Dhanteras 2025: ಧನ ತ್ರಯೋದಶಿ ಆಚರಣೆಯ ಪ್ರಾಮುಖ್ಯತೆ, ಪೂಜಾ ವಿಧಾನ ಮತ್ತು ಶುಭ ಮುಹೂರ್ತ ತಿಳಿಯಿರಿ
ಧನ ತ್ರಯೋದಶಿ ದೀಪಾವಳಿ ಆಚರಣೆಯ ಪ್ರಥಮ ದಿನವಾಗಿದ್ದು, ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ಲಕ್ಷ್ಮಿ ಕುಬೇರ ಪೂಜೆಯನ್ನು ನಡೆಸಲಾಗುತ್ತದೆ. ಧನ್ವಂತರಿಯ ಜಯಂತಿ ದಿನವೂ ಹೌದು. ಈ ದಿನ ಹೊಸ ವಸ್ತುಗಳನ್ನು, ವಿಶೇಷವಾಗಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಶುಭಕರ. ಯಮರಾಜನ ಸಂತೃಪ್ತಿಗಾಗಿ ದಕ್ಷಿಣ ದಿಕ್ಕಿನಲ್ಲಿ ದೀಪ ಹಚ್ಚುವುದು ಸಹ ರೂಢಿ ಎಂದು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ.

ದೀಪಾವಳಿ ಆಚರಣೆಯ ಪ್ರಥಮ ದಿನವಾದ ಧನ ತ್ರಯೋದಶಿಯ ಪ್ರಾಮುಖ್ಯತೆ ಮತ್ತು ಪೂಜಾ ವಿಧಿವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಧನ ತ್ರಯೋದಶಿಯು ಐದು ದಿನಗಳ ದೀಪಾವಳಿ ಹಬ್ಬದ ಆಚರಣೆಯ ಆರಂಭವನ್ನು ಸೂಚಿಸುತ್ತದೆ, ಇದರಲ್ಲಿ ಧನತ್ರಯೋದಶಿ, ನರಕ ಚತುರ್ದಶಿ, ದೀಪಾವಳಿ, ಬಲಿಪಾಡ್ಯಮಿ ಮತ್ತು ಯಮದ್ವಿತೀಯ ಸೇರಿವೆ.
ಧನ ತ್ರಯೋದಶಿ ಅಥವಾ ಧನತೇರಸ್ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಮಹಾ ಪರ್ವಕಾಲವಾಗಿದೆ. ಮನೆ ಶುದ್ಧಿ ಮಾಡಿಕೊಳ್ಳುವುದು, ಹೊಸ ವಸ್ತುಗಳನ್ನು ಖರೀದಿಸುವುದು, ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸುವುದು, ಕೇದಾರೇಶ್ವರ ವ್ರತವನ್ನು ಆಚರಿಸುವುದು, ಮತ್ತು ಹೊಸ ವ್ಯವಹಾರ ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದು ಈ ದಿನದ ವಿಶೇಷತೆಗಳಲ್ಲಿ ಸೇರಿವೆ. ಈ ವರ್ಷ (2025) ಅಕ್ಟೋಬರ್ 18, ಶನಿವಾರದಂದು ಧನ ತ್ರಯೋದಶಿಯು ಪುಬ್ಬಾ ನಕ್ಷತ್ರದ ಸಮಯದಲ್ಲಿ ಆಚರಣೆಗೊಳ್ಳುತ್ತದೆ. ತ್ರಯೋದಶಿಯು ಅಕ್ಟೋಬರ್ 18ರ ಮಧ್ಯಾಹ್ನ 12:18 ರಿಂದ ಪ್ರಾರಂಭವಾಗಿ, ಅಕ್ಟೋಬರ್ 19ರ ಬೆಳಿಗ್ಗೆ 1:51ರ ವರೆಗೆ ಇರುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಧನ ತ್ರಯೋದಶಿ ದಿನದ ಪ್ರಮುಖ ಆಚರಣೆಗಳಲ್ಲಿ ಹೊಸ ವಸ್ತುಗಳ ಖರೀದಿ ಸೇರಿದೆ. ಕೈಲಾದಷ್ಟು ಚಿನ್ನ, ಬೆಳ್ಳಿ, ಬಟ್ಟೆ, ಪಾತ್ರೆಗಳು, ಯಂತ್ರಗಳು, ತಾಮ್ರದ ವಸ್ತುಗಳು, ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವುದು ಶುಭವೆಂದು ನಂಬಲಾಗಿದೆ. ಅಕ್ಷಯ ತೃತೀಯದಂದು ಉಪ್ಪನ್ನು ಖರೀದಿಸಿದಂತೆ, ಧನ ತ್ರಯೋದಶಿಯಂದು ಯಾವುದೇ ಹೊಸ ವಸ್ತುಗಳನ್ನು ಖರೀದಿಸುವುದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.
ಈ ದಿನದ ಇನ್ನೊಂದು ಮಹತ್ವವೆಂದರೆ ಆಯುರ್ವೇದದ ದೇವತೆಯಾದ ಧನ್ವಂತರಿಯ ಜಯಂತಿ. ಧನ್ವಂತರಿಯು ಸಮುದ್ರ ಮಥನದ ಸಮಯದಲ್ಲಿ ಅಮೃತ ಕಲಶದೊಂದಿಗೆ ಜನಿಸಿದವನು ಮತ್ತು ಆಯುರ್ವೇದದ ಬ್ರಹ್ಮನೆಂದು ಪರಿಗಣಿಸಲ್ಪಟ್ಟಿದ್ದಾನೆ. ಆದ್ದರಿಂದ, ಈ ದಿನ ಧನ್ವಂತರಿಯ ಪೂಜೆಯು ಉತ್ತಮ ಆರೋಗ್ಯಕ್ಕಾಗಿ ಫಲಕಾರಿಯಾಗಿದೆ. ಸಂಪತ್ತು ಮತ್ತು ಅದೃಷ್ಟಕ್ಕಾಗಿ ಲಕ್ಷ್ಮಿ-ಕುಬೇರ ಪೂಜೆಯನ್ನು ಮಾಡುವುದು ಈ ದಿನದ ಪ್ರಮುಖ ಆಚರಣೆಯಾಗಿದೆ. ಕೆಲವರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ಇಟ್ಟು ಪೂಜೆ ಮಾಡುತ್ತಾರೆ.
ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಯಮರಾಜನ ಸಂತೃಪ್ತಿಗಾಗಿ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದು ಕೂಡ ಧನ ತ್ರಯೋದಶಿಯ ಒಂದು ಆಚರಣೆಯಾಗಿದೆ. ಇದು ಆರೋಗ್ಯ ಚೆನ್ನಾಗಿರಬೇಕು ಮತ್ತು ವ್ಯವಹಾರಗಳು ವೃದ್ಧಿಸಬೇಕು ಎಂಬ ಉದ್ದೇಶದಿಂದ ಮಾಡಲಾಗುತ್ತದೆ. ಧನ್ವಂತರಿ ಪ್ರತ್ಯಕ್ಷ ಆದ ದಿನ, ಲಕ್ಷ್ಮಿನಾರಾಯಣ ಪ್ರತ್ಯಕ್ಷ ಆದ ದಿನ ಎಂದು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಧನ ತ್ರಯೋದಶಿ ಪೂಜೆಗೆ ಶುಭ ಮುಹೂರ್ತಗಳು ಹೀಗಿವೆ: ಸಂಜೆ 7:16 ರಿಂದ 8:20 ರವರೆಗಿನ ಪ್ರದೋಷ ಕಾಲದಲ್ಲಿ ದೀಪದಾನ ಮತ್ತು ದೀಪ ಪೂಜೆಯನ್ನು ಮಾಡುವುದು. ಅಲ್ಲದೆ, ಸಂಜೆ 5:54 ರಿಂದ 8:22 ರವರೆಗಿನ ವೃಷಭ ಕಾಲದಲ್ಲಿ ಧನ ತ್ರಯೋದಶಿ ಪೂಜೆಯನ್ನು ಮಾಡುವುದು ಅತ್ಯಂತ ಮಂಗಳಕರವಾಗಿರುತ್ತದೆ. “ಓಂ ಶ್ರೀಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ವಸ್ತುಗಳನ್ನು ಖರೀದಿಸುವುದು, ದೀಪದಾನ ಮಾಡುವುದು ಮತ್ತು ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 am, Sat, 18 October 25




