
ಅತಿಯಾಗಿ ನೀರನ್ನು ವ್ಯರ್ಥ ಮಾಡುವುದರಿಂದ ಆಗುವ ಪರಿಣಾಮವೇನು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಭಾರತೀಯ ಸಂಸ್ಕೃತಿಯಲ್ಲಿ ನೀರಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ನೀರನ್ನು ಕೇವಲ ಒಂದು ನೈಸರ್ಗಿಕ ಸಂಪನ್ಮೂಲವಾಗಿ ನೋಡದೆ, ದೈವ ಸ್ವರೂಪ ಮತ್ತು ಅಮೃತ ಎಂದು ಪರಿಗಣಿಸಲಾಗುತ್ತದೆ. ಪಂಚಭೂತಗಳಲ್ಲಿ ನೀರು ಪ್ರಮುಖ ಸ್ಥಾನ ಪಡೆದಿದೆ. ನಮ್ಮ ದೇಹದಲ್ಲೂ ನೀರಿನ ಅಂಶ ಅಧಿಕವಾಗಿದ್ದು, ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ನೀರಿನ ಧಾರ್ಮಿಕ ಮಹತ್ವವು ಪುರಾತನ ಕಾಲದಿಂದಲೂ ಗ್ರಂಥಗಳಲ್ಲಿ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಯಾವುದೇ ಶುಭಕಾರ್ಯ, ಗೃಹ ಪ್ರವೇಶ, ಅಥವಾ ಇತರೆ ಧಾರ್ಮಿಕ ಆಚರಣೆಗಳಲ್ಲಿ ನೀರನ್ನು ಪ್ರೋಕ್ಷಣೆ ಮಾಡುವುದು ಸಾಮಾನ್ಯ.
ಇಷ್ಟೆಲ್ಲಾ ಧಾರ್ಮಿಕ ಮಹತ್ವವಿದ್ದರೂ, ನೀರನ್ನು ಅತಿಯಾಗಿ ಉಪಯೋಗಿಸುವುದರಿಂದ ಅಥವಾ ವ್ಯರ್ಥ ಮಾಡುವುದರಿಂದ ದಾರಿದ್ರ್ಯ ಎದುರಾಗಬಹುದು ಎಂದು ಹಿರಿಯರು ಹೇಳುತ್ತಾರೆ. ಕೆಲವರು ಸ್ನಾನಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡು ಅತಿಯಾದ ನೀರನ್ನು ಬಳಸುತ್ತಾರೆ. ಇದು ಮನೆಗೆ ದಾರಿದ್ರ್ಯವನ್ನು ಆಹ್ವಾನಿಸುತ್ತದೆ ಎಂದು ನಂಬಲಾಗಿದೆ. ಸ್ತ್ರೀ ಪುರುಷರೆನ್ನದೆ ಯಾರೇ ಅತಿಯಾಗಿ ನೀರನ್ನು ಬಳಸಿದರೂ, ಅದು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ನೀರು ಮೈಮೇಲೆ ಹೆಚ್ಚಾಗಿ ಉಳಿಯದಿದ್ದರೂ, ಅದರ ಅತಿಯಾದ ಬಳಕೆಯು ದಾರಿದ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಪುರಾಣಗಳು, ಇತಿಹಾಸ ಮತ್ತು ಹಿರಿಯರ ಅನುಭವಗಳು ತಿಳಿಸುತ್ತವೆ. ಮುಂದಿನ ಪೀಳಿಗೆಗೂ ಈ ಸಂದೇಶವನ್ನು ತಲುಪಿಸುವುದು ನಮ್ಮ ಕರ್ತವ್ಯ ಎಂದು ಗುರೂಜಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ
ನೀರಿನ ಬಳಕೆಯಲ್ಲಿ ಮಿತತ್ವ ಮತ್ತು ಹಿತತ್ವವನ್ನು ಕಾಪಾಡಿಕೊಳ್ಳಬೇಕು. ನೀರನ್ನು ಕುಡಿಯುವಾಗಲೂ ಧಾವಿಸಿ ಕುಡಿಯಬಾರದು. ನಿಧಾನವಾಗಿ, ಅಮೃತ ಎಂದು ಭಾವಿಸಿ ಕುಡಿಯುವುದರಿಂದ ದೇಹಕ್ಕೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಕುಡಿಯುವಾಗ “ಅಮೃತೋಪಸ್ತ ಪರನಮಸಿ” ಎಂಬ ಮಂತ್ರವನ್ನು ಸ್ಮರಿಸಬಹುದು ಅಥವಾ ನೀರನ್ನು ಅಮೃತವೆಂದು ಭಾವಿಸಿ ಕುಡಿಯುವುದು ಉತ್ತಮ. ಇದು ಕೇವಲ ನೀರಿನ ಮಿತಬಳಕೆ ಮಾತ್ರವಲ್ಲದೆ, ಅದರ ಪಾವಿತ್ರವನ್ನು ಅರ್ಥಮಾಡಿಕೊಳ್ಳುವುದಾಗಿದೆ.
ಮನೆಯಲ್ಲಿ ನೀರನ್ನು ವ್ಯರ್ಥ ಮಾಡುವುದು, ಕೈ ತೊಳೆಯಲು, ಸ್ನಾನ ಮಾಡಲು ಅಥವಾ ಬಟ್ಟೆ ತೊಳೆಯಲು ಅತಿಯಾದ ನೀರನ್ನು ಬಳಸುವುದರಿಂದ ವ್ಯಕ್ತಿಗಳಿಗೆ ದಾರಿದ್ರ್ಯ, ಮಂಗು, ಕಂಟಕ ಮತ್ತು ದೋಷಗಳು ಎದುರಾಗಬಹುದು ಎಂದು ನಂಬಲಾಗಿದೆ. ನೀರು ಭೂಮಿಗೆ ಹೋಗಿ ಮರುಬಳಕೆಯಾಗುತ್ತದೆ ಎಂಬ ಕಾರಣ ನೀಡಿ ಅದನ್ನು ವ್ಯರ್ಥ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ನೀರನ್ನು ದೈವ ಸಮಾನ ಎಂದು ಭಾವಿಸಿ, ಮಿತವಾಗಿ ಮತ್ತು ಹಿತವಾಗಿ ಬಳಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ