Spiritual: ಉಪಾಕರ್ಮ ಎಂದರೇನು? ಮಹತ್ವ, ಆಚರಿಸುವ ಬಗೆ ಮತ್ತು ಪೂಜಾ ವಿಧಿ ಮಾಹಿತಿ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 10, 2022 | 7:05 AM

ಶಕ್ತಿಯ ಸಹಕಾರವಿಲ್ಲದೆ ಸಾರ್ಥಕ್ಯ ಹೊಂದುವುದು ಕಷ್ಟಸಾಧ್ಯ. ಹಾಗೆಯೇ ನಾವು ಕಲಿಯುವ ವಿದ್ಯೆಯೂ ಕೂಡ ಯಾವುದೋ ಒಬ್ಬ ಮಹಾತ್ಮರ ಪರಿಶ್ರಮದಿಂದ ಲಭ್ಯವಾಗಿರುತ್ತದೆ. ಅಂತಹ ಚೈತನ್ಯಗಳಿಗೆ ಅನೂಚಾನವಾಗಿ ಋಣಿಗಳಾಗಿರುವುದು ನಮ್ಮ ಕರ್ತವ್ಯ.

Spiritual: ಉಪಾಕರ್ಮ ಎಂದರೇನು? ಮಹತ್ವ, ಆಚರಿಸುವ ಬಗೆ ಮತ್ತು ಪೂಜಾ ವಿಧಿ ಮಾಹಿತಿ ಇಲ್ಲಿದೆ
upakarma (ಸಾಂದರ್ಭಿಕ ಚಿತ್ರ)
Follow us on

ಜಗತ್ತಿನಲ್ಲಿ ಪ್ರತಿಯೊಂದು ವ್ಯವಸ್ಥೆಯು / ಕಾರ್ಯವು ಬೇರೆಯವರ ಸಹಾಯವಿಲ್ಲದೆಯೇ ಸ್ವತಂತ್ರವಾಗಿ ಮಾಡಲು ಸಾಧ್ಯವೇ ಇಲ್ಲ. ನಾವು ಗಟ್ಟಿಯಾಗಿ ನಿಲ್ಲುವುದು ನಮ್ಮ ಕಾಲಲ್ಲೇ ಆದರೂ ನಿಲ್ಲಲು ಭೂಮಿಯ ಸಹಕಾರ ಬೇಕೇಬೇಕು. ನಮ್ಮ ಜಮೀನಲ್ಲೇ ನಾವು ಆಹಾರ ಬೆಳೆದರು ದೇವದತ್ತವಾದ ಮಳೆ, ಗಾಳಿ, ಬೆಳಕಿನ ಸಮರ್ಪಕ ಸಹಕಾರ ಅನಿವಾರ್ಯ. ಅದೇ ರೀತಿ ಪ್ರತಿಯೊಂದು ಜೀವಿಯೂ ಪರರ/ ತನಗಿಂತ ಭಿನ್ನವಾದ ಶಕ್ತಿಯ ಸಹಕಾರವಿಲ್ಲದೆ ಸಾರ್ಥಕ್ಯ ಹೊಂದುವುದು ಕಷ್ಟಸಾಧ್ಯ. ಹಾಗೆಯೇ ನಾವು ಕಲಿಯುವ ವಿದ್ಯೆಯೂ ಕೂಡ ಯಾವುದೋ ಒಬ್ಬ ಮಹಾತ್ಮರ ಪರಿಶ್ರಮದಿಂದ ಲಭ್ಯವಾಗಿರುತ್ತದೆ. ಅಂತಹ ಚೈತನ್ಯಗಳಿಗೆ ಅನೂಚಾನವಾಗಿ ಋಣಿಗಳಾಗಿರುವುದು ನಮ್ಮ ಕರ್ತವ್ಯ. ಆ ಋಣಕ್ಕೆ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುವ ಮತ್ತು ಅದರಿಂದ ಮುಂದಿನ ಅಧ್ಯಯನ ಮಾಡಲು ಬೇಕಾದ ಅರ್ಹತೆಯ ಸಂಪಾದನೆಗೋಸ್ಕರ ಮಾಡುವ ಒಂದು ಧಾರ್ಮಿಕ ಆಚರಣೆಯೇ ಉಪಾಕರ್ಮ.

ಹಿಂದಿನ ಕಾಲದಲ್ಲಿ ವಿದ್ಯೆಯೆಂದರೆ ವೇದ, ಶಾಸ್ತ್ರಾದಿಗಳು ಮತ್ತು ಅದರ ಅಂಗಗಳಾದ ಉಳಿದ ವಿದ್ಯೆಗಳು ಮಾತ್ರ ಆಗಿದ್ದವು. ಆ ಕಾಲದಲ್ಲಿ ಉಪಾಕರ್ಮವನ್ನು ಋಗುಪಾಕರ್ಮ, ಯಜುರುಪಾಕರ್ಮ, ಸಾಮೋಪಾಕರ್ಮ ಎಂದು ಮೂರು ವಿಧವಾಗಿ ವಿಂಗಡಿಸಿದ್ದರು. ಮೊದಲನೇಯ ಉಪಾಕರ್ಮವು ಶ್ರಾವಣ ಪಂಚಮಿಯಂದು ಅಥವಾ ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಬರುವ ಶ್ರವಣಾ ನಕ್ಷತ್ರದಂದು, ಎರಡನೇಯದ್ದು ಶ್ರಾವಣ ಹುಣ್ಣಿಮೆಯಂದು, ಮೂರನೇಯದ್ದು ಭಾದ್ರಪದಮಾಸದ ಶುಕ್ಲಪಕ್ಷದ ಹಸ್ತನಕ್ಷತ್ರದಂದು ಆಚರಿಸುವುದು ಪದ್ಧತಿ.

ಇದರಲ್ಲಿ ಸರ್ವಸಾಮಾನ್ಯವಾಗಿ ಉಪಾಕರ್ಮದ ದಿನವೆಂದರೆ ಶ್ರಾವಣ ಹುಣ್ಣಿಮೆ. ಉಪಾಕರ್ಮ ಎಂಬ ಶಬ್ದದ ಮೂಲ ರೂಪ ಉಪಾಕರ್ಮನ್ ಎಂಬುದಾಗಿ. ಉಪಾಕರ್ಮನ್ ಅಂದರೆ ಪ್ರಾರಂಭ ಅಥವಾ ಉಪಕ್ರಮ (ಜ್ಞಾನದ ಕುರಿತಾಗಿ ಸಾಗುವುದು/ ಉಪಕ್ರಮಿಸುವುದು) ಎಂದು ಅರ್ಥ. ಇನ್ನೂ ಹೇಳುವುದಾದರೆ ಶ್ರಾವಣ ಮಾಸದಲ್ಲಿ ಹೋಮ ಪೂರ್ವಕವಾಗಿ ಜ್ಞಾನ ಸ್ವೀಕಾರವನ್ನು ಆರಂಭಿಸುವುದು ಎಂದು. ಹೇಗೆ ನಾವು ಯಾವುದೇ ಶುಭಕಾರ್ಯ ಮಾಡುವ ಮೊದಲು ಭಗವದನುಗ್ರಹಕ್ಕೋಸ್ಕರ ಹವನ ಪೂಜಾದಿಗಳನ್ನು ಮಾಡುತ್ತೇವೋ ಅದೇ ಪ್ರಕಾರವಾಗಿ ಜೀವಿಯು ಸುಂದರವಾಗಿ ಸಂಸ್ಕಾರಯುತವಾಗಿ ಬದುಕುವುದಕ್ಕೋಸ್ಕರ ಮಾಡುವ ಜ್ಞಾನಾರ್ಜನೆಯೇನಿದೆ ಅದರ ಪೂರ್ವದಲ್ಲಿ ಮಾಡುವ ಹವನ, ದೇವತೆಗಳ ಮತ್ತು ಋಷಿಗಳಪೂಜೆ, ತರ್ಪಣ, ದಾನ ಮತ್ತು ಉಪವೀತಧಾರಣ ಇದೇನಿದೆ ಅದಕ್ಕೆ ಹೇಳುವುದು ಉಪಾಕರ್ಮ ಎಂದು. ಅಂದರೆ ಒಟ್ಟಾರೆ ಒಳ್ಳೆಯ ಜ್ಞಾನಾರ್ಜನೆಗೆ ಮಾಡುವ ನಾಂದಿ / ಆರಂಭ ಎಂದು ಹೇಳಬಹುದು.

ಇದನ್ನೂ ಓದಿ
Krishna Janmashtami 2022: ಕೃಷ್ಣ ಜನ್ಮಾಷ್ಟಮಿ ಹಬ್ಬದ ದಿನಾಂಕ, ಸಮಯದ ಮಾಹಿತಿ ಇಲ್ಲಿದೆ
Muharram 2022: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಕಣ್ಣೀರಿನ ಹಬ್ಬವೆಂದೂ ಕರೆಯುತ್ತಾರೆ
Dog -Pet animal: ನಾಯಿಗೆ ಯಾರು ಆಹಾರ ಹಾಕುತ್ತಾರೋ ಅಂತಹವರ ಬಳಿಗೆ ಶನಿಮಹಾತ್ಮ ಸುಳಿಯುವುದಿಲ್ಲ! ಏನೀ ಶ್ವಾನ ಮಹಾತ್ಮೆ?
ರಂಗುರಂಗಿನ ರಾಖಿ ಹಬ್ಬ ಬಂದಿದೆ, ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಾಣಿಕೆ ಕೊಡಬೇಕು? ಇಲ್ಲಿದೆ ಮಾಹಿತಿ

ಈಗ ಬರುವ ಪ್ರಶ್ನೆಯೇನೆಂದರೆ ಕೆಲಸದಲ್ಲಿ( job ) ಇರುವವರು ಇದನು ಮಾಡಬೇಕೇ ಎಂದು ? ಇದಕ್ಕುತ್ತರ ಹೌದು ಮಾಡಲೇ ಬೇಕು. ಯಾಕೆಂದರೆ ನಾವು ಕಲಿತ ವಿದ್ಯೆಗೆ ಕಾರಣೀಭೂತರಾದ ಮಹಾತ್ಮರಿಗೆ ಗೌರವ ನೀಡುವ ಸಲುವಾಗಿ ಮತ್ತು ಅಧ್ಯಯಯನಕ್ಕೆ ಕೊನೆ ಎಂಬುದು ಇಲ್ಲದೇ ಇರುವುದರಿಂದ ಪ್ರತೀ ಸಲ ವರುಷಕ್ಕೊಮ್ಮೆ ಈ ಸಂಸ್ಕಾರವನ್ನು ಮಾಡಿಕೊಳ್ಳಲೇ ಬೇಕು. ಅದುವೇ ಧರ್ಮ. ಉಪಾಕರ್ಮ ಮಾಡುವುದರಿಂದ ಉಪಾಕರಣವಾಗುತ್ತದೆ. ಉಪಾಕರಣವೆಂದರೆ ಸಂಸ್ಕಾರಪೂರ್ವಕವಾಗಿ ಅಧ್ಯಯನ ಮಾಡುವ ಅಧಿಕಾರದ ಪ್ರಾಪ್ತಿಯಾಗುತ್ತದೆ.

ಇಲ್ಲಿ ಉದಯಿಸುವ ಪ್ರಶ್ನೆಯೇನೆಂದರೆ ಉಪಾಕರ್ಮದಂದು ಉಪವೀತಧಾರಣೆ ಮಾಡಬೇಕು. ಆದರೆ ನಮಲ್ಲಿ ಉಪವೀತ ಧಾರಣೆಮಾಡುವ ರೂಢಿಯಿಲ್ಲ ಆಗ ಏನು ಮಾಡುವುದು ಎಂದು. ಇಂತಹ ಸಂದರ್ಭದಲ್ಲಿ ದೀಕ್ಷಿತನಾಗಿ ಗಂಡಸರಿಗೆ ಬಲಗೈ ಮತ್ತು ಹೆಂಗಸರಿಗೆ ಎಡಗೈಗೆ ಅರಶಿನಯುಕ್ತವಾದ ದಾರವನ್ನು ಧರಿಸಿಕೊಳ್ಳುವುದು. ಇಲ್ಲೂ ಸಮಸ್ಯೆಯಿದ್ದರೆ ಅಂತಹ ಕಾಲದಲ್ಲಿ ಸೊಂಟಭಾಗಕ್ಕೆ ಅರಶಿನಬಣ್ಣದ ದಾರವನ್ನು ಪೂಜಿಸಿ ಕಟ್ಟಿಕೊಳ್ಳುವುದು.

ಈ ಉಪಾಕರ್ಮದ ದಿನದಂದು ಪ್ರಾತಃಕಾಲದಲ್ಲಿ ಅಕ್ಕಿಯಿಂದ ಮಾಡಿದ ಆಹಾರವನ್ನು ಮತ್ತು ಈ ದಿನ ಪೂರ್ತಿ ಈರುಳ್ಳಿ,ಬೆಳ್ಳುಳ್ಳಿ ಯುಕ್ತವಾದ ಆಹಾರವನ್ನು ಸ್ವೀಕರಿಸಬಾರದು. ರಾತ್ರೆ ಭೋಜನ ನಿಷೇಧವಿದೆ. ರಾತ್ರೆಯ ವೇಳೆ ಫಲಾಹಾರವನ್ನು ಮಾಡುವುದು ಉತ್ತಮ. ಇದು ನಮ್ಮ ಪರಂಪರೆಗೆ ಭಾರತೀಯತೆಗೆ ಸನಾತನ ಋಷಿಸಂಕುಲಕ್ಕೆ ಅರ್ಪಿಸುವ ಗೌರವ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ
kkmanasvi@gamail.com