ಅತ್ತ ಆಂಧ್ರದಲ್ಲಿ ಬದಲಾವಣೆಯ ಗಾಳಿ ಪ್ರಚಂಡವಾಗಿ ಬೀಸುತ್ತಿದ್ದು, ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಮರಳುತ್ತಿದ್ದಂತೆ ಮುಖ್ಯವಾಗಿ ತಿರುಪತಿ ತಿಮ್ಮಪ್ಪನ ಸೇವೆಯಲ್ಲಿ ತೊಡಗಿದ್ದಾರೆ. ಅರ್ಥಾತ್ ತಿಮ್ಮಪ್ಪನ ಭಕ್ತ ಗಣಕ್ಕೆ ಅನೇಕ ಗುಡ್ ನ್ಯೂಸ್ಗಳನ್ನು ಕೊಡತೊಡಗಿದ್ದಾರೆ. ತಿಮ್ಮಪ್ಪನ ಸನ್ನಿಧಾನದಲ್ಲಿ ಅಕ್ರಮಗಳು/ ಅನಾಚಾರಗಳು ಮೇರೆ ಮೀರಿವೆ ಎಂದು ಆಕ್ರೋಶಗೊಂಡಿದ್ದ ಭಕ್ತರಿಗೆ ಸಮಾಧಾನಕರ ಸಂಗತಿಗಳನ್ನು ಹೇಳಿದ್ದಾರೆ. ಮೊದಲು ಬೆಟ್ಟದ ಸ್ವಚ್ಛತೆಗೆ ಆದ್ಯತೆ ಕೊಟ್ಟಿದ್ದು, ಇನ್ನು ಗುಡಿಯ ಒಳಗಡೆಯೂ ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆಯೂ, ಒಟ್ಟಾರೆಯಾಗಿ ತಿಮ್ಮಪ್ಪನ ಭಕ್ತರ ಭಾವನೆಗಳನ್ನು ಘಾಸಿಗೊಳಿಸದಂತೆಯೂ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆಗಳನ್ನು ರವಾನಿಸಿದ್ದಾರೆ.
ತಿರುಮಲದಲ್ಲಿ ವಿತರಿಸುವ ತಿಮ್ಮಪ್ಪನ ಲಡ್ಡು ಸ್ವಾದಿಷ್ಟ ಕಳೆದುಕೊಂಡಿದೆ ಎಂದು ಭಕ್ತರು ಇತ್ತೀಚಿನ ವರ್ಷಗಳಲ್ಲಿ ಒಂದೇ ಸಮನೆ ದೂರುತ್ತಿದ್ದರು. ದೇವರ ಪ್ರಸಾದ ಬಾಯಿ ರುಚಿಗಲ್ಲ, ಹೊಟ್ಟೆಗಲ್ಲ, ಭಕ್ತಿಯಿಂದ ಸ್ವೀಕರಿಸಬೇಕು ಎಂಬ ಸಂಪ್ರದಾಯ ಇದೆಯಾದರೂ ತಿರುಪತಿ ಲಡ್ಡು ಜಗತ್ಪಸಿದ್ಧ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಇತ್ತೀಚೆಗಂತೂ ಲಡ್ಡು ತನ್ನ ಸ್ವಾದಿಷ್ಟದ ಘಮಲು ಕಳೆದುಕೊಂಡಿದೆ ಎಂಬುದು ಭಕ್ತರ ಒಕ್ಕೊರಲ ಅನಿಸಿಕೆಯಾಗಿತ್ತು. ಆದರೆ ಇತ್ತೀಚೆಗೆ ಆಂಧ್ರದಲ್ಲಿ ಆಡಳಿತ ಚುಕ್ಕಾಣಿ ಕೈಬದಲಾಗಿದ್ದು, ಬದಲಾವಣೆಯ ಗಾಳಿ ಬೀಸುತ್ತಿದೆ. ಚಂದ್ರಬಾಬು ನಾಯ್ಡು ಎಂಟ್ರಿ- ಜಗನ್ ಎಕ್ಸಿಟ್ ಪರಿಣಾಮವೇನೋ ಎಂಬಂತೆ ತಿರುಪತಿ ಲಡ್ಡು ಮೊದಲಿನಂತಿಲ್ಲ ಅನ್ನುತ್ತಿದ್ದ ಭಕ್ತರಿಗೆ TTD ಗುಡ್ ನ್ಯೂಸ್ ಕೊಟ್ಟಿದೆ.
Also read: ನಮ್ಮ ದೇಶದಲ್ಲಿ ಈ ನಗರಗಳು ಸಂಪೂರ್ಣ ಸಸ್ಯಾಹಾರಿ ನಗರಗಳು, ವಿಶ್ವದ ಮೊದಲ ಸಸ್ಯಾಹಾರಿ ನಗರವೂ ಭಾರತದಲ್ಲೇ ಇರುವುದು!
TTD ನೂತನ ಸಾರಥಿ ಜೆ . ಶ್ಯಾಮಲಾ ರಾವ್ ಅವರು ಗುಣಮಟ್ಟದ ತುಪ್ಪ, ಗುಣಮಟ್ಟದ ಕಡಲೆ ಬೇಳೆ ಮತ್ತು ಗುಣಮಟ್ಟದ ಏಲಕ್ಕಿ ಮತ್ತಿತರ ಗುಣಮಟ್ಟದ ಪರಿಕರಗಳನ್ನು ಬಳಸಿ ಲಡ್ಡುಗಳನ್ನು ರುಚಿಕರವಾಗಿ ತಯಾರಿಸುವಂತೆ ಸೂಚಿಸಿದ್ದಾರೆ. ತಿರುಮಲದ ಗೋಕುಲಂ ವಿಶ್ರಾಂತಿ ಗೃಹದಲ್ಲಿ ಮಂಡಳಿಯ ಉನ್ನತಾಧಿಕಾರಿಗಳ ಶ್ರೀ ವೀರಬ್ರಹ್ಮ ಮತ್ತು ಸಿವಿಎಸ್‌ಒ ಶ್ರೀ ನರಸಿಂಹಕಿಶೋರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಲಡ್ಡೂ ತಯಾರಿಕೆಯಲ್ಲಿ ಆಗುತ್ತಿರುವ ತೊಂದರೆಗಳು ಹಾಗೂ ಗುಣಮಟ್ಟದ ಟೀಕೆಗೆ ಕಾರಣಗಳೇನು ಎಂದು ನೂತನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಮಿಕರಿಂದ ಕೇಳಿ ತಿಳಿದುಕೊಂಡರು. ಲಡ್ಡು ತಯಾರಿಕೆಯಲ್ಲಿ ಬಳಸುವ ಕಡಲೆ ಹಿಟ್ಟು, ತುಪ್ಪ, ಏಲಕ್ಕಿಗಳ ಗುಣಮಟ್ಟ ಹೆಚ್ಚಿಸಬೇಕು ಎಂದು ಈ ಸಂದರ್ಭದಲ್ಲಿ ಅಡುಗೆ ಸೇವಕರು ಅಭಿಪ್ರಾಯಪಟ್ಟರು. ಇದಲ್ಲದೇ ಕೆಲಸದ ಹೊರೆ ಹೆಚ್ಚಾದಂತೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವಂತೆಯೂ ನೂತನ ಇಒಗೆ ಮನವಿ ಮಾಡಿದರು. TTD ನೂತನ ಪದಾಧಿಕಾರಿಗಳಿಂದ ತಿರುಪತಿ ಲಡ್ಡುವಿನ ಗತವೈಭವ ಮರಳುವುದೇ? ಕಾದು ನೋಡಬೇಕಿದೆ.
Also read: ತಿಮ್ಮಪ್ಪನ ಹುಂಡಿಗೆ ಬೆಲೆಬಾಳುವ ವಾಚ್, ಮೊಬೈಲ್ ಅರ್ಪಣೆ.. ಇ-ಹರಾಜಿಗೆ ಮುಂದಾದ ಟಿಟಿಡಿ, ಮುಹೂರ್ತ ಯಾವಾಗ?
ಎಲ್ಲ ಕಚ್ಚಾವಸ್ತುಗಳನ್ನು ಟೆಂಡರ್ ಮೂಲಕ ಖರೀದಿಸಲಾಗುತ್ತಿದ್ದು, ಕಡಿಮೆ ಬಿಡ್ ಮಾಡಿದವರಿಂದ ಖರೀದಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ಇಒಗೆ ವಿವರಿಸಿದರು. ಅಧಿಕಾರಿಗಳು ಹಾಗೂ ಅಡುಗೆ ಸೇವಕರ ಸಲಹೆ-ಸೂಚನೆಗಳನ್ನು ಆಲಿಸಿದ ಶ್ಯಾಮಲಾ ರಾವ್, ಉತ್ತಮ ಗುಣಮಟ್ಟದ ತುಪ್ಪ ಮತ್ತಿತರ ಪದಾರ್ಥಗಳನ್ನು ಬಳಸಿ ರುಚಿಕರವಾದ ಲಡ್ಡೂಗಳನ್ನು ತಯಾರಿಸಿ ರುಚಿ ಮತ್ತು ಗುಣಮಟ್ಟವನ್ನು ಕಾಪಾಡುವಂತೆ ತಿಳಿಸಿದರು. ಈ ಸಭೆಯಲ್ಲಿ ಶ್ರೀವಾರಿ ದೇವಸ್ಥಾನದ ಉಪ ಇಒ ಶ್ರೀ ಲೋಕನಾಥಂ, ಎಇಒ (ಟೈಡ್) ಶ್ರೀ ಶ್ರೀನಿವಾಸುಲು, ನಿವೃತ್ತ ಎಇಒಗಳಾದ ಶ್ರೀ ಶ್ರೀನಿವಾಸನ್, ಶ್ರೀ ವಸಂತ ರಾವ್ ಮತ್ತಿತರರು ಭಾಗವಹಿಸಿದ್ದರು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Sat, 22 June 24