ಜಗತ್ತಿನಲ್ಲಿ ಎಲ್ಲರೂ ಸುಖವನ್ನು ಅಪೇಕ್ಷಿಸುತ್ತಾರೆ. ಆದರೆ ಅದರ ಕುರಿತಾದ ಪರಿಶ್ರಮಪಡಲು ಮನಸ್ಸು ಮಾಡುವುದೇ ಇಲ್ಲ. ಸುಭಾಷಿತವೊಂದು ಹೇಳುತ್ತದೆ – ನಿಧಾನವಾಗಿ ನಿರಂತರವಾಗಿ ಸಾಗಿ ಇರುವೆ ತನ್ನ ಮಹತ್ತರವಾದ ಗುರಿತಲುಪುತ್ತದೆ. ಆದರೆ ಪ್ರಯತ್ನ ಪಡದೇ ಇದ್ದರೆ ಗರುಡನೂ ಸಹ ಒಂದು ಹೆಜ್ಜೆ ಮುಂದೆ ಸಾಗಲೂ ಸಾಧ್ಯವಿಲ್ಲ. ನಾವುಗಳು ಹಾಗಾಗಲಿ ಹೀಗಾಗಲಿ ಎಂದು ಕನಸು ಕಾಣುತ್ತೇವೆ. ಭಾವಪೂರ್ಣವಾಗಿ ಧ್ಯಾನಿಸೋಣ ಎಂದು ಯೋಚಿಸುತ್ತೇವೆ. ನಮ್ಮ ಪ್ರಯತ್ನ ಮಾತ್ರ ಆ ವಿಚಾರದಲ್ಲಿ ಶೂನ್ಯ. “ಜನರು ಪಾಪಫಲವನ್ನು ಬಯಸುವುದಿಲ್ಲ ಆದರೆ ಪಾಪಕಾರ್ಯ ಮಾಡುವುದನ್ನು ಬಿಡುವುದಿಲ್ಲ. ಪುಣ್ಯದ ಫಲವನ್ನು ಬಯಸುತ್ತಾರೆ ಆದರೆ ಪುಣ್ಯಪ್ರದ ಕಾರ್ಯವನ್ನು ಮಾಡುವುದಿಲ್ಲ” ಏನು ವಿಪರ್ಯಾಸ ಅಲ್ಲವೇ ?
ಅದೆಷ್ಟೋ ಜನ ನಮ್ಮ ಕಣ್ಮುಂದೆ ದೇವರನ್ನು, ಸಾಧಕರನ್ನು, ವಿಧಿಯನ್ನು,ಸಮಯವನ್ನು ಹೀಗೇ ಹಲವಾರು ವಿಧಗಳಲ್ಲಿ ನಿಂದಿಸುತ್ತಿರುತ್ತಾರೆ. ಅವರ ನಿಂದನೆಗೆ ಕಾರಣ ಇಷ್ಟೇ ಅವರ ಯೋಚನೆಗೆ/ ಕಲ್ಪನೆಗೆ ತಕ್ಕಂತೆ ಆಗಲಿಲ್ಲ ಎಂಬುದೊಂದೇ ಆಗಿದೆ. ಯಾವುದೇ ಹಂತವಿರಲಿ ಸಫಲತೆ ಎನ್ನುವುದು ಸಮಯಪ್ರಜ್ಞೆ ಮತ್ತು ಭಗವತ್ಸಂಕಲ್ಪ ಹಾಗೂ ಪ್ರಾಮಾಣಿಕ ಪ್ರಯತ್ನದ ಆಧಾರದ ಮೇಲೆ ಇರುತ್ತದೆ. ನಾವುಗಳು ನಮಗೇ ಒಳಿತಾಗಲಿಲ್ಲ ಆದೇವರ ಬಳಿ ಹೋದೆ ಪೂಜೆ ಮಾಡಿದೆ, ಈ ಸಾಧಕರು ಹಾಗಂದರು, ವಿಧಿಯೇ ಹಾಗೆ, ನನ್ನ ಟೈಮೇ ಸರಿ ಇಲ್ಲ ಎಂಬುದಾಗಿ ಗೊಣಗುತ್ತಿರುತ್ತೇವೆ.
ಒಂದು ಸಲ ಯೋಚಿಸಿ ದೇವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದೆವಾ? ಸಾಧಕರು ಹೇಳಿ ರೀತಿ ಶ್ರದ್ಧೆಯಿಂದ ಮಾಡಿದೆವಾ? ವಿಧಿಯ ಪರೀಕ್ಷೆಗೆ ಏನು ಮಾಡಿದೆವು? ಸಮಯವನ್ನು ಸರಿಯಾಗಿ ಬಳಸಿದೆವಾ? ಎಂದು. ಆಗ ಮನದಾಳದ ಉತ್ತರ ಹೆಚ್ಚಾಗಿ ಸರಿಯಾಗಿ ಮಾಡಿಲ್ಲ ಎಂಬುದೇ ಆಗಿರುತ್ತದೆ. ಹಾಲಿಗೆ ಸರಿಯಾದ ಪ್ರಮಾಣದಲ್ಲಿ ಹುಳಿ ಹಿಂಡದೇ ಇದ್ದಲ್ಲಿ ಮೊಸರೇ ಸರಿ ಆಗುವುದಿಲ್ಲ. ನಿರ್ಜೀವ ಕಟ್ಟಡಕ್ಕೆ ಸೂಕ್ತಪ್ರಮಾಣದ ಸಾಮಾಗ್ರಿಗಳನ್ನು ಹಾಕದೇ ಇದ್ದಲ್ಲಿ ಕಟ್ಟಡ ಸರಿಯಾಗಿ ಬಾಳದು. ಇಷ್ಟೆಲ್ಲಾ ನಿರ್ಜೀವ ವ್ಯವಸ್ಥೆಗೇ ಇರುವಾಗ ಇನ್ನು ಬುದ್ಧಿವಂತರಾದ ಮಾನವರು ಎಷ್ಟು ಪ್ರಮಾಣದಲ್ಲಿ ಮೇಲಿನ ಕಾರ್ಯಗಳನ್ನು ಮಾಡಬೇಕು ಯೋಚಿಸಿ..
ಉಪನಿಷತ್ತಲ್ಲಿ ಒಂದು ಮಾತಿದೆ – “ಯಥಾ ಸಂಪುಷ್ಪಿತಸ್ಯ ಪುಷ್ಪಸ್ಯ ಗಂಧೋ ದೂರಾದ್ವಾತಿ ತಥಾ ಪುಣ್ಯಸ್ಯ ಕರ್ಮಣಃ” ಹೇಗೆ ಅರಳಿದ ಪುಷ್ಪದ ಪರಿಮಳವು ದೂರದಿಂದಲೇ ತಿಳಿಯುವುದೋ ಹಾಗೇ ಪುಣ್ಯಕಾರ್ಯದ ಫಲವೂ ಗೋಚರಿಸದೇ ಇರದು ಎಂದರ್ಥ. ನಾವುಗಳು ಮಾಡುವ ಕೆಲಸ ಪ್ರಾಮಾಣಿಕವಾಗಿದ್ದಲ್ಲಿ ಅದರ ಫಲ ಸಫಲವಾಗಿ ಬರುವುದು. ಇಲ್ಲದಿದ್ದಲ್ಲಿ ಅದು ಅಫಲವಾಗಿ ಬಿಡುವುದು.
ಇವೆಲ್ಲದಕ್ಕೂ ಭಗವತ್ಸಂಕಲ್ಪ ಎನ್ನುವುದು ಅತೀ ಮುಖ್ಯ. ಪುರಾಣದ ಒಂದು ಕಥೆಯಿದೆ – ಒಂದು ಪಾರಿವಾಳವು ಅರುಣಾಚಲ ಬೆಟ್ಟದಲ್ಲಿ ಕುಳಿತಿತ್ತಂತೆ. ಅದು ತುಂಬಾ ವೇದನೆಯಿಂದ ಬಳಲುತಿತ್ತು. ಮರಣದ ಸಮಯ ಹತ್ತಿರ ಬಂತೋ ಎಂಬಂತಿತ್ತು. ಅದರ ಪ್ರಾಣ ಶಕ್ತಿಯನ್ನು ಒಯ್ಯಲು ಯಮಕಿಂಕರರು ಅದರ ಬಳಿ ಬರುತ್ತಿದ್ದರಂತೆ. ಆಗ ಪಕ್ಷಿರಾಜ ಗರುಡ (ವಿಷ್ಣುವಿನವಾಹನ) ಅದನ್ನು ಗಮನಿಸಿ ತಕ್ಷಣ ಆ ಪಾರಿವಾಳವನ್ನು ಎತ್ತಿಕೊಂಡು ಅತೀವೇಗದಿಂದ ಹೋಗಿ ಹಿಮಾಲಯದ ಅತೀಸೂಕ್ಷ್ಮ ಪ್ರದೇಶದಲ್ಲಿ ಅದನ್ನು ಒಂದು ಮರದ ಬೇರಿನ ಪೊಟರೆಯೊಳಗೆ ಇಟ್ಟನಂತೆ. ಈ ಕಾರ್ಯವನ್ನು ಗಮನಿಸಿದ ಭಗವಂತವನು ನಸು ನಕ್ಕನಂತೆ. ಗರುಡ ನಾರಾಯಣನನ್ನು ಕೇಳಿದ ನಗಲು ಕಾರಣವೇನೆಂದು ? ಅದಕ್ಕೆ ನಾರಾಯಣನ ಉತ್ತರ ಆ ಪಾರಿವಾಳದ ಸಾವು ಇಂದು ಹಿಮಾಲಯದ ಸೂಕ್ಷ್ಮಪ್ರದೇಶದಲ್ಲಿ ಎಂದು ನಿರ್ಣಯವಾಗಿತ್ತು. ಆದರೆ ಅಲ್ಲಿಗೆ ಅದು ತತ್ಕ್ಷಣದಲ್ಲಿ ತಲುಪಲು ಸಾಧ್ಯವಿಲ್ಲ. ಅದಕ್ಕೆ ನೀನು ಸಹಕರಿಸಿದೆ ಎಂದು ಮತ್ತೆ ನಕ್ಕನಂತೆ. ಅಂದರೆ ನಾವು ಕೇವಲ ಪ್ರಾಮಾಣಿಕ ಕಾರ್ಯವನ್ನು ಮಾಡಬೇಕು ಎಂಬುದು ಸತ್ಯ ಆಯಿತಲ್ಲವೇ?
ಮೇಲಿನ ಕೆಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ನಾವು ಯಾರನ್ನಾದರು ನಿಂದಿಸುತ್ತಾ ಕೂತರೆ ಅಲ್ಲೇ ಉಳಿದು ಬಿಡುತ್ತೇವೆ ಅಲ್ಲವೇ? ಹಾಗೇ ನಮ್ಮ ಕರ್ತವ್ಯ ಮಾಡದೇ ಇದ್ದರೆ ಏನೂ ಇಲ್ಲದವರಾಗುತ್ತೇವೆ ಅಲ್ಲವೇ? ಒಳ್ಳೆಯ ನೆಮ್ಮದಿಯ ಬದುಕಿನ ಅಪೇಕ್ಷೆಯಿದ್ದಲ್ಲಿ ಪಾಪದ ಹಾದಿತುಳಿಯದೇ ಪುಣ್ಯದ ಪಥದಲ್ಲಿ ಸಾಗಬೇಕಲ್ಲವೇ? ಆಹಾರವಿದ್ದೂ ಉಣ್ಣದಿದ್ದರೆ ಯಾರ ತಪ್ಪು ಅನ್ನಬೇಕು? ದಾರಿ ಇದ್ದೂ ನಡೆಯದಿದ್ದರೆ ಗುರಿತಲುಪಲು ಸಾಧ್ಯವೇ? ನಿಂದಿಸುವಿಕೆಯಿಂದ ಏನು ಲಾಭ ? ಏನೂ ಇಲ್ಲ ಎಂಬುದೇ ಉತ್ತರ. ಯೋಚಿಸದೇ ಕಾರ್ಯವೆಸಗಿದರೆ ಗರುಡ ಮಾಡಿದಂತಾಗುವುದಲ್ಲವೇ? ಇದೆಲ್ಲಕ್ಕೂ ಕಾರಣ ಒಂದೇ ಭಗವತ್ಸಂಕಲ್ಪ. ಆ ಸಂಕಲ್ಪ ಸುಫಲವಾಗಬೇಕಾದರೆ ಸರಿಯಾದ ಪ್ರಜ್ಞೆ ನಮಗಿರಬೇಕು ಮತ್ತು ಸಮಯಕ್ಕೆ ಅದು (ಆ ಪ್ರಜ್ಞೆ ಕಾರ್ಯೋನ್ಮುಖವಾಗಬೇಕು) ಪ್ರವೃತ್ತವಾಗಬೇಕು. ಅದಕ್ಕೆ ನಿರಂತರ ಅಭ್ಯಾಸ ಬೇಕು.
ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು
S.R.B.S.S College ಹೊನ್ನಾವರ
kkmanasvi@gamail.com