
ಮನೆಯಿಂದ ಹೊರಗೆ ಹೋಗುವಾಗ ಬಾಗಿಲು ಹಾಕಿ, ಭದ್ರವಾಗಿ ಬೀಗ ಹಾಕುವುದು ಸಾಮಾನ್ಯ. ಆದರೆ, ಭಾರತದಲ್ಲೊಂದು ವಿಶಿಷ್ಟ ಹಳ್ಳಿಯಿದ್ದು, ಅಲ್ಲಿನ ಮನೆಗಳಿಗೆ ಬೀಗ ಹಾಕುವುದು ಹಾಗಿರಲಿ… ಮನೆಗಳಿಗೆ ಬಾಗಿಲುಗಳೇ ಇಲ್ಲ. ಮನೆಗಳು ಮಾತ್ರವಲ್ಲದೆ, ಅಂಗಡಿ ಮುಂಗಟ್ಟುಗಳಿಗೂ ಬೀಗ ಹಾಕದಿರುವ ಅಪರೂಪದ ಸಂಪ್ರದಾಯ ತಲೆಮಾರುಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ. ಈ ಅಪರೂಪದ ಸಂಪ್ರದಾಯಕ್ಕೆ ದೇಶಾದ್ಯಂತ ಹೆಸರುವಾಸಿಯಾಗಿರುವ ಹಳ್ಳಿಯೇ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿರುವ ‘ಶನಿ ಶಿಂಗ್ಣಾಪುರ’ (Shani Shingnapur). ‘ಬೀಗಗಳಿಲ್ಲದ ಗ್ರಾಮ’ ಎಂದೇ ಪ್ರಸಿದ್ಧಿ ಪಡೆದಿರುವ ಈ ಹಳ್ಳಿಯ ಹಿಂದಿರುವ ಪವಾಡ ಮತ್ತು ಆಧ್ಯಾತ್ಮಿಕ ರಹಸ್ಯವೇನು ಎಂಬ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.
ಈ ಗ್ರಾಮದಲ್ಲಿ ಮನೆಗಳಿಗೆ ಬಾಗಿಲು ಅಥವಾ ಬೀಗ ಹಾಕದಿರಲು ಮುಖ್ಯ ಕಾರಣ ಇಲ್ಲಿನ ಜನರು ಶನಿ ದೇವರ ಮೇಲೆ ಇಟ್ಟಿರುವ ಆಳವಾದ ನಂಬಿಕೆ. ಶನಿ ದೇವನೇ ಈ ಸಂಪೂರ್ಣ ಗ್ರಾಮದ ರಕ್ಷಕನಾಗಿದ್ದು, ಆತನ ಸಮ್ಮುಖದಲ್ಲಿ ಯಾರೂ ಕಳ್ಳತನ ಮಾಡಲು ಧೈರ್ಯಿಸುವುದಿಲ್ಲ ಎಂಬ ಬಲವಾದ ನಂಬಿಕೆ ಸ್ಥಳೀಯರಲ್ಲಿದೆ. ಒಂದು ವೇಳೆ ಯಾರಾದರೂ ಕಳ್ಳತನ ಮಾಡಲು ಯತ್ನಿಸಿದರೆ ಅಥವಾ ತಪ್ಪು ಮಾಡಿದರೆ, ಅವರು ಶನಿ ದೇವರ ಕೋಪಕ್ಕೆ ಗುರಿಯಾಗಿ ತಕ್ಷಣವೇ ಶಿಕ್ಷೆ ಅನುಭವಿಸುತ್ತಾರೆ ಎಂಬ ಭಕ್ತಿ ಮತ್ತು ಭಯ ಇಲ್ಲಿನ ಜನರಲ್ಲಿದೆ. ಹೀಗಾಗಿಯೇ ಇಲ್ಲಿನ ಜನರು ದಶಕಗಳಿಂದ ತಮ್ಮ ಮನೆ, ಆಸ್ತಿ-ಪಾಸ್ತಿಗಳಿಗೆ ಬೀಗ ಹಾಕುವ ಅಗತ್ಯವೇ ಬಿದ್ದಿಲ್ಲ ಎಂದು ಹೇಳುತ್ತಾರೆ.
ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?
ಶನಿ ಶಿಂಗ್ಣಾಪುರದಲ್ಲಿರುವ ಶನಿ ದೇವರ ವಿಗ್ರಹವು ಸ್ವಯಂಭೂ (ಸ್ವಯಂ ಪ್ರಕಟಿತ) ಆಗಿದ್ದು, ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ಇಲ್ಲಿ ಯಾವುದೇ ಭವ್ಯವಾದ ಗರ್ಭಗುಡಿ ಅಥವಾ ಛಾವಣಿ ಇಲ್ಲ. ಶನಿ ದೇವರ ಕಪ್ಪು ಶಿಲೆಯ ವಿಗ್ರಹವನ್ನು ತೆರೆದ ಪ್ರದೇಶದಲ್ಲೇ ಸ್ಥಾಪಿಸಲಾಗಿದ್ದು, ಪೂಜಿಸಲಾಗುತ್ತದೆ.
ಬೀಗ ಮತ್ತು ಬಾಗಿಲುಗಳಿಲ್ಲದ ಈ ಮನೆಗಳ ನಿರ್ಮಾಣ ಮತ್ತು ವಾಸ್ತುಶಿಲ್ಪವೂ ಸಹ ಸಾಮಾನ್ಯ ಮನೆಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಈ ವಿಶಿಷ್ಟ ಸಂಪ್ರದಾಯ ಹಾಗೂ ಇಲ್ಲಿನ ಆಧ್ಯಾತ್ಮಿಕ ವಾತಾವರಣವನ್ನು ಕಣ್ಣಾರೆ ಕಂಡು ಅನುಭವಿಸಲು ದೇಶ-ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಶನಿ ಶಿಂಗ್ಣಾಪುರಕ್ಕೆ ಭೇಟಿ ನೀಡುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯ, ಜನರ ಅಚಲ ನಂಬಿಕೆ ಮತ್ತು ಆಧ್ಯಾತ್ಮಿಕ ಮಹಿಮೆಯಿಂದಾಗಿ ಶನಿ ಶಿಂಗ್ಣಾಪುರವು ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ