ಹಿಂದೂ ಪುರಾಣಗಳಲ್ಲಿ ಏಕಾದಶಿ ಮತ್ತು ಏಕಾದಶಿ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಪಂಚಾಂಗದ ಪ್ರಕಾರ ಮಾರ್ಗಶಿರ ಅಥವಾ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತೆ. ಇದು ವರ್ಷದ ಕೊನೆಯ ಏಕಾದಶಿಯಾಗಿದ್ದು ಈ ಬಾರಿ ಡಿಸೆಂಬರ್ 14 ರಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ವಿಷ್ಣುವಿನ ಕೃಪೆ ಸಿಗುತ್ತದೆ. ಹಾಗಾದ್ರೆ ಬನ್ನಿ ಆ ಕ್ರಮಗಳ ಬಗ್ಗೆ ತಿಳಿಯಿರಿ.
ಹಳದಿ ಬಣ್ಣದ ಬಟ್ಟೆ ಧರಿಸಿ
ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದು ಮತ್ತು ಉಪವಾಸದ ಕಥೆಯನ್ನು ಕೇಳುವುದರಿಂದ ಭಗವಾನ್ ವಿಷ್ಣು ಪ್ರಸನ್ನನಾಗುತ್ತಾನೆ. ಹಾಗೂ ತನ್ನ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ಈ ದಿನ ಮುಂಜಾನೆ ಸ್ನಾನದ ಬಳಿಕ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕೆಂದು ಹೇಳಲಾಗುತ್ತದೆ. ಏಕೆಂದರೆ ವಿಷ್ಣುವಿನ ನೆಚ್ಚಿನ ಬಣ್ಣ ಹಳದಿ. ಹೀಗಾಗಿ ಹಳದಿ ಬಟ್ಟೆ ತೊಟ್ಟು ಹಳದಿ ಹೂವುಗಳು, ಹಣ್ಣುಗಳನ್ನು ಅರ್ಪಿಸಬೇಕು. ಜೊತೆಗೆ ಈ ದಿನ ಭಗವಾನ್ ವಿಷ್ಣುವಿಗೆ ಪಂಚಾಮೃತದಿಂದ ಅಭಿಷೇಕ ಮಾಡಿ ತುಳಸಿ ಎಲೆಗಳನ್ನು ಅರ್ಪಿಸಬೇಕು. ಶಾಸ್ತ್ರಗಳ ಪ್ರಕಾರ ಏಕಾದಶಿಯಂದು ವಿಷ್ಣು ಮಂತ್ರಗಳನ್ನು ಪಠಿಸುವುದು ಮಂಗಳಕರ. ಇದರಿಂದ ಶ್ರೀಹರಿಯ ಕೃಪೆಗೆ ಪಾತ್ರರಾಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆಯಿದೆ.
ಅರಳಿ ಮರ ಪೂಜೆ
ವೈಕುಂಠ ಏಕಾದಶಿಯಂದು ಅರಳಿ ಮರದ ಬೇರಿಗೆ ನೀರನ್ನು ಅರ್ಪಿಸಿಬೇಕು. ಈ ರೀತಿ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಏಕೆಂದರೆ ಶ್ರೀಹರಿಯು ಅರಳಿ ಮರದ ಮೂಲದಲ್ಲಿ ನೆಲೆಸಿದ್ದಾನೆ ಎನ್ನುವ ನಂಬಿಕೆ ಇದೆ. ಜೊತೆಗೆ ಈ ದಿನ ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮೀ ದೇವಿಯನ್ನೂ ಸಹ ಪೂಜಿಸಬಹುದು. ಹೀಗೆ ಮಾಡುವುದರಿಂದ ಇಬ್ಬರ ಕೃಪೆಗೂ ಪಾತ್ರರಾಗುತ್ತಿರಿ.
ವೈಕುಂಠ ಏಕಾದಶಿ ಪೂಜೆ ವಿಧಾನ
ಈ ದಿನ ಮುಂಜಾನೆ ಸ್ನಾನ ಮಾಡಿ ಗಂಗಾ ನೀರನ್ನು ಮನೆಯ ದೇವಾಲಯದಲ್ಲಿ ಸಿಂಪಡಿಸಿ ಪವಿತ್ರಗೊಳಿಸಿಬೇಕು. ಬಳಿಕ ಭಗವಾನ್ ವಿಷ್ಣುವಿನ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಉಪವಾಸ ವ್ರತವನ್ನು ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ನಂತರ ವಿಷ್ಣುವಿನ ಕಥೆಯನ್ನು ಓದಬಹುದು ಅಥವಾ ಕೇಳಬಹುದು. ಈ ಉಪವಾಸದಲ್ಲಿ ಆಹಾರವನ್ನು ತೆಗೆದುಕೊಳ್ಳಲಾಗುವುದಿಲ್ಲ. ಮರುದಿನ, ಸ್ನಾನ ಮಾಡಿದ ನಂತರ, ಮತ್ತೊಮ್ಮೆ ಪೂಜೆಯನ್ನು ಮಾಡಿ ಉಪವಾಸವನ್ನು ಮುರಿಯಬೇಕು.
ವೈಕುಂಠ ಏಕಾದಶಿಯ ಮಹತ್ವ
ಬ್ರಹ್ಮ, ವಿಷ್ಣು, ಮಹೇಶ್ವರನನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತೆ. ಸೃಷ್ಟಿಕರ್ತ ಬ್ರಹ್ಮನಿರುವ ತಾಣ ಬ್ರಹ್ಮಲೋಕ ರಕ್ಷಕ ವಿಷ್ಣು ಇರುವ ನೆಲೆ ವೈಕುಂಠ ಮತ್ತು ಮಹಾದೇವ ಮಹೇಶ್ವರನಿರುವುದು ಕೈಲಾಸದಲ್ಲಿ. ಆದ್ರೆ ವಿಶೇಷ ಅಂದ್ರೆ ವೈಕುಂಠದಲ್ಲಿ ಯಾವುದೇ ಕಷ್ಟ-ಕಾರ್ಪಣ್ಯಗಳು ಇರುವುದಿಲ್ಲವಂತೆ. ಬರೀ ಸಂತೋಷವೇ ತುಂಬಿರುತ್ತದೆ. ಹೀಗಾಗಿ ವೈಕುಂಠದಲ್ಲಿ ಸ್ಥಾನ ಪಡೆಯಲು ಜನ ಹಂಬಲಿಸುತ್ತಾರೆ. ವೈಕುಂಠ ಅಥವಾ ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, (ಸಂತರು ಮತ್ತು ವಿದ್ವಾಂಸರು) ಮೋಕ್ಷ ಅಥವಾ ಜನ್ಮ, ಜೀವನ ಮತ್ತು ಮರಣದ ವಿಷವರ್ತುಲದಿಂದ ವಿಮೋಚನೆಯನ್ನು ಬಯಸುವವರು, ವೈಕುಂಠ ಏಕಾದಶಿ ತಿಥಿಯಂದು ವ್ರತವನ್ನು ಆಚರಿಸುವ ಮೂಲಕ ತಮ್ಮ ಅತ್ಯುನ್ನತ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವ ಭಕ್ತರಿಗೆ ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ವೈಕುಂಠ ಏಕಾದಶಿ 2021: ಈ ದಿನ ಉಪವಾಸ ಮಾಡುವುದೇಕೆ? ಇಲ್ಲಿದೆ ವೈಕುಂಠ ಏಕಾದಶಿಯ ತಿಥಿ ಸಮಯ, ಪೂಜಾ ವಿಧಾನ