Shankaracharya Jayanti 2022: ಶಂಕರಾಚಾರ್ಯರನ್ನು ನೆನೆಯೋಣ, ನಮಿಸೋಣ
ಆದಿ ಶಂಕರಾಚಾರ್ಯ ಜಯಂತಿ: ಇಂದು ಶಂಕರರ ಜನ್ಮದಿನ. ಪ್ರತಿದಿನವೂ ನೆನಪಿಸಿಕೊಳ್ಳಬೇಕಾದ ಈ ವ್ಯಕ್ತಿತ್ವವನ್ನು ಇಂದಾದರೂ ನೆನಪಿಸಿಕೊಳ್ಳದಿದ್ದರೆ? ಮನಸಾರೆ ಕೃತಜ್ಞತೆಯನ್ನೂ ಸಮರ್ಪಿಸದಿದ್ದರೆ? ನಮ್ಮಂತಹ ಕೃತಘ್ನರು ಇನ್ನಾರು? ಅವರ ಜೀವನದ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.
ಮೂವತ್ತೆರಡರ ವಯಸ್ಸಿಗೆ ಎಷ್ಟೊ ಮಂದಿಗೆ ನಿಜವಾದ ಬದುಕೇ ಶುರುವಾಗಿರುವುದಿಲ್ಲ ಅಥವಾ ಗುರಿಯ ಕಲ್ಪನೆಯೇ ಬಂದಿರುವುದಿಲ್ಲ. ಅನೇಕರಿಗೆ ಗುರಿಯ ಸ್ಪಷ್ಟತೆಯೇ ಇರುವುದಿಲ್ಲ. ಇದ್ದರೂ ತಮ್ಮ ಬದುಕಿಗಷ್ಟೇ ಸೀಮಿತವಾಗಿರುತ್ತದೆ. ಆ ಗುರಿಯನ್ನು ಸಾಧಿಸಲು ಪ್ರಯತ್ನಪಡುತ್ತಿರುತ್ತಾರೆ. ಆದರೆ ಸಮಷ್ಟಿಯ ಹಿತವೇ ತಮ್ಮ ಗುರಿಯಾಗಿಸಿಕೊಂಡು, ಅದನ್ನು ಸಾಧಿಸಿ, ಮೂವತ್ತೆರಡರ ವಯಸ್ಸಿಗೆ ಕೆಲಸ ಮುಗಿಯಿತೆಂದು ಎದ್ದು ಹೋದವರು ಆಚಾರ್ಯ ಶಂಕರರು. ಇಂದು ಶಂಕರರ ಜನ್ಮದಿನ. ಪ್ರತಿದಿನವೂ ನೆನಪಿಸಿಕೊಳ್ಳಬೇಕಾದ ಈ ವ್ಯಕ್ತಿತ್ವವನ್ನು ಇಂದಾದರೂ ನೆನಪಿಸಿಕೊಳ್ಳದಿದ್ದರೆ? ಮನಸಾರೆ ಕೃತಜ್ಞತೆಯನ್ನೂ ಸಮರ್ಪಿಸದಿದ್ದರೆ? ನಮ್ಮಂತಹ ಕೃತಘ್ನರು ಇನ್ನಾರು? ಅವರ ಜೀವನದ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.
ಜೀವನದ ಆರಂಭ
ಅದು ಎಂಟನೆಯ ಶತಮಾನ. ವೇದವಿರೋಧಿಮತಗಳು ಪಾರುಪತ್ಯ ಸಾಧಿಸಿದ್ದ ಕಾಲ. ವೇದಸಂವಾದಿಸಿದ್ಧಾಂತಗಳು ಪಳೆಯುಳಿಕೆಯಾಗಿ ಉಳಿಯುವುದೂ ಅನುಮಾನ ಎಂದೆಣಿಸಿದ್ದ ಕಾಲದಲ್ಲಿ ಕೇರಳದ ಕಾಲಟಿಯಲ್ಲಿ ಶಿವಗುರು-ಆರ್ಯಾಂಬಾ ದಂಪತಿಗಳ ಮಗನಾಗಿ ಜನಿಸಿದರು. ಜೀವನದ ಆರಂಭದಲ್ಲೆ ತಂದೆಯನ್ನು ಕಳೆದುಕೊಂಡ ಶಂಕರರು, ತಾಯಿಯ ಆಸರೆಯಲ್ಲಿ ಬೆಳೆಯಲಾರಂಭಿಸಿದರು. ಬಂದ ಕೆಲಸವನ್ನು ಬೇಗ ಸಾಧಿಸಿಬಿಡಬೇಕೆಂಬ ವಾಂಛೆಯಿಂದಲೋ ಏನೋ, ಅದರ ತಯಾರಿಯನ್ನು ಶುರುಮಾಡಿಬಿಟ್ಟರು. ಮೂರುವರ್ಷಗಳಿರುವಾಗಲೇ, ಸಂಸ್ಕೃತಕಾವ್ಯಾದಿಗಳನ್ನು ಅಭ್ಯಸಿಸಿದ ಅವರು ಐದನೇ ವರ್ಷಕ್ಕೆ ಉಪನೀತರಾಗಿ ಗುರುಕುಲ ಸೇರಿದರು. ಒಂದೊಂದು ವೇದವನ್ನು ಓದಲು ಸಾಮಾನ್ಯರಿಗೆ ಹತ್ತಾರು ವರ್ಷಗಳೇ ಬೇಕಾಗುವಾಗ ಇವರು ಮಾತ್ರ ನಾಲ್ಕೂ ವೇದಗಳನ್ನು ಎಂಟುವರ್ಷಗಳಾಗುವಾಗಲೇ ಆತ್ಮಸಾತ್ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲಶಾಸ್ತ್ರಗಳನ್ನೂ ಅರಿತುಬಿಟ್ಟರು.
ಸಂನ್ಯಾಸ
ತ್ಯಾಗವೇ ಜೀವನವಾಗಬೇಕೆಂದು ಬಯಸಿ, ಸಂನ್ಯಾಸ ಪಡೆಯಲು ನಿಶ್ಚಯಿಸಿದರು. ಆದರೆ ತಾಯಿ ಆರ್ಯಾಂಬೆಯ ಅನುಮತಿ ಪಡೆಯುವುದು ಕಷ್ಟಸಾಧ್ಯವಾಯಿತು. ಒಮ್ಮೆ ಅವರು ಕೆರೆಯಲ್ಲಿರುವಾಗ ಮೊಸಳೆ ಹಿಡಿದುಬಿಟ್ಟಿತು. ತಾಯಿಗೆ ಏನುಮಾಡಬೇಕೆಂದೇ ಗೊತ್ತಾಗಲಿಲ್ಲ. ಆಗ ಶಂಕರರು, ‘ನೀನು ಸಂನ್ಯಾಸ ಸ್ವೀಕರಿಸಲು ಒಪ್ಪಿದರೆ ಈ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ತನ್ನಿಂದ ದೂರವಾದರೂ, ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ಒಪ್ಪಿದಳು. ಸಂಸಾರ ಮತ್ತು ಮೊಸಳೆ ಎರಡೂ ಶಂಕರರನ್ನು ಬಿಟ್ಟು ದೂರ ಹೋದವು. ಅಂದರೆ ಸಂನ್ಯಾಸವನ್ನು ಸ್ವೀಕರಿಸಿದರು.
ಭಾಷ್ಯರಚನೆ
ಹದಿನಾರು ವರ್ಷ ಮುಗಿಯುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ತಮ್ಮ ಅರ್ಧ ಆಯಸ್ಸಿಗೆ ತಮ್ಮ ಗುರಿಯನ್ನು ಸಾಧಿಸಲು ಸಿದ್ಧತೆ ನಡೆಸಿದ ಶಂಕರರು ಮುಂದೆ ನಡೆಸಿದ್ದು ‘ಶಂಕರದಿಗ್ವಿಜಯಯಾತ್ರೆ.
ಯಾತ್ರೆ
ಮೊದಲೆ ತಿಳಿಸಿದಂತೆ ನಾಸ್ತಿಕ ಮತಗಳು ವಿಜೃಂಭಿಸುತ್ತಿದ್ದ ಕಾಲ. ಆ ವೇದವಿರೋಧಿ ಗುಂಪುಗಳಿಗೆ ರಾಜ – ಧನ – ಜನ ಬೆಂಬಲಗಳು ಇದ್ದವು. ಅದಾವುದಕ್ಕೂ ಎದೆಗುಂದದೆ ಏಕಾಂಗಿಯಾಗಿ ಬಹುತ್ವವಾದಿಗಳನ್ನು ಚರ್ಚೆ, ವಿಚಾರಮಂಡನೆ, ವಾದಗಳ ಮೂಲಕ ಏಕತ್ವವಾದಕ್ಕೆ ಎಳೆತಂದರು. ಕೇವಲ ಒಂದು ಪ್ರಾಂತ, ಮಂಡಲ, ರಾಜ್ಯಗಳಲ್ಲಷ್ಟೇ ಅಲ್ಲದೆ, ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ಸರಿ ದಾರಿಗೆ ಎಳೆದು ತಂದರು. ಹಾದಿ ತಪ್ಪಿದ್ದ ಆರು ಮತಗಳನ್ನು ಖಂಡಿಸಿದರು ಮತ್ತು ಸರಿ ದಾರಿಗೆ ಸರಿಸಿದರು. ಹಾಗಾಗಿ ‘ಷಣ್ಮತಖಂಡನಾಚಾರ್ಯ’ ಮತ್ತು ಷಣ್ಮತಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದುಗಳನ್ನು ಪಡೆದರು.
ಮಠಗಳ ಸ್ಥಾಪನೆ
ಸ್ಥಾಪಿಸಿದ ಧರ್ಮವು ಅನೇಕ ಶತಮಾನಗಳು ಕಳೆದರು ಉಳಿಯಬೇಕೆಂಬ ಆಶಯದಿಂದ ಮಠದ ಪರಿಕಲ್ಪನೆಯನ್ನು ತಂದರು. ಸಮಾಜದ ಅಂಟಿಲ್ಲದ, ಆದರೆ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲಂತಹ ಯತಿಗಳು ಮಠ ಮತ್ತು ಸಮಾಜವನ್ಬು ಮುನ್ನಡೆಸಬೇಕೆಂಬ ಆಶಯ ಅವರಲ್ಲಿತ್ತು. ಅದರಂತೆ ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಇಂತಹ ಮಠಗಳ ಅಸ್ತಿತ್ವವಿರುವುದರಿಂದಲೆ ಧರ್ಮ – ಸಂಸ್ಕೃತಿಗಳು ಇಂದು ಉಳಿದಿರುವುದು ಎಂದರೆ ಸತ್ಯವೇ ತಾನೇ?
ಪಂಚಾಯತನ ಪೂಜೆ
ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸುವುದು. ಇದು ಇನ್ನೊಂದು ರೀತಿಯಲ್ಲಿ ದೇಶವನ್ನೇ ಪೂಜಿಸುವುದೂ ಹೌದು.
ಸಾಹಿತ್ಯಗಳು
ಶಂಕರರು ಭಾಷ್ಯಗಳನ್ನು ಹೊರತುಪಡಿಸಿ ರಚಿಸಿದ ಸ್ತೋತ್ರ – ಸಾಹಿತ್ಯಗಳು ಜನ್ಮಕ್ಕಾಗುವಷ್ಟಿವೆ. ಒಂದೊಂದು ಸಾಹಿತ್ಯವನ್ನು ಸರಿಯಾಗಿ ಅರ್ಥೈಸಲು ಕೂಡ ಜನ್ಮವೇ ಕಡಿಮೆಯಾಗಬಹುದು ಅಥವಾ ಅರ್ಥೈಸಿಕೊಂಡರೆ ಮತ್ತೆ ಜನ್ಮವೇ ಇರಲಾರದು. ಕೇವಲ ಮೂವತ್ತೆರಡು ವರ್ಷಗಳಲ್ಲಿ ಹೇಳಿ ಮುಗಿಯದಷ್ಟು ಸಾಧಿಸಿದ ಶಂಕರರು ಶಿವನ ಅವತಾರ ಅಥವಾ ಜಗದ ಒಳಿತಿನ ಮೊತ್ತ ! ಎರಡೂ ಒಂದೆ ! ಇಂದು ನಾವು ನಾವಾಗಿರುವುದಕ್ಕೆ ಕಾರಣರಾದ, ನಾವೂ ಶಿವರಾಗಲು ದಾರಿಯನ್ನು ತೋರಿಸಿದ ಶಂಕರಾಚಾರ್ಯರನ್ನು ನೆನೆಯೋಣ.
ಲೇಖಕರು: ಕೃಷ್ಣಾನಂದ ಶರ್ಮಾ
poornadeepthi.blr@gmail.com
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಆಧ್ಯಾತ್ಮ ಲೇಕನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Fri, 6 May 22