Shankaracharya Jayanti 2022: ರಾಮಾನುಜ ಹಾಗೂ ಮಧ್ವಾಚಾರ್ಯರಿಗೂ ಆದರ್ಶಪ್ರಾಯರಾಗಿದ್ದವರು ಆದಿ ಶಂಕರರು

| Updated By: ಅಕ್ಷಯ್​ ಪಲ್ಲಮಜಲು​​

Updated on: May 09, 2022 | 6:32 PM

ಧರ್ಮ ಸಂಸ್ಥಾಪನೆಗೆ ಇಡೀ ಭಾರತ ದೇಶವನ್ನು ತಮ್ಮ ಕಾಲ್ನಡಿಗೆಯಲ್ಲಿಯೇ ಮೂರು ಬಾರಿ ಪರ್ಯಟನೆ ಮಾಡಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಸಂಸ್ಥಾನಗಳನ್ನು ಸ್ಥಾಪಿಸಿದರು. ಅದೈತ ಸಿದ್ಧಾಂತದ ಮೂಲಕ 'ಅಹಂ ಬ್ರಹ್ಮಾಸ್ಮಿ', 'ತತ್ವಮಸಿ' ಎಂಬ ಅಮೂಲ್ಯ ಮೌಲ್ಯವನ್ನು ಜಗತ್ತಿನೆಲ್ಲೆಡೆ ಸಾರಿದರು.

Shankaracharya Jayanti 2022: ರಾಮಾನುಜ ಹಾಗೂ ಮಧ್ವಾಚಾರ್ಯರಿಗೂ ಆದರ್ಶಪ್ರಾಯರಾಗಿದ್ದವರು ಆದಿ ಶಂಕರರು
ಆದಿ ಶಂಕರಾಚಾರ್ಯ
Follow us on

ಅದು ಭಾರತದಲ್ಲಿ ಸನಾತನ ಹಿಂದೂ ಧರ್ಮವು ಕ್ಷೀಣಿಸುತ್ತಿದ್ದ ಕಾಲ. ಎಲ್ಲೆಲ್ಲೂ ಅಧರ್ಮ, ಅನಾಚಾರ, ಅತ್ಯಾಚಾರಗಳು ಮನೆ ಮಾಡಿದ್ದ ಕಾಲ. ಕ್ಷುದ್ರ ತಂತ್ರಗಳು, ದುಷ್ಟ ಶಕ್ತಿಗಳು ಅಮಾಯಕರ ಮೇಲೆ ತಾಂಡವವಾಡುತ್ತಿದ್ದ ಕಾಲ. ಇಂತಹ ಸಂದರ್ಭದಲ್ಲಿ ಸಮಸ್ತ ಹಿಂದೂ ಕುಲಗಳನ್ನು ಒಗ್ಗೂಡಿಸಿ, ಭಾರತದಲ್ಲಿ ಸನಾತನ ಧರ್ಮದ ಪುನರ್ ಪ್ರತಿಷ್ಠಾಪನೆ ಮಾಡಲು ಕೇರಳದ ಕಾಲಟಿಯಲ್ಲಿ ಶ್ರೀ ಶಂಕರರ ಜನನವಾಯಿತು. ತಮ್ಮ ಏಳನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದು ಗುರುಗಳ ಅನ್ವೇಷಣೆಯಲ್ಲಿ ತೊಡಗಿದರು. ಸನ್ಯಾಸ ದೀಕ್ಷೆ ಪಡೆಯುವ ವೇಳೆಗಾಗಲೇ ನಾಲ್ಕು ವೇದಗಳನ್ನು, ಉಪನಿಷತ್ತುಗಳನ್ನು ಕಲಿತು ಸಂಸ್ಕೃತದಲ್ಲಿ ಶ್ಲೋಕ, ಗ್ರಂಥಗಳ ರಚನೆ ಮಾಡಿದರು. ತಮ್ಮ ಗುರು ಗೋವಿಂದಾಚಾರ್ಯರಿಂದ ಶಿಷ್ಯದೀಷೆಯನ್ನು ಪಡೆದು ನಿರಂತರ ಅಧ್ಯಯನ, ರಚನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ನಂತರ ಧರ್ಮ ಸಂಸ್ಥಾಪನೆಗೆ ಇಡೀ ಭಾರತ ದೇಶವನ್ನು ತಮ್ಮ ಕಾಲ್ನಡಿಗೆಯಲ್ಲಿಯೇ ಮೂರು ಬಾರಿ ಪರ್ಯಟನೆ ಮಾಡಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಸಂಸ್ಥಾನಗಳನ್ನು ಸ್ಥಾಪಿಸಿದರು. ಅದೈತ ಸಿದ್ಧಾಂತದ ಮೂಲಕ ‘ಅಹಂ ಬ್ರಹ್ಮಾಸ್ಮಿ’, ‘ತತ್ವಮಸಿ’ ಎಂಬ ಅಮೂಲ್ಯ ಮೌಲ್ಯವನ್ನು ಜಗತ್ತಿನೆಲ್ಲೆಡೆ ಸಾರಿದರು. ತಮ್ಮ 32 ವರ್ಷಗಳ ಜೀವಿತಾವಧಿಯಲ್ಲಿ ಸಾವಿರಾರು ಶ್ಲೋಕ, ಧರ್ಮಗ್ರಂಥ, ಕೃತಿಗಳು ಸೇರಿದಂತೆ ಹಲವು ಮಠಗಳ ಸ್ಥಾಪನೆ ಮಾಡಿದರು.

ನಾವಿಂದು ಶ್ರದ್ಧಾ ಭಕ್ತಿಯಿಂದ ಕಾಣುವ ಶೃಂಗೇರಿ ಶಾರದಾ ಪೀಠ ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗಿರುವ ಶಕ್ತಿ ಪೀಠ. ಇಂದಿಗೂ ಸಹ ಬದರಿ, ಪುರಿ, ದ್ವಾರಕ ಶಕ್ತಿ ಪೀಠಗಳಲ್ಲಿ ಗುರು ಪರಂಪರೆಯನ್ನು ಕಾಣಬಹುದು. ಭಾರತದ ಸಮಾಜ ಸುಧಾರಕರಲ್ಲಿ ಶಂಕರರು ಮೊದಲಿಗರು. ಧರ್ಮ ಸಂಸ್ಥಾಪನೆಗೆ ಅವತಾರವೆತ್ತಿದ ಶಿವನ ರೂಪ ಎಂದೇ ಆದಿ ಶಂಕರರನ್ನು ಪರಿಗಣಿಸಲಾಗುತ್ತದೆ.

ಅಲ್ಪಾವಧಿಯಲ್ಲಿ ಬೆಟ್ಟದಷ್ಟು ಸಾಧಿಸಿ ರಾಮಕೃಷ್ಣ ಪರಮಹಂಸರಿಗೆ, ವಿವೇಕಾನಂದರಿಗೆ ತಮ್ಮ ಸಮಕಾಲೀನರಾದ ರಾಮಾನುಜ ಹಾಗೂ ಮಧ್ವಾಚಾರ್ಯರಿಗೂ ಆದರ್ಶಪ್ರಾಯರಾಗಿದ್ದವರು ಆದಿ ಶಂಕರರು. ನಾವಿಂದು ಎಂ.ಎಸ್ ಸುಬ್ಬಲಕ್ಷ್ಮಿಯವರ ಕಂಠದಲ್ಲಿ ಕೇಳುವ ಭಜಗೋವಿಂದಂ, ಕನಕಧಾರ ಸ್ತೋತ್ರ ಸೇರಿದಂತೆ ಸೌಂದರ್ಯ ಲಹರಿಯಂತಹ ಹಲವು ಮಾಹಾ ದೀಪಿಕೆಗಳನ್ನು ಶಂಕರಂಸಿ ಪಠಣ ಮಾತ್ರದ ಮೂಲಕವೇ ಜೀವನ್ಮುಕ್ತಿಯ ದಾರಿಯನ್ನು ತೋರಿಸಿಕೊಟ್ಟರುವ ಶಂಕರರನ್ನು ಜಗದ್ಗುರು ಎಂದೇ ಸಂಬೋದಿಸಿ, ಒಪ್ಪಿಕೊಳ್ಳಲಾಗಿದೆ. ಇಂದು ಶಂಕರಾಚಾರ್ಯರ ಜಯಂತಿ. ಅವರ ಬೋಧನೆ, ಜೀವನ ಸಾಧನೆ, ಆಧ್ಯಾತ್ಮಿಕ ನಿಲುವುಗಳು ನಾವೆಲ್ಲರೂ ಅನುಸರಿಸುವಂತಾಗಲಿ.

ಶ್ರೀರಕ್ಷಾ ಶಂಕರ್
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

ಶಂಕರಾಚಾರ್ಯರ  ಹೆಚ್ಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:30 pm, Fri, 6 May 22