ರಾಹುವು ನವಗ್ರಹಗಳಲ್ಲಿ ಒಂದು. ಇದನ್ನು ಛಾಯಾಗ್ರಹ ಕರೆಯುತ್ತಾರೆ. ಪುರಾಣಗಳಲ್ಲಿ ರಾಹುವಿನ ಕಥೆಯೂ ಸಿಗುತ್ತದೆ. ರಾಹುವು ಫಲಜ್ಯೋತಿಷ್ಯದ ಪ್ರಕಾರ ಪಾಪಗ್ರಹ. ಅಂದರೆ ಮನುಷ್ಯನ ಪಾಪಕರ್ಮವನ್ನು ಸೂಚಿಸುತ್ತಾನೆ ಅಥವಾ ನಮ್ಮ ಪಾಪಕರ್ಮವನ್ನು ರಾಹುವಿನ ಮೂಲಕ ಅನುಭವಿಸುತ್ತೇವೆ. ಸೂರ್ಯ ಮತ್ತು ಚಂದ್ರರ ಕಕ್ಷೆಗಳು ಸೇರುವ ಸ್ಥಳವನ್ನು ರಾಹು ಮತ್ತು ಕೇತು ಎಂಬುದಾಗಿ ಕರೆಯುತ್ತಾರೆ. ಇವರಿಬ್ಬರು ಚಂದ್ರ ಹಾಗೂ ಸೂರ್ಯರ ಗ್ರಹಣಕ್ಕೆ ಕಾರಣರು. ರಾಹುವು ಸೂರ್ಯ ಹಾಗೂ ಚಂದ್ರರನ್ನು ಗ್ರಹಣ ಮಾಡಿದರೆ ಏನಾಗುತ್ತದೆ ಸೃಷ್ಟಿಯಲ್ಲಿ ಎನ್ನುವುದನ್ನು ನೋಡಬೇಕಿದೆ.
ಮೇಷ ರಾಶಿ: ಸೂರ್ಯ – ಚಂದ್ರರು ಮೇಷದಲ್ಲಿದ್ದಾಗ ರಾಹುಗ್ರಸ್ತ ಗ್ರಹಣವಾದರೆ ಈಶಾನ್ಯ ಭಾರತ ಹಾಗೂ ಪೂರ್ವಭಾರತದ ಪಾಂಚಾಲ, ಶೂರಸೇನ, ಕಾಂಬೋಜ (ಇವೆಲ್ಲವೂ ಅಂದಿನ ರಾಜ್ಯದ ಹೆಸರುಗಳು) ಮೊದಲಾದ ರಾಜ್ಯಗಳಲ್ಲಿ ಜೀವಿಸುವ ಹಾಗೂ ಅಗ್ನಿಯನ್ನು ಆಶ್ರಯಿಸಿ ಬದುಕುವ ಅಂದರೆ ಹೋಟೆಲ್ ಉದ್ಯಮಗಳಾಗಿರಬಹುದು, ಲೋಹದ ಉದ್ಯಮಿಗಳಾಗಿರಬಹುದು. ಇಂತಹವರಿಗೆ ಸಮಸ್ಯೆ ಬರುವುದು.
ವೃಷಭ ರಾಶಿ: ವೃಷಭರಾಶಿಯಲ್ಲಿ ಈ ಗ್ರಹಣವಾದರೆ
ಗೋಪಾಃ ಪಶವೋಥ ಗೋಮಿನೋ ಮನುಜಾ ಯೇ ಚ ಮಹತ್ತ್ವಮಾಗತಾಃ |
ಪೀಡಾಮುಪಯಾಂತಿ ಭಾಸ್ಕರೋ ಗ್ರಸ್ತೇ ಶೀತಕರೋಥ ವಾ ವೃಷೇ ||
ಗೋಪಾಲಕರಿಗೆ, ನಾಲ್ಕು ಕಾಲುಗಳುಳ್ಳ ಪ್ರಾಣಿಗಳಿಗೆ, ಪೂಜನೀಯ ವ್ಯಕ್ತಿಗಳಿಗೆ ತೊಂದರೆಯಾಗಲಿದೆ.
ಮಿಥುನ ರಾಶಿ: ಇನ್ನು ಮಿಥುನ ರಾಶಿಯಲ್ಲಿ ರಾಹುಗ್ರಸ್ತ ಚಂದ್ರ – ಸೂರ್ಯಗ್ರಹಣವಾದರೆ ರಾಜರು, ಉತ್ತಮ ಸ್ತ್ರೀಯರು, ರಾಜಸಮಾನರು ಅಥವಾ ಮಂತ್ರಿಗಳು, ಚಿತ್ರ, ಗೀತ, ವಾದ್ಯಗಳನ್ನು ಅರಿತ ಕಲಾಭಿಜ್ಞರು, ಯಮುನಾ ನದೀ ತಟದಲ್ಲಿ ವಾಸಿಸುವವರು, ಬಾಹ್ಲಿಕ, ಮತ್ಸ್ಯದೇಶದವರಿಗೆ ಪೀಡೆ ಉಂಟಾಗಲಿದೆ.
ಕರ್ಕಾಟಕ ರಾಶಿ: ಕರ್ಕರಾಶಿಯಲ್ಲಿ ಗ್ರಹಣವಾದರೆ ಗೋಪಾಲಕರಿಗೆ, ಮ್ಲೇಚ್ಛದೇಶದವರಿಗೆ, ಭಾರತದ ದಕ್ಷಿಣದೇಶದಕ್ಕೆ, ಮಲ್ಲಯುದ್ಧದಲ್ಲಿ ವಿಶಾರದರಾದ ಮತ್ಸ್ಯ, ಪಂಜಾಬ್ ಮುಂತಾದ ರಾಜ್ಯದವರಿಗೆ ಮತ್ತು ಅಂಗಹೀನರಾದ ಮನುಷ್ಯರಿಗೆ ಪೀಡೆ ಉಂಟಾಗಲಿದೆ.
ಸಿಂಹ ರಾಶಿ: ಸಿಂಹರಾಶಿಯಲ್ಲಿ ಏನಾದರೂ ಸೂರ್ಯ – ಚಂದ್ರರ ಗ್ರಹಣವಾದರೆ, ಮ್ಲೇಚ್ಛದೇಶದ ಜನರಿಗೆ, ಪರ್ವತ ಪ್ರದೇಶದಲ್ಲಿ ವಾಸ ಮಾಡುವವರಿಗೆ, ರಾಜರಿಗೆ, ರಾಜನಿಗೆ ಸಮಾನವಾದ ಸಂಪತ್ತು ಉಳ್ಳವನಿಗೆ, ದಟ್ಟವಾದ ಅರಣ್ಯವೂ ಅಲ್ಲದ ನಿರ್ಜನಪ್ರದೇಶವಾದ ಕಾಡಿನಲ್ಲಿ ವಾಸ ಮಾಡುವವರಿಗೆ ಹಿಂಸೆಯಾಗಲಿದೆ.
ಇದನ್ನೂ ಓದಿ:Spirituality: ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಆಧ್ಯಾತ್ಮಿಕತೆ ಉತ್ತಮ
ಕನ್ಯಾ ರಾಶಿ: ಸಸ್ಯಗಳಿಗೆ, ಪಂಡಿತರಿಗೆ, ಲೇಖಕರಿಗೆ, ಗಾಯಕರಿಗೆ, ದೇವರ ಮೂರ್ತಿ, ದೇವಾಲಯ ನಿರ್ಮಾಣ ಮುಂತಾದ ಕಲ್ಲಿಗೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡುವವರಿಗೆ, ತ್ರಿಪುರ ಪ್ರದೇಶದ ಜನರಿಗೆ ಮತ್ತು ಶಾಲೀ ಎನ್ನುವ ಧಾನ್ಯವನ್ನು ಬೆಳೆಯುವ ಪ್ರದೇಶವು ಕನ್ಯಾರಾಶಿಯಲ್ಲಿ ರಾಹುಗ್ರಸ್ತ ಸೂರ್ಯ ಹಾಗೂ ಚಂದ್ರರ ಗ್ರಹಣವಾದರೆ ಸಂಕಷ್ಟದಿಂದ ಇರುವುದು.
ತುಲಾ ರಾಶಿ: ತುಲಾ ರಾಶಿಯನ್ನು ಗ್ರಹಣವಾದರೆ
ತುಲಾಧರೇವಂತ್ಯಪರಾಂತ್ಯಸಾಧೂನ್
ವಣಿಗ್ದಶಾರ್ಣಾನ್ ಮರುಕಚ್ಛಪಾಂಶ್ಚ |
ಅವಂತಿ ದೇಶ ಎಂದರೆ ಈಗಿನ ಮಧ್ಯಪ್ರದೇಶದ ಸ್ಥಳದ ಜನರಿಗೆ, ಪಶ್ಚಿಮ ಸಮುದ್ರದ ಭಾಗದಲ್ಲಿ ವಾಸಿಸುವ ಸಜ್ಜನರಿಗೆ, ವ್ಯಾಪಾರಿಗಳಿಗೆ, ಗುಜರಾತ್, ರಾಜಸ್ಥಾನ್, ಛತ್ತಿಸಗಡದ ಕೆಲವು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷವಾದ ಸಮಸ್ಯೆಗಳು ಉಂಟಾಗುತ್ತವೆ.
ವೃಶ್ಚಿಕ ರಾಶಿ: ಅಲಿನ್ಯಥೋದುಂಬರಮದ್ರಚೋಲಾನ್
ದ್ರುಮಾನ್ ಸಯೌಧೇಯವಿಷಾಯುಧೀಯಾನ್ || ವೃಶ್ಚಿಕದಲ್ಲಿ ಗ್ರಹಣವಾದರೆ ಉದುಂಬರ ಪ್ರದೇಶದ ಅಂದರೆ ಮಥುರಾ ಮೇಲ್ಭಾಗ ವಾಯವ್ಯದಿಕ್ಕಿನಲ್ಲಿ ಇರುವ ಭೂಪ್ರದೇಶ, ಮದ್ರದ ಜನರಿಗೆ ಮರಗಳಿಗೆ ಹಾಗೂ ಯುದ್ಧಾಸಕ್ತರಿಗೆ ನಾನವಿಧವಾದ ಆಯುಧಧಾರಿಗಳಿಗೆ ಹಿಂಸೆಯಾಗಲಿದೆ.
ಧನು ರಾಶಿ: ಧನುರಾಶಿಯಲ್ಲಿ ಸೂರ್ಯ ಅಥವಾ ಚಂದ್ರಗ್ರಹಣವಾದರೆ ಮಂತ್ರಿಗಳಿಗೆ, ಜನನಾಯಕನಿಗೆ, ಅಶ್ವಗಳಿಗೆ, ಬಿಹಾರದ ಒಂದಿಷ್ಟು ಭಾಗಗಳಲ್ಲಿ ವಾಸಿಸುವವರಿಗೆ ಬಾಹುಯುದ್ಧವನ್ನು ಮಾಡುವವರಿಗೆ, ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ವೈದ್ಯರಿಗೆ, ವ್ಯಾಪಾರಿಗಳಿಗೆ, ಶಸ್ತ್ರಪ್ರಯೋಗವನ್ನು ಮಾಡುವವರಿಗೆ ತೊಂದರೆಯಾಗಲಿದೆ.
ಮಕರ ರಾಶಿ: ಮೀನುಗಳು, ರಾಜ್ಯದ ಮಂತ್ರಿಗಳ ಕುಟುಂಬ ವರ್ಗಗಳು, ದುಷ್ಕರ್ಮವನ್ನು ಮಾಡುವವರು, ಮಂತ್ರೌಷಧಗಳನ್ನು ಬಲ್ಲವರು, ವೃದ್ಧರು, ಶಸ್ತ್ರನಿಪುಣರು ಅಥವಾ ಶಸ್ತ್ರಸಹಾಯದಿಂದ ಜೀವಿಸುವವರು ರಾಹುಗ್ರಸ್ತಗ್ರಹಣದಿಂದ ತೊಂದರೆಗಳನ್ನು ಅನುಭವಿಸುವರು.
ಕುಂಭ ರಾಶಿ: ರಾಹುಗ್ರಸ್ತಗ್ರಹಣವು ಏನಾದರೂ ಕುಂಭರಾಶಿಯಲ್ಲಿ ಆದರೆ ಪರ್ವತ ಪ್ರದೇಶದಲ್ಲಿ ವಾಸಿಸುವ ಜನರು, ಪಶ್ಚಿಮ ದಿಕ್ಕಿನಲ್ಲಿ ಇರುವವರು, ಭಾರ ಹೊರುವವರು, ಕಳ್ಳರು, ವಾಯವ್ಯ ಭಾರತದ ಕೆಲವು ಭಾಗಗಳು, ಜ್ಞಾನಿಗಳು, ಸಿಂಹ ದೇಶದಲ್ಲಿ ವಾಸಿಸುವವರು ಸಂಕಷ್ಟವನ್ನು ಅನುಭವಿಸುವರು.
ಮೀನ ರಾಶಿ: ಸಮುದ್ರದ ಸಮೀಪ ವಾಸಿಸುವವರಿಗೆ, ನೀರಿನ ಮಾರಾಟದಿಂದ ಜೀವಿಸುವವರಿಗೆ ಅಥವಾ ಹಡಗು, ದೋಣಿಗಳ ಮೂಲಕ ಉದ್ಯಮವನ್ನು ನಡೆಸುತ್ತಿರುವವರಿಗೆ ನೀರಿನಿಂದ ಉತ್ಪನ್ನವಾಗುವ ವಸ್ತುಗಳಿಗೆ ವಿದ್ಯಾವಂತರಿಗೆ, ಇಷ್ಟು ಜನರಿಗೆ ಮೀನರಾಶಿಯಲ್ಲಿ ಗ್ರಹಣವಾದರೆ ತೊಂದರೆಯಾಗಲಿದೆ.
ಇಲ್ಲಿ ಹೇಳಿರುವುದು ಸ್ಥೂಲಾಂಶ ಮಾತ್ರ. ಇನ್ನೂ ಸೂಕ್ಷ್ಮವಾದ ವಿಚಾರಗಳನ್ನು ಖಗೋಲಶಾಸ್ತ್ರಜ್ಞರಾದ ವರಾಹಮಿಹಿರಾಚಾರ್ಯರು ಹೇಳಿದ್ದಾರೆ. ಇದನ್ನು ತಿಳಿದುಕೊಂಡು ಅವರು ಹೇಳಿದ ಅಂದಿನ ಪ್ರದೇಶದ ಹೆಸರುಗಳೂ ಬದಲಾಗಿರಬಹುದು. ಇದನ್ನು ತಿಳಿದು ಹೇಳಬೇಕಾಗುತ್ತದೆ.
ಗ್ರಹಣದ ಬಗ್ಗೆ ಇಷ್ಟೇ ಅಲ್ಲ. ಇನ್ನಷ್ಟು ಮಾಹಿತಿಗಳಿವೆ ಅವುಗಳನ್ನು ಮತ್ತೆ ನೋಡೋಣ. ಒಟ್ಟಿನಲ್ಲಿ ಗ್ರಹಣವು ಪ್ರಕೃತಿಯ ವಿಸ್ಮಯವೂ ಹೌದು. ನಮ್ಮ ಖಗೋಲದ ಕುರಿತು ತಿಳಿದುಕೊಳ್ಳಲು ಬೇಕಾದ ಅಧ್ಯಯನಭಾಗವೂ ಹೌದು.
-ಲೋಹಿತ ಶರ್ಮಾ