ಉಪಾಕರ್ಮ ಎಂದರೇನು?
ಉಪಾಕರ್ಮ ಅಂದರೆ ಪ್ರಾರಂಭ ಅಥವಾ ಉಪಕ್ರಮ (ಜ್ಞಾನದ ಕುರಿತಾಗಿ ಸಾಗುವುದು/ ಉಪಕ್ರಮಿಸುವುದು) ಎಂದು ಅರ್ಥ. ಉಪಾಕರ್ಮದ ದಿನವೆಂದರೆ ಶ್ರಾವಣ ಮಾಸದ ಹುಣ್ಣಿಮೆಯ ದಿನ. ಉಪಾಕರ್ಮ ಎಂಬ ಶಬ್ದದ ಮೂಲ ರೂಪ ಉಪಾಕರ್ಮನ್ ಎಂಬುದಾಗಿ ಇದೆ. ಇನ್ನೂ ಹೇಳುವುದಾದರೆ ಶ್ರಾವಣ ಮಾಸದಲ್ಲಿ ಹೋಮ ಪೂರ್ವಕವಾಗಿ ಜ್ಞಾನ ಸ್ವೀಕಾರವನ್ನು ಆರಂಭಿಸುವುದು ಎಂದರ್ಥ. ಹೇಗೆ ನಾವು ಯಾವುದೇ ಶುಭಕಾರ್ಯ ಮಾಡುವ ಮೊದಲು ಭಗವದನುಗ್ರಹಕ್ಕೋಸ್ಕರ ಹವನ ಪೂಜಾದಿಗಳನ್ನು ಮಾಡುತ್ತೇವೋ ಅದೇ ಪ್ರಕಾರವಾಗಿ ಜೀವಿಯು ಸುಂದರವಾಗಿ ಸಂಸ್ಕಾರಯುತವಾಗಿ ಬದುಕುವುದಕ್ಕೋಸ್ಕರ ಮಾಡುವ ಜ್ಞಾನಾರ್ಜನೆಯೇನಿದೆ ಅದರ ಪೂರ್ವದಲ್ಲಿ ಮಾಡುವ ಹವನ, ದೇವತೆಗಳ ಮತ್ತು ಋಷಿಗಳಪೂಜೆ, ತರ್ಪಣ, ದಾನ ಮತ್ತು ಉಪವೀತಧಾರಣ ಇದೇನಿದೆ ಅದಕ್ಕೆ ಹೇಳುವುದು ಉಪಾಕರ್ಮ ಎಂದು. ಅಂದರೆ ಒಟ್ಟಾರೆ ಒಳ್ಳೆಯ ಜ್ಞಾನಾರ್ಜನೆಗೆ ಮಾಡುವ ನಾಂದಿ / ಆರಂಭ ಎಂದು ಹೇಳಬಹುದು.
ಉಪಾಕರ್ಮದ ದಿನ ಧರಿಸುವ ಜನಿವಾರದ ಕುರಿತು ಮಾಹಿತಿ
ಯಾವುದೇ ಒಂದು ವ್ಯಕ್ತಿಗೆ / ವಸ್ತುವಿಗೆ ಸೌಂದರ್ಯವೆನ್ನುವುದು ಸಂಸ್ಕಾರದಿಂದ ಮಾತ್ರ ಬರಲು ಸಾಧ್ಯ. ಆ ಸೌಂದರ್ಯವೆನ್ನುವುದು ಆಂತರಿಕ ಮತ್ತು ಬಾಹ್ಯವೆಂದು ಎರಡು ವಿಧ. ಬಾಹ್ಯ ಸೌಂದರ್ಯವೆನ್ನುವುದು ಚೈತನ್ಯ ಮತ್ತು ಅಚೈತನ್ಯ ಇವೆರಡರಲ್ಲೂ ಇರುತ್ತದೆ. ಇದರ ಪಾಲನೆ ಪೋಷಣೆ ಅಷ್ಟೇನು ಕಷ್ಟವಲ್ಲ. ಪ್ರಕ್ರತ ಜಗತ್ತಿನಲ್ಲಿ ಅದೂ ಕಷ್ಟವೇ ಆಗಿದೆ. ಸ್ಥೂಲಕಾಯ,ವಿಕಾರ ಕ್ಷೌರ ಇತ್ಯಾದಿಗಳು ಕಾಣಸಿಗುತ್ತವೆ. ಇದನ್ನು ಸಾಮಾನ್ಯ ಪರಿಶ್ರಮದಿಂದ ಸರಿಮಾಡಬಹುದು. ಆದರೆ ಅತೀಕಠಿಣವಾದದ್ದು ಆಂತರಿಕ ಸೌಂದರ್ಯ. ಇದು ಅಲೌಕಿಕ ಸಾಧನೆಯಿಂದ ಮಾತ್ರ ಸಾಧ್ಯ.
ಈ ಅಲೌಕಿಕ ಸಾಧನೆಗೆ ಹಲವಾರು ನಿಯಮಗಳಿವೆ. ಆಹಾರ, ವಿಹಾರ, ವ್ಯವಹಾರ ಇತ್ಯಾದಿಗಳ ವಿಚಾರದಲ್ಲಿ ಕೆಲವು ನಿರ್ಬಂಧಗಳಿವೆ. ಇದಕ್ಕೆ ಪೂರಕವಾಗಿ ಮಾನವನಿಗೆ ನಾಲ್ಕು ಅವಸ್ಥೆಗಳನ್ನು ಹೇಳಲಾಗಿದೆ. ಅದನ್ನು ಆಶ್ರಮವೆಂಬ ಹೆಸರಿನಿಂದ ಕರೆಯುತ್ತಾರೆ. ಅದುವೇ ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸವೆಂದು. ಈ ಆಶ್ರಮಗಳಲ್ಲಿ ಅದರದ್ದೇ ಆದ ಕರ್ತವ್ಯಗಳಿವೆ. ಇದಲ್ಲೆದಕ್ಕೂ ಮೂಲಸಂಸ್ಕಾರ ಯಾವುದೆಂದರೆ ಉಪನಯನ ಸಂಸ್ಕಾರ. ಅಂದರೆ ವ್ಯಕ್ತಿಗೆ ಮಾಡಿಸುವ ಉಪವೀತ ಅಥವಾ ಜನಿವಾರ ಧಾರಣೆಯೆನ್ನುವ ಪ್ರಕ್ರಿಯೆ.
ಉಪ ಅಂದರೆ ಜೊತೆಗೆ ಎಂದು ಅರ್ಥ. ನಯನ ಎಂದರೆ ಸಾಗುವುದು ಎಂದರ್ಥ. ಒಟ್ಟಾರೆಯಾಗಿ ಜ್ಞಾನಾರ್ಜನೆಗಾಗಿ ಗುರುವಿನ ಜೊತೆಗೆ ಮನೆಯನ್ನು ಬಿಟ್ಟು ಗುರುಕುಲಕ್ಕೆ ಹೋಗುವಿಕೆ ಎಂದು ತಾತ್ಪರ್ಯ. ಅಂತಹ ಅಧ್ಯಯನಕ್ಕೆ ಅವಕಾಶವಿದ್ದರೂ ಪ್ರಸ್ತುತಕಾಲದಲ್ಲಿ ಅಭ್ಯಾಸ ಮಾಡಲು ಹೋಗುವವರಿಲ್ಲ. ಈ ಕಾರಣದಿಂದಾಗಿ ಜನಿವಾರ/ಉಪವೀತದ ಮಹತ್ವ ತಿಳಿಯದಾಗಿದೆ.
ಜನಿವಾರ/ಉಪವೀತದ ಮಹತ್ವ
ಶಾಸ್ತ್ರದಲ್ಲಿ ಒಂದು ಮಾತಿದೆ “ಸಂಸ್ಕಾರಮಾತ್ರ ಜನ್ಯತ್ವೇಸತಿ ಜ್ಞಾನತ್ವಂ” ಎಂಬುದಾಗಿ. ಅಂದರೆ ಸರಿಯಾದ ಸಂಸ್ಕಾರದಿಂದ ಮಾತ್ರ ಉತ್ತಮವಾದ ವಿದ್ಯೆ/ಜ್ಞಾನ ಪ್ರಾಪ್ತಿ ಎಂದು. ಆ ವಿದ್ಯೆಯ ಅಧ್ಯಯನಕ್ಕೆ ಒಂದು ಅರ್ಹತೆ ಬೇಕು. ಅದು ಉಪನಯನ ಸಂಸ್ಕಾರದಿಂದ ಬರುತ್ತದೆ. ಉಪನಯನ ಸಂಸ್ಕಾರವೆಂದರೆ ಯಜ್ಞೋಪವೀತಧಾರಣಾ ವಿಧಿ ಅನ್ನಬಹುದು. ಈ ಸಂಸ್ಕಾರದಂದು ವ್ಯಕ್ತಿಯೋರ್ವನಿಗೆ ಮೌಂಜೀಬಂಧವನ್ನು ಮಾಡಿ. ಜನಿವಾರದ ಧಾರಣೆಯನ್ನು ಮಾಡಿಸುತ್ತಾರೆ. ಮೊಟ್ಟಮೊದಲ ಉಪವೀತಧಾರಣೆಗೆ ವಯೋ ನಿಯಮವೂ ಇದೆ. ಅದು ಗರ್ಭಾಷ್ಟಮದಲ್ಲಿ ಮಾಡಬೇಕೆಂದು (ಏಳನೇ ವರ್ಷದಲ್ಲಿ). ಈ ಉಪವೀತದಲ್ಲಿ ಸಾವಿತ್ರಬಂಧ (ಸಾವಿತ್ರೀ ಗಂಟು) ಮತ್ತು ಬ್ರಹ್ಮಬಂಧ (ಬ್ರಹ್ಮಗಂಟು) ಎಂದು ಎರಡು ಬಂಧ / ಗಂಟುಗಳಿರಬೇಕು . ಹಾಗಿದ್ದರೆ ಮಾತ್ರ ಅದು ಉಪವೀತವೆನಿಸುವುದು. ಜನಿವಾರದಲ್ಲಿ ಮೂರು ಎಳೆಗಳು ಇರುತ್ತವೆ. ಆ ಮೂರರಲ್ಲಿ ಮತ್ತೆ ಮೂರರಂತೆ ಒಟ್ಟು ಒಂಭತ್ತು ಸೂಕ್ಷ್ಮ ಎಳೆಗಳಿರಬೇಕು. ಆ ಎಳೆಗಳಿಗೆ ಒಂಭತ್ತು ದೇವತೆಗಳ ಆವಾಹನೆಯಿದೆ. ಅವುಗಳು “ಓಂಕಾರ,ಅಗ್ನಿ,ನಾಗ,ಸೋಮ,ಪಿತ್ರ,ಪ್ರಜಾಪತಿ,ವಾಯು, ಸೂರ್ಯ,ವಿಶ್ವೇದೇವ” ಎಂಬುದಾಗಿ. ಈ ಸಾತ್ವಿಕ ಶಕ್ತಿಗಳು ನಮಗೆ ವಿದ್ಯಾರ್ಜನೆಗೆ ಬೇಕಾದ ಶಕ್ತಿಯನ್ನು ತುಂಬುತ್ತವೆ.
ಯಜ್ಞೋಪವೀತದ ಧಾರಣೆ ಮತ್ತು ಪ್ರಯೋಜನ
ಈ ಉಪವೀತ ಧಾರಣೆ ಮಾಡಿದ ನಂತರ ವ್ಯಕ್ತಿಯು ವ್ರತದಲ್ಲಿ ಇದ್ದಂತೆ ಇರಬೇಕು ಎಂದು ಶಾಸ್ತ್ರ ಹೇಳುತ್ತದೆ. ಪ್ರತೀದಿನ ಸೂರ್ಯೋದಯಕ್ಕಿಂತ ಮೊದಲು ಎದ್ದು ಸ್ನಾನ ಮಾಡಿ ಸೂರ್ಯನ ಕುರಿತಾಗಿ ಧ್ಯಾನಿಸುತ್ತಾ ಅರ್ಘ್ಯೆಯನ್ನು ನೀಡಬೇಕು. ಈ ರೀತಿ ಕೆಲವು ಕರ್ತವ್ಯಗಳು ಉಪವೀತಧಾರಣೆಯ ನಂತರ ಆರಂಭವಾಗುತ್ತದೆ. ಈ ರೀತಿಯಾದ ಕರ್ತವ್ಯಗಳ ಆಚರಣೆ ಮತ್ತು ಪಾಲನೆಯಿಂದ ನಮ್ಮ ಜ್ಞಾನನಾಡಿ ಅತ್ಯಂತ ವೇಗವಾಗಿ ತನ್ನ ಕೆಲಸವನ್ನು ಮಾಡುತ್ತದೆ. ಅಲ್ಲದೇ ಉಪನಯನ ಸಂಸ್ಕಾರದ ನಂತರ ನಾವು ಬ್ರಹ್ಮಚಾರಿಗಳಾಗುತ್ತೇವೆ. ಬ್ರಹ್ಮ ಅಂದರೆ ಭಗವಂತ ಅಥವಾ ಜ್ಞಾನವೆಂದು ಅರ್ಥ. ಚಾರಿ ಅದನ್ನು ಕುರಿತು ಸಾಗುವವರು ಎಂದು. ಅರ್ಥಾತ್ ಜ್ಞಾನದ ಕಡೆಗೆ ಸಾಗುವವರಾಗುತ್ತೇವೆ. ಮುಂದೆ ಸಂಪೂರ್ಣ ಅಧ್ಯಯಯನ ಮುಗಿಯುವ ತನಕ ಒಂದೇ ಉಪವೀತವಿರುತ್ತದೆ. ಅಧ್ಯಯನದ ಪರಿಸಮಾಪ್ತಿ ಕಾಲದಲ್ಲಿ ಸಮಾವರ್ತನೆ ಎಂಬ ಸಂಸ್ಕಾರವನ್ನು ಮಾಡಿ ಮತ್ತೊಂದು ಉಪವೀತವನ್ನು ಧಾರಣೆ ಮಾಡಿಸುತ್ತಾರೆ. ಅಂದಿನಿಂದ ಆತ ವಿವಾಹವಾಗಲು ಅಂದರೆ ಗ್ರಹಸ್ಥನಾಗಲು ಯೋಗ್ಯವೆಂದರ್ಥ.
ಈ ಉಪವೀತಧಾರಣೆ ನಮಗೆ ಯಜ್ಞಾಧಿಕಾರವನ್ನು ನೀಡುತ್ತದೆ. ಗಾಯತ್ರೀ ಮಂತ್ರ ಜಪಿಸಲು ಅಧಿಕಾರ ಉಪವೀತಧಾರಣೆಯ ನಂತರವೇ ಬರುವುದು. ಗಾಯತ್ರೀ ಮಂತ್ರದಲ್ಲಿ ಹೇಳಿದಂತೆ “ಧೀಯೋಯೋನಃ ಪ್ರಚೋದಯಾತ್” ಆ ಜಪದಿಂದ ನಮ್ಮ ಬುದ್ಧಿಯು ಸತ್ಕಾರ್ಯದಲ್ಲಿ ಮತ್ತು ಸದ್ವಿದ್ಯಾಧ್ಯಯನದೆಡೆಗೆ ಸಾಗುತ್ತದೆ. ಒಳ್ಳೆಯ ವಿದ್ಯೆಯಿಂದ ಮತ್ತು ಒಳ್ಳೆಯ ಬುದ್ಧಿಯಿಂದ ಅಸಾಧ್ಯವಾದುದು ಯಾವುದೂ ಇಲ್ಲ. ಅದು ಪರೋಕ್ಷವಾಗಿ ಈ ಉಪನಯನ ಸಂಸ್ಕಾರ ಅಥವಾ ಉಪವೀತಧಾರಣೆಯಿಂದ ಬರುತ್ತದೆ.
ಲೇಖಕರು – ಡಾ.ಕೇಶವ ಕಿರಣ ಬಿ., ಪ್ರಾಧ್ಯಾಪಕರು
S.R.B.S.S College ಹೊನ್ನಾವರ, ಉತ್ತರ ಕನ್ನಡ