ಗಲ್ಲಿಗೊಂದು ಹನುಮಾನ್ ದೇಗುಲ: 50ಕ್ಕೂ ಹೆಚ್ಚು ಆಂಜನೇಯ ಸ್ವಾಮಿ ದೇವಾಲಯಗಳಿರುವ ಅಪರೂಪದ ಗ್ರಾಮ!
ಸಾಮಾನ್ಯವಾಗಿ ಊರಿಗೊಂದೆರಡು ಆಂಜನೇಯನ ಗುಡಿಗಳಿರುತ್ತವೆ. ಆದರೆ ತೆಲಂಗಾಣದ ವೆಲ್ಲೂಲ ಗ್ರಾಮದಲ್ಲಿ ಗಲ್ಲಿಗೊಂದು ದೇವಾಲಯದಂತೆ ಬರೋಬ್ಬರಿ 50ಕ್ಕೂ ಹೆಚ್ಚು ಹನುಮಾನ್ ದೇವಾಲಯಗಳಿವೆ. ಹರಿಕೆ ಈಡೇರಿದಂತೆಲ್ಲಾ ಗ್ರಾಮಸ್ಥರೇ ನಿರ್ಮಿಸಿದ ಈ ಅಪರೂಪದ ಪುಣ್ಯಕ್ಷೇತ್ರದ ವಿಶೇಷತೆ ಮತ್ತು ನಂಬಿಕೆಗೆ ಸಾಕ್ಷಿಯಾಗಿರುವ ಈ ವಿಶಿಷ್ಟ ಗ್ರಾಮದ ಕುತೂಹಲಕಾರಿ ಕಥೆ ಇಲ್ಲಿದೆ.

ಸಾಮಾನ್ಯವಾಗಿ ಯಾವುದೇ ಊರಿಗೆ ಹೋದರೂ ಒಂದೋ ಅಥವಾ ಎರಡೋ ಆಂಜನೇಯ ಸ್ವಾಮಿ ದೇವಾಲಯಗಳು ಇರುವುದು ಸಹಜ. ಆದರೆ, ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು, ಗಲ್ಲಿಗೊಂದು ಹನುಮಂತನ ದೇವಾಲಯಗಳೇ ದರ್ಶನ ನೀಡುತ್ತವೆ. ಗಲ್ಲಿಗೊಂದು ಗುಡಿ, ಮನೆಗೊಂದು ಸಂಪ್ರದಾಯ ಎಂಬಂತೆ ಬರೋಬ್ಬರಿ 50ಕ್ಕೂ ಹೆಚ್ಚು ಹನುಮಾನ್ ದೇವಾಲಯಗಳಿರುವ ಈ ಅಪರೂಪದ ಗ್ರಾಮದ ವಿಶೇಷತೆ ಇಲ್ಲಿದೆ.
ಭಕ್ತಿ ಮತ್ತು ಆಧ್ಯಾತ್ಮಿಕತೆಯ ತವರೂರು ‘ವೆಲ್ಲೂಲ’:
ತೆಲಂಗಾಣದ ಜಗತ್ಯಾಲ ಜಿಲ್ಲೆಯ ಮೆಟ್‌ಪಲ್ಲಿ ಮಂಡಲ ವ್ಯಾಪ್ತಿಗೆ ಒಳಪಡುವ ವೆಲ್ಲೂಲ (Vellula) ಗ್ರಾಮವು ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದೆ. ಸುಮಾರು ನಾಲ್ಕು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ಊರಿನೊಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಎತ್ತ ನೋಡಿದರೂ ಹನುಮಂತನ ದೇವಾಲಯಗಳೇ ಕಣ್ಣಿಗೆ ಕಾಣಸಿಗುತ್ತವೆ. ಪುರಾತನ ಕಾಲದಿಂದಲೂ ಈ ಗ್ರಾಮದಲ್ಲಿ ಒಂದು ವಿಶಿಷ್ಟವಾದ ಆಚಾರ-ಸಂಪ್ರದಾಯ ನಡೆದುಕೊಂಡು ಬಂದಿದೆ. ಹಿಂದೆ ಇಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣ ಕುಟುಂಬಗಳು ಮತ್ತು ಭಕ್ತರು ತಮ್ಮ ಹರಿಕೆ ಹಾಗೂ ಕೋರಿಕೆಗಳು ಈಡೇರಿದಾಗಲೆಲ್ಲಾ ಸ್ವಾಮಿಯ ಮೇಲಿನ ಭಕ್ತಿಯಿಂದ ಒಂದೊಂದು ದೇವಾಲಯವನ್ನು ನಿರ್ಮಿಸುತ್ತಾ ಬಂದರು.
ವಿಭಿನ್ನ ರೂಪಗಳಲ್ಲಿ ದರ್ಶನ ನೀಡುವ ಮಾರುತಿ:
ಹೀಗೆ ಭಕ್ತರು ತಮ್ಮ ಹರಿಕೆಗಳನ್ನು ತೀರಿಸಿಕೊಳ್ಳುತ್ತಾ ಬಂದಂತೆ, ಕಾಲಕ್ರಮೇಣ ಇಡೀ ಗ್ರಾಮವೇ ದೇವಾಲಯಗಳ ಮಯವಾಗಿ ಮಾರ್ಪಟ್ಟಿತು. ಈ ಗ್ರಾಮದಲ್ಲಿರುವ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆಯಿದೆ. ಅಭಯಾಂಜನೇಯ ಸ್ವಾಮಿ, ವೀರಾಂಜನೇಯ ಸ್ವಾಮಿ ಹೀಗೆ ಒಂದೊಂದು ದೇವಾಲಯದಲ್ಲೂ ಮಾರುತಿಯು ಒಂದೊಂದು ವಿಶಿಷ್ಟ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿರುವುದು ಇಲ್ಲಿನ ವಿಶೇಷ.
ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಗ್ರಾಮಸ್ಥರಿಂದಲೇ ನಿತ್ಯ ಪೂಜೆ ಮತ್ತು ನಿರ್ವಹಣೆ:
ಊರಿನ ಪ್ರತಿಯೊಂದು ಗಲ್ಲಿಯಲ್ಲೂ ಹನುಮಾನ್ ದೇವಾಲಯವಿದ್ದರೂ, ಆಯಾ ರಸ್ತೆಯ ಅಥವಾ ಬೀದಿಯ ನಿವಾಸಿಗಳು ತಮ್ಮ ವ್ಯಾಪ್ತಿಯ ಗುಡಿಯಲ್ಲೇ ನಿತ್ಯವೂ ದೀಪಾರಾಧನೆ, ಪೂಜೆ-ಪುನಸ್ಕಾರಗಳನ್ನು ನೆರವೇರಿಸಿಕೊಂಡು ದೇವಾಲಯಗಳನ್ನು ಸ್ವತಃ ಮುತುವರ್ಜಿಯಿಂದ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ.
‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಕಂಗೊಳಿಸುವ ಹನುಮ ಜಯಂತಿ:
ಇನ್ನು ಹನುಮಾನ್ ಜಯಂತಿ ಆಚರಣೆಗಳ ಸಮಯದಲ್ಲಿ ವೆಲ್ಲೂಲ ಗ್ರಾಮವು ಪೂರ್ಣವಾಗಿ ಕೇಸರಿ ಮಯವಾಗಿ ಕಂಗೊಳಿಸುತ್ತದೆ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹನುಮಾನ್ ದೀಕ್ಷೆಯನ್ನು ಸ್ವೀಕರಿಸುತ್ತಾರೆ. ಇಡೀ ಊರಿನಾದ್ಯಂತ ‘ಜೈ ಶ್ರೀರಾಮ್.. ಜೈ ಹನುಮಾನ್’ ನಾದ ಮುಗಿಲು ಮುಟ್ಟುತ್ತದೆ. ನಿತ್ಯ ಅನ್ನದಾನ, ಅಹೋರಾತ್ರಿ ಭಜನೆಗಳು ಮತ್ತು ಸಂಕೀರ್ತನೆಗಳಿಂದಾಗಿ ಈ ಗ್ರಾಮವು ಯಾವುದೋ ಪ್ರಸಿದ್ಧ ಪುಣ್ಯಕ್ಷೇತ್ರದಂತೆ ಭಾಸವಾಗುತ್ತದೆ. ಭಕ್ತಿಗೆ ಮತ್ತು ನಂಬಿಕೆಗೆ ಸಾಕ್ಷಿಯಾಗಿ ನಿಂತಿರುವ ವೆಲ್ಲೂಲ ಗ್ರಾಮವು ಇಂದು ರಾಜ್ಯದಾದ್ಯಂತ ಭಕ್ತಾದಿಗಳನ್ನು ಅಪಾರವಾಗಿ ಆಕರ್ಷಿಸುತ್ತಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




