Daily Devotional: ಪೂಜೆ ಮುಗಿದ ಬಳಿಕ ಕಲಶದ ಮೇಲಿಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು?

ಪೂಜೆಯ ನಂತರ ಕಲಶದ ಮೇಲಿಟ್ಟ ತೆಂಗಿನಕಾಯಿಯು ದೈವಿಕ ಶಕ್ತಿಯನ್ನು ಹೀರಿಕೊಂಡಿರುತ್ತದೆ. ಇದನ್ನು ಶ್ರೀಫಲ ಅಥವಾ ಪೂರ್ಣಫಲ ಎಂದು ಕರೆಯುತ್ತಾರೆ. ರೋಗರುಜಿನಗಳಿಂದ ಮುಕ್ತಿ, ಅದೃಷ್ಟ, ಮತ್ತು ನಕಾರಾತ್ಮಕ ಶಕ್ತಿಗಳ ನಿವಾರಣೆಗಾಗಿ ಈ ತೆಂಗಿನಕಾಯಿಯಿಂದ ಪಾಯಸ ಅಥವಾ ಸಿಹಿ ಖಾದ್ಯ ತಯಾರಿಸಿ ಸೇವಿಸುವುದು ಅಥವಾ ಕೆಂಪು ವಸ್ತ್ರದಲ್ಲಿ ಸುತ್ತಿ ಮನೆಯ ಸಿಂಹದ್ವಾರದಲ್ಲಿ ಕಟ್ಟುವುದರಿಂದ ಶುಭ ಫಲ ದೊರೆಯುತ್ತದೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Daily Devotional: ಪೂಜೆ ಮುಗಿದ ಬಳಿಕ ಕಲಶದ ಮೇಲಿಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು?
ಕಲಶದ ತೆಂಗಿನಕಾಯಿ

Updated on: Oct 19, 2025 | 1:29 PM

ಹಿಂದೂ ಧರ್ಮದಲ್ಲಿ ಕಳಶ ಸ್ಥಾಪನೆಗೆ ಅತೀವ ಮಹತ್ವವಿದೆ. ಶುದ್ಧವಾದ ನೀರು, ವೀಳ್ಯದೆಲೆ, ಮಾವಿನ ಸೊಪ್ಪು ಮತ್ತು ತೆಂಗಿನಕಾಯಿಯೊಂದಿಗೆ ಕಲಶವನ್ನು ಸ್ಥಾಪಿಸುವುದು ದೈವಿಕ ಶಕ್ತಿಗಳನ್ನು ಆವಾಹನೆ ಮಾಡುವ ಸಂಪ್ರದಾಯವಾಗಿದೆ. ಇದು ನಮ್ಮ ಸನಾತನ ಸಂಸ್ಕೃತಿಯ ಅದ್ಭುತ ಮತ್ತು ಪವಿತ್ರ ಭಾಗವಾಗಿದೆ. ಕಳಶವು ಶಾಂತಿ, ಸಮೃದ್ಧಿ, ಸುಖ, ಮನಸ್ಸಿನ ಸಂತೋಷ ಮತ್ತು ನಕಾರಾತ್ಮಕ ದೋಷಗಳನ್ನು ಹಾಗೂ ದುಷ್ಟ ಶಕ್ತಿಗಳನ್ನು ಹೋಗಲಾಡಿಸಿ ಶಿಷ್ಟತೆಯನ್ನು ಉಂಟುಮಾಡಲು ಸಹಾಯಕವಾಗಿದೆ. ಪ್ರತಿ ಮನೆಯಲ್ಲಿ ತುಳಸಿ ಅಥವಾ ಕಳಶ ಇರುವುದು ಸಾಕ್ಷಾತ್ ಭಗವಂತನ ಆವಾಸವನ್ನು ತೋರ್ಪಡಿಸುತ್ತದೆ. ಪೂಜೆಯ ನಂತರ ಈ ದೈವಿಕ ಶಕ್ತಿಭರಿತ ತೆಂಗಿನಕಾಯಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಕಳಶದ ಮೇಲಿಟ್ಟ ತೆಂಗಿನಕಾಯಿಯನ್ನೇ ಶ್ರೀಫಲ ಅಥವಾ ಪೂರ್ಣಫಲ ಎಂದು ಕರೆಯುತ್ತೇವೆ. ಇದು ಶ್ರೀ ಮಹಾಲಕ್ಷ್ಮಿಯ ಸಂಕೇತವೂ ಹೌದು. ದೇವತಾ ಲಹರಿಗಳು ಮತ್ತು ಪ್ರಕೃತಿಯ ಪಂಚಭೂತಗಳಿಂದ ಉಂಟಾಗುವ ದೈವಿಕ ಶಕ್ತಿಗಳನ್ನು ಹೀರಿಕೊಳ್ಳುವ ಅದ್ಭುತ ಸಾಮರ್ಥ್ಯ ಈ ತೆಂಗಿನಕಾಯಿಗೆ ಇದೆ. ಇದು ವಿಘ್ನಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಕಳಶದಲ್ಲಿ ತೆಂಗಿನಕಾಯಿ ಇಡುವುದು ಪೂಜಾ ವಿಧಾನದ ಒಂದು ಪ್ರಮುಖ ಭಾಗ.

ವಿಡಿಯೋ ಇಲ್ಲಿದೆ ನೋಡಿ:

ಪೂಜೆಯ ನಂತರ ಈ ದೈವಿಕ ಶಕ್ತಿಭರಿತ ತೆಂಗಿನಕಾಯಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು?

ಸಿಹಿ ಖಾದ್ಯ ತಯಾರಿಕೆ ಮತ್ತು ಸೇವನೆ:

ಪೂಜೆಯ ನಂತರ, ಕಳಶದ ತೆಂಗಿನಕಾಯಿಯನ್ನು ಮನೆಯಲ್ಲಿ ಇಟ್ಟುಕೊಂಡು ಅದರಿಂದ ಪಾಯಸ ಅಥವಾ ಯಾವುದೇ ಸಿಹಿ ಖಾದ್ಯವನ್ನು ತಯಾರಿಸಿ. ಮನೆಯವರೆಲ್ಲರೂ ಅದನ್ನು ಒಂದು ಚೂರು ಸಹ ವ್ಯರ್ಥವಾಗದಂತೆ ಸೇವಿಸಬೇಕು. ಹೀಗೆ ಮಾಡುವುದರಿಂದ ರೋಗರುಜಿನಗಳಿಂದ ಮುಕ್ತಿ, ಅದೃಷ್ಟ ಪ್ರಾಪ್ತಿ, ಗ್ರಹದೋಷ ನಿವಾರಣೆ, ಮಾಟ-ಮಂತ್ರದಿಂದ ರಕ್ಷಣೆ, ಮನಸ್ಸಿನ ನಿರ್ಮಲತೆ, ದೈವೀ ಶಕ್ತಿಯ ಆವಾಹನೆ ಮತ್ತು ಅಕಾಲ ಮೃತ್ಯು ದೂರವಾಗುತ್ತದೆ ಎಂದು ನಂಬಲಾಗಿದೆ.

ಶಾಶ್ವತ ಶೇಖರಣೆ :

ಕೆಲವು ಸಂದರ್ಭಗಳಲ್ಲಿ, ಪೂಜಿತ ತೆಂಗಿನಕಾಯಿಯನ್ನು ಕೆಂಪು ವಸ್ತ್ರದಲ್ಲಿ ಸುತ್ತಿ, ಮನೆಯ ಬೀರುವಿನಲ್ಲಿ ಅಥವಾ ತಿಜೋರಿಯಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳಬಹುದು. ಇದು ಸದಾ ಅದೃಷ್ಟ ಮತ್ತು ಧನಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ ಎಂದು ನಂಬಿಕೆ ಇದೆ.

ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ನಕಾರಾತ್ಮಕ ಶಕ್ತಿ ನಿವಾರಣೆ:

ಮನೆಯ ದುಷ್ಟ ಶಕ್ತಿಗಳನ್ನು ನಿವಾರಿಸಲು ಮತ್ತೊಂದು ವಿಧಾನವಿದೆ. ಇದೇ ತೆಂಗಿನಕಾಯಿಯನ್ನು ಕೆಂಪು ವಸ್ತ್ರದಲ್ಲಿ ಸುತ್ತಿ, ಅದನ್ನು ಮನೆಯ ಸಿಂಹದ್ವಾರದಲ್ಲಿ ಕಟ್ಟಿ, ನಂತರ ಪವಿತ್ರ ನದಿಯಲ್ಲಿ ಬಿಡುವುದರಿಂದ ಮನೆಯೊಳಗಿನ ಎಲ್ಲಾ ದುಷ್ಟ ಶಕ್ತಿಗಳು ಅದರಲ್ಲಿ ಹೀರಲ್ಪಟ್ಟು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಕಲಶದ ಬಗ್ಗೆ ಒಂದು ವಿಶೇಷ ಶ್ಲೋಕ:

ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಃ ಸಮಾಶ್ರಿತಾಃ ಮೂಲೇ ತಸ್ಯ ಸ್ಥಿತೋ ಬ್ರಹ್ಮ ಮಧ್ಯೇ ಮಾತೃಗಣಾಃ ಸ್ಮೃತಾಃ. ಇದರರ್ಥ ಕಲಶದ ಮುಖದಲ್ಲಿ ವಿಷ್ಣು, ಕಂಠದಲ್ಲಿ ರುದ್ರ (ಶಿವ), ಮೂಲದಲ್ಲಿ ಬ್ರಹ್ಮ ಮತ್ತು ಮಧ್ಯದಲ್ಲಿ ಮಾತೃದೇವತೆಗಳು ನೆಲೆಸಿರುತ್ತಾರೆ. ಅಂದರೆ, ದೇವಿ, ವಿಷ್ಣು, ಶಿವ ಸೇರಿದಂತೆ ಸರ್ವ ದೇವತೆಗಳು ಕಲಶದಲ್ಲಿ ಇರುತ್ತಾರೆ.

ಆದರೆ, ಪೂಜಿತ ತೆಂಗಿನಕಾಯಿಯನ್ನು ಬೇರೆಯವರಿಗೆ ಕೊಡುವುದು, ಬಿಸಾಡುವುದು ಅಥವಾ ಮರಗಳ ಬಳಿ ಹಾಕುವುದು ಅಷ್ಟು ಶುಭಕರವಲ್ಲ. ಒಂದು ವೇಳೆ ತೆಂಗಿನಕಾಯಿ ಹಾಳಾಗಿದ್ದರೆ, ಅದು ಅಶುಭದ ಸಂಕೇತವಲ್ಲ. ಅದನ್ನು ಯಾರೂ ತುಳಿಯದ ಪವಿತ್ರ ಜಾಗದಲ್ಲಿ ಗೌರವಯುತವಾಗಿ ವಿಲೇವಾರಿ ಮಾಡಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Sun, 19 October 25