ಹುಣ್ಣಿಮೆಯನ್ನು ಹಿಂದೂ ಧರ್ಮದಲ್ಲಿ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣುವನ್ನು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪೂಜಿಸಲಾಗುತ್ತದೆ. ಕೆಲವರು ಈ ದಿನ ಉಪವಾಸ ಮಾಡುತ್ತಾರೆ ಇನ್ನು ಕೆಲವರು ಸತ್ಯನಾರಾಯಣನ ರೂಪದಲ್ಲಿ ವಿಷ್ಣುವನ್ನು ಪೂಜಿಸುವ ಮೂಲಕ ಸತ್ಯನಾರಾಯಣ ಕತೆ ಮಾಡಿಸುತ್ತಾರೆ ಏಕೆಂದರೆ ಹುಣ್ಣಿಮೆ ದಿನ ಮನೆಗಳಲ್ಲಿ ಸತ್ಯನಾರಾಯಣ ಕತೆ ಮಾಡಿಸುವುದಕ್ಕೆ ಪ್ರಶಸ್ತ ದಿನ ಎಂದು ಹೇಳಲಾಗುತ್ತದೆ. ಇನ್ನು ಉತ್ತರ ಭಾರತದಲ್ಲಿ, ಹುಣ್ಣಿಮೆಯ ದಿನವನ್ನು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹುಣ್ಣಿಮೆಯ ದಿನವನ್ನು ಪೌರ್ಣಮಿ ಎಂದು ಕರೆಯಲಾಗುತ್ತದೆ ಮತ್ತು ಈ ದಿನದಂದು ಉಪವಾಸ ಮಾಡುವುದನ್ನು ಪೌರ್ಣಮಿ ವ್ರತ ಎಂದು ಕರೆಯಲಾಗುತ್ತದೆ.
ಈ ಬಾರಿಯ ಪುಷ್ಯ ಮಾಸದ ಶುಕ್ಲಪಕ್ಷದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಇದನ್ನು ಜ. 25 ರಂದು ಆಚರಣೆ ಮಾಡಲಾಗುತ್ತದೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಈ ದಿನ ನೀವು ತಾಯಿಯನ್ನು ನೆನೆದು ಉಪವಾಸ ಮಾಡಿ, ಪೂಜೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.
ಪವಿತ್ರ ಮತ್ತು ದೈವಿಕವೆಂದು ಪರಿಗಣಿಸಲಾದ ಈ ಹುಣ್ಣಿಮೆ ದಿನವು ತನ್ನದೇ ಆದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಹುಣ್ಣಿಮೆಯ ದಿನದಂದು ಉಪವಾಸ ಮಾಡುವುದರಿಂದ ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಚಂದ್ರನ ಸ್ಥಾನದಲ್ಲಿ ದೋಷ ಇರುವವರು ಈ ಹುಣ್ಣಿಮೆ ತಿಥಿಯಂದು ಚಂದ್ರನನ್ನು ಪೂಜಿಸಬೇಕು ಮತ್ತು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ ಬಳಿಕ ಆಹಾರವನ್ನು ಸೇವನೆ ಮಾಡಬೇಕು.
ಪುಷ್ಯ ಹುಣ್ಣಿಮೆ ಅಥವಾ ಬನದ ಹುಣ್ಣಿಮೆಯನ್ನು ಜ. 25 ರಂದು ಆಚರಣೆ ಮಾಡಲಾಗುತ್ತದೆ.
ಹುಣ್ಣಿಮೆ ತಿಥಿ ಜನವರಿ 24 ರಂದು ಬೆಳಿಗ್ಗೆ 09:49 ಆರಂಭಗೊಳ್ಳುತ್ತದೆ ಮತ್ತು ಜ. 25ರಂದು ರಾತ್ರಿ 11:23ಕ್ಕೆ ತಿಥಿ ಕೊನೆಗೊಳ್ಳುತ್ತದೆ.
ಇದನ್ನೂ ಓದಿ:ಪುತ್ರದಾ ಏಕಾದಶಿಯನ್ನು ಯಾವಾಗ ಆಚರಿಸಲಾಗುತ್ತದೆ? ಈ ಆಚರಣೆಯ ಮಹತ್ವ ಏನು?
ಈ ದಿನ ದಾನ ಮಾಡುವುದು ಮತ್ತು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಮಹತ್ವವನ್ನು ಪಡೆದುಕೊಂಡಿರುತ್ತದೆ. ಇನ್ನು ಕಿಡ್ನಿ ತೊಂದರೆ, ಶೀತ ಬಾಧೆ ಇರುವರು, ರಕ್ತಕ್ಕೆ ಸಂಬಂಧಿಸಿದ ತೊಂದರೆ ಇರುವರು, ಮಾನಸಿಕ ತೊಂದರೆಯನ್ನು ಅನುಭವಿಸುತ್ತಿರುವರು, ಹಣಕಾಸಿನ ತೊಂದರೆ ಇರುವವರು ಮನಸ್ಸಿಗೆ ಶಾಂತಿ ಮತ್ತು ಉತ್ತಮ ಆರೋಗ್ಯಕ್ಕೆ ವಿಷ್ಣು ಮತ್ತು ದೇವಿಯನ್ನು ಆರಾಧಿಸಬೇಕು. ಇನ್ನು ಜಾತಕದಲ್ಲಿ ಶುಕ್ರ ಮತ್ತು ಚಂದ್ರ ಗ್ರಹಗಳು ಪಾಪಗ್ರಹಗಳ ದೃಷ್ಟಿಗೆ ಒಳಪಟ್ಟಿದ್ದರೆ, ಪಾಪ ಗ್ರಹಗಳ ಜೊತೆಯಲ್ಲಿದ್ದರೆ, ಶುಕ್ರಗ್ರಹ ನೀಚ ಸ್ಥಾನದಲ್ಲಿದ್ದರೆ, ಪುಷ್ಯ ಮಾಸದ ಹುಣ್ಣಿಮೆ ದಿನ ಬನಶಂಕರಿ ದೇವಿಯನ್ನು ಪೂಜಿಸಿದರೆ ಉತ್ತಮವಾದ ಫಲ ಪಡೆಯಬಹುದು ಎಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ