
ಯಾವುದೇ ದೇವಾಲಯಕ್ಕೆ ಭೇಟಿ ನೀಡಿದಾಗ, ಗರ್ಭಗುಡಿಯೊಳಗೆ ಪ್ರವೇಶಿಸುವ ಮುನ್ನ ಅಲ್ಲಿ ಕಟ್ಟಿರುವ ಗಂಟೆಯನ್ನು ಬಾರಿಸುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಪದ್ಧತಿಯನ್ನು ಪ್ರತಿಯೊಬ್ಬರೂ ಪಾಲಿಸುತ್ತಾರೆ. ಆದರೆ, ಈ ಸಂಪ್ರದಾಯದ ಹಿಂದಿರುವ ಆಧ್ಯಾತ್ಮಿಕ ಅರ್ಥವೇನು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಹಿಂದೂ ಧರ್ಮದಲ್ಲಿ ಗಂಟಾನಾದಕ್ಕೆ ಅತ್ಯಂತ ಪವಿತ್ರ ಮತ್ತು ವಿಶೇಷವಾದ ಸ್ಥಾನವಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವಾಲಯದಲ್ಲಿ ಗಂಟೆ ಬಾರಿಸುವುದರಿಂದ ಸಕಲ ದೇವತೆಗಳನ್ನು ಆಹ್ವಾನಿಸಿದಂತಾಗುತ್ತದೆ ಎಂದು ಭಾವಿಸಲಾಗುತ್ತದೆ. ಗಂಟೆಯಿಂದ ಹೊರಹೊಮ್ಮುವ ನಾದವು ಆಲಯದ ಪರಿಸರವನ್ನು ಪವಿತ್ರಗೊಳಿಸಿ, ಭಕ್ತರ ಮನಸ್ಸನ್ನು ದೈವಚಿಂತನೆಯತ್ತ ಸೆಳೆಯುತ್ತದೆ. ಅಷ್ಟೇ ಅಲ್ಲದೆ, ಗಂಟೆಯ ಶಬ್ದವು ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಮತ್ತು ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ ಎಂಬುದು ಪಾರಂಪರಿಕ ನಂಬಿಕೆಯಾಗಿದೆ.
ಇದನ್ನೂ ಓದಿ: ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ
ಹಿಂದೂ ಧರ್ಮದ ಆಗಮಶಾಸ್ತ್ರಗಳು ಮತ್ತು ಪಾಂಚರಾತ್ರ ಪೂಜಾ ವಿಧಾನಗಳಲ್ಲಿ ಗಂಟೆಯ ಬಳಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ದೇವಾಲಯಗಳಲ್ಲಿ ನಿತ್ಯ ಪೂಜೆ ಆರಂಭವಾಗುವ ಸಮಯದಲ್ಲಿ ಮತ್ತು ಮಹಾಮಂಗಳಾರತಿ ಮಾಡುವ ವೇಳೆಯಲ್ಲಿ ಗಂಟೆಯನ್ನು ನಿರಂತರವಾಗಿ ಬಾರಿಸಲಾಗುತ್ತದೆ. ಬೇರೆ ಬೇರೆ ಕಡೆ ಹರಿದಾಡುವ ಭಕ್ತರ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ, ಸಂಪೂರ್ಣ ಗಮನವನ್ನು ಭಗವಂತನ ಮೇಲೆ ನೆಡುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಲ್ಲದೇ ಗಂಟೆಯ ಮಧುರವಾದ ನಾದವನ್ನು ಕೇಳುವುದರಿಂದ ಮನಸ್ಸಿಗೆ ತಕ್ಷಣವೇ ನೆಮ್ಮದಿ ಮತ್ತು ಪ್ರಶಾಂತತೆ ದೊರೆಯುತ್ತದೆ ಎಂದು ಅನೇಕ ಭಕ್ತರು ನಂಬುತ್ತಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ