Sarpashapa: ಸರ್ಪ ಶಾಪದಿಂದ ಸುತಕ್ಷಯ ಯೋಗ ಎಂದರೇನು? ಅದಕ್ಕೆ ಕಾರಣವಾಗುವ ಗ್ರಹ, ಪರಿಹಾರ ಹೀಗಿವೆ
ಸರ್ಪಶಾಪದಿಂದ ಸಂತಾನ ವಿಳಂಬ ಆಗುತ್ತಿದೆ, ಅಥವಾ ಗರ್ಭಪಾತ ಪದೇಪದೇ ಆಗುತ್ತಿದೆ ಹೀಗೆ ಹೇಳುವವರು ಉಂಟು. ಜ್ಯೋತಿಷ್ಯದಲ್ಲಿ ಇದಕ್ಕೆ ಸರ್ಪಶಾಪ ಸುತಕ್ಷಯ ಯೋಗ ಎಂದು ಕರೆಯಲಾಗುತ್ತದೆ. ಯಾವ ಗ್ರಹ ಸ್ಥಿತಿಯಿಂದ ಹೀಗೊಂದು ಯೋಗ ರೂಪುಗೊಳ್ಳುತ್ತದೆ ಹಾಗೂ ಅದಕ್ಕೆ ಪರಿಹಾರ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಜನ್ಮ ಜಾತಕವನ್ನು ಇಟ್ಟುಕೊಂಡು ಪರಿಶೀಲನೆ ಮಾಡಿಕೊಳ್ಳಬಹುದು.

ಸರ್ಪ ಶಾಪ ಎಂಬುದು ಜ್ಯೋತಿಷ್ಯದಲ್ಲಿ ಕೇಳಿಬರುವ ದೋಷಗಳಲ್ಲಿ ಒಂದು. ಅದರಲ್ಲಿಯೂ ಸರ್ಪಶಾಪದಿಂದ ಮಕ್ಕಳಾಗುತ್ತಿಲ್ಲ ಅಥವಾ ಗರ್ಭ ನಿಲ್ಲುತ್ತಿಲ್ಲ ಎಂದು ಹೇಳುತ್ತಾರೆ. ಏನಿದು ಸರ್ಪಶಾಪ? ಯಾವ ಗ್ರಹ ಸ್ಥಿತಿಯಿದ್ದಲ್ಲಿ ಹೀಗೆ ಹೇಳಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುತ್ತಿದೆ. ಇದರಲ್ಲಿಯೇ ಪರಿಹಾರವನ್ನು ಸಹ ಸೂಚಿಸಲಾಗುವುದು. ಇಲ್ಲಿ ಪ್ರಸ್ತಾವ ಮಾಡುವ ಸಂಗತಿಗಳು ಗ್ರಂಥಗಳಲ್ಲಿ ಉಲ್ಲೇಖವಾದಂಥ ಸಾಮಾನ್ಯ ಸಂಗತಿಗಳನ್ನು ಒಳಗೊಂಡಿರುತ್ತವೆ. ತಂತಮ್ಮ ಜಾತಕವನ್ನು ಸ್ವಯಂ ಆಗಿ ನೋಡಿಕೊಂಡಾಗ ಈ ದೋಷ ಇದೆಯೆಂದು ಅನಿಸಿದರೂ ಒಮ್ಮೆ ಜ್ಯೋತಿಷಿಗಳಲ್ಲಿ ಜಾತಕವನ್ನು ತೋರಿಸುವುದು ಸರಿಯಾದ ಮಾರ್ಗ.
ಜನ್ಮ ಜಾತಕದಲ್ಲಿ ಲಗ್ನದಿಂದ ಐದನೇ ಮನೆಯಲ್ಲಿ ರಾಹುಗ್ರಹ ಇದ್ದು, ಆ ಗ್ರಹದ ಮೇಲೆ ಕುಜ ಗ್ರಹದ ದೃಷ್ಟಿ ಇದ್ದರೆ (ಕುಜ ಗ್ರಹವು ತಾನು ಇರುವ ರಾಶಿಯಿಂದ ನಾಲ್ಕು, ಏಳು ಹಾಗೂ ಎಂಟನೇ ಮನೆಯ ವೀಕ್ಷಣೆ ಮಾಡುತ್ತದೆ), ಇನ್ನು ಜನನ ಸಮಯದಲ್ಲಿ ರಾಹು ಗ್ರಹವು ಕುಜನ ಆಧಿಪತ್ಯ ಇರುವಂಥ ರಾಶಿಗಳಾದ ಮೇಷದಲ್ಲಿಯೋ ಅಥವಾ ವೃಶ್ಚಿಕದಲ್ಲಿಯೋ ಇದ್ದರೆ ಇದನ್ನು ಸರ್ಪಶಾಪಸುತಕ್ಷಯ ಯೋಗ ಎನ್ನಲಾಗುತ್ತದೆ.
ಜನನ ಕಾಲದಲ್ಲಿ ಶನಿ ಗ್ರಹವು ಲಗ್ನದಿಂದ ಐದನೇ ಮನೆಯ ಅಧಿಪತಿಯಾದ ಗ್ರಹದ ಜೊತೆಗೆ ಯುತಿಯಾಗಿ (ಒಟ್ಟಿಗೆ ಇರುವುದಕ್ಕೆ ಯುತಿ ಎನ್ನಲಾಗುತ್ತದೆ), ಅದೇ ಐದನೇ ಮನೆಯಲ್ಲಿ ಇದ್ದರೆ, ಮತ್ತು ಅಲ್ಲಿಂದ ಏಳನೇ ಮನೆಯಲ್ಲಿ ಚಂದ್ರ ಇದ್ದು, ಪೂರ್ಣ ದೃಷ್ಟಿಯಿಂದ ವೀಕ್ಷಣೆ ಮಾಡುತ್ತಿದ್ದರೆ ಅಥವಾ ಶನಿ ಗ್ರಹವು ಚಂದ್ರ ಹಾಗೂ ರಾಹುವಿನ ಜೊತೆಗೆ ಯುತಿಯಾಗಿದ್ದರೆ ಸರ್ಪಶಾಪದಿಂದ ಸುತ ಕ್ಷಯ ಆಗುತ್ತದೆ.
ಮಕ್ಕಳ ಕಾರಕ ಗ್ರಹವಾದ ಗುರುವು ರಾಹುವಿನೊಂದಿಗೆ ಯುತಿಯಾಗಿದ್ದಲ್ಲಿ ಮತ್ತು ಐದನೇ ಸ್ಥಾನದ ಅಧಿಪತಿ ಹಾಗೂ ಗುರು ದುರ್ಬಲವಾಗಿದ್ದಲ್ಲಿ, ಇನ್ನು ಜನ್ಮ ಲಗ್ನದ ಅಧಿಪತಿಯು ಕುಜ ಗ್ರಹ ಜೊತೆಗೆ ಯುತಿಯಾಗಿದ್ದಾಗ ಆಗಲೂ ಸರ್ಪಶಾಪ ಆಗುತ್ತದೆ.
ಗುರು ಗ್ರಹವು ಕುಜನ ಜೊತೆಗೆ ಯುತಿಯಾಗಿದ್ದಾಗ ಮತ್ತು ರಾಹು ಗ್ರಹವು ಜನ್ಮ ಲಗ್ನದಲ್ಲಿ ಇದ್ದು, ಐದನೇ ಮನೆಯ ಅಧಿಪತಿಯಾದ ಗ್ರಹವು ಲಗ್ನದಿಂದ ಆರು- ಎಂಟು ಅಥವಾ ಹನ್ನೆರಡನೇ ಮನೆಯಲ್ಲಿ ಇದ್ದಾಗ ಸರ್ಪಶಾಪ ಎನಿಸಿಕೊಳ್ಳುತ್ತದೆ.
ಒಂದು ವೇಳೆ ಪುತ್ರಕಾರಕ ಗ್ರಹವು ಬುಧ ಆಗಿದ್ದಾಗ ಮತ್ತು ಆ ಗ್ರಹವು ಕುಜನ ಅಂಶದಲ್ಲಿ ಇದ್ದು, ಕುಜ ಗ್ರಹದ ಜೊತೆಗೆ ಸೇರಿದ್ದಾಗ ಹಾಗೂ ಲಗ್ನದಲ್ಲಿ ರಾಹು ಮತ್ತು ಮಾಂದಿಯೂ ಇದ್ದಲ್ಲಿ ಸರ್ಪಶಾಪ ಆಗುತ್ತದೆ.
ಜನ್ಮ ಲಗ್ನದಿಂದ ಐದನೇ ಮನೆಯು ಮೇಷ ಅಥವಾ ವೃಶ್ಚಿಕ ರಾಶಿ ಆದಾಗ ಹಾಗೂ ಈ ರಾಶಿಗಳಲ್ಲಿ ರಾಹು ಮತ್ತು ಬುಧ ಒಟ್ಟಿಗೆ ಇದ್ದಲ್ಲಿ ಅಥವಾ ಬುಧ ಗ್ರಹದ ವೀಕ್ಷಣೆ ಇದ್ದಲ್ಲಿ (ಬುಧ ಗ್ರಹವು ತಾನು ಇರುವ ಸ್ಥಾನದಿಂದ ಏಳನೇ ಮನೆ ವೀಕ್ಷಣೆ ಮಾಡುತ್ತದೆ) ಸರ್ಪಶಾಪ ಆಗುತ್ತದೆ.
ಜನ್ಮ ಲಗ್ನದಿಂದ ಐದನೇ ಸ್ಥಾನದಲ್ಲಿ ರವಿ, ಶನಿ ಹಾಗೂ ಕುಜ ಗ್ರಹ ಇದ್ದರೆ ಮತ್ತು ರಾಹು, ಬುಧ ಮತ್ತು ಗುರುವಿನ ಜೊತೆಗೆ ಯುತಿಯಲ್ಲಿದ್ದರೆ ಮತ್ತು ಒಂದು ವೇಳೆ ಲಗ್ನ ಹಾಗೂ ಐದನೇ ಮನೆಯ ಅಧಿಪತಿಯು ದುರ್ಬಲರಾಗಿದ್ದರೆ ಸರ್ಪ ಶಾಪ ಎಂದೆನಿಸುತ್ತದೆ.
ಜನನ ಕಾಲದಲ್ಲಿನ ಲಗ್ನವು ರಾಹುವಿನೊಂದಿಗೆ ಸಂಬಂಧ ಹೊಂದಿದ್ದರೆ ಮತ್ತು ಲಗ್ನದಿಂದ ಐದನೇ ಮನೆಯ ಅಧಿಪತಿ ಗ್ರಹವು ಕುಜನೊಂದಿಗೆ ಸೇರಿದ್ದಲ್ಲಿ, ಒಂದು ವೇಳೆ ಪುತ್ರಕಾರಕ ಗ್ರಹವು ರಾಹುವಿನೊಂದಿಗೆ ಯುತಿಯಲ್ಲಿದ್ದರೆ ಅಥವಾ ರಾಹುವಿನ ದೃಷ್ಟಿಯನ್ನು ಹೊಂದಿದ್ದರೆ ಸರ್ಪಶಾಪದಿಂದ ಸುತಕ್ಷಯ ಆಗುತ್ತದೆ.
ಸುತಕ್ಷಯ ಯೋಗ ಪರಿಹಾರ ಏನು?:
ದಂಪತಿ ಪೈಕಿ ಯಾರಿಗೆ ಸರ್ಪಶಾಪ ಇರುತ್ತದೋ ಅವರು ಅದನ್ನು ನಿವಾರಣೆ ಮಾಡಿಕೊಳ್ಳಬೇಕಾಗುತ್ತದೆ. ಅಂಥವರು ನಾಗಾರಾಧನೆಯನ್ನು ಮಾಡಬೇಕು. ಸರ್ಪ ಸಂಸ್ಕಾರ ಅಥವಾ ನಾಗಪ್ರತಿಷ್ಠೆ ಮಾಡಿ, ಆ ದಿನ ದಶದಾನಗಳನ್ನು ಮಾಡುವ ಪರಿಪಾಠ ಉಂಟು. ಇದನ್ನು ಆಯಾ ಪ್ರಾದೇಶಿಕ ಭಾಗದಲ್ಲಿ ಅನುಸರಿಸುವ ಪದ್ಧತಿಗೆ ಅನುಗುಣವಾಗಿ ಮಾಡಿಕೊಳ್ಳಬಹುದು. ಆರಂಭದಲ್ಲಿಯೇ ಹೇಳಿದಂತೆ ಜ್ಯೋತಿಷಿಗಳ ಬಳಿ ಜಾತಕ ಪರಿಶೀಲನೆಯನ್ನು ಮಾಡಿಸಿಕೊಂಡು ಮುಂದುವರಿಯಿರಿ. ಲೇಖನ: ಸ್ವಾತಿ ಎನ್.ಕೆ.
Published On - 4:03 pm, Tue, 22 July 25