ತೋರು ಬೆರಳು
ಒಂದು ಕೈಯಲ್ಲಿ ಐದು ಬೆರಳುಗಳಿರುತ್ತವೆ. ಕೆಲವರಿಗೆ ಆರನೇ ಬೆರಳೂ ಇರುವುದುಂಟು, ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಐದು ಬೆರಳುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಇತಿಹಾಸ ಮತ್ತು ಮಹತ್ವವಿದೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹೆಬ್ಬೆರಳನ್ನು ಶುಕ್ರನಿಗೆ, ತೋರು ಬೆರಳನ್ನು ಗುರು (ಬೃಹಸ್ಪತಿ) ಗ್ರಹಕ್ಕೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ರವಿಗೆ (ಸೂರ್ಯ) ಮತ್ತು ಕಿರು ಬೆರಳನ್ನು ಬುಧನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ತೋರು ಬೆರಳನ್ನು ಗುರು ಬೆರಳು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪುಷ್ಯರಾಗ ರತ್ನದ ಉಂಗುರವನ್ನು ಈ ತೋರು ಬೆರಳಿಗೆ ಧರಿಸುವುದು ವಾಡಿಕೆ. ತೋರು ಬೆರಳಿನ ಆಕಾರವು ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಸ್ವಭಾವವನ್ನು ವಿವರಿಸುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ.
ತೋರು ಬೆರಳಿನ ಆಕಾರವು ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಸ್ವಭಾವ:
- ಉದ್ದವಾದ ತೋರು ಬೆರಳು: ತೋರು ಬೆರಳು ಉದ್ದವಾಗಿದ್ದರೆ, ಆ ವ್ಯಕ್ತಿಯು ನಾಯಕತ್ವದ ಗುಣಗಳನ್ನು ಹೊಂದಿರುತ್ತಾನೆ. ಸಮಾಜದಲ್ಲಿ ನಾಯಕನಾಗಿ ರೂಪಗೊಳ್ಳುವ ಸಾಧ್ಯತೆ ಇರುತ್ತದೆ.
- ಚಪ್ಪಟೆಯಾದ ತೋರು ಬೆರಳು ಮತ್ತು ಅಗಲವಾದ ಉಗುರು: ತೋರು ಬೆರಳು ಚಪ್ಪಟೆಯಾಗಿ ಮತ್ತು ಉಗುರಿನ ಭಾಗ ಸ್ವಲ್ಪ ಅಗಲವಾಗಿದ್ದಲ್ಲಿ, ಆ ವ್ಯಕ್ತಿಗೆ ಹೆಚ್ಚಿನ ಆತ್ಮವಿಶ್ವಾಸ, ನಂಬಿಕೆ ಮತ್ತು ತೀಕ್ಷ್ಣ ಬುದ್ಧಿ ಇರುತ್ತದೆ. ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವ ಸಾಮರ್ಥ್ಯ ಹೊಂದಿರುತ್ತಾರೆ.
- ತ್ರಿಕೋನಾಕಾರದ ಅಥವಾ ಮೊನಚಾದ ತೋರು ಬೆರಳು: ತೋರು ಬೆರಳು ತ್ರಿಕೋನಾಕಾರದಲ್ಲಿ ಅಥವಾ ಮೊನಚಾಗಿದ್ದರೆ, ಅಂತಹ ವ್ಯಕ್ತಿಗಳು ಕನಸುಗಾರರಾಗಿರುತ್ತಾರೆ. ಅವರಿಗೆ ಪ್ರೀತಿ, ಆಸೆ-ಆಕಾಂಕ್ಷೆಗಳು ಹೆಚ್ಚು. ವಾಸ್ತವಕ್ಕಿಂತ ಕನಸಿನ ಲೋಕದಲ್ಲಿ ಹೆಚ್ಚು ವಿಹರಿಸುತ್ತಾರೆ.
- ದಪ್ಪನಾದ ತೋರು ಬೆರಳು ಅಥವಾ ದಪ್ಪನಾದ ಉಗುರಿನ ಭಾಗ: ತೋರು ಬೆರಳು ದಪ್ಪನಾಗಿದ್ದು, ವಿಶೇಷವಾಗಿ ಉಗುರಿನ ಭಾಗ ದಪ್ಪವಾಗಿದ್ದರೆ, ಅಂತಹ ವ್ಯಕ್ತಿಗಳು ವಿಶಾಲ ಹೃದಯ ಮತ್ತು ದಾನಗುಣ ಹೊಂದಿರುತ್ತಾರೆ. ಅವರು ದಾನ ಕಾರ್ಯಗಳಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
- ಕುಳ್ಳನೆಯ, ಊದಿಕೊಂಡ ಅಥವಾ ಅಗಲವಾದ ತೋರು ಬೆರಳು: ತೋರು ಬೆರಳು ಕುಳ್ಳಕ್ಕೆ, ಊದಿಕೊಂಡಂತೆ ಅಥವಾ ಅಗಲವಾಗಿದ್ದರೆ, ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಬಗ್ಗೆಯೇ ನಕಾರಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ‘ನನ್ನ ಜೀವನ ಇಷ್ಟೇನಾ?’ ಎಂದು ಭಾವಿಸುತ್ತಿರುತ್ತಾರೆ. ಆದರೆ ಸಾರ್ವಜನಿಕ ಜೀವನದಲ್ಲಿ ಅವರಿಗೆ ಉತ್ತಮ ಹೆಸರು ಇರುತ್ತದೆ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು.
ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ
ಶಾಸ್ತ್ರಕಾರರು ಒಳ್ಳೆಯ ಉದ್ದೇಶಗಳಿಗಾಗಿ ತೋರು ಬೆರಳನ್ನು ಬಳಸಲು ಸಲಹೆ ನೀಡುತ್ತಾರೆ. ಒಬ್ಬರನ್ನು ನಿಂದಿಸಲು ಅಥವಾ ಕೆಟ್ಟದ್ದಕ್ಕೆ ತೋರು ಬೆರಳನ್ನು ತೋರಿಸಿದರೆ, ಅದರ ನಕಾರಾತ್ಮಕ ಪರಿಣಾಮಗಳು ದುಪ್ಪಟ್ಟಾಗಿ ನಮಗೆ ತಲುಪುತ್ತವೆ ಎಂದು ಇತಿಹಾಸದಲ್ಲಿ ಹೇಳಲಾಗಿದೆ. ತೋರು ಬೆರಳಿನ ಆಕಾರ ಒಬ್ಬ ವ್ಯಕ್ತಿಯ ಸಾಮಾನ್ಯ ಗುಣಲಕ್ಷಣಗಳನ್ನು ತೋರಿಸುವ ಸಾಧ್ಯತೆ ಇದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ