ಮಹಾಜ್ಞಾನಿಯಾದ ಭರ್ತೃಹರಿಯ ಮಾತು ಶಾಸ್ತ್ರೀಯ ಮಾತು ಹೀಗಿದೆ ಹುತಂ ಚ ದತ್ತಂ ಚ ತಥೈವ ತಿಷ್ಠತ ಎಂದು. ಅರ್ಥ ಹೀಗಿದೆ ಹೋಮದಲ್ಲಿ ಸಮರ್ಪಿಸಿದ್ದು ಮತ್ತು ದಾನವಾಗಿ ಕೊಟ್ಟಿದ್ದು ಹಾಗೆಯೇ ಇರುತ್ತದೆ. ಅಂದರೆ ನಾವು ತಿಳಿಯಬೇಕಾದ ಭಾವ ಹೋಮದಲ್ಲಿ ನಾವು ಶ್ರದ್ಧೆಯಿಂದೆ ಸಮರ್ಪಿಸುವ ಆಹುತಿಗಳು ಮತ್ತು ನಾವು ಕೊಡಮಾಡಿದ ದಾನಗಳು ನಮ್ಮ ಪುಣ್ಯವನ್ನು ಹೆಚ್ಚಾಗುವಂತೆ ಮಾಡಿ ನಮ್ಮ ಕಷ್ಟಕಾಲದಲ್ಲಿ ಸಹಕರಿಸುತ್ತವೆ ಎಂದರ್ಥ. ಕಷ್ಟ ಕಾಲದಲ್ಲಿ ಅಥವಾ ಸಾಧಾರಣ ಸಮಯದಲ್ಲಿ ಸಹಕರಿಸುವುದು ಹೇಗೆ ಅಂತ ಹೇಳುವುದಾದರೆ ನಮ್ಮ ಜೀವನದಲ್ಲಿ ಅದೆಷ್ಟೋ ಸಲ ನಾವು ಹೇಳುವುದಿದೆ ಏನೋ ಅದೃಷ್ಟದಿಂದ ಪಾರಾದೆ ಅಥವಾ ಇವತ್ತು ನನ್ನ ಅದೃಷ್ಟ ಆ ವಸ್ತು ಸಿಕ್ಕಿತು ಅಥವಾ ಅದೃಷ್ಟದಿಂದಲೇ ನನಗೆ ಕೆಲಸ ಸಿಕ್ಕಿತು ಎಂಬುದಾಗಿ ಹೇಳುತ್ತಿರುತ್ತೇವೆ ಅಲ್ಲವೇ ?
ಏನೀ ಅದೃಷ್ಟವೆಂದರೆ ? ನ ದೃಷ್ಟಃ ಅದೃಷ್ಟಃ ಎಂದು ಶಾಸ್ತ್ರ ಹೇಳುತ್ತದೆ. ಅರ್ಥವೇನೆಂದರೆ ನೋಡಿ ಅಥವಾ ಹೇಳಿ ಕೇಳಿ ಬರುವುದಲ್ಲ ಎಂದು. ನೆನಸದೇ ಬರುವ ಭಾಗ್ಯವೇನಿದೆ ಅದುವೇ ಅದೃಷ್ಟ. ಈ ಅದೃಷ್ಟದ ಪ್ರಾಪ್ತಿ ಹೇಗೆ ಎಂದು ಕೇಳಿದರೆ ಅದಕ್ಕುತ್ತರ ಸತ್ಕರ್ಮ ಅಥವಾ ದಾನ. ಹೋಮದಲ್ಲಿ ಇದಂ ನ ಮಮ ಇದು ನನ್ನದಲ್ಲ ಎಂಬ ತ್ಯಾಗದೊಂದಿಗೆ ಸಮರ್ಪಿಸುವ ದ್ರವ್ಯವೂ ದಾನವಾಗುತ್ತದೆ. ಹಾಗೆಯೇ ಸತ್ಪಾತ್ರರಿಗೆ ಕೊಡುವ ದಾನವೂ ಸತ್ಕರ್ಮ.
ದಾನ ಕೊಡುವಾಗ ಅಥವಾ ಕೊಡುವ ಕ್ಷಣದಲ್ಲಿ ನನ್ನದಲ್ಲ ಎಂಬ ಭಾವದಿಂದ ಕೊಡಬೇಕು. ಅದು ಸಾತ್ವಿಕ ದಾನ ಎನಿಸಲ್ಪಡುತ್ತದೆ. ಅದೆಷ್ಟೋ ಸಲ ನಾವು ದಾನದ ಮೌಲ್ಯಕ್ಕಿಂತ ದೊಡ್ಡ ಫಲಕ ಹಾಕುತ್ತೇವೆ ಅದು ರಾಜಸ ದಾನವಾಗುತ್ತದೆ. ಇನ್ನೂ ಹತ್ತು ಸಲ ಯೋಚಿಸಿ ಭಾರೀ ಗೊಂದಲ ಮಯ ಮನಸ್ಸಿನಿಂದ ಗೊಣಗುತ್ತಾ ಕೊಡುವ ದಾನವೇನಿದೆ ಅದು ತಾಮಸ ದಾನ ಎನಿಸಲ್ಪಡುತ್ತದೆ. ದಾನಕ್ಕನುಗುಣವಾಗಿ ಫಲದ ಪರಿಣಾಮವಾಗಿತ್ತದೆ.
ಇದನ್ನೂ ಓದಿ; Spiritual: ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಯಾಕೆ? ಭಾವಕ್ಕೆ ತಕ್ಕಂತೆ ಫಲ
ಧರ್ಮಶಾಸ್ತ್ರ ಅದಾನಾತ್ ದಾರಿದ್ರ್ಯ ಸಂಭವಃ ಎಂದು ಹೇಳಿದೆ. ಜೀವನದಲ್ಲಿ ದಾನವನ್ನು ಮಾಡದೇ ಇದ್ದರೆ ದಾರಿದ್ರ್ಯವುಂಟಾಗುತ್ತದೆ. ನಮ್ಮಲ್ಲಿ ಹಲವರಿಗೆ ನಾವು ಸಂಪತ್ತನ್ನು ಮತ್ತು ವಸ್ತುಗಳನ್ನು ಕೂಡಿಡಬೇಕು ಇಲ್ಲವಾದಲ್ಲಿ ಆಪತ್ಕಾಲದಲ್ಲಿ ಕಷ್ಟವಾಗುತ್ತದೆ ಎಂದು. ಈಗಲೇ ದಾನ ಇತ್ಯಾದಿ ಕೊಟ್ಟರೆ ಹೇಗೆ ಎಂಬ ಮನೋಭೂಮಿಕೆಯಿದೆ. ಆದರೆ ಈ ಯೋಚನೆ ಶುದ್ಧ ತಪ್ಪು. ವೇದಗಳನ್ನು ಪುರಾಣಗಳನ್ನು ಅವಲೋಕಿಸಿದಾಗ ದಾನ ಕೊಡುವುದೇ ಉತ್ತಮ ಎಂಬ ಉದಾಹರಣೆಗಳನ್ನು ಕಾಣುತ್ತೇವೆ.
ದಾನವನ್ನು ಆ ವಸ್ತುವಿನ ಅವಶ್ಯಕತೆ ಇರುವ ಸಾತ್ವಿಕ ವ್ಯಕ್ತಿಗೆ ಕೊಡಬೇಕು. ದಾನ ಕೊಡುವಾಗ ಅಹಂಕಾರದಿಂದ ಕೊಡಬಾರದು. ಪೂಜೆ ಹೋಮಾದಿಗಳ ಕಾಲದಲ್ಲಿ ಕೊಡುವ ದಾನ ಒಳ್ಳೆಯ ಅನುಷ್ಠಾನ ನಿಯಮದಲ್ಲಿರುವ ಸಾತ್ವಿಕ ಮನೋಭಾವದರಿಗೆ ನೀಡಬೇಕು. ಒಮ್ಮೆ ಯೋಚಿಸಿ ನಮ್ಮ ಜನ್ಮ ಪೂರ್ವದಲ್ಲೂ ಈ ಭೂಮಿ ವಸ್ತು ಇತ್ತು. ನಮ್ಮ ಕಾಲದ ಅನಂತರವೂ ಇರುತ್ತದೆ. ಹಾಗದರೆ ಈ ಭೌತಿಕ ವಸ್ತುಗಳ ಒಡೆಯ ಬೇರೊಬ್ಬ ಇದ್ದಾನೆ ಅಲ್ಲವೇ? ಆದ್ದರಿಂದ ಕೊಡುವಾಗ ನಮ್ಮದೆಂಬ ಅಹಂಕಾರ ಬೇಡ. ಪ್ರೀತಿಯಿಂದ ಕೊಡಿ ಅನಂತ ಫಲವನ್ನು ಪಡೆಯಿರಿ.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು