Daily Devotional: ದೀಪಾರಾಧನೆಯಲ್ಲಿ ಎಣ್ಣೆಯ ಮಹತ್ವ; ಯಾವ ದೀಪದ ಎಣ್ಣೆಯಿಂದ ಏನು ಫಲ?

ಭಗವಂತನ ಆರಾಧನೆಯ ವಿಷಯದಲ್ಲಿ ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಪ್ರತಿಯೊಂದು ಎಣ್ಣೆಗೂ ತನ್ನದೇ ಆದ ಮಹತ್ವವಿದೆ. ತೆಂಗಿನೆಣ್ಣೆ ಮಾನಸಿಕ ನೆಮ್ಮದಿ, ಎಳ್ಳೆಣ್ಣೆ ಶನಿ ದೋಷ ನಿವಾರಣೆ, ತುಪ್ಪ ಸಮಸ್ತ ಇಷ್ಟಾರ್ಥ ಸಿದ್ಧಿ ಮತ್ತು ದುಷ್ಟ ಶಕ್ತಿಗಳ ನಿವಾರಣೆಗೆ ಸಹಕಾರಿ. ಸಾಸಿವೆ ಎಣ್ಣೆ ಪಿತೃಗಳ ತೃಪ್ತಿಗಾಗಿ ಹಾಗೂ ಕೆಲವು ವಿಶೇಷ ಸಂದರ್ಭಗಳಿಗೆ ಮೀಸಲಾಗಿದೆ.

Daily Devotional: ದೀಪಾರಾಧನೆಯಲ್ಲಿ ಎಣ್ಣೆಯ ಮಹತ್ವ; ಯಾವ ದೀಪದ ಎಣ್ಣೆಯಿಂದ ಏನು ಫಲ?
ದೀಪದ ಆರಾಧನೆ

Updated on: Nov 19, 2025 | 10:02 AM

ಪೂಜಾ ಕೈಂಕರ್ಯಗಳು ಅಥವಾ ಭಗವಂತನ ಆರಾಧನೆಯ ವಿಷಯದಲ್ಲಿ ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ದೀಪವು ಜ್ಯೋತಿಯನ್ನು, ಬೆಳಕನ್ನು ಮತ್ತು ಜ್ಞಾನವನ್ನು ನೀಡುತ್ತದೆ, ಅಂಧಕಾರವನ್ನು ದೂರ ಮಾಡುತ್ತದೆ. “ದೀಪಂ ಜ್ಯೋತಿ ಪರಬ್ರಹ್ಮ, ದೀಪಂ ಜ್ಯೋತಿ ಜನಾರ್ದನ, ದೀಪೋ ಹರತುಮೇ ಪಾಪಾನಿ, ಸಂಧ್ಯಾ ದೀಪ ನಮೋಸ್ತುತೆ” ಎಂಬ ಮಂತ್ರವು ದೀಪದ ಮಹತ್ವವನ್ನು ಸಾರುತ್ತದೆ. ದೀಪಕ್ಕೆ ಬಳಸುವ ಎಣ್ಣೆ, ಬತ್ತಿ, ಮತ್ತು ಹಣತೆಯು ಮುಖ್ಯವಾದರೂ, ದೀಪಕ್ಕೆ ಉಪಯೋಗಿಸುವ ಎಣ್ಣೆಗಳ ಮಹತ್ವ ಅತಿ ಹೆಚ್ಚು. ಯಾವ ಎಣ್ಣೆಯನ್ನು ಉಪಯೋಗಿಸಿದರೆ ಯಾವ ಫಲ ಲಭಿಸುತ್ತದೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಪ್ರಾಚೀನ ಕಾಲದಲ್ಲಿ ಗಾಣಗಳಿಂದ ಶುದ್ಧವಾದ ಎಣ್ಣೆಯನ್ನು ತೆಗೆದು ದೀಪಕ್ಕೆ ಬಳಸುತ್ತಿದ್ದರು. ಆದರೆ ಇಂದಿನ ಪಾಕೆಟ್ ಸಿಸ್ಟಮ್ ಯುಗದಲ್ಲಿ ಎಣ್ಣೆಯ ಶುದ್ಧತೆ ಬಗ್ಗೆ ಅರಿವು ಅಗತ್ಯ. ಮನೆಯಲ್ಲಿ ಅಡುಗೆಗೆ ಬಳಸುವ ಎಣ್ಣೆಯನ್ನು ದೀಪಕ್ಕೆ ಬಳಸಬಾರದು. ದೀಪಗಳಿಗೆ ಪ್ರತ್ಯೇಕವಾದ, ಶುದ್ಧವಾದ ಎಣ್ಣೆಯನ್ನು ಉಪಯೋಗಿಸಬೇಕು. ಬೆಳಗಿಸುವ ಎಣ್ಣೆಗಳು ಸಂಪತ್ತು, ಯಶಸ್ಸು ಮತ್ತು ಕೀರ್ತಿಯನ್ನು ತರುತ್ತವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮೂರು ಅಥವಾ ಐದು ಎಣ್ಣೆಗಳ ಮಿಶ್ರಣದ ದೀಪಗಳನ್ನು ಸಂಕಲ್ಪಗಳು ಅಥವಾ ಹರಕೆಗಳಿಗಾಗಿ ಬಳಸಲಾಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ವಿವಿಧ ಎಣ್ಣೆಗಳ ಪ್ರಯೋಜನಗಳು ಹೀಗಿವೆ:

ತೆಂಗಿನೆಣ್ಣೆ ದೀಪ:

ತೆಂಗಿನೆಣ್ಣೆಯ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಆಲೋಚನೆಗಳು ಉತ್ತಮವಾಗುತ್ತವೆ, ಕೆಲಸ ಕಾರ್ಯಗಳಲ್ಲಿ ಶುಭವಾಗುತ್ತದೆ, ಸಂಕಲ್ಪಗಳು ಈಡೇರುತ್ತವೆ ಮತ್ತು ಮಾನಸಿಕ ಜರ್ಝರಿತ ಇರುವ ಸಂದರ್ಭದಲ್ಲಿ ನೆಮ್ಮದಿ ದೊರೆಯುತ್ತದೆ. ಇದನ್ನು ಬುಧವಾರ ಮತ್ತು ಶನಿವಾರ ಹಚ್ಚುವುದರಿಂದ ಸಾಕಷ್ಟು ಶುಭವಾಗುತ್ತದೆ ಮತ್ತು ಪತಿಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ.

ಎಳ್ಳೆಣ್ಣೆ ದೀಪ:

ಎಳ್ಳೆಣ್ಣೆ ದೀಪವು ಶನಿದೇವರ ಪ್ರತೀಕವಾಗಿದೆ. ಅರ್ಧಾಷ್ಟಮ, ಅಷ್ಟಮ, ಸಾಡೇಸಾತಿ ಇರುವವರು ಅಥವಾ ಶನಿ ಕೆಟ್ಟ ಸ್ಥಾನದಲ್ಲಿದ್ದಾಗ (ಆರನೇ, ಎಂಟನೇ, ಹನ್ನೆರಡನೇ ಮನೆಯಲ್ಲಿ) ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ ಶನಿ ಕೃಪೆಗೆ ಪಾತ್ರರಾಗುತ್ತಾರೆ ಮತ್ತು ಶುಭ ಫಲಗಳು ದೊರೆಯುತ್ತವೆ. ಆದಾಗ್ಯೂ, ಇದನ್ನು ಪ್ರತಿದಿನ ಮನೆಯಲ್ಲಿ ಹಚ್ಚುವುದು ಅಷ್ಟು ಸೂಕ್ತವಲ್ಲ.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ತುಪ್ಪದ ದೀಪ:

ತುಪ್ಪದ ದೀಪವು ಸರ್ವಶ್ರೇಷ್ಠವಾಗಿದೆ. ಶುದ್ಧವಾದ ಹಸುವಿನ ತುಪ್ಪವನ್ನು ಬಳಸುವುದು ಇನ್ನೂ ಶ್ರೇಷ್ಠ. ಇದು ಸರ್ವ ಕಾಮನೆಗಳನ್ನೂ ಈಡೇರಿಸುತ್ತದೆ, ದುಷ್ಟ ಶಕ್ತಿಗಳನ್ನು ಹೊರಹಾಕುತ್ತದೆ. ಹಸುವಿನ ತುಪ್ಪಕ್ಕೆ ಮಹಾಲಕ್ಷ್ಮಿಯ ಕೃಪೆ ಪ್ರಾಪ್ತವಾಗುತ್ತದೆ. ತುಪ್ಪವನ್ನು ಯಾವುದೇ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಚ್ಚಬಹುದು.
ಕಡಲೆ ಎಣ್ಣೆ ದೀಪ: ಕಡಲೆ ಎಣ್ಣೆಯ ದೀಪವನ್ನು ಸದಾಕಾಲ, ಯಾವುದೇ ಸಂದರ್ಭದಲ್ಲೂ ಬೆಳಗಿಸಬಹುದು. ಇದು ತುಂಬಾನೇ ಒಳ್ಳೆಯದು.

ಸಾಸಿವೆ ಎಣ್ಣೆ ದೀಪ:

ಸಾಸಿವೆ ಎಣ್ಣೆ ದೀಪವನ್ನು ಪ್ರತಿದಿನ ಮನೆಯಲ್ಲಿ ಹಚ್ಚಬಾರದು. ಇದನ್ನು ಪೂರ್ವಿಕರ ಸಂತೃಪ್ತಿಗಾಗಿ, ಅಪರ ಕಾರ್ಯಗಳ ವಿಚಾರದಲ್ಲಿ, ಅಮಾವಾಸ್ಯೆಯ ಸಮಯದಲ್ಲಿ ಮತ್ತು ಪಿತೃ ಕಾರ್ಯಗಳನ್ನು ಮಾಡುವಾಗ ಉಪಯೋಗಿಸಬಹುದು. ಸಾಸಿವೆ ಎಣ್ಣೆಯು ಪಿತೃಗಳಿಗೆ, ಹನುಮಂತನಿಗೆ ಮತ್ತು ಶನಿದೇವರಿಗೆ ಸಂತೃಪ್ತಿಯನ್ನು ನೀಡುತ್ತದೆ. ಸಾಕ್ಷಾತ್ ಭೈರವರಿಗೆ ಇದು ತುಂಬಾ ಪ್ರೀತಿಪಾತ್ರ ಎಂದು ಹೇಳಲಾಗುತ್ತದೆ. ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚುವುದರಿಂದ ಎಂತಹ ಕಷ್ಟಗಳೂ ನಿವಾರಣೆಯಾಗುತ್ತವೆ.

ಬೇವಿನೆಣ್ಣೆ ದೀಪ:

ಬೇವಿನೆಣ್ಣೆಯನ್ನು ಸಾಮಾನ್ಯವಾಗಿ ಮನೆಯಲ್ಲಿ ಹಚ್ಚುವುದಿಲ್ಲ. ಇದನ್ನು ಕಾಳಿಕಾ ದೇವಾಲಯಗಳು ಅಥವಾ ಶಕ್ತಿ ದೇವಾಲಯಗಳಲ್ಲಿ ಮಾತ್ರ ಹಚ್ಚಲಾಗುತ್ತದೆ.

ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಬೇವಿನೆಣ್ಣೆ, ತೆಂಗಿನೆಣ್ಣೆ ಇವುಗಳನ್ನು ಯಾವಾಗ ಅಂದರೆ ಆಗ ಮನೆಯಲ್ಲಿ ಪ್ರತಿದಿನ ಹಚ್ಚಬಾರದು, ಅದರಿಂದ ಅಷ್ಟು ಶುಭವಾಗುವುದಿಲ್ಲ. ಆದರೆ ಒಂದು ನಿರ್ದಿಷ್ಟ ಎಣ್ಣೆಯನ್ನು ರೂಢಿ ಮಾಡಿಕೊಂಡಿದ್ದರೆ ಅದನ್ನು ಬೆಳಗ್ಗೆ ಮತ್ತು ಸಾಯಂಕಾಲ ಹಚ್ಚಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 am, Wed, 19 November 25