಗ ನೀವು ಅದಕ್ಕಾಗಿ ಎಷ್ಟು ಪ್ರಯತ್ನ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಆರ್ಥಿಕವಾಗಿಯೂ ಬಲಶಾಲಿಯಾಗುತ್ತೀರಿ. ಶನಿಯ ಸಂಚಾರವು ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಸಂತೋಷವನ್ನು ವಾಸ್ತವಕ್ಕೆ ತಿರುಗಿಸಲು ಸಹಾಯಕವಾಗಿರುತ್ತದೆ.
ವೃಷಭ : ರಾಶಿ ವೃಷಭ ರಾಶಿಗೆ ಶನಿಯು ಅದೃಷ್ಟ ಮತ್ತು ಕರ್ಮ ಸ್ಥಾನದ ಅಧಿಪತಿಯಾಗಿದ್ದು, ಕರ್ಮ ಸ್ಥಾನದಲ್ಲೇ ಸಂಚಾರ ಮಾಡಲಿದೆ. ಹತ್ತನೇ ಮನೆಯಲ್ಲಿ ಶನಿಯ ಸಂಚಾರವು ಈ ರಾಶಿಯವರಿಗೆ ಮಂಗಳಕರವಾಗಿದೆ ಮತ್ತು ಭವಿಷ್ಯದ ಯೋಜನೆಗಳಲ್ಲಿ ಯಶಸ್ಸನ್ನು ನೀಡುತ್ತದೆ. ವೃತ್ತಿಯ ಸ್ಥಾನದಲ್ಲಿ ಶನಿ ಸಂಚಾರದಿಂದ ಸುಖ-ದುಃಖ, ಲಾಭ-ನಷ್ಟ, ಲಾಭದ ಜೊತೆಗೆ ಖರ್ಚು-ವೆಚ್ಚಗಳನ್ನು ಎಲ್ಲಿ ವಿನಿಯೋಗಿಸಬೇಕು ಎಂಬುದನ್ನೂ ಯೋಜಿಸಲಾಗುವುದು. ಕೆಲಸದಲ್ಲಿ ಯಶಸ್ಸು ಇರುತ್ತದೆ. ಆದರೆ ಸ್ವಲ್ಪ ವಿಳಂಬ ಅಥವಾ ಹೋರಾಟದ ನಂತರವಷ್ಟೇ ಸಾಧ್ಯವಾಗುತ್ತದೆ. ನೀವು ಹೊಸ ಮನೆ ಮತ್ತು ವಾಹನ ಬಯಸಿದರೆ ಅದನ್ನು ಖಂಡಿತವಾಗಿ ಪಡೆಯುತ್ತೀರಿ. ಆದರೆ ವೈವಾಹಿಕ ಜೀವನ ಮತ್ತು ಕುಟುಂಬದ ನಡುವೆ ತೊಂದರೆ ಇರುತ್ತದೆ. ಪೋಷಕರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಸಾಧ್ಯತೆಯೂ ಇರುತ್ತದೆ. ವೃತ್ತಿಪರರು ಮತ್ತು ವ್ಯಾಪಾರಸ್ಥರು ಪ್ರಯೋಜನ ಪಡೆಯುತ್ತಾರೆ. ಆದರೆ ಅದಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ. ತರಾತುರಿಯಲ್ಲಿ ಉದ್ಯೋಗ ಬದಲಾವಣೆಯ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಮಾನಸಿಕ ನೋವು ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಡೆತಡೆಗಳು ಉಂಟಾಗಬಹುದು. ಕಣ್ಣಿನ ಸಮಸ್ಯೆಗಳು ಹೆಚ್ಚಾಗಬಹುದು.
ಮಿಥುನ: ಮಿಥುನ ರಾಶಿಗೆ ಶನಿಯು ಒಂಬತ್ತನೇ (ಅದೃಷ್ಟ) ಮತ್ತು ಎಂಟನೇ (ಆಯುಷ್ಯ) ಮನೆಯ ಅಧಿಪತಿಯಾಗಿ ಅದೃಷ್ಟದ ಮನೆಯಲ್ಲಿ ಸಾಗಲಿದೆ. ಈ ಸಮಯವು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮಲ್ಲಿ ಕೋಪ ಮತ್ತು ಅಹಂಕಾರ ಹೆಚ್ಚಾಗುವ ಸಾಧ್ಯತೆ ಇದೆ. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸ್ನೇಹಿತರ ಅಸ್ವಾಭಾವಿಕ ವರ್ತನೆಯಿಂದ ಮಾನಸಿಕ ತೊಂದರೆಗೆ ಒಳಗಾಗುತ್ತೀರಿ. ಸಹೋದರನೊಂದಿಗೆ ವಾದ-ವಿವಾದ ಉಂಟಾಗುವ ಸಾಧ್ಯತೆಯಿದೆ, ಆದ್ದರಿಂದ ಅದನ್ನು ತಪ್ಪಿಸಲು ಪ್ರಯತ್ನಿಸಿ. ನಿಮ್ಮ ನಕಾರಾತ್ಮಕ ಆಲೋಚನೆಗಳಿಂದಾಗಿ ಪೋಷಕರೊಂದಿಗೂ ಕಲಹ ಉಂಟಾಗಬಹುದು, ಆದ್ದರಿಂದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಯಾವುದೇ ವಿಚಾರಣೆ ನಡೆಯುತ್ತಿದ್ದರೆ ಅದು ವಿಳಂಬವಾಗುತ್ತದೆ ಅಥವಾ ನಿಮ್ಮ ವಿರುದ್ಧ ತೀರ್ಪು ಬರುತ್ತದೆ. ನಿಮ್ಮ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದಾಗಿ ವ್ಯಾಪಾರದಲ್ಲಿ ನಷ್ಟವಾಗಬಹುದು. ನೀವು ಸ್ಪರ್ಧೆಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆದರೆ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ. ನಿಮಗೆ ತಕ್ಷಣಕ್ಕೆ ವಾಸಿಯಾಗದ ರೋಗಗಳು ಬರಬಹುದು, ಕೂಡಲೇ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ, ಸೋಮಾರಿತನ ಬೇಡ.
ಕರ್ಕಾಟಕ : ಕರ್ಕಾಟಕ ರಾಶಿಯವರಿಗೆ ಶನಿಯು ಏಳನೇ ಮತ್ತು ಎಂಟನೇ (ಮರಣ) ಮನೆಯ ಅಧಿಪತಿಯಾಗಿದ್ದು, ಎಂಟನೇ ಮನೆಯಲ್ಲಿ ಸಂಚರಿಸಲಿದೆ. ಈ ಸಂಚಾರವು ವ್ಯಕ್ತಿಯ ವೃತ್ತಿ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಕೆಲಸ, ಹಣ ಮತ್ತು ಬುದ್ಧಿವಂತಿಕೆಯಲ್ಲಿನ ಪರಿಣಾಮ ಕಾಣುವ ಸಾಧ್ಯತೆ ಇದ್ದು, ಇದು ಕೆಲಸದಲ್ಲಿ ಹಠಾತ್ ಬದಲಾವಣೆಗಳನ್ನು ಉಂಟುಮಾಡಬಹುದು. ನಿಮ್ಮ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಅಸ್ಥಿರತೆಯನ್ನು ತರಬಹುದು. ಹಠಾತ್ ಹಣದ ನಷ್ಟದಿಂದಾಗಿ ಒತ್ತಡಕ್ಕೆ ಒಳಗಾಗುತ್ತೀರಿ. ದಾಂಪತ್ಯ ಜೀವನದಲ್ಲಿ ಅತೃಪ್ತಿ ಇರುತ್ತದೆ. ವ್ಯಾಪಾರದಲ್ಲಿ ನಷ್ಟ ಮತ್ತು ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳ ಸಾಧ್ಯತೆಯಿದೆ. ಈಗಾಗಲೇ ಯಾವುದೇ ವ್ಯಾಜ್ಯ ನಡೆಯುತ್ತಿದ್ದರೆ ಅಂತಿಮ ನಿರ್ಧಾರ ನಿಮ್ಮ ಪರವಾಗಿ ಬರಬಹುದು. ನೀವು ಕೆಲಸ ಮಾಡುತ್ತಿದ್ದರೆ ಉದ್ಯೋಗದಲ್ಲಿ ಬದಲಾವಣೆ ಇರುತ್ತದೆ. ಹೊಸ ಸಂಶೋಧನೆಗಳು ಅಥವಾ ಆವಿಷ್ಕಾರಗಳ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕವಾಗಿ ನೀವು ಸ್ವಲ್ಪ ಕಷ್ಟಪಡಬೇಕಾಗಬಹುದು. ಆದರೆ ಅದರ ಫಲಿತಾಂಶ ಭವಿಷ್ಯದ ಮೈಲುಗಲ್ಲು ಎಂದು ಸಾಬೀತುಪಡಿಸುತ್ತದೆ. ಕಣ್ಣು, ಕಿವಿ, ಮೂಗು, ಗಂಟಲಿಗೆ ಸಂಬಂಧಿಸಿದ ಯಾವುದೇ ಕಾಯಿಲೆ ಎದುರಾಗಬಹುದು. ಹೃದ್ರೋಗ ಸಹ ಕಾಡಬಹುದು.
ಸಿಂಹ ; ಸಿಂಹ ರಾಶಿಗೆ ಶನಿಯು ಏಳನೇ ಮನೆ (ಕಳತ್ರ) ಮತ್ತು ಆರನೇ ಮನೆಗೆ (ಶತ್ರು, ರೋಗ, ಸಾಲ) ಅಧಿಪತಿಯಾಗುತ್ತಾನೆ. ಮತ್ತು ಈ ಅವಧಿಯಲ್ಲಿ ಏಳನೇ ಮನೆಯಲ್ಲಿ ಸಂಚರಿಸಲಿದ್ದು, ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. ದಂಪತಿ ಮಧ್ಯೆ ಅಂತರ ಸೃಷ್ಟಿಯಾಗುತ್ತದೆ. ಇನ್ನು ಸಂಗಾತಿಯ ಸಹಾಯದಿಂದ ಅದೃಷ್ಟವು ಹೆಚ್ಚಾಗುತ್ತದೆ. ಯಾವುದೇ ಕೆಲಸದಲ್ಲಿ ಮೊದಲ ಪ್ರಯತ್ನದಲ್ಲಿ ಯಶಸ್ಸನ್ನು ಪಡೆಯುವುದು ಅನುಮಾನ. ಆದ್ದರಿಂದ ಪ್ರತಿ ಕೆಲಸದಲ್ಲಿಯೂ ಮೊದಲಿಗೆ ಕೆಲವು ಅಡಚಣೆಗಳಿರುತ್ತವೆ. ಆ ನಂತರ ಯಶಸ್ಸನ್ನು ಪಡೆಯುತ್ತೀರಿ. ಆದ್ದರಿಂದ ನಿಮ್ಮ ಕೆಲಸದ ಕಡೆಗೆ ಶಕ್ತಿಯನ್ನು ಕಾಪಾಡಿಕೊಳ್ಳಬೇಕು. ಮಹಿಳೆಯರನ್ನು ಅಗೌರವಿಸುವುದು ನಿಮಗೆ ಸಮಸ್ಯೆಗಳನ್ನು ಒಡ್ಡುತ್ತದೆ. ಶನಿಯ ಸಂಚಾರವು ದಾಂಪತ್ಯದಲ್ಲಿ ಅಡೆತಡೆಗಳನ್ನು ಉಂಟು ಮಾಡುತ್ತದೆ. ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರ ನಡೆಯುತ್ತಿದ್ದರೆ ಇಬ್ಬರ ನಡುವೆ ವೈಮನಸ್ಯ ಉಂಟಾಗಬಹುದು, ಇದರಿಂದಾಗಿ ಮಾನಸಿಕ ಒತ್ತಡ ಉಂಟಾಗುತ್ತದೆ. ಸಂಗಾತಿಯ ಮತ್ತು ತಂದೆಯ ಆರೋಗ್ಯವು ಹದಗೆಡಬಹುದು. ಇದರಿಂದ ನೀವು ಚಿಂತಿತರಾಗುತ್ತೀರಿ. ಷೇರು ಮಾರುಕಟ್ಟೆ ಕೆಲಸ ಮಾಡುತ್ತಿದ್ದರೆ ಅದನ್ನು ಬುದ್ಧಿವಂತಿಕೆಯಿಂದ ಮಾಡಿ ಮತ್ತು ತರಾತುರಿಯಲ್ಲಿ ಹೂಡಿಕೆ ಮಾಡಬೇಡಿ.
ಕನ್ಯಾ : ಕನ್ಯಾ ರಾಶಿಗೆ ಶನಿಯು ಆರನೇ (ಶತ್ರು, ರೋಗ, ಸಾಲ) ಮತ್ತು ಐದನೇ (ಮಕ್ಕಳು, ಶಿಕ್ಷಣ, ಪೂರ್ವ ಪುಣ್ಯ) ಮನೆ ಅಧಿಪತಿ. ಈ ಅವಧಿಯಲ್ಲಿ ಆರನೇ ಮನೆಯಲ್ಲಿ ಸಂಚರಿಸುತ್ತದೆ. ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಶನಿಯ ಸಂಚಾರದಿಂದ ನಿಮ್ಮ ಶತ್ರುವನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ. ವಿದೇಶ ಪ್ರವಾಸದಲ್ಲಿ ಆಸಕ್ತಿ ಹೊಂದಿದ್ದರೆ ಪ್ರಯತ್ನಗಳನ್ನು ತೀವ್ರಗೊಳಿಸಬೇಕು, ಯಶಸ್ಸನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಧಾರ್ಮಿಕ ಪ್ರವಾಸಗಳ ಯೋಗ ಇದೆ. ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಬೇಕು. ಸ್ಥಳ ಬದಲಾವಣೆ ಆಗಬಹುದು. ಸಾಲ ಪಡೆಯುವ ಸಾಧ್ಯತೆ ಇದ್ದು, ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬಹುದು ಅಥವಾ ಬಳಸಬಹುದು. ವೈವಾಹಿಕ ಜೀವನದಲ್ಲಿ ಸಂಬಂಧವು ಈಗಾಗಲೇ ಕೆಟ್ಟದಾಗಿದ್ದರೆ ಮತ್ತು ನೀವು ವಿಚ್ಛೇದನ ಪಡೆಯಲು ಬಯಸಿದರೆ ಸಂಗಾತಿಯಿಂದ ವಿಚ್ಛೇದನದ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಕಿರಿಯ ಸಹೋದರರೊಂದಿಗೆ ವಿವಾದಗಳು ಆಗಬಹುದು. ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಬಹುದು. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳ ಬೆಂಬಲ ಸಿಗದಿರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ತೊಂದರೆ ಉಂಟಾಗಬಹುದು. ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ, ಕೆಲಸದ ಸ್ಥಳದಲ್ಲಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕದನ ಆಗಬಹುದು. ನಿಮಗೆ ಆರೋಗ್ಯ ಸಮಸ್ಯೆಗಳಿರುತ್ತವೆ. ದೀರ್ಘಕಾಲ ಉಳಿಯುವ ಕೆಲವು ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಮೊಣಕಾಲು ನೋವು ಹೆಚ್ಚಾಗಬಹುದು.
ತುಲಾ ; ತುಲಾ ರಾಶಿಗೆ ಶನಿಯು ನಾಲ್ಕನೇ (ಆಸ್ತಿ, ಸ್ವಂತ ಮನೆ) ಮತ್ತು ಐದನೇ (ಮಕ್ಕಳು, ಶಿಕ್ಷಣ, ಪೂರ್ವ ಪುಣ್ಯ) ಮನೆಯ ಅಧಿಪತಿಯಾಗಿದ್ದು, ಐದನೇ ಮನೆಯಲ್ಲಿ ಸಂಚರಿಸಲಿದೆ. ನಿಮ್ಮ ಮಕ್ಕಳ ಸ್ವಭಾವವು ಅಸಭ್ಯ ಮತ್ತು ಸೊಕ್ಕಿನಿಂದ ಕೂಡಿರಲಿದೆ. ಜೀವನ ಸಂಗಾತಿಯಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ನಿಮ್ಮ ಹಿರಿಯ ಸಹೋದರರೊಂದಿಗಿನ ಸಂಬಂಧಗಳು ಹದಗೆಡಬಹುದು. ಆದಾಯ ಕಡಿಮೆಯಾದರೂ ಮನಸ್ಸಿನಲ್ಲಿ ತೃಪ್ತಿ ಇರುತ್ತದೆ. ಶನಿಯ ಸಂಚಾರವು ಪಾಲುದಾರಿಕೆ ವ್ಯವಹಾರಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದರೆ ನಿಮ್ಮ ಸಂಗಾತಿಯನ್ನು ಕುರುಡಾಗಿ ನಂಬಬೇಡಿ. ಈ ಸಮಯದಲ್ಲಿ ನೀವು ಯಾವಾಗಲೂ ಧನದ ಲಾಭಗಳ ಬಗ್ಗೆ ಚಿಂತಿಸುತ್ತಿರುತ್ತೀರಿ. ವಿದ್ಯಾರ್ಥಿಗಳು ಸೋಮಾರಿತನದಿಂದ ಅಧ್ಯಯನ ಮಾಡಲು ಬಯಸುವುದಿಲ್ಲ. ಇದು ಉತ್ತಮ ಪರೀಕ್ಷೆಯ ಫಲಿತಾಂಶಗಳಿಗೆ ಅಡ್ಡಿಯಾಗುತ್ತದೆ. ಮಕ್ಕಳಿಂದ ಬಳಲುವ ಸಂಭವವಿದ್ದು, ಗರ್ಭಿಣಿಯರು ಸಹ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಮೊಣಕಾಲು ನೋವಿನ ದೂರುಗಳು ಇರಬಹುದು. ಇನ್ನು ಪುರುಷರು ಹೆಂಡತಿಯ ಆರೋಗ್ಯದ ಬಗ್ಗೆ ಚಿಂತೆಗೆ ಗುರಿ ಆಗಬಹುದು. ಮಾನಸಿಕ ಮತ್ತು ಬೌದ್ಧಿಕ ತೊಂದರೆಯಿಂದ ಬಳಲಬಹುದು.
ವೃಶ್ಚಿಕ; ವೃಶ್ಚಿಕ ರಾಶಿಯವರಿಗೆ ಶನಿಯು ನಾಲ್ಕನೇ (ಆಸ್ತಿ, ಸ್ವಂತ ಮನೆ, ತಾಯಿ, ಸುಖ) ಮತ್ತು ಮೂರನೇ (ಒಡಹುಟ್ಟಿದವರನ್ನು ಸೂಚಿಸುವ) ಮನೆಯ ಅಧಿಪತಿಯಾಗಿದ್ದು, ಇದು ನಾಲ್ಕನೇ ಮನೆಯಲ್ಲಿ ಸಂಚರಿಸುತ್ತದೆ. ಶನಿಯು ಮೂರನೇ ಮನೆಯ ಅಧಿಪತಿಯಾಗಿದ್ದು, ನಾಲ್ಕನೇ ಮನೆಯಲ್ಲಿ ಸಂಚರಿಸಲಿದೆ. ಈ ಕಾರಣದಿಂದಾಗಿ ಮನೆಯಿಂದ ದೂರ ಪ್ರಯಾಣಿಸಬಹುದು ಮತ್ತು ಕುಟುಂಬದೊಂದಿಗೆ ದೂರ ಇರಬೇಕಾಗಬಹುದು. ಇನ್ನು ಶನಿ ಸಂಚರಿಸುವ ಮನೆಯು ತಾಯಿ, ಸಂಸಾರ, ವಾಹನ, ಚರ ಮತ್ತು ಸ್ಥಿರ ಆಸ್ತಿ ಇತ್ಯಾದಿಗಳ ಸುಖಕ್ಕೆ ಸಂಬಂಧಿಸಿದೆ. ಇದರಿಂದಾಗಿ ಆಸ್ತಿ ವಿಚಾರವಾಗಿ ಸಹೋದರನೊಂದಿಗೆ ಜಗಳ, ಕಲಹ ಉಂಟಾಗಿ ಮಾನಸಿಕ ನೋವು ಉಂಟಾಗುತ್ತದೆ. ನಿಮ್ಮ ಹೆತ್ತವರಿಗೆ ಜವಾಬ್ದಾರಿಯನ್ನು ಪೂರೈಸುವಲ್ಲಿ ಅನನುಕೂಲತೆ ಅನುಭವಿಸುವಿರಿ. ಹೊಸ ಮನೆ ಖರೀದಿಸಲು ಅಥವಾ ಮನೆ ನವೀಕರಣಕ್ಕಾಗಿ ಸಾಲವನ್ನು ತೆಗೆದುಕೊಳ್ಳಬಹುದು. ಭೂಮಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಅದರಲ್ಲಿ ಯಶಸ್ಸನ್ನು ಪಡೆಯಬಹುದು. ವಾಹನ ಅಪಘಾತವಾಗುವ ಸಂಭವವಿದ್ದು, ಜಾಗರೂಕತೆಯಿಂದ ವಾಹನ ಚಲಾಯಿಸಿ. ಜೊತೆಗೆ ರಸ್ತೆಯಲ್ಲಿ ವೇಗವಾದ ಚಾಲನೆ ತಪ್ಪಿಸಿ. ಹಣಕಾಸಿನ ವಿಚಾರದಲ್ಲಿ ಏರುಪೇರು ಉಂಟಾಗುವುದು. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳು ಅಥವಾ ಸಂದರ್ಶನಗಳ ಮೂಲಕ ನೀವು ಯಶಸ್ಸನ್ನು ಪಡೆಯುತ್ತೀರಿ. ನೀವು ಈಗಾಗಲೇ ಹೃದ್ರೋಗಿಯಾಗಿದ್ದರೆ ಕುಟುಂಬ ವೈದ್ಯರೊಂದಿಗೆ ಸಂಪರ್ಕದಲ್ಲಿರುವುದು ಉತ್ತಮ.
ಧನು: ಧನು ರಾಶಿಗೆ ಶನಿಯು ಎರಡನೆಯ (ಮಾತು, ಹಣ, ಕುಟುಂಬ ಇತ್ಯಾದಿ) ಮತ್ತು ಮೂರನೇ ಮನೆಗೆ (ಕಠಿಣ ಕೆಲಸ, ಸಹೋದರ, ಪ್ರಯಾಣ) ಅಧಿಪತಿಯಾಗಿದ್ದು, ಮೂರನೇ ಸ್ಥಾನದಲ್ಲಿ ಸಂಚರಿಸುತ್ತದೆ. ಇದರಿಂದಾಗಿ ಕಠಿಣ ಪರಿಶ್ರಮ ಮತ್ತು ಕೌಶಲದಿಂದ ಅದೃಷ್ಟವು ಹೆಚ್ಚಾಗುತ್ತದೆ. ಕಠಿಣ ಪರಿಶ್ರಮದಿಂದ ಚರ ಮತ್ತು ಸ್ಥಿರ ಆಸ್ತಿಯಲ್ಲಿ ಹೆಚ್ಚಳವಾಗುತ್ತದೆ. ಮಕ್ಕಳ ಸಂತೋಷದಲ್ಲಿ ಇಳಿಕೆಯಾಗಬಹುದು. ನೀವು ಹಂಚಿಕೆಯ ಕೆಲಸವನ್ನು ಮಾಡದಿದ್ದರೆ ಉತ್ತಮ. ಪ್ರವಾಸ ಮಾಡುವ ಯೋಗ ಇದೆ. ಮನೆ ವರ್ಗಾವಣೆ ಸಾಧ್ಯ. ವ್ಯಾಪಾರದ ವಿಷಯದಲ್ಲಿ ಶನಿಯ ಸಂಚಾರವು ನಿಮಗೆ ಸಾಮಾನ್ಯ ಫಲಿತಾಂಶಗಳನ್ನು ನೀಡುತ್ತದೆ. ನೀವು ಆಸ್ತಿ ವ್ಯವಹಾರ ಮಾಡುತ್ತಿದ್ದರೆ ಮತ್ತು ಆಸ್ತಿಯಲ್ಲಿ ಹೂಡಿಕೆ ಮಾಡುತ್ತಿದ್ದರೆ ನೀವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಲಾಭವನ್ನು ಪಡೆಯುತ್ತೀರಿ. ಆದರೆ ಸಹೋದರರ ಜತೆ ಮಾತುಕತೆ ನಡೆಸುವಾಗ ಎಚ್ಚರ ಇರಲಿ. ಪಿತ್ರಾರ್ಜಿತ ಆಸ್ತಿ ಬರಬೇಕಾಗಿದ್ದು, ಅದನ್ನು ಈಗ ಹಂಚಿಕೆ ಮಾಡಬಹುದು ಎಂದೆನಿಸಿದಲ್ಲಿ ತೀರಾ ಭಾವನಾತ್ಮಕವಾಗಿ ಯೋಚಿಸಿ, ನಿರ್ಧಾರ ತೆಗೆದುಕೊಳ್ಳುವ ಬದಲು ಹಿತೈಷಿಗಳ ಸಲಹೆ-ಸೂಚನೆಗಳನ್ನು ಸಹ ಪಡೆದುಕೊಳ್ಳಿ.
ಮಕರ : ಮಕರ ರಾಶಿಗೆ ಶನಿಯು ಲಗ್ನ (ತನು) ಮತ್ತು ಎರಡನೇ ಮನೆಯ (ವಾಕ್-ಕುಟುಂಬ, ಹಣ) ಅಧಿಪತಿ. ಆದ್ದರಿಂದ ನಿಮ್ಮ ಮಾತು ಸೊಕ್ಕಿನಿಂದ ಕೂಡಿರುತ್ತದೆ. ಇದರಿಂದಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಹತ್ತಿರ ಮತ್ತು ಪ್ರಿಯರಿಂದ ಹೆಚ್ಚಾಗುತ್ತವೆ. ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಭಾವನೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ತಾಯಿಗೆ ತೊಂದರೆಯಾಗುತ್ತದೆ. ಈ ಸಮಯದಲ್ಲಿ ಶನಿಯು ನಿಮ್ಮ ಸ್ಥಳವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ಮನೆ ಅಥವಾ ಕುಟುಂಬದಿಂದ ದೂರ ಇರಬೇಕಾಗಬಹುದು. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷ, ಪ್ರಣಯಕ್ಕೆ ಕೊರತೆ ಕಾಡಬಹುದು. ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ ಆಸೆ ಈಡೇರುತ್ತದೆ. ಹಳೆಯ ವಾಹನವನ್ನು ಸಹ ಖರೀದಿಸಬಹುದು. ವ್ಯಾಪಾರದ ವಿಷಯದಲ್ಲಿ ಶನಿ ಸಂಚಾರವು ಸಾಮಾನ್ಯ ಫಲಿತಾಂಶಗಳನ್ನು ನೀಡುತ್ತದೆ. ಜನ್ಮ ಜಾತಕದಲ್ಲಿ ಸಂಪತ್ತಿನ ಯೋಗ ಇದ್ದಲ್ಲಿ ಆಸ್ತಿ ಖರೀದಿ ಮತ್ತು ಮಾರಾಟದಿಂದ ಹಣ ಗಳಿಸುವ ಅವಕಾಶವಿರುತ್ತದೆ. ನೀವು ಸುದ್ದಿ ವಾಚಕರಾಗಿದ್ದರೆ ಅಥವಾ ರಾಜಕಾರಣಿಯಾಗಿದ್ದರೆ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ತುಂಬಾ ಜಾಗರೂಕರಾಗಿರಬೇಕು. ನೀವು ಯಾವುದೇ ರೀತಿಯಲ್ಲಿ ಕಠಿಣ ಪರಿಶ್ರಮವನ್ನು ಕಡಿಮೆ ಮಾಡದಿದ್ದರೆ ವ್ಯಾಪಾರ, ಉದ್ಯೋಗ ಅಥವಾ ಕೃಷಿ ಕ್ಷೇತ್ರದಿಂದ ಹೆಚ್ಚು ಗಳಿಸುವಿರಿ. ಈ ಸಮಯದಲ್ಲಿ ಆರೋಗ್ಯವು ಸಾಮಾನ್ಯವಾಗಿರುತ್ತದೆ.
ಕುಂಭ : ಕುಂಭ ರಾಶಿಗೆ ಶನಿಯು ಜನ್ಮ (ತನು) ಮತ್ತು ಹನ್ನೆರಡನೇ ಮನೆಗೆ (ವ್ಯಯ) ಅಧಿಪತಿಯಾಗಿದ್ದು, ಜನ್ಮ ರಾಶಿಯಲ್ಲೇ ಸಂಚಾರ ಮಾಡಲಿದೆ. ಈ ಮನೆಯು ವ್ಯಕ್ತಿಯ ದೇಹ, ಪ್ರತಿಷ್ಠೆ, ಖ್ಯಾತಿ ಇತ್ಯಾದಿಗಳಿಗೆ ಸಂಬಂಧಿಸಿದೆ. ಇದರಿಂದಾಗಿ ನೀವು ದೈಹಿಕ ನೋವು ಮತ್ತು ಗೌರವದ ಕೊರತೆಯನ್ನು ಅನುಭವಿಸಬಹುದು. ಈ ಸಮಯದಲ್ಲಿ ನಿಮ್ಮ “ಶನಿ ಸಾಡೇ-ಸಾತಿ” ಸಹ ನಡೆಯುತ್ತಿದೆ. ಆದ್ದರಿಂದ ಅತಿಯಾದ ಖರ್ಚಿನಿಂದಾಗಿ ನಿಮ್ಮ ಸಂಗಾತಿ ಅಥವಾ ಪಾಲುದಾರರ ಅಸಮಾಧಾನಕ್ಕೆ ಕಾರಣ ಆಗಬಹುದು. ಇದು ವ್ಯವಹಾರದಲ್ಲಿ ನಷ್ಟವನ್ನು ಉಂಟು ಮಾಡಬಹುದು. ಆದ್ದರಿಂದ ಇದನ್ನು ಮಾಡಬೇಡಿ. ಶನಿಯು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು, ಜನ್ಮ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ, ಆದ್ದರಿಂದ ದೈಹಿಕ ದೌರ್ಬಲ್ಯ ಮತ್ತು ಸೋಮಾರಿತನ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಇನ್ನೊಬ್ಬ ವ್ಯಕ್ತಿಯು ಮನ್ನಣೆ ಪಡೆಯಬಹುದು, ಇದು ನಿಮಗೆ ದುಃಖವನ್ನುಂಟು ಮಾಡುತ್ತದೆ. ಕೌಟುಂಬಿಕ ಜೀವನದಲ್ಲಿ ವಿರಹ ಉಂಟಾಗಬಹುದು, ಆದ್ದರಿಂದ ಪರಸ್ಪರರ ಭಾವನೆಗಳನ್ನು ಗೌರವಿಸಿ ಮತ್ತು ಸಮಸ್ಯೆಗಳನ್ನು ಅತ್ಯಂತ ನಯವಾಗಿ ಪರಿಹರಿಸಿಕೊಳ್ಳಿ. ನಿಮ್ಮ ಶಕ್ತಿಯ ಬಲದ ಮೇಲೆ ವ್ಯವಹಾರವನ್ನು ಹೆಚ್ಚಿಸುತ್ತೀರಿ. ಮುಂಬರುವ ಎರಡೂವರೆ ವರ್ಷಗಳಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಆದರೆ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಕಿವಿ, ಗಂಟಲು, ಕಣ್ಣು, ಮೂಗು ಇತ್ಯಾದಿಗಳಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತೀರಿ.
ಮೀನ: ಮೀನ ರಾಶಿಯವರಿಗೆ ಶನಿಯು 11ನೇ (ಲಾಭ) ಮತ್ತು ಹನ್ನೆರಡನೆಯ ಮನೆಯ (ವ್ಯಯ) ಅಧಿಪತಿಯಾಗಿದ್ದು, ಹನ್ನೆರಡನೇ ಮನೆಯಲ್ಲಿ ಸಂಚರಿಸಲಿದೆ. ಹನ್ನೆರಡನೇ ಮನೆಯಲ್ಲಿ ಶನಿಯ ಸಂಚಾರವು ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶನಿಯ ಸಂಚಾರದಿಂದ ಆದಾಯವಿರುತ್ತದೆ, ಆದರೆ ಖರ್ಚು ಕೂಡ ಹೆಚ್ಚಾಗುತ್ತದೆ. ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ, ಆದ್ದರಿಂದ ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ಈ ಸಮಯದಲ್ಲಿ ಬ್ಯಾಂಕ್ನಲ್ಲಿ ಇಟ್ಟಿರುವ ಫಿಕ್ಸೆಡ್ ಡೆಪಾಸಿಟ್ ಕೂಡ ನಿಧಾನವಾಗಿ ಖರ್ಚಾಗುತ್ತದೆ. ನಿಮ್ಮ ವ್ಯವಹಾರದಲ್ಲಿ ಯಾವುದೇ ತಪ್ಪು ಕೆಲಸ ಮಾಡುತ್ತಿದ್ದರೆ ಶತ್ರುಗಳು ನಿಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ, ಎಚ್ಚರಿಕೆಯಿಂದಿರಿ. ಮೊಕದ್ದಮೆಗಳು ಮತ್ತು ಅನಾರೋಗ್ಯದ ಕಾರಣದಿಂದಾಗಿ ಹೆಚ್ಚು ಖರ್ಚು ಮಾಡಬೇಕಾಗಬಹುದು. ಸೋಮಾರಿತನದಿಂದಾಗಿ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. ಆದ್ದರಿಂದ ಅದನ್ನು ತಪ್ಪಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟಪಡಬೇಕಾಗುತ್ತದೆ. ನೀವು ಪ್ರಚಾರಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಅಹಿತಕರ ಮತ್ತು ದುಃಖದ ಘಟನೆಯು ಕುಟುಂಬದಲ್ಲಿ ಸಂಭವಿಸಬಹುದು. ಇದೀಗ ನಿಮಗೆ ಸಾಕಷ್ಟು ತಾಳ್ಮೆ ಮತ್ತು ಸಂಯಮ ಬೇಕಾಗುತ್ತದೆ. ಏಕೆಂದರೆ ಹೆಚ್ಚಿನ ಕಾರ್ಯಗಳಲ್ಲಿ ವೈಫಲ್ಯಗಳು, ಅಡಚಣೆಗಳು ಮತ್ತು ವಿಳಂಬಗಳನ್ನು ಎದುರಿಸಬೇಕಾಗುತ್ತದೆ.