Salt and Goddess Lakshmi: ಗೃಹ ಪ್ರವೇಶ ಮಾಡುವಾಗ ಮತ್ತು ತಿಂಗಳ ಮೊದಲ ದಿನ ಉಪ್ಪು ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ!

|

Updated on: Oct 12, 2024 | 2:25 PM

ಉಪ್ಪನ್ನು ನಮ್ಮ ಅಂಗೈಯಲ್ಲಿ ಇಟ್ಟುಕೊಂಡು ನಮ್ಮ ಮನೋಕಾಮನೆ ಈಡೇರಿಸುವಂತೆ ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎಂಬ ನಂಬಿಕೆಯಿದೆ. ನಮ್ಮ ಮೇಲೆ ಕೆಟ್ಟ ದೃಷ್ಟಿ ತಗಲಿದ್ದರೆ ಅದನ್ನು ಕಡಿಮೆ ಮಾಡುವ ವಸ್ತು ಕಲ್ಲು ಉಪ್ಪು. ಕಲ್ಲುಉಪ್ಪಿನ ಮಹಾತ್ಮೆ ಬಗ್ಗೆ ನಿಮಗೆ ತಿಳಿದಿಲ್ಲದ ಕೆಲವು ಹೊಚ್ಚ ಹೊಸ ಆಧ್ಯಾತ್ಮಿಕ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಕಲ್ಲು ಉಪ್ಪನ್ನು ಮಂಗಳಕರ ದಿನದಂದು ಖರೀದಿಸಲು ಹೇಳಲಾಗುತ್ತದೆ. ಇದೇ ವೇಳೆ ಕೆಲವು ನಿರ್ದಿಷ್ಟ ದಿನಗಳಲ್ಲಿ ಉಪ್ಪನ್ನು ಖರೀದಿಸಬಾರದು ಎಂಬ ಮಾತಿದೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.

Salt and Goddess Lakshmi: ಗೃಹ ಪ್ರವೇಶ ಮಾಡುವಾಗ ಮತ್ತು ತಿಂಗಳ ಮೊದಲ ದಿನ ಉಪ್ಪು ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ!
ಕಲ್ಲುಪ್ಪು ಮಹಾಲಕ್ಷ್ಮೀಯ ಅಂಶವಂತೆ!
Follow us on

Salt and Goddess Lakshmi: ಉಪ್ಪಿಗಿಂತ ರುಚಿ ಬೇರೆ ಇಲ್ಲ. ಯಾವುದೇ ಅಡುಗೆಗೆ ಉಪ್ಪು ಬೇಕೇಬೇಕು. ಉಪ್ಪು ಬಳಕೆಯಾಗಿಲ್ಲ ಅಂದ್ರೆ ಅಡುಗೆ ಅಪೂರ್ಣವಾಗಿದೆ ಎಂದರ್ಥ. ಉಪ್ಪಿಲ್ಲದ ಆಹಾರ ಕಸದ ಬುಟ್ಟಿಗೆ ಸೇರುತ್ತದೆ ಎಂಬ ಮಾತಿದೆ. ನಾವು ತಿನ್ನುವ ಆಹಾರದಲ್ಲಿ ಉಪ್ಪು ಎಷ್ಟು ಮುಖ್ಯ ಎಂಬುದು ಇದರಿಂದಲೇ ಅರ್ಥವಾಗುತ್ತದೆ. ಈ ಭೂಮಿಯಲ್ಲಿ ಉಪ್ಪಿಲ್ಲದಿದ್ದರೆ ಜೀವವಿಲ್ಲ. ಸಂಪತ್ತಿನ ಅಧಿಪತಿಯಾದ ಲಕ್ಷ್ಮಿ ದೇವಿಯು ಕ್ಷೀರಸಾಗರದ ಮಂಥನದಿಂದ ಹೊರಹೊಮ್ಮಿದಳು ಎಂದು ಹೇಳಲಾಗುತ್ತದೆ. ಲಕ್ಷ್ಮಿ ಕಾಣಿಸಿಕೊಂಡ ಆ ಸಮುದ್ರದಲ್ಲಿ ಉಪ್ಪು ಕೂಡ ಕಂಡುಬರುತ್ತದೆ. ಹಾಗಾಗಿ ಲಕ್ಷ್ಮಿ ದೇವಿಯು ಉಪ್ಪಿನಲ್ಲಿ ನೆಲೆಸಿದ್ದಾಳೆ. ಉಪ್ಪನ್ನು ಲಕ್ಷ್ಮಿ ದೇವಿಯ ಅಂಶ ಎಂದು ಹೇಳಲಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಆಹಾರದಲ್ಲಿ ಬಳಸುವ ಉಪ್ಪು ಅಂದರೆ ಸೋಡಿಯಮ್ ಕ್ಲೋರೈಡ್ ಹಲವು ಬಗೆಗಳಲ್ಲಿ ತಯಾರಾಗುತ್ತದೆ. ಇವುಗಳಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು (ಟೇಬಲ್ ಸಾಲ್ಟ್) ಮತ್ತು ಅಯೊಡಿನ್ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪು ಬಿಳಿ, ತೆಳು ಗುಲಾಬಿ ಅಥವಾ ತೆಳುಗಪ್ಪು ಬಣ್ಣದ ಹರಳು ರೂಪದಲ್ಲಿ ಸಿಗುತ್ತೆ. ಉಪ್ಪನ್ನು ಸಾಮಾನ್ಯವಾಗಿ ಸಮುದ್ರದ ನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ.

ಅಡುಗೆ ಉಪ್ಪು ಅನೇಕ ಸಮುದಾಯಗಳು ಮತ್ತು ಧರ್ಮಗಳಲ್ಲಿ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇಂತಹ ಉಪ್ಪನ್ನು ನಮ್ಮ ಅಂಗೈಯಲ್ಲಿ ಇಟ್ಟುಕೊಂಡು ನಮ್ಮ ಮನೋಕಾಮನೆ ಈಡೇರಿಸುವಂತೆ ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎಂಬ ನಂಬಿಕೆಯಿದೆ. ನಮ್ಮ ಮೇಲೆ ಕೆಟ್ಟ ದೃಷ್ಟಿ ತಗಲಿದ್ದರೆ ಅದನ್ನು ಕಡಿಮೆ ಮಾಡುವ ವಸ್ತು ಕಲ್ಲು ಉಪ್ಪು. ಕಲ್ಲುಉಪ್ಪಿನ ಮಹಾತ್ಮೆ ಬಗ್ಗೆ ನಮಗೆ ತಿಳಿದಿಲ್ಲದ ಕೆಲವು ಹೊಚ್ಚ ಹೊಸ ಆಧ್ಯಾತ್ಮಿಕ ಮಾಹಿತಿಯನ್ನು ತಿಳಿಯೋಣ.

ಸಾಮಾನ್ಯವಾಗಿ ಕಲ್ಲು ಉಪ್ಪನ್ನು ಮಂಗಳಕರ ದಿನದಂದು ಖರೀದಿಸಲು ಹೇಳಲಾಗುತ್ತದೆ. ಶುಭ ದಿನದಂದು ಕಲ್ಲುಪ್ಪು ಖರೀದಿಸಿದರೆ ನಮಗೆ ಲಾಭವಾಗುತ್ತದೆ ಎಂಬ ನಂಬಿಕೆಯಿದೆ. ಇದೇ ವೇಳೆ ಯಾವ ದಿನಗಳಲ್ಲಿ ಉಪ್ಪನ್ನು ಖರೀದಿಸಬಾರದು ಗೊತ್ತಾ?

ಸಾಲ ಮಾಡಲು ಹೋದಾಗ, ಸಾಲದ ಮೇಲಿನ ಬಡ್ಡಿ ಕಟ್ಟಲು ಹೋದಾಗ, ಚಿನ್ನಾಭರಣಗಳನ್ನು ಅಡಮಾನ ಇಡಲು ಹೋದಾಗ, ಮನೆಗೆ ಮರಳುವಾಗ ಉಪ್ಪು ಖರೀದಿಸಬಾರದು. ಕುಟುಂಬದ ಮುಖ್ಯಸ್ಥ ಅಥವಾ ಮನೆಯ ಮುಖ್ಯಸ್ಥ ಅಥವಾ ಮನೆಯ ಮಕ್ಕಳು ಉಪ್ಪನ್ನು ಖರೀದಿಸಬೇಕು. ಮತ್ತು ಅದನ್ನು ಸ್ವತಃ ತಾವೇ ತಮ್ಮ ಮನೆಯ ಉಪ್ಪು ಜಾರ್​​ಗೆ ಸುರಿಯಬೇಕು ಎಂಬುದು ಗಮನಾರ್ಹವಾಗಿದೆ.

ನಿಮ್ಮ ಸಂಬಂಧಿಗಳು, ಪರಿಚಿತರು ಮತ್ತು ಸ್ನೇಹಿತರು ನಿಮಗಾಗಿ ಉಪ್ಪು ಖರೀದಿಸಿ ಕೊಟ್ಟರೆ ಆ ಸಂಬಂಧ ಮತ್ತು ಸ್ನೇಹ ಉಳಿಯುವುದಿಲ್ಲ. ಮಗನ ಮನೆಗೆ, ಮಗಳ ಮನೆಗೆ, ಸಂಬಂಧಿಕರ ಮನೆಗೆ ಹೋದಾಗ ಅವರಿಗಾಗಿ ನೀವು ಉಪ್ಪು ಖರೀದಿಸಬೇಡಿ. ಇದು ಪುಡಿ ಉಪ್ಪು ಅಥವಾ ಕಲ್ಲು ಉಪ್ಪು ಎರಡಕ್ಕೂ ಅನ್ವಯಿಸುತ್ತದೆ. ನೀವು ಒಳ್ಳೆಯ ಕೆಲಸಗಳನ್ನು ಮಾಡಲು ಹೋದರೆ ಆ ಸಮಯದಲ್ಲಿ ನೀವು ಕಲ್ಲು ಉಪ್ಪನ್ನು ಖರೀದಿಸಬಹುದು.

ಗೃಹಿಣಿಯರು ಮುಟ್ಟಿನ ಸಮಯದಲ್ಲಿ ಮನೆಯಲ್ಲಿ ಉಪ್ಪಿನ ಜಾಡಿಯನ್ನು ಮುಟ್ಟದಿರುವುದು ಒಳ್ಳೆಯದು ಎನ್ನುತ್ತಾರೆ. ಹಾಗಾದರೆ ಅದೇ ಗೃಹಿಣಿಯರು ಉಪ್ಪು ಬಳಸದೆ ಅಡುಗೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಕಾಡಬಹುದು. ಅಂತಹ ಸಂದರ್ಭಕ್ಕಾಗಿ ಅಗತ್ಯವಿದ್ದಷ್ಟು ಉಪ್ಪನ್ನು ಪ್ರತ್ಯೇಕ ಪಾತ್ರೆಯಲ್ಲಿ ಇಟ್ಟುಕೊಂಡಿರಿ. ಅಶುಭ ಕಾಲದಲ್ಲಿ ಮಾತ್ರ ಅಡುಗೆಗೆ ಆ ಉಪ್ಪನ್ನು ಬಳಸಿ. ಇದು ಸ್ವಲ್ಪ ಕಷ್ಟಕರವೆನಿಸಿದರೂ ಅನುಸರಿಸುವುದು ಶ್ರೇಯಸ್ಕರ.

ಆದರೆ ಮನೆಯಲ್ಲಿ ಐಶ್ವರ್ಯ ಲಕ್ಷ್ಮಿ ಅಂಶವು ಸ್ಥಿರವಾಗಿರಬೇಕಾದರೆ ಮುಟ್ಟಿನ ಸಮಯದಲ್ಲಿ ಕಲ್ಲು ಉಪ್ಪನ್ನು ಮುಟ್ಟದಿರುವುದು ಒಳ್ಳೆಯದು. ಮುಟ್ಟಿನ ಸೂತಕ, ಮೃತ್ಯುಸೂತಕ, ಜನ್ಮಸೂತಕ, ದಂಪತಿ ಸೇರಿದ ಸೂತಕ, ಅಮಾವಾಸ್ಯೆ ಸಂದರ್ಭಗಳಲ್ಲಿ ಸ್ನಾನ ಮಾಡದೆ ಉಪ್ಪಿನ ಬಟ್ಟಲನ್ನು ಮುಟ್ಟಿದರೆ ತೊಂದರೆ ಅಧಿಕವಾಗುತ್ತದೆ ಎಂಬುದನ್ನು ಮರೆಯಬೇಡಿ.

ಉಪ್ಪು ಸಾಮಾನ್ಯವಾದ ವಸ್ತುವಲ್ಲ. ಅದು ನಮ್ಮ ಎಲ್ಲಾ ಆಲೋಚನೆಗಳು ಮತ್ತು ಕ್ರಿಯೆಗಳಲ್ಲಿ ಪ್ರತಿಫಲಿಸುವ ವಸ್ತುವಾಗಿದೆ. ಆದ್ದರಿಂದ ಉಪ್ಪನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಆಧ್ಯಾತ್ಮಿಕ ವಿಷಯಗಳಲ್ಲಿ ನಂಬಿಕೆ ಇರುವವರು ಅದನ್ನು ಅನುಸರಿಸಬೇಕು. ಖಂಡಿತವಾಗಿಯೂ ಅಂತಹವರಿಗೆ ಒಳ್ಳೆಯದು ಸಂಭವಿಸುತ್ತದೆ.

ತಿಂಗಳ ಮೊದಲ ದಿನ ಉಪ್ಪು ಖರೀದಿಸಿದರೆ ಹಣದ ಹೊಳೆಯೇ ಹರಿಯುತ್ತೆ! ತಿಂಗಳ ಮೊದಲ ದಿನ ಉಪ್ಪು ಖರೀದಿ ಮಾಡಿ; ತಿಂಗಳ ಮೊದಲ ದಿನವೇ ಉಪ್ಪನ್ನು ಖರೀದಿಸುವುದು ವಿಶೇಷ. ಇದರಿಂದ ಲಕ್ಷ್ಮಿ ದೇವಿಯ ಆಗಮನವಾಗಿ ಮನೆಯೊಳಗೆ ಹಣದ ಹೊಳೆ ಹರಿಯುತ್ತದೆ. ಶುಕ್ರವಾರದಂದು ಉಪ್ಪನ್ನು ಖರೀದಿಸುವುದು ವಿಶೇಷವಾಗಿ ಒಳ್ಳೆಯದು. ಇದರ ಆಧಾರದ ಮೇಲೆ ಸಮುದ್ರದಲ್ಲಿ ಸಿಗುವ ಉಪ್ಪನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ. ಆದ್ದರಿಂದಲೇ ಗ್ರಹಪ್ರವೇಶದ ಸಮಯದಲ್ಲಿ ಹೊಸ ಮನೆಗೆ ಹೋದಾಗ ಮೊದಲ ಪದಾರ್ಥವಾಗಿ ಉಪ್ಪಿಗೆ ಆದ್ಯತೆ ನೀಡಲಾಗುತ್ತದೆ.

ತಾಯಿಯ ಜನ್ಮದಿನ ಉಪ್ಪು ಖರೀದಿಸಿದರೆ ದುಪ್ಪಟ್ಟು ಲಾಭವಾಗುತ್ತದೆ: ತಾಯಿಯ ಜನ್ಮದಿನ ಉಪ್ಪನ್ನು ಖರೀದಿಸುವುದರಿಂದ ದುಪ್ಪಟ್ಟು ಲಾಭವಾಗುತ್ತದೆ. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಕಟಾಕ್ಷ ತುಂಬಿರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಆದ್ದರಿಂದ ಈ ದಿನಗಳಲ್ಲಿ ಕಲ್ಲು ಉಪ್ಪನ್ನು ಖರೀದಿಸುವುದು ಉತ್ತಮ.

Also Read: Dasara 2024 – ದುರ್ಗಾ ದೇವಿಯನ್ನು ಶಮಿ ಎಲೆ-ಹೂವಿನಿಂದ ಪೂಜಿಸುತ್ತಾರೆ ಏಕೆ? ಬನ್ನಿ ಬನ್ನೀ ಮರದ ಮಹತ್ವ ತಿಳಿಯೋಣ

ಕಲ್ಲುಪ್ಪು ಮಹಾಲಕ್ಷ್ಮೀಯ ಅಂಶ: ಕಲ್ಲುಪ್ಪು ಮಹಾಲಕ್ಷ್ಮೀಯ ಅಂಶವಂತೆ! ಕಲ್ಲುಪ್ಪು ಖರೀದಿಸಿದರೆ ಮನೆಯಲ್ಲಿನ ದಾರಿದ್ರ್ಯ ತೊಲಗಿ ಹಣದ ಹರಿವು ಹೆಚ್ಚಾಗುತ್ತದೆ. ಪ್ರತಿ ತಿಂಗಳ ಮೊದಲ ದಿನ ಉಪ್ಪನ್ನು ಖರೀದಿಸಿ ಜಾಡಿಯಲ್ಲಿಟ್ಟರೆ ಆದಾಯ ಹೆಚ್ಚುತ್ತದೆ. ಅದೇ ರೀತಿ ಪ್ರತಿ ಶುಕ್ರವಾರವೂ ಅಂಗಡಿಯಿಂದ ಉಪ್ಪನ್ನು ಖರೀದಿಸಿ ತನ್ನಿ. ಹೀಗೆ ಪ್ರತಿ ವಾರ ಸ್ವಲ್ಪ ಉಪ್ಪು ಖರೀದಿಸಿದರೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಏಕೆಂದರೆ ಕಲ್ಲು ಉಪ್ಪನ್ನು ಮಹಾಲಕ್ಷ್ಮಿಯ ಅಂಶ ಎಂದು ಹೇಳಲಾಗುತ್ತದೆ.

ಮನೆ ಸ್ವಚ್ಛ ಮಾಡಿ, ನಂತರ ಉಪ್ಪು ತನ್ನಿ: ಮೊದಲು ನಿಮ್ಮ ಮನೆಯನ್ನು ಸ್ವಚ್ಛ ಮಾಡಿ, ನಂತರ ಉಪ್ಪು ತನ್ನಿ. ಗಲೀಜಿಲ್ಲದ, ಸ್ವಚ್ಛವಾಗಿರುವ ಮನೆಗೆ ಉಪ್ಪು ಪ್ರವೇಶಿಸಿದರೆ, ಸಂಪತ್ತು ಹೆಚ್ಚಾಗುತ್ತದೆ. ಹಾಗಾಗಿ ತಿಂಗಳ ಮೊದಲ ದಿನ ಅಥವಾ ಅದಕ್ಕಿಂತ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದು ಉತ್ತಮ. ಅದರ ನಂತರ ಉಪ್ಪು ತನ್ನಿ. ರಾಕ್ ಸಾಲ್ಟ್ ಮಹಾಲಕ್ಷ್ಮಿಯ ಸಂಯೋಜನೆ. ಅಶುದ್ಧ ಕೈಗಳಿಂದ ಅದನ್ನು ಮುಟ್ಟಬಾರದು ಎಂಬುದನ್ನು ಮನಗಾಣಿ. ಹೀಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ಎದುರಾಗುತ್ತವೆ. ಬಡತನ ಮನೆ ಮಾಡುತ್ತದೆ. ಆದ್ದರಿಂದ ಉಪ್ಪನ್ನು ಶುದ್ಧ ಹೃದಯದಿಂದ ಸ್ವೀಕರಿಸಬೇಕು.

ಉಪ್ಪು ಕೆಳಗೆ ಬಿದ್ದರೆ ಕಾಲಿನಿಂದ ಸ್ವಚ್ಛ ಮಾಡಬೇಡಿ: ಅಕಸ್ಮಾತ್​ ಕೈಜಾರಿ ಉಪ್ಪು ಕೆಳಗೆ ಬಿದ್ದರೆ ಅದನ್ನು ಕಾಲಿನಿಂದ ಸ್ವಚ್ಛ ಮಾಡಬೇಡಿ; ಉಪ್ಪನ್ನು ಬೆರಳುಗಳಿಂದ ಚಿಮುಕಿಸುವುದು ದುರದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದರಿಂದ, ಉಪ್ಪು ನೆಲದ ಮೇಲೆ ಬೀಳುವ ಅಪಾಯವಿರುತ್ತದೆ. ಅದೊಮ್ಮೆ ಕೆಳಗೆ ಬಿದ್ದರೂ ಒದ್ದೆ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಬೇಕು. ಉಪ್ಪಿನ ವಿಷಯದಲ್ಲಿ ಜಾಗರೂಕರಾಗಿರಿ, ಜವಾಬ್ದಾರಿಯುತವಾಗಿರಿ. ಉಪ್ಪನ್ನು ಲಘುವಾಗಿ ತೆಗೆದುಕೊಂಡರೆ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಎಂಬುದನ್ನ ಮನಗಾಣಿ.

ತಿಂಗಳಿಗೊಮ್ಮೆ ಕಲ್ಲು ಉಪ್ಪನ್ನು ಮನೆಯ ಮೂಲೆಗಳಲ್ಲಿ ಇಡಿ. ತಿಂಗಳ ಕೊನೆಯಲ್ಲಿ ಆ ಹಳೆಯ ಉಪ್ಪನ್ನು ತೆಗೆದು, ಹೊಸ ಉಪ್ಪನ್ನು ಹಾಕುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ದೂರವಾಗುತ್ತದೆ. ಹಾಗೆಯೇ, ಮನೆಯ ಅಡುಗೆ ಮನೆಯಲ್ಲಿ ಉಪ್ಪು ಇಲ್ಲದೆ ಇರಬಾರದು. ಉಪ್ಪಿನ ಬಗ್ಗೆ ಜಾಗ್ರತೆ ವಹಿಸಿದರೆ ಸದಾ ಮಹಾಲಕ್ಷ್ಮಿ ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಇದೆ.

ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

 

Published On - 2:02 am, Sat, 12 October 24