Kartika Masa: ಕಾರ್ತಿಕ ಮಾಸದ ಆಚರಣೆಯ ಮಹತ್ವ ಮತ್ತು ಅದರಿಂದ ದೊರೆಯುವ ಫಲಗಳು

ಕಾರ್ತಿಕ ಮಾಸವು ತುಲಾ ರಾಶಿಯಲ್ಲಿ ರವಿ ಸಂಚಾರ ಮಾಡುವ ಅವಧಿಯಾಗಿದ್ದು, ಧಾರ್ಮಿಕ ಆಚರಣೆಗಳಿಗೆ ಶ್ರೇಷ್ಠವಾಗಿದೆ. ಸೂರ್ಯೋದಯಕ್ಕೂ ಮುನ್ನ ಸ್ನಾನ, ದೀಪಾರಾಧನೆ, ದೀಪದಾನ, ಉಪವಾಸ ಹಾಗೂ ವನಭೋಜನ ಪ್ರಮುಖವಾಗಿದ್ದು, ಇವು ಮೋಕ್ಷ, ಸುಭಿಕ್ಷತೆ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸುತ್ತವೆ. ಕಾರ್ತಿಕ ಮಾಸದ ಮಹತ್ವ, ಆಚರಣೆ ಮತ್ತು ಅದರಿಂದ ದೊರೆಯುವ ಫಲಗಳ ಕುರಿತು ಡಾ. ಬಸವರಾಜ್ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

Kartika Masa: ಕಾರ್ತಿಕ ಮಾಸದ ಆಚರಣೆಯ ಮಹತ್ವ ಮತ್ತು ಅದರಿಂದ ದೊರೆಯುವ ಫಲಗಳು
ಕಾರ್ತಿಕ ಮಾಸ

Updated on: Oct 23, 2025 | 12:00 PM

ಕಾರ್ತಿಕ ಮಾಸದ ಮಹತ್ವ, ಆಚರಣೆ ಮತ್ತು ಅದರಿಂದ ದೊರೆಯುವ ಫಲಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಕಾರ್ತಿಕ ಮಾಸವು ಧಾರ್ಮಿಕವಾಗಿ ಅತ್ಯಂತ ಶ್ರೇಷ್ಠವಾದ ಮಾಸಗಳಲ್ಲಿ ಒಂದಾಗಿದೆ. ತುಲಾ ರಾಶಿಯಲ್ಲಿ ರವಿ ಸಂಚಾರ ಮಾಡುವ ಸಂದರ್ಭವನ್ನು ಕಾರ್ತಿಕ ಮಾಸ ಅಥವಾ ತುಲಾ ಮಾಸ ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಸರಿಯಾದ ವಿಧಿ ವಿಧಾನಗಳನ್ನು ಪಾಲಿಸುವುದರಿಂದ ಉತ್ತಮ ಫಲಗಳು, ಮೋಕ್ಷ, ಸುಭಿಕ್ಷತೆ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಗುರೂಜಿ ತಿಳಿಸಿದ್ದಾರೆ.

ಕಾರ್ತಿಕ ಮಾಸದಲ್ಲಿ ಆಚರಿಸುವ ಪ್ರಮುಖ ವಿಧಿ ವಿಧಾನಗಳಲ್ಲಿ ಸ್ನಾನಕ್ಕೆ ಅಗ್ರ ಪ್ರಾಮುಖ್ಯತೆ ಇದೆ. ಪ್ರತಿದಿನ ಸೂರ್ಯೋದಯಕ್ಕೆ ಮುಂಚೆ ಸ್ನಾನ ಮಾಡುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ಸಾಧ್ಯವಾದರೆ ನದಿ ಸ್ನಾನ, ಕ್ಷೇತ್ರಗಳ ಸ್ನಾನ ಮಾಡುವುದು ಮನಸ್ಸಿಗೆ ಮತ್ತು ದೇಹಕ್ಕೆ ದೃಢತೆಯನ್ನು ನೀಡುತ್ತದೆ. ಗೋವುಗಳು ಓಡಾಡಿದ ಅಥವಾ ಕಟ್ಟಿದ ಸ್ಥಳಗಳಲ್ಲಿ ಸ್ನಾನ ಮಾಡುವುದೂ ಕೂಡ ಶ್ರೇಷ್ಠ. ಸ್ನಾನ ಮಾಡುವಾಗ “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರುಂ” ಎಂಬ ಸಪ್ತ ನದಿಗಳ ಸ್ತೋತ್ರವನ್ನು ಪಠಿಸುತ್ತಾ ಮನೆಯಲ್ಲಿ ಸ್ನಾನ ಮಾಡಿದರೂ ಬಹಳ ಒಳ್ಳೆಯದಾಗುತ್ತದೆ.

ಸ್ನಾನದ ನಂತರ ಸೂರ್ಯ ಭಗವಾನನಿಗೆ ಅರ್ಘ್ಯ ಅರ್ಪಿಸುವುದು ಮತ್ತು ಪ್ರಥಮ ನಮಸ್ಕಾರ ಸಲ್ಲಿಸುವುದು ಅಗತ್ಯ. “ಸೂರ್ಯನಿಗೆ ನಮಸ್ಕಾರ ಪ್ರಿಯೋ ಭಾನು” ಎಂಬಂತೆ ಸೂರ್ಯನನ್ನು ಆರಾಧಿಸುವುದರಿಂದ ಒಳಿತಾಗುತ್ತದೆ. ನಂತರ ಕುಲದೇವರು ಮತ್ತು ಇಷ್ಟದೇವರ ಪ್ರಾರ್ಥನೆ ಸಲ್ಲಿಸಿ ಯಥಾವಿಧಿಯಾಗಿ ಪೂಜೆಗಳನ್ನು ಮಾಡಬಹುದು.

ಕಾರ್ತಿಕ ಮಾಸದಲ್ಲಿ ಸ್ನಾನದ ನಂತರ ದೀಪಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. “ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ಧನ, ದೀಪೋ ಹರತುಮೇ ಪಾಪಾನಿ ಸಂಧ್ಯಾ ದೀಪ ನಮೋಸ್ತುತೆ” ಎಂಬ ಶ್ಲೋಕ ದೀಪದ ಮಹತ್ವವನ್ನು ಸಾರುತ್ತದೆ. ಮನೆಯಲ್ಲಿ, ಶಿವನ ದೇವಾಲಯದಲ್ಲಿ, ಬಿಲ್ವ ವೃಕ್ಷದ ಹತ್ತಿರ ಹಾಗೂ ನದಿಯ ಬಳಿ ದೀಪ ಹಚ್ಚಿ ದೀಪದಾನ ಮಾಡುವುದು ಮೋಕ್ಷವನ್ನು ಕರುಣಿಸುತ್ತದೆ. ಶಿವ-ವಿಷ್ಣು ಭೇದವಿಲ್ಲದೆ ಯಾವುದೇ ದೇವಸ್ಥಾನದಲ್ಲಿ ದೀಪ ಹಚ್ಚಬಹುದು. ಕಾರ್ತಿಕ ಹುಣ್ಣಿಮೆಗೆ ವಿಶೇಷ ಪ್ರಾಮುಖ್ಯತೆ ಇದ್ದು, ಅದರ ವಿಧಿ ವಿಧಾನಗಳು ಸಹ ವಿಶೇಷವಾಗಿರುತ್ತವೆ.

ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯಿಸದಿರಿ

ಈ ಮಾಸದಲ್ಲಿ ಸ್ನಾನ ಮತ್ತು ದೀಪದ ಜೊತೆಗೆ ಉಪವಾಸಕ್ಕೂ ಮಹತ್ವವಿದೆ. ಸ್ವಲ್ಪ ಸಮಯವಾದರೂ ಭಗವಂತನ ಹೆಸರಿನಲ್ಲಿ ಉಪವಾಸವಿರುವುದು ಒಳ್ಳೆಯದು. ವನಭೋಜನ ಕಾರ್ತಿಕ ಮಾಸದ ಮತ್ತೊಂದು ಪ್ರಮುಖ ಆಚರಣೆ. ಎಲ್ಲರೂ ಒಟ್ಟಾಗಿ ಪ್ರಕೃತಿಯ ಮಡಿಲಲ್ಲಿ ಅಡುಗೆ ಮಾಡಿ, ಭಗವಂತನಿಗೆ ಎಡೆ ಇಟ್ಟು ಪ್ರಸಾದ ಸ್ವೀಕರಿಸುವುದು ವನಭೋಜನದ ಮುಖ್ಯ ಉದ್ದೇಶ. ಎಡೆ ಎಂದರೆ, ತಯಾರಿಸಿದ ಪದಾರ್ಥಗಳನ್ನು ಎಲೆಯಲ್ಲಿಟ್ಟು ಭಗವಂತನಿಗೆ ಅರ್ಪಿಸುವುದು.

ಕಾರ್ತಿಕ ಮಾಸದಲ್ಲಿ ಸಾಧ್ಯವಾದಷ್ಟು ಬಿಸಿನೀರಿನ ಸ್ನಾನವನ್ನು ತ್ಯಜಿಸಬೇಕು. ರೋಗಿಗಳು, ವೃದ್ಧರು, ಮತ್ತು ಪುಟ್ಟ ಮಕ್ಕಳು ಹೊರತುಪಡಿಸಿ, ಸಾಮಾನ್ಯರು ತಣ್ಣೀರಿನ ಅಥವಾ ಉಗುರುಬೆಚ್ಚಗಿನ ನೀರಿನ ಸ್ನಾನ ಮಾಡುವುದು ವೈಜ್ಞಾನಿಕವಾಗಿಯೂ ಉತ್ತಮ ಎಂದು ಹೇಳಲಾಗುತ್ತದೆ. ಅಲ್ಲದೆ, ಈ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚು ಉಪಯೋಗಿಸದಿರುವುದು ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ, ಕಾರ್ತಿಕ ಮಾಸದಲ್ಲಿ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ. ಸುಳ್ಳು ಹೇಳುವುದರಿಂದ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ ಎಂದು ಗುರೂಜಿ ಎಚ್ಚರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ