“ಜಾತಸ್ಯ ಮರಣಂ ಧ್ರುವಮ್” ಎಂಬುದು ಶಾಸ್ತ್ರದ ಮಾತು. ಜನಿಸಿದವನಿಗೆ (ಹುಟ್ಟಿದವನಿಗೆ) ಮರಣ ಎಂಬುದು ನಿಶ್ಚಿತ ಎಂದು ಮೇಲಿನ ವಾಕ್ಯದ ಭಾವ. ಹುಟ್ಟು ಮತ್ತು ಸಾವು ಎನ್ನುವುದು ಒಂದು ನಾಣ್ಯದ ಎರಡು ಮುಖವಿದ್ದಂತೆ ಎಂದರೂ ತಪ್ಪಲ್ಲ. ಎಲ್ಲಿ ಉತ್ಪತ್ತಿ ಇದೆಯೋ ಅಲ್ಲಿ ನಾಶವೂ ಇದೆ. ಉತ್ಪತ್ತಿ ಅಂದರೆ ಜನನ. ನಾಶ ಅಂದರೆ ಸಾವು. ಈ ಎರಡೂ ಸ್ಥಳದಲ್ಲೂ (ಸಂದರ್ಭದಲ್ಲೂ) ಒಂದು ಅಲೌಕಿಕವಾದ ವಾತಾವರಣ ಏರ್ಪಡುತ್ತದೆ. ಹೇಗೆ ಪರಿಮಳವನ್ನು ಮೂರ್ತರೂಪದಲ್ಲಿ (ವಸ್ತುವಿನ ರೂಪದಲ್ಲಿ) ಗುರಿತಿಸಲಾಗುವುದಿಲ್ಲವೋ ಹಾಗೇ ಈ ಜನನ ಮತ್ತು ಮರಣ ಕಾಲದಲ್ಲಾಗುವ ಬದಲಾವಣೆಗಳನ್ನು ಮೂರ್ತರೂಪದಲ್ಲಿ ಹೇಳುವುದು ಕಷ್ಟಸಾಧ್ಯ. ಆದ್ದರಿಂದಲೇ ಇರಬೇಕು ಅದೊಂದು ಅಲೌಕಿಕ ವ್ಯವಸ್ಥೆ ಎಂದು ಹಿರಿಯರು ಹೇಳಿದ್ದು.
ಸ್ವಾಭಾವಿಕವಾಗಿ ನಮ್ಮಲ್ಲಿ ಜನನವಿರಲಿ ಮರಣವಿರಲಿ ಸೂತಕ ಎಂಬ ಪದವನ್ನು ಬಳಸುತ್ತೇವೆ. ಇನ್ನು ಕೆಲವುಕಡೆ ಮರಣಕ್ಕೆ ಸೂತಕವೆಂತಲೂ, ಜನನಕ್ಕೆ ಅಮೆ ಅಂತಲು ಹೇಳುತ್ತಾರೆ. ಆದರೆ ಇವೆಲ್ಲದಕ್ಕೆ ಶಾಸ್ತ್ರೀಯವಾದ ವಾಸ್ತವ ಹೆಸರು ಬೇರೇನೇ ಇದೆ. ಜನನ ಮತ್ತು ಮರಣ ಕಾಲದಲ್ಲಾಗುವ ಬದಲಾವಣೆ ವ್ಯವಸ್ಥೆಗೆ ಆಶೌಚ ಎಂದು ಹೆಸರು. ಈ ಆಶೌಚ ಮುಖ್ಯವಾಗಿ ಎರಡು ವಿಧ. ಒಂದು ಜನನಾಶೌಚ, ಮತ್ತೊಂದು ಮರಣಾಶೌಚ ಎಂದು. ಇದರಲ್ಲಿ ಜನನಾಶೌಚಕ್ಕೆ ಸೂತಕ ಅಂತಲೂ . ಮರಣಾಶೌಕ್ಕೆ ಮೃತಕ ಅಂತಲೂ ಹೇಳಬೇಕು. ಏಕೆಂದರೆ ಅದು ಶಾಸ್ತ್ರೀಯ ಹೆಸರು. ಸೂತಕ ಎಂದರೆ ಹುಟ್ಟುವುದು,ಜನ್ಮಪಡೆಯುವುದು ಎಂದರ್ಥ. ಆ ಕಾಲದಲ್ಲಿ ಉಂಟಾಗುವ ಅಶುಚಿಗೆ ಜನನಾಶೌಚ ಅಥವಾ ಸೂತಕ ಎಂದು ಹೇಳುವರು. ಮೃತಕ ಅಂದರೆ ಮರಣ ಹೊಂದಿದವನು ಎಂದರ್ಥ. ಆ ಸಮಯದಲ್ಲುಂಟಾಗುವ ಅಶುಚಿಗೆ ಮರಣಾಶೌಚ ಅಥವಾ ಮೃತಕ ಎಂದು ಹೇಳಬೇಕು. ಆದರೆ ರೂಢಿಯಲ್ಲಿ ಸೂತಕ ಎನ್ನುವ ಪದ ಬಂದಿದೆ. ಈ ಪದದ ವ್ಯಾಪ್ತಿ ಬಹಳಷ್ಟು ಇರುವುದರಿಂದ ಬಳಕೆ ತಪ್ಪಲ್ಲ.
ಸೂತಕ ಅಥವಾ ಮೃತಕದ ಕಾಲದಲ್ಲಿ ನಾವು ಆಶೌಚದ ವ್ಯಾಪ್ತಿಯಲ್ಲಿರುತ್ತೇವೆ. ಆಶೌಚವೆಂದರೆ ಶುಚಿಯಲ್ಲದಿರುವಿಕೆ ಅಥವಾ ಪರಿಶುದ್ಧವಲ್ಲದ ಸ್ಥಿತಿ ಎಂದು ಹೇಳುತ್ತದೆ ಶಾಸ್ತ್ರ. ಮನಸ್ಸು, ದೇಹ, ಅಂತರಂಗ, ಬುದ್ಧಿ ಹೀಗೆ ಯಾವ ಅಂಗವಾದರೂ ಅಶುಚಿಯಾಗಿದ್ದಲ್ಲಿ ದೇವತಾ ಕಾರ್ಯವನ್ನು ಅರ್ಥಾತ್ ಪೂಜೆ,ಹೋಮ,ಶಾಂತಿ,ದೇವಾಲಯ ಪ್ರವೇಶ, ಶುಭಾಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಹೇಗೆ ಕೊಳೆಯಾದ, ದುರ್ಗಂಧದಿಂದ ಕೂಡಿದ ಬಟ್ಟೆಯನ್ನು ಧರಿಸಿ ಸಾಮಾಜಿಕವಾಗಿ ತಿರುಗಾಡುವುದು ಉಚಿತವಲ್ಲವೋ ಹಾಗೇ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಲ್ಲದೆ ದೇವತಾಕಾರ್ಯವೂ ಕೂಡ ಮಾಡಬಾರದು. ಮಲಿನ ವಾತಾವರಣದಲ್ಲಿ ಹೇಗೆ ಕಾರ್ಯಸಫಲವಾಗದೋ ಅಂತಯೇ ಆಶೌಚದಲ್ಲಿ ಮಾಡಿದ ದೇವತಾಕಾರ್ಯ ಫಲ ನೀಡದು.
ಒಂದು ಮಾತಿದೆ ಮನುಷ್ಯನು ಅತ್ಯಂತ ಸಂತೋಷದಿಂದಿರುವಾಗ ಮತ್ತು ಅತೀ ದುಃಖಿತನಾಗಿರುವಾಗ ಯಾವ ಧರ್ಮಕಾರ್ಯವನ್ನೂ ಮಾಡಬಾರದು. ಅದರಿಂದ ಅತಿಯಾದ ಹಾನಿ ಆಗುತ್ತದೆ ಎಂದು. ನಾವು ಅತ್ಯಂತ ಸಂತೋಷಂದಿರುವಾಗ ಏನು ಮಾಡುತ್ತೇವೆ ಎಂಬ ಕಲ್ಪನೆ ಇರುವುದಿಲ್ಲ ಹಾಗೆಯೇ ದುಃಖ ಸಮಯದಲ್ಲೂ. ಮನಸ್ಸು ಮತ್ತು ಬುದ್ಧಿ ಸಮಾಧಾನ (ಅತಿಯಾಗಿ ಎರಡೂ ಇಲ್ಲದಿರುವ ಸ್ಥಿತಿಯೇ ಸಮಾಧಾನ ಸ್ಥಿತಿ) ಸ್ಥಿತಿಯಲ್ಲಿ ಇಲ್ಲದಿರುವಾಗ ಯಾವುದೇ ಕಾರ್ಯವನ್ನು ಮಾಡುವುದು ಸಮಂಜಸವಲ್ಲ ಎನ್ನುವುದು ವೈದ್ಯಕೀಯ ಶಾಸ್ತ್ರವೂ ಒಪ್ಪುವ ಸತ್ಯ. ಅಂತಯೇ ಜನನವಾದಾಗ ಅತೀ ಆನಂದವೂ, ಮರಣದಿಂದ ದುಃಖವೂ ಆಗುತ್ತದೆ. ಆ ಕಾರಣದಿಂದಲೂ ಶುಭ ಕರ್ಮಕ್ಕೆ ನಿಷೇಧವಿದೆ ಶಾಸ್ತ್ರದಲ್ಲಿ.
“ಪ್ರಯೋಜಮನುದ್ದಿಶ್ಯ ನ ಮಂದೋಪಿ ಪ್ರವರ್ತತೇ” ಎಂಬ ಸುಭಾಷಿತದ ಮಾತಿದೆ. ಜಗತ್ತಲ್ಲಿ ಪ್ರಯೋಜನವಿಲ್ಲದೆ ಒಬ್ಬ ಮಂದಮತಿಯೂ (ಮೂಢನೂ) ಸಹ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಹಾಗಿರುವಾಗ ಆಶೌಚದ ಕಾಲದಲ್ಲಿ ವ್ಯರ್ಥವಾಗಿ ಯಾರುತಾನೇ ಧರ್ಮಕಾರ್ಯ ಮಾಡಲು ಇಚ್ಛೆಪಡುತ್ತಾರೆ ಅಲ್ಲವೇ?
ಜಾತಾಶೌಚ ಮತ್ತು ಮರಣಾಶೌಚ ಎನ್ನುವುದು ಒಂದು ಆತ್ಮ (ಅಂತರಂಗ) ಸಂಬಂಧಿತವಾದ ವಿಚಾರ. ಇಲ್ಲಿ ಅಶುಚಿ ಎನ್ನುವುದು ಸುಗಂಧ/ದುರ್ಗಂಧಗಳಂತೆ ಕಣ್ಣಿಗೆ ಕಾಣುವ ವ್ಯವಸ್ಥೆಯಲ್ಲ. ಆದ್ದರಿಂದ ಈ ಆಶೌಚದ ಅಶುಚಿಯನ್ನು ಬಟ್ಟೆಯ ಕೊಳೆಯಂತೆ ತೋರಿಸುವುದು ಕಷ್ಟದ ಮಾತು. ಆದರೆ ಒಂದಂತೂ ನಿಶ್ಚಿತ ಸತ್ಯ ಆಶೌಚ (ಜಾತ – ಮರಣ ಅಶುಚಿ ) ದಲ್ಲಿ ಧರ್ಮ/ ದೇವತಾ ಕಾರ್ಯ, ದೇವಾಲಯಾದಗಳ ಪ್ರವೇಶ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ . ಈಗಲು ಕೆಲವು ದೇವಾಲಯಗಳಲ್ಲಿ ಆಶೌಚದವರು ಬಂದರೆ ಸರ್ಪಾದಿಗಳ ದರ್ಶನ ಮತ್ತು ಶುಭವಲ್ಲದ ಶಕುನಗಳು ಕಂಡುಬರುತ್ತದೆ. ಇಂತಹ ಹಲವು ಕಾರಣಗಳಿಂದ ಜನನ ಮತ್ತು ಮರಣ ಆಶೌಚದ ಇರುವಾಗ ದೇವತಾಪೂಜೆ ಇತ್ಯಾದಿ ಮಾಡುವುದು ಕ್ಷೇಮವಲ್ಲ.
ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು
S.R.B.S.S College ಹೊನ್ನಾವರ
kkmanasvi@gamail.com
Published On - 7:19 pm, Thu, 21 July 22