Tulsidas Jayanti 2024: ಪ್ರಪಂಚದ ಮೊದಲ ಕವಿ ಎಂದರೆ ವಾಲ್ಮೀಕಿಗಳು. ಅವರು ಬರೆದ ಮೊದಲ ಗ್ರಂಥವೇ ‘ಶ್ರೀಮದ್ ರಾಮಾಯಣ’. ರಚನೆ ಸಂಸ್ಕೃತದಲ್ಲಿ ಇದ್ದುದರಿಂದ ಕೆಲವೇ ವರ್ಗಗಳಿಗೆ ಮಾತ್ರ ಸೀಮಿತ ಗೊಂಡಿತ್ತು. ಜಗತ್ತಿಗೆ ರಾಮಾಯಣವನ್ನು ತಲುಪಿಸ ಬೇಕೆಂಬ ಕಾರಣಕ್ಕಾಗಿ ಜನಿಸಿದವರು ತುಳಸಿದಾಸರು. 16ನೇ ಶತಮಾನದ ಭಕ್ತಿ ಪಂಥದ ಕವಿ ತುಳಸಿದಾಸರು ಸಂಸ್ಕೃತದಲ್ಲಿದ್ದ ರಾಮಾಯಣವನ್ನು ಅವಧಿ ಭಾಷೆಯಲ್ಲಿ ರಚಿಸಿ, ಜಗತ್ತಿಗೆ ತಲುಪಿಸಿದರು.
ತುಳಸಿದಾಸ ಜಯಂತಿಯು ಹಿಂದೂ ಸಂತ ಮತ್ತು ಕವಿ ಗೋಸ್ವಾಮಿ ತುಳಸಿದಾಸ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ. ಈ ಪ್ರಮುಖ ಸಂದರ್ಭವನ್ನು ವಾರ್ಷಿಕವಾಗಿ ಶ್ರಾವಣ ಮಾಸದ ಶುಕ್ಲ ಪಕ್ಷದ ಎಂಟನೆಯ ದಿನದಂದು (ಸಪ್ತಮಿ) ಆಚರಿಸಲಾಗುತ್ತದೆ. ಈ ವರ್ಷ, ಇದನ್ನು ಇಂದು ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ತುಳಸಿದಾಸ್ ಅವರು ಬರೆದಿರುವ “ಹನುಮಾನ್ ಚಾಲೀಸಾ” ಸೇರಿದಂತೆ ಧಾರ್ಮಿಕ ಸಾಹಿತ್ಯಕ್ಕೆ ಅವರು ನೀಡಿದ ಆಳವಾದ ಕೊಡುಗೆಗಳಿಗಾಗಿ ಇವರ ಜನ್ಮ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ತುಳಸಿದಾಸರು ಹೇಳುವ ರಾಮಕಥೆ ಕೇಳಲು ಎಲ್ಲೆಲ್ಲಿಂದಲೋ ಜನ ಬರುತ್ತಿದ್ದರು. ಭಾರದ್ವಾಜ ಗೋತ್ರದ ಬ್ರಾಹ್ಮಣ ಕುಟುಂಬದವರು ಕಾರ್ತಿಕ ಸ್ನಾನಕ್ಕಾಗಿ ಅಲ್ಲಿಗೆ ಬಂದಿದ್ದರು. ಅವರು ರಾಮ ಕಥೆ ಕೇಳಿ ಪ್ರಭಾವಿತರಾಗಿ ತುಳಸಿದಾಸರ ಪೂರ್ವಾ ಪರ ವಿಚಾರಿಸಿ, ತಮ್ಮ ಮಗಳು ರತ್ನಾವತಿಯನ್ನು ಕೊಟ್ಟು ವಿವಾಹ ಮಾಡಿದರು. ಗುರು ಹಿರಿಯರ ಆಶೀರ್ವಾದದೊಂದಿಗೆ ವಿವಾಹ ಸಂಪನ್ನವಾಗಿ ಪತ್ನಿ ರತ್ನಾವತಿ ಯೊಂದಿಗೆ ರಾಜಾಪುರದಲ್ಲಿ ಸಂಸಾರ ಮಾಡಿದರು. ಪತ್ನಿಯ ಸೌಂದರ್ಯಕ್ಕೆ ಮೈಮರೆತ ತುಳಸಿದಾಸರು ರಾಮನನ್ನು ಮರೆತು ಸಂಸಾರ ಸಾಗರದಲ್ಲಿ ಮುಳುಗಿ ದರು. ಮುಂದೆ ಪತ್ನಿಯ ಕಾರಣದಿಂದಾಗಿ ಮತ್ತೆ ರಾಮನತ್ತ ಪ್ರಭಾವಿತರಾದರು. ಆ ಸಮಯಕ್ಕೆ ಗುರುಗಳು ಹೇಳಿದ ಮಾತು ‘ನಿನ್ನ ಚಿತ್ತ ರಾಮನತ್ತ’ ಇರಲಿ ಎಂದು ಗುರುಗಳು ಹೇಳಿದ ಮಾತು ನೆನಪಿಗೆ ಬಂದಿತು.
ಲೋಕ ಕಲ್ಯಾಣಕ್ಕಾಗಿ ಪತ್ನಿಯನ್ನು ತ್ಯಜಿಸಿ ಹೊರಟು, ಪ್ರಯಾಗಕ್ಕೆ ಬಂದು… ಸಂನ್ಯಾಸ ಆಶ್ರಮ ಸ್ವೀಕರಿಸಿ ರಾಮದರ್ಶನ ಸಂಕಲ್ಪ ಮಾಡಿದರು. ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾ ಕಾಶಿಗೆ ತಲುಪಿದರು. ಮುಂದೆ ಮಾನಸ ಸರೋವರಕ್ಕೆ ಹೋದರು. ಅಲ್ಲಿ ಸಾಧು ಸಂತರು ನೆರೆದಿದ್ದು, ವಿಷ್ಣು ವಾಹನ ಗರುಡ ದೇವನು ಇದ್ದು, ಕಾಕಭೂಶುಂಡಿ ಅವರಿಗೆಲ್ಲ ರಾಮಕಥೆಯನ್ನು ಹೇಳುವುದನ್ನು ದಾಸರು ಕೇಳಿದರು. ಇದೆಲ್ಲವು ‘ರಾಮ ಚರಿತ ಮಾನಸ’ ರಚನೆಯ ಸಲುವಾಗಿಯೇ ಸಾಕ್ಷಾತ್ ಪರಮೇಶ್ವರನೇ ಮಾಡಿದ ಲೀಲೆಯಾಗಿತ್ತು. ಒಮ್ಮೆ ಕಾಕಭೂಶುಂಡಿ ತುಳಸಿದಾಸರಿಗೆ ಕಾಶಿಗೆ ಹೋಗಿ ಅಲ್ಲಿ ರಾಮನ ದರ್ಶನವಾಗುತ್ತದೆ ಎಂದು ತ ತಿಳಿಸಿದರು.
ತುಳಸಿದಾಸರಿಗೆ ತನ್ನ ಆರಾಧ್ಯ ದೈವ ರಾಮನನ್ನು ಕಾಣುವ ಬಯಕೆ ಹೆಚ್ಚಾಗಿತ್ತು. ಇಡೀ ಕೈಲಾಸವನ್ನು ಪ್ರದಕ್ಷಿಣೆ ಮಾಡಿ, ಕಾಶಿಗೆ ಬಂದು ರಾಮನಾಮ ಸ್ಮರಣೆ ಮಾಡುತ್ತಾ ಕಾಶಿಯನ್ನೆಲ್ಲಾ ಸುತ್ತಿದರು. ಕಾಶಿಯಲ್ಲಿರುವ ಎಲ್ಲಾ ಸ್ನಾನ ಘಟ್ಟಗಳನ್ನು ಸುತ್ತಿದರೂ ರಾಮನ ದರ್ಶನವಾಗಲಿಲ್ಲ. ‘ಅಸ್ಸಿ’ ಎಂಬ ಘಟ್ಟಕ್ಕೆ ಬಂದರು. ಅಲ್ಲಿ ಗರುಡ ದೇವನ ದರ್ಶನವಾಯಿತು. ನಿಷ್ಠೆಯಿಂದ ಪ್ರಯತ್ನಿಸಿದರೆ ರಾಮದರ್ಶನವಾಗುತ್ತದೆ ಎಂದು ಗರುಡ ದೇವ ತಿಳಿಸಿದಾಗ ತುಳಸಿದಾಸರಿಗೆ, ತಮ್ಮ ಜನ್ಮದ ಕಾರಣದ ಅರ್ಥವಾಗಿ ಜ್ಞಾನೋದಯವಾಯಿತು.
ನಿತ್ಯವೂ ರಾಮಕಥಾ ವಾಚನ ಮಾಡಲು ಆರಂಭಿಸಿದರು. ಕಾಶಿಯ ಸುತ್ತಮುತ್ತಲ ಭಕ್ತರೆಲ್ಲ ಬಂದು ಸೇರುತ್ತಿದ್ದರು. ಎಲ್ಲಿ ರಾಮ ಕತಾ ಪಠಣ ಇರುವುದೋ, ಅಲ್ಲಿ ಹನುಮಂತ ಇರುವನು. ಎಂಬಂತೆ ದಿನವೂ ಹನುಮಂತ ಅಲ್ಲಿಗೆ ಬರುತ್ತಿದ್ದ ಅದು ದಾಸರಿಗೆ ತಿಳಿದಿರಲಿಲ್ಲ. ಅವರು ನಿತ್ಯ ಗಂಗಾ ನದಿಗೆ ಸ್ನಾನ ಸಂಧ್ಯಾವಂದನೆಗೆ ಹೋತ್ತಿದ್ದರು. ಅಲ್ಲಿಂದ ಬರುವಾಗ ಒಂದು ತಂಬಿಗೆ ನೀರು ತಂದು ಒಣಗಿದ ಮರಕ್ಕೆ ಹಾಕುತ್ತಿದ್ದರು. ಆದರೆ ಹಾಕುತ್ತಿದ್ದ ನೀರು ಕಾಣದೆ ಒಣಗಿದಂತೆ ಇರುತ್ತಿತ್ತು ನೀರು ನೆಲದ ಮೇಲೆ ಬೀಳದೆ ಯಾರೋ ಕುಡಿದಂತೆ ಭಾಸವಾಗುತ್ತಿತ್ತು. ಇದು ಹೇಗೆ ಎಂದು ಅಂದುಕೊಳ್ಳುತ್ತಲೇ 21 ದಿನ ಕಳೆದು ಹೋಯಿತು. ಈ ದಿನ ಪರೀಕ್ಷಿಸ ಬೇಕೆಂದು ನೀರು ಹಾಕಿ ಮರದ ಹತ್ತಿರ ನಿಂತರು. ಸ್ವಲ್ಪ ಹೊತ್ತಿಗೆ ಆ ಮರದಿಂದ ಪ್ರಕಾಶಮಾನವಾದ ಬೆಳಕು ಬಂದು ಮರದ ತುಂಬಾ ಎಲೆ ಚಿಗುರಿ ಆ ಮರದಿಂದ ಬ್ರಹ್ಮ ರಾಕ್ಷಸ ಹೊರಬಂದು ಪ್ರತ್ಯಕ್ಷವಾಯಿತು.
ದಾಸರು ರಾಕ್ಷಸನನ್ನು ನೋಡಿ ಒಂದು ಕ್ಷಣ ಭಯದಿಂದ ಕಂಪಿಸಿದರು. ಇಷ್ಟು ದಿನ ಹಾಕುತ್ತಿದ್ದ ನೀರನ್ನು ಈ ರಾಕ್ಷಸ ಕುಡಿಯುತ್ತಿದೆ ಎಂದು ತಿಳಿಯಿತು. ಬ್ರಹ್ಮ ರಾಕ್ಷಸ ಮಾತನಾಡಿ, ನೀವು ನನಗೆ ಇಷ್ಟು ದಿನಗಳ ಕಾಲ ನೀರನ್ನು ಕೊಟ್ಟು ನನ್ನ ಬಾಯಾ ರಿಕೆಯನ್ನು ತಣಿಸಿರುವಿರಿ ನಿಮಗೆ ಏನು ವರ ಬೇಕೊ ಕೇಳಿ ಕೊಡುತ್ತೇನೆ ಎಂದಿತು. ತುಳಸಿದಾಸರು ನನಗೆ ರಾಮನ ದರ್ಶನ ಮಾಡಿಸು. ಅದು ಬಿಟ್ಟರೆ ಇನ್ನೇನು ಬೇಡ ಎಂದರು. ಬ್ರಹ್ಮ ರಾಕ್ಷಸ ಹೇಳಿತು ರಾಮದರ್ಶನ ಮಾಡಿಸುವ ಶಕ್ತಿ ನನಗಿದ್ದರೆ ನಾನೇಕೆ ಬ್ರಹ್ಮ ರಾಕ್ಷಸನಾಗಿ ಈ ಒಣ ಮರದಲ್ಲಿ ಇರುತ್ತಿದ್ದೆ. ರಾಮದರ್ಶನ ಮಾಡಿ ಸೋ ಶಕ್ತಿ ನನಗಿಲ್ಲ. ಆದರೆ ನಿಮಗೆ ರಾಮದರ್ಶನ ಮಾಡಿಸುವ ಶಕ್ತಿ ಹನುಮಂತನಿಗೆ ಮಾತ್ರ ಸಾಧ್ಯ ಎಂದಿತು.
ದಾಸರು ಹೇಳಿದರು ಆ ರಾಮದೂತರ ರಾಮಭಕ್ತ ಅಂಜನ ಸುತ ಹನುಮಂತನೆಲ್ಲಿ ನಾನೆಲ್ಲಿ, ತಮಾಷೆ ಮಾಡುವೆಯಾ ಎಂದರು. ಆಗ ಬ್ರಹ್ಮ ರಾಕ್ಷಸ ಹೇಳಿತು ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ನಿಮ್ಮ ರಾಮ ಕಥೆ ಕೇಳಲು ಪ್ರತಿನಿತ್ಯ ಹನುಮಂತ ಬರುತ್ತಾನೆ ಎಲ್ಲಿ ರಾಮನು ಅಲ್ಲಿ ಹನುಮ ಎಂದು ನಿಮಗೆ ತಿಳಿದಿಲ್ಲವೇ? ಎಂದು ಕೇಳಿದಾಗ ದಾಸರಿಗೆ ಆಶ್ಚರ್ಯವಾಗಿ, ಪ್ರತಿನಿತ್ಯವೂ ಒಬ್ಬ ವೃದ್ಧರು ಬರುತ್ತಾರೆ ಅವನೇ ಹನುಮಂತ ಎಂಬುದು ತಿಳಿಯಿತು. ಬ್ರಹ್ಮ ರಾಕ್ಷಸ ಹೇಳಿತು ನಿಮ್ಮ ರಾಮ ಕಥೆ ಕೇಳಲು ಎಲ್ಲರಿಗಿಂತ ಮೊದಲು ಬಂದು ಎಲ್ಲರಿಗಿಂತ ಯಾರು ಕೊನೆಯಲ್ಲಿ ಹೋಗುತ್ತಾರೋ ಅವರೇ ಆಂಜನೇಯ.
ಆಂಜನೇಯನ ಮೂಲಕ ನಿಮಗೆ ರಾಮ ದರ್ಶನವಾಗುತ್ತದೆ ಎಂದಾಗ ತುಳಸಿದಾಸರಿಗೆ ಆನಂದ ಭಾಷ್ಪ ಹರಿಯಿತು. ಬ್ರಹ್ಮ ರಾಕ್ಷಸನಿಗೆ, ನಿನಗೆ ಕೋಟಿ ನಮನಗಳು. ನಿನ್ನಿಂದ ನನಗೆ ಬಹಳ ಉಪಕಾರ ವಾಯಿತು ಇನ್ನು ಮುಂದೆ ರಾಮ ಭಕ್ತ ತುಳಸಿದಾಸ ಎಂದು ಹೆಸರು ಅದರಲ್ಲಿ ನೀನು ಸೇರಿದ್ದಿ. ಮುಂದೆ ಯಾರಾದರೂ ಭಕ್ತರು ರಾಮ ಭಕ್ತ ಎಂದು ನನ್ನನ್ನು ನೆನೆಸಿಕೊಂಡಾ ಮರೆಯದೆ ನಿನ್ನನ್ನು ನೆನಪಿಸಿಕೊಳ್ಳುತ್ತಾರೆ. ನನ್ನ ಹೆಸರು ಎಲ್ಲಿಯ ತನಕ ಇಲ್ಲಿ ಇರುವುದೋ ಅಲ್ಲಿಯತನಕ ನೀನು ಇರುವೆ, ನನಗೆ ಸಹಾಯ ಮಾಡಿದ ನಿಮಗೆ ಎಂದಿಗೂ ಒಳ್ಳೆಯದೇ ಆಗುತ್ತದೆ ಎಂದು ಮನತುಂಬಿ ಹರಸಿದರು.
ಆ ದಿನ ರಾಮಕತಾ ಸಮಯದಲ್ಲಿ ಅಲ್ಲಿಗೆ ಬಂದ ವೃದ್ಧ ಬ್ರಾಹ್ಮಣರೂಪಿ ಆಂಜ ನೇಯನನ್ನು ತುಳಸೀ ದಾಸರು ಗುರುತಿಸಿದರು. ತುಳಸೀದಾಸರು ಆಂಜನೇಯನ ಮುಂದೆ ಮಂಡಿಯೂರಿ ಕೈಮುಗಿದು ಭಕ್ತಿಯಿಂದ ಪ್ರಾರ್ಥಿಸಿ, ಪ್ರಭು ನನ್ನ ಮೇಲೆ ದಯೆ ತೋರಿ ಎಂದು ಬೇಡಿದರು. ಅವರ ಭಕ್ತಿಗೆ ಮೆಚ್ಚಿ, ಆಂಜನೇಯ ತನ್ನ ನಿಜ ರೂಪವನ್ನು ತೋರಿಸಿದನು, ಹೇ ಪ್ರಭು, ದಯಾನಿಧೇ, ಕರುಣಾಮೂರ್ತಿ, ಆಂಜ ನೇಯ, ರಾಮ ಭಕ್ತ, ಸಂಕಟ ಮೋಚನ, ಹನುಮಂತ, ರಾಮದೂತ, ರಾಮ ದರ್ಶನ ಮಾಡುವ ನನ್ನ ಹಂಬಲವನ್ನು ನೀನೇ ಪೂರೈಸಬೇಕು. ಇದೋ ಕೇಳು, ಶ್ರೀ ಸೀತಾ ರಾಮಚಂದ್ರರ ಮೇಲಾಣೆ ನನಗೆ ನೀನೇ ದರ್ಶನ ಮಾಡಿಸಬೇಕು. ನನಗೆ ನಿನ್ನ ಹೊರತು ಇನ್ನಾರು ಇಲ್ಲ . ಯಾರ ಬಳಿ ಹೋಗಲಿ ನಾನು ಹೇಳು.
ಆಂಜನೇಯನು ಕರುಣೆಯಿಂದ ಹೇಳಿದ, ಮಗು ತುಳಸೀದಾಸ ಚಿಂತೆ ಮಾಡಬೇಡ ನೀನು ಶರಣಾಗುವುದಾದರೆ ಪ್ರಭು ಶ್ರೀರಾಮಚಂದ್ರನಿಗೆ ಶರಣಾಗು ಎಂದಾಗ, ಹನುಮಂತ ನಿಮ್ಮ ಕೃಪೆ ಇಲ್ಲದೆ ನಾನು ಹೇಗೆ ದರ್ಶನ ಮಾಡಲಿ, ನೀವು ಕೃಪೆ ತೋರಿ ರಾಮನನ್ನು ತೋರಿಸಲೇಬೇಕು ಎಂದರು. ತುಳಸೀದಾಸ ಕೇಳು, ಯಾವ ಭಕ್ತರೇ ಆಗಲಿ, ಭಕ್ತಿ ಶ್ರದ್ಧೆಯಿಂದ ಸಂಪೂರ್ಣ ನಂಬಿಕೆಯಿಂದ ಕರೆದು ಆ ರಾಮ ನಿಂದ ಏನನ್ನೇ ಬಯಸಿದರೂ ರಾಮನೇ ಕರುಣಿಸುತ್ತಾನೆ. ನಾನು ಕೇವಲ ರಾಮ ಭಕ್ತ ಮಾತ್ರ, ನಿನ್ನ ಭಕ್ತಿ ಅಪರಿಮಿತವಾದದ್ದು ನಿನ್ನ ಆಸೆ ಖಂಡಿತ ಫಲಿಸುತ್ತದೆ ಎಂದನು. ನಿನ್ನ ಜನ್ಮವಾಗಿರುವುದೇ ಒಂದು ವಿಶೇಷ ಕಾರಣದಿಂದ. ಈ ಕೂಡಲೇ ನೀನು ಚಿತ್ರಕೂಟಕ್ಕೆ ಹೋಗು ಅಲ್ಲಿ ನಿನಗೆ ರಾಮನ ದರ್ಶನವಾಗುತ್ತದೆ ಎಂದಾಗ ತುಳಸೀದಾಸರು, ಹೇ ಪ್ರಭು ಅಲ್ಲಿ ಹೋಗಲು ನೀನು ನನ್ನ ಜೊತೆ ಬರಬೇಕು. ಜೊತೆಯಲ್ಲೇ ಇದ್ದು ರಾಮ ದರ್ಶನ ಮಾಡಿಸುವೆ ಎಂದು ನನಗೆ ಮಾತು ಕೊಡ ಬೇಕು ಎಂದರು. ಹನುಮಂತ ಹೇಳಿದ ತುಳಸೀದಾಸ ನೀನು ‘ರಾಮ ನಾಮ’ ಸ್ಮರಣೆಯನ್ನು ಎಲ್ಲೆಲ್ಲಿ ಮಾಡುತ್ತಿರುವೆಯೋ ಅಲ್ಲೆಲ್ಲಾ ಈ ರಾಮಭಕ್ತನು ನಿನ್ನ ಜೊತೆಯಲ್ಲಿ ಇರುತ್ತಾನೆ. ನಿನಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹನುಮಂತ ಹರಸಿದನು. ತುಳಸಿ ದಾಸರ ಕಣ್ತುಂಬಿ ಬಂದಿತ್ತು ಆಂಜನೇಯ
ಶ್ರೀ ಗುರು ಚರಣ ಸರೋಜರಜ ನಿಜ ಮನ ಮುಕುರ ಸುಧಾರಿ !
ಬರನಉ ರಘುವರ ಬಿಮಲ ಯಶ ಜೋ ದಾಯಕ ಫಲಚಾರಿ!!
ಬುದ್ಧಿಹೀನ ತನು ಜಾನಿಕೇ ಸುಮಿರೌ ಪವನ ಕುಮಾರ!
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ!!
ಶ್ರೀ ಗುರು ಚರಣ ಕಮಲಗಳ ಧೂಳಿನಿಂದ ನನ್ನ ಮನರೂಪೀ ಕನ್ನಡಿಯನ್ನು ಸ್ವಚ್ಛ ಮಾಡಿ ಫಲಗಳನ್ನು ದಯಪಾಲಿಸುವಂತಹ ರಘುವರನ ನಿರ್ಮಲವಾದ ಯಶಸ್ಸನ್ನು ವರ್ಣಿಸಿ ಹಾಡುತ್ತೇನೆ.
ಬುದ್ಧಿ ಹೀನನಾದ ನನಗೆ ಒಳ್ಳೆಯ ಬುದ್ಧಿಯನ್ನು ಕರುಣಿಸು, ಬಲ, ಬುದ್ಧಿ, ಜ್ಞಾನ ಇತ್ಯಾದಿಗಳನ್ನು ಕೊಟ್ಟು ರಾಗ, ದ್ವೇಷ, ಕ್ಲೇಶಗಳನ್ನು, ಜನನ, ಮರಣಾದಿ ವಿಕಾರಗಳನ್ನು ಹೋಗಲಾಡಿಸು. (ಬರಹ – ಆಶಾ ನಾಗಭೂಷಣ)