Spiritual; ಕೃಷ್ಣ ಅಭಿನಂದಿಸಿದ ಕರ್ಣನ ಗುಣ ಪರಾಕ್ರಮ ಯಾವುದು? ಕರ್ಣನ ರಥದ ಮಹತ್ವ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 17, 2022 | 7:00 AM

ಕರ್ಣ ಎಂದಾಕ್ಷಣ ಮನೋಭೂಮಿಕೆಯಲ್ಲಿ ಅರಳುವ ಮೊದಲ ಭಾವ ಅವನ ದಾನದ ಕುರಿತಾಗಿ. ಆಮೇಲೆ ಮೇಲ್ನೋಟಕ್ಕೆ ಅವನಿಗಾದ ಅನ್ಯಾಯವೆಂಬಂತಹ ಸನ್ನಿವೇಶಗಳು. ಆಮೇಲೆ ಅವನ ಪರಾಕ್ರಮ. ಕಣ್ಣಮುಂದೆ ಹರಿಯುತ್ತದೆ.

Spiritual; ಕೃಷ್ಣ ಅಭಿನಂದಿಸಿದ ಕರ್ಣನ ಗುಣ ಪರಾಕ್ರಮ ಯಾವುದು? ಕರ್ಣನ ರಥದ ಮಹತ್ವ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಮಹಾಭಾರತದ ಯುದ್ಧದ ಸನ್ನಿವೇಶ ಸಾಮಾನ್ಯ ಎಲ್ಲರಿಗೂ ತಿಳಿದೇ ಇದೆ. ಅದರಲ್ಲೂ ಕರ್ಣಾರ್ಜುನರ ಯುದ್ಧವಂತೂ ಅತ್ಯಂತ ರುದ್ರರಮಣೀಯ. ಮಹಾಭಾರತದ ಒಂದೊಂದು ಪಾತ್ರವೂ ಸಹ ಒಂದು ಗ್ರಂಥವಿದ್ದಂತೆ. ಅದರಿಂದ ತಿಳಿಯುವುದು, ಅಳವಡಿಸಿಕೊಳ್ಳುವುದು ಮತ್ತು ತ್ಯಜಿಸುವಂತಹ ಹಲವಾರು ಸನ್ನಿವೇಶಗಳು ನಮ್ಮ ಮುಂದೆ ಬರುತ್ತದೆ. ಹಾಗಯೇ ಕೆಲವೊಂದು ಅಂಶಗಳು ಕಂಡೂ ಕಾಣದಂತಾದ ಮತ್ತು ಕೇಳಿಯೂ ಕೇಳದಂತಿರುವ ಅಂಶಗಳೂ ಇವೆ. ಕರ್ಣ ಎಂದಾಕ್ಷಣ ಮನೋಭೂಮಿಕೆಯಲ್ಲಿ ಅರಳುವ ಮೊದಲ ಭಾವ ಅವನ ದಾನದ ಕುರಿತಾಗಿ. ಆಮೇಲೆ ಮೇಲ್ನೋಟಕ್ಕೆ ಅವನಿಗಾದ ಅನ್ಯಾಯವೆಂಬಂತಹ ಸನ್ನಿವೇಶಗಳು. ಆಮೇಲೆ ಅವನ ಪರಾಕ್ರಮ. ಕಣ್ಣಮುಂದೆ ಹರಿಯುತ್ತದೆ.

ಹಾಗಾದರೆ ಇದರಲ್ಲಿ ಕೃಷ್ಣ ಮೆಚ್ಚಿದ ಸಂದರ್ಭ ಏನು ಎತ್ತ ಎಂದು ಕೇಳಿದರೆ… ಅದಕ್ಕುತ್ತರ ಮಹಾಭಾರತದ ಯುದ್ಧದ ಹದಿನೇಳನೇ ದಿನ ನಡೆದ ಒಂದು ಘಟನೆ. ಅಂದು ಕರ್ಣ ಪರ್ವದ ದಿನ. ಶಲ್ಯನ ನಿಯಮಕ್ಕೆ ಬದ್ಧನಾಗಿ ಕರ್ಣ ತನ್ನ ರಥವೇರಿ ಯುದ್ಧಕ್ಕೆ ಹೊರಟಿರುತ್ತಾನೆ. ಇತ್ತ ಅರ್ಜುನನು ತನ್ನ ಅಣ್ಣನಾದ ಧರ್ಮರಾಯನಿಗೆ ಮುಂಚಿನ ದಿನ ಕರ್ಣ ಮಾಡಿದ ಘಾಸಿ (ಗಾಯದ) ಯ ಕಾರಣದಿಂದ ಕುಪಿತನಾಗಿ ಕರ್ಣನನ್ನು ಸಂಹರಿಸುವ ಸಂಕಲ್ಪದೊಂದಿಗೆ ಸಾರಥಿಯಾದ ಕೃಷ್ಣನೊಂದಿಗೆ ರಥವೇರಿ ರಣಾಂಗಣಕ್ಕೆ ಬರುತ್ತಿದ್ದಾನೆ. ಇಬ್ಬರ ಮುಖಾಮುಖಿ ಆಗಿದೆ. ಅರ್ಜುನನು ಬಿಟ್ಟ ಬಾಣದಿಂದ ಕರ್ಣನ ರಥವು ನೂರು ಯೋಜನ ದೂರ ಹಿಂದೆ ಸರಿಯುತ್ತದೆ. ಅರ್ಜುನ ಗರ್ವದಿಂದ ಬೀಗುತ್ತಾನೆ. ಶಲ್ಯನ ಅತ್ಯಂತ ಚಾಣಕ್ಷತನದ ಸಾರಥ್ಯದಿಂದ ರಥವು ಕೆಲವೇ ಸಮಯದಲ್ಲಿ ಅರ್ಜುನನ ರಥದ ಮುಂದಿರುತ್ತದೆ. ಈಗ ನಡೆಯುತ್ತದೆ ಆ ಘಟನೆ.

ಆ ಕ್ಷಣದಲ್ಲಿ ಕರ್ಣ ಅರ್ಜುನನ ಮೇಲೆ ಬಾಣ ಪ್ರಯೋಗ ಮಾಡುತ್ತಾನೆ. ಅರ್ಜುನನ ರಥ ಕೇವಲ ಒಂದು ಬಾಣದಷ್ಟು ಹಿಂದೆ ಚಲಿಸುತ್ತದೆ. ತಕ್ಷಣ ಕರ್ಣನನ್ನು “ಭೇಷ್ ಕರ್ಣ ಭಲಿರೇ” ಎಂದು ಕೃಷ್ಣ ಹೊಗಳುತ್ತಾನೆ. ಈಗ ಅರ್ಜುನನಿಗೆ ಶತ್ರುವನ್ನು ಹೊಗಳಿದ ಕಾರಣಕ್ಕೆ ಮತ್ತು ಕೇವಲ ಬಾಣದಷ್ಣು ಹಿಂದೆ ಸರಿದದ್ದಕ್ಕೆ ಇಷ್ಟೆಲ್ಲಾ ಪ್ರಶಂಸೆಯನ್ನು ಕಂಡು ಅಸಮತೋಲನನಾಗಿ ಯಾಕೇ ಈ ರೀತಿ ಮಾಡಿದೆ ಕೃಷ್ಣ ಎಂದು ಸ್ವಲ್ಪ ಸಿಟ್ಟಿನಿಂದಲೇ ಪ್ರಶ್ನಿಸುತ್ತಾನೆ. ಈ ಪ್ರಶ್ನೆ ಈಗ ನಮಗೂ ಬರುತ್ತದೆ. ಎಲ್ಲಿಯ ನೂರು ಯೋಜನ ಎಲ್ಲಿ ಒಂದು ಬಾಣದ ದೂರ… ಹೋಲಿಕೆ ಸಾಧ್ಯವೇ ಇಲ್ಲ ಎಂದು.

ಆದರೆ ಅದಕ್ಕೆ ಕೃಷ್ಣ ನಗುತ್ತಾ ಹೀಗೆ ಹೇಳುತ್ತಾನೆ. ನಿನ್ನ ರಥವು ಸಾಮಾನ್ಯವಲ್ಲ ತ್ರೇತಾಯಗದಲ್ಲಿ ರಾಮ ಮತ್ತು ಲಕ್ಷ್ಮಣರ ಹೊತ್ತವನು ಹನುಮ (ಲಕ್ಷ್ಮಣ ಆದಿಶೇಷನ ಅವತಾರ. ಅವನು ಭೂಮಿಯನ್ನೇ ಧರಿಸಿರುವಾತ). ಅಂತಹ ಹನುಮ ನಿನ್ನ ರಥದ ಧ್ವಜದಲ್ಲಿ ಕುಳಿತಿದ್ದಾನೆ. ಬ್ರಹ್ಮಾಂಡವನ್ನೆ ತನ್ನ ಉದರದಲ್ಲಿ ಧರಿಸಿದ ನಾನು ನಿನ್ನ ಸಾರಥಿಯಾಗಿರುವೆ. ಪರಮ ಪವಿತ್ರ ಗಾಂಢೀವ ನಿನ್ನ ಕೈಯಲ್ಲಿದೆ. ಇಂತಹ ಘನತರವಾದ ರಥ ಜಗತ್ತಲ್ಲೇ ಬೇರೆಲ್ಲೂ ಹಿಂದೆ ಇರಲಿಲ್ಲ ಮತ್ತು ಮುಂದೆ ಇರಲೂ ಸಾಧ್ಯವಿಲ್ಲ. ಅಂತಹ ರಥವನ್ನು ಒಬ್ಬ ಯೋಧ ತನ್ನ ಬಾಣದಿಂದ ಒಂದು ಬಾಣದಷ್ಟು ಹಿಂದೆ ಸರಿಸಿದ ಅಂತಾದರೆ ಅವನ ಪರಾಕ್ರಮವೆಂತಹದಿರಬಹುದು ಎಂದು .

ಅಯ್ಯಾ ಅರ್ಜುನ ಈ ಕಾರಣದಿಂದ ನಾನು ಕರ್ಣನ ಪ್ರಶಂಸೆ ಮಾಡಿದೆ. ನೀನು ದೇವೇಂದ್ರ ವರಪ್ರಸಾದವಿರಬಹುದು. ಆದರೆ ಅವನ ಪರಾಕ್ರಮ ನೋಡು. ಅಂತಹ ಪರಾಕ್ರಮವನ್ನು ನಾನು ಮೆಚ್ಚದೆ ಏನು ಮಾಡಲಿ. ಇನ್ನುಳಿದಿರುವುದು ಅವನ ಕರ್ಮಫಲ ಎಂದು ಕೃಷ್ಣ ನಸು ನಕ್ಕು ರಥವನ್ನು ಮುನ್ನುಗ್ಗಿಸುತ್ತಾನೆ. ಈ ದಿನವನ್ನೇ ಕರ್ಣಪರ್ವ ಎನ್ನುತ್ತಾರೆ. ಆ ದಿನದ ಸೂರ್ಯಾಸ್ತದ ವೇಳೆಗೆ ಕರ್ಣನ ಅಸ್ತವೂ ಆಗುತ್ತದೆ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ

kkmanasvi@gamail.com